ಕಾರ್ಕಳ: ಕೈಕೇಯಿಯ ಮಾತಿನಂತೆ ತಂದೆಯ ವಚನ ಪರಿಪಾಲನೆಗಾಗಿ ಧೃಡವಾದ ನಿರ್ಧಾರ ತೆಗೆದುಕೊಂಡ ರಾಮನು ವನವಾಸಕ್ಕೆ ತೆರಳಲು ಸಿದ್ಧನಾಗುತ್ತಾನೆ. ರಾಮನಿಲ್ಲದ ಅಯೋಧ್ಯೆಯಲ್ಲಿ ನಾನಿಲಾರೆ. ರಾಮನಿರುವ ಪ್ರದೇಶವೇ ನನಗೆ ಅಯೋಧ್ಯೆ. ನಾನು ಬಯಸಿದ್ದು ರಾಮನನ್ನೇ ವಿನಹಾ ಅಯೋಧ್ಯೆಯನ್ನಲ್ಲ ಎನ್ನುತ್ತಾ ಸೀತೆಯೂ ವನವಾಸಕ್ಕೆ ರಾಮನೊಂದಿಗೆ ತೆರಳಲು ಸಿದ್ಧಳಾದಾಗ ರಾಮನ ನೆರಳಿನಂತೆ ಇದ್ದ ಲಕ್ಷ್ಮಣನೂ ರಾಮನೊಂದಿಗೆ ಸೇರಿಕೊಳ್ಳುತ್ತಾನೆ ಎಂಬುದಾಗಿ ಸ್ವಾರಸ್ಯಕರವಾದ ಉಪಕತೆಗಳೊಂದಿಗೆ ವಿದ್ವಾಂಸರಾದ ಡಾ. ರಾಘವೇಂದ್ರ ರಾವ್ ಪಡುಬಿದ್ರಿಯವರು ತಮ್ಮ ಉಪನ್ಯಾಸದಲ್ಲಿ ಪ್ರಸ್ತುತಪಡಿಸಿದರು.
ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ 2025ರ ವರ್ಷ ಪ್ರತೀ ತಿಂಗಳು ರಾಮಸಾಗರಗಾಮಿನೀ ಎಂಬ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸವನ್ನು ಹಮ್ಮಿಕೊಂಡಿದ್ದು ಮಾಲೆಯ ಸಪ್ತಮ ಸೋಪಾನ ಚಿತ್ರಕೂಟದ ಚಿತ್ರ’ ಎಂಬ ವಿಷಯದ ಕುರಿತು ಜುಲೈ 19ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ಅವರು ಉಪನ್ಯಾಸ ನೀಡಿದರು.
ಇಡೀ ಅಯೋಧ್ಯೆ ರಾಮನನ್ನು ಪರಿಪರಿಯಾಗಿ ಬೇಡಿಕೊಂಡರೂ ರಾಮ ತನ್ನ ನಿರ್ಧಾರವನ್ನು ಬದಲಿಸದೆ ವನವಾಸಕ್ಕೆ ತೆರಳಿದ. ಸಮತಾ, ಗೋಮತಿ ನದಿಗಳನ್ನು ದಾಟಿ ಬಾಲ್ಯ ಸ್ನೇಹಿತ ಗುಹನು ಭೇಟಿಯಾಗಿ ಅರಮನೆಗೆ ಬರುವಂತೆ ಬೇಡಿಕೊಂಡರೂ ಅಲ್ಲಿಗೆ ಹೋಗದೆ ರಾತ್ರಿ ನದಿ ತಟದಲ್ಲಿಯೇ ಕಳೆದು ಮರುದಿನ ಅವರು ಚಿತ್ರಕೂಟ ಪರ್ವತದೆಡೆಗೆ ಪ್ರಯಾಣ ಮುಂದುವರಿಸುತ್ತಾರೆ ಎಂಬುದನ್ನು ಅವರು ಆಕರ್ಷಕವಾಗಿ ವಿವರಿಸಿದರು.
ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ, ಏರ್‌ವೈಸ್‌ಮಾರ್ಷಲ್ ರಮೇಶ್ ಕಾರ್ಣಿಕ್ ಮತ್ತು ಮಿತ್ರಪ್ರಭಾ ಹೆಗ್ಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೀರ್ತನಕಾರರಾದ ಅನಂತಕೃಷ್ಣ ಭಟ್ ಪ್ರಾರ್ಥಿಸಿದರು. ಸುಲೋಚನಾ ಬಿ.ವಿ. ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಮಾಲತಿ ವಸಂತರಾಜ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ