ಮಂಗಳೂರು: ದಕ್ಷಿಣ ಕನ್ನಡ ಕೇಟರಿಂಗ್ ಓನರ್ಸ್ ಅಸೋಸಿಯೇಶನ್ ಮತ್ತು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ಇವರ ಜಂಟಿ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜುಲೈ 20, 2025 ರಂದು ನಗರದ ಮೋರ್ಗನ್ಸ್ ಗೇಟ್‌ನಲ್ಲಿರುವ ಪಾಲೆಮಾರ್ ಗಾರ್ಡನ್‌ನಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1:00 ಗಂಟೆಯ ವರೆಗೆ ಆಯೋಜಿಸಲಾಗಿದೆ.
ಇದರ ಜತೆಗೆ ಅದೇ ದಿನ ಮಧ್ಯಾಹ್ನ 'ತುಳುವ ಮಣ್ಣ್‌ದ ಕಮ್ಮೆನ ಆಟಿದ ವನಸ್ದ ತಮ್ಮನ'- ಭೋಜನ ಕೂಟವನ್ನೂ ಆಯೋಜಿಸಲಾಗಿದೆ.
ಶಿಬಿರದಲ್ಲಿ ತಜ್ಞರಿಂದ ಸಾಮಾನ್ಯ ವೈದ್ಯಕೀಯ ತಪಾಸಣೆ, ಬಿಪಿ ಮತ್ತು ಮಧುಮೇಹ ಪರೀಕ್ಷೆ, ಕಣ್ಣಿನ ತಪಾಸಣೆ, ಕಿವಿ ಮೂಗು ಮತ್ತು ಗಂಟಲು ತಪಾಸಣೆ, ಎಲುಬು ಮತ್ತು ಕೀಲು ರೋಗ ತಪಾಸಣೆ, ಚರ್ಮರೋಗ ತಪಾಸಣೆ, ಕ್ಯಾನ್ಸರ್ ರೋಗ ತಪಾಸಣೆ, ಸ್ತ್ರೀ ರೋಗ ತಪಾಸಣೆ ಮತ್ತು ದಂತ ತಪಾಸಣೆ (ಹಲ್ಲಿನ ಶುಚಿಗೊಳಿಸುವಿಕೆ, ಹಲ್ಲುಗಳಿಗೆ ಸಿಮೆಂಟ್ ತುಂಬಿಸುವುದು, ಹುಳುಕು ಹಲ್ಲುಗಳನ್ನು ಕೀಳುವುದು ಇತ್ಯಾದಿ) ನಡೆಯಲಿದೆ.
ಕಣ್ಣಿನ ತಪಾಸಣೆ ನಡೆಸಿದ ಬಳಿಕ ಅಗತ್ಯವಿರುವವರಿಗೆ ಕನ್ನಡಕಗಳನ್ನೂ ಸ್ಥಳದಲ್ಲೇ ಉಚಿತವಾಗಿ ವಿತರಿಸಲಾಗುವುದು.
ದಕ್ಷಿಣ ಕನ್ನಡ ಜಿಲ್ಲಾ ಕೇಟರಿಂಗ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಅಬ್ದಲ್ ರಶೀದ್ ಮತ್ತು ಕಾರ್ಯದರ್ಶಿ ಕರುಣಾಕರ ಪಡಿಯಾರ್ ಅವರು ಪ್ರಕಟಣೆಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.
ಕ್ಯಾಟರಿಂಗ್ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು, ಬಡಿಸುವ ಸಿಬ್ಬಂದಿಗಳು ಮತ್ತು ಅವರ ಕುಟುಂಬ ವರ್ಗದವರು ಈ ಶಿಬಿರದ ಪ್ರಯೋಜವನ್ನು ಪಡೆದುಕೊಳ್ಳಬಹುದಾಗಿದೆ.
ಬೆಳಗ್ಗೆ 10 ಗಂಟೆಗೆ ಮೋರ್ಗನ್ಸ್ ಗೇಟ್‌ನಲ್ಲಿರುವ ಪಾಲೆಮಾರ್ ಗಾರ್ಡನ್‌ನ ಸಭಾಭವನದಲ್ಲಿ ಶಿಬಿರದ ಉದ್ಘಾಟನೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ರಾಜ್ಯದ ಮಾಜಿ ಸಚಿವರಾದ ಶ್ರೀ ಕೃಷ್ಣ ಜೆ ಪಾಲೆಮಾರ್, ಮೂಡುಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ಕೇಟರಿಂಗ್ ಮಾಲೀಕರ ಸಂಘದ ಅಧ್ಯಕ್ಷರಾದ ಅಬ್ದುಲ್ ರಶೀದ್, ಪ್ರಧಾನ ಕಾರ್ಯದರ್ಶಿ ಕರುಣಾಕರ ಪಡಿಯಾರ್ ಮತ್ತು ಇತರ ಎಲ್ಲ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕೇಟರಿಂಗ್ ಮಾಲೀಕರ ಸಂಘದ ಅಧ್ಯಕ್ಷರಾದ ಅಬ್ದುಲ್ ರಶೀದ್ ಅವರು ವಹಿಸಲಿದ್ದಾರೆ.
ಜಿಲ್ಲೆಯಲ್ಲಿ ಸಾವಿರಾರು ಮಂದಿ ಜೀವನೋಪಾಯಕ್ಕಾಗಿ ಕೇಟರಿಂಗ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಹಾರದ ತಯಾರಿಯಿಂದ ತೊಡಗಿ ಆಹಾರವನ್ನು ಬಡಿಸುವ ವರೆಗೂ ಎಲ್ಲ ಹಂತಗಳಲ್ಲಿ ಸ್ವಚ್ಛತೆ ಮತ್ತು ಶುದ್ಧತೆಯನ್ನು ಕಾಯ್ದುಕೊಳ್ಳಬೇಕಾಗಿದ್ದು, ಉದ್ಯಮದಲ್ಲಿ ತೊಡಗಿರುವವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ. ವಿವಿಧ ಸಭೆ, ಶುಭ ಸಮಾರಂಭಗಳು ನಡೆಯುವ ಸೀಸನ್‌ನಲ್ಲಿ ಬಿಡುವಿಲ್ಲದ ಕೆಲಸಗಳಲ್ಲಿ ತೊಡಗಿಕೊಳ್ಳುವ ಕೇಟರಿಂಗ್ ಸಿಬ್ಬಂದಿಗಳಿಗೆ ಮಳೆಗಾಲದ ಋತುವಿನಲ್ಲಿ ಸ್ವಲ್ಪ ಬಿಡುವಿನಲ್ಲಿರುತ್ತಾರೆ. ಅದೇ ವೇಳೆಗೆ ಆರೋಗ್ಯದ ಸಮಸ್ಯೆಗಳೂ ಕಾಡುತ್ತವೆ. ಈ ಹಿನ್ನೆಲೆಯಲ್ಲಿ ಕ್ಯಾಟರಿಂಗ್ ಉದ್ಯಮದ ಸಿಬ್ಬಂದಿಗಳ ಮತ್ತು ಅವರ ಕುಟುಂಬದವರ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಮಾಲಕರ ಸಂಘ ಈ ಶಿಬಿರವನ್ನು ಆಯೋಜಿಸುತ್ತಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ