ಸಾಹಿತ್ಯವು ಸಮಾಜದ ಪ್ರತಿಬಿಂಬ: ಡಾ. ನಾಗಭೂಷಣ್

Upayuktha
0

ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಇಂಗ್ಲಿಷ್ ವಿಭಾಗದಿಂದ ಎರಡು ದಿನಗಳ ಓರಿಯೆಂಟೇಶನ್ ಕಾರ್ಯಕ್ರಮ




ಶಿವಮೊಗ್ಗ: ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಇಂಗ್ಲಿಷ್ ವಿಭಾಗ ಶಿವಮೊಗ್ಗ, ಇವರ ವತಿಯಿಂದ ಇಂದು (ಜುಲೈ 14) ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ಪ್ರಥಮ ಪದವಿಯ ಐಚ್ಛಿಕ ಇಂಗ್ಲಿಷ್ ವಿದ್ಯಾರ್ಥಿಗಳಿಗೆ ಎರಡು ದಿನಗಳ ಓರಿಯೆಂಟೇಷನ್ ಕಾರ್ಯಕ್ರಮದ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮವನ್ನು ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ನಾಗಭೂಷಣ್ ಅವರು ಉದ್ಘಾಟಿಸಿ ಸಾಹಿತ್ಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.


ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಾಹಿತ್ಯ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾಹಿತ್ಯದ ವಿದ್ಯಾರ್ಥಿಗಳ ಆಲೋಚನೆಗಳು ವಿಭಿನ್ನವಾಗಿರುತ್ತದೆ. ಸಾಹಿತ್ಯವನ್ನು ಕೇವಲ ಅಂಕ ಗಳಿಸುವುದಕ್ಕಾಗಿ ಓದದೇ ಅಭಿರುಚಿಗಾಗಿ, ಆನಂದಕ್ಕಾಗಿ ಓದಬೇಕು, ಓದುವುದನ್ನು ಆನಂದಿಸಬೇಕು. ತರಗತಿಗಳು ಬರಿ ತರಗತಿಗಳಾಗಿ ಇರುವುದಿಲ್ಲ ನಮ್ಮ ಯೋಚನಾ ಲಹರಿಯನ್ನು ಉನ್ನತಗೊಳಿಸುವ, ವಿಭಿನ್ನ ಆಲೋಚನಾ ಕ್ರಮಗಳನ್ನು ರೂಢಿಸಿಕೊಳ್ಳುವ ಅವಕಾಶಗಳಾಗಿರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಒಂದು ನಿರ್ದಿಷ್ಟ ಪಠ್ಯವನ್ನು ಓದುವಾಗ ಆ ಪಠ್ಯದ ಕರ್ತೃ ಮತ್ತು ಪಠ್ಯದ ಹಿನ್ನಲೆಯನ್ನು ತರಗತಿಗಳಲ್ಲಿ ಕಲ್ಪಿಸಿಕೊಂಡು ಆಳವಾದ ಅಧ್ಯಯನದ ಮೂಲಕ ಕೃತಿಯನ್ನು ತನ್ನೊಳಗೆ ತೆಗದುಕೊಳ್ಳಬೇಕು. ಕುವೆಂಪು, ಶಿವರಾಮ ಕಾರಂತ, ವರ್ಡ್ಸ್ ವರ್ತ್, ಶೇಕ್ಸ್‌ಪಿಯರ್ ಅವರಂತಹ ಮಹಾನ್ ಲೇಖಕರು ಪಠ್ಯಗಳ ಪುಟಗಳಿಗೆ ಮಾತ್ರ ಸೀಮಿತಗೊಂಡಿಲ್ಲ ಅವರು ಕೃತಿಗಳ ಮೂಲಕ ನಮ್ಮೊಳಗೇ ಸೇರಿಕೊಂಡಿದ್ದಾರೆ. ಅವರೆಲ್ಲರೂ ಬಹು ಸುಂದರವಾದ ಸಾಹಿತ್ಯ ಲೋಕವನ್ನೂ ಸೃಷ್ಟಿಸಿಕೊಟ್ಟಿದ್ದಾರೆ ಎಂದು ಹೇಳಿದರು.


ವಿದ್ಯಾರ್ಥಿಗಳು ಮೂರು ವರ್ಷದ ಪದವಿಯಲ್ಲಿ ಸಾಹಿತ್ಯವನ್ನು ಬರಿ ತರಗತಿಗೆ ಸೀಮಿತಗೊಳಿಸಿ ಓದುವುದಲ್ಲ, ಆನಂದಿಸಬೇಕು. ಸಾಹಿತ್ಯವು ಸಮಾಜದ ಪ್ರತಿಬಿಂಬವಾಗಿರುತ್ತದೆ. ಒಬ್ಬ ಶೇಕ್ಸ್‌ಪಿಯರ್ ನಿಮ್ಮ ತರಗತಿಗಳಿಗೆ ಪ್ರವೇಶಿಸಿದಾಗ, ಅಥವಾ ಒಬ್ಬ ಶ್ರೇಷ್ಠ ಲೇಖಕ ನಿಮ್ಮ ಮನಸಿನಲ್ಲಿ ಹೊಕ್ಕಾಗ ನೀವು ಅಗಾಧವಾದದ್ದನ್ನು ಕಲಿಯುತ್ತೀರಿ. ಹಲವಾರು ಸಾಹಿತ್ಯಕ ಚಟುವಟಿಕೆಗಳು ನಿಮ್ಮ ಸೃಜನ ಶೀಲತೆಯನ್ನು ಹೆಚ್ಚಿಸುತ್ತದೆ. ನೀವು ಆಯ್ಕೆ ಮಾಡಿಕೊಂಡಿರುವ ಕೋರ್ಸ್ ಮತ್ತು ಕಾಲೇಜು ಅತ್ಯುತ್ತಮವಾಗಿವೆ. ನಿಮ್ಮ ಮೂರು ವರ್ಷದ ವಿದ್ಯಾರ್ಥಿ ಜೀವನ ತುಂಬಾ ಉತ್ಸಾಹದಾಯಕವಾಗಿರಲಿ ಎಂದು ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.


ವಿದ್ಯಾರ್ಥಿಗಳೆಲ್ಲರೂ ಅತ್ಯುತ್ತಮವಾದ ಗುರುಗಳ ಮಾರ್ಗದರ್ಶನದಲ್ಲಿ ಬೆಳೆಯಲು ವಿಪುಲ ಅವಕಾಶಗಳಿವೆ. ನೀವೆಲ್ಲರೂ ಅಂತಿಮವಾಗಿ ಉತ್ತಮ ಸ್ಥಾನವನ್ನು ಪಡೆಯುತ್ತಿರಿ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿಯವರು ಮಾತನಾಡಿ, 2025-26 ರ ಶೈಕ್ಷಣಿಕ ವರ್ಷ ಪೂರ್ತಿ ಕಾಲೇಜಿನಲ್ಲಿ ನಡೆಯುವ ಹಲವಾರು ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಕಾಲೇಜು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಅವಕಾಶಗಳನ್ನ ಒದಗಿಸಿಕೊಡುತ್ತಿದೆ, ಅವುಗಳ ಉಪಯೋಗವನ್ನು ಪಡೆದುಕೊಂಡು ಮುಂದಿನ ಜೀವನ ರೂಪಿಸಿಕೊಳ್ಳಬೇಕು. ಇಂಗ್ಲಿಷ್ ಸಾಹಿತ್ಯವನ್ನು ಐಚ್ಛಿಕವಾಗಿ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. ಮನಶಾಸ್ತ್ರ ಮತ್ತು ಸಾಹಿತ್ಯ ಒಟ್ಟಿಗೆ ಓದುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಪ್ರಯೋಜನ ಪಡೆಯಬಹುದಾಗಿದೆ ಎಂದು ಹೇಳಿದರು.


ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ರೇಷ್ಮಾರವರು, ವಿಭಾಗದ ಹಲವಾರು ಚಟುವಟಿಕೆಗಳನ್ನು ಮತ್ತು ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಉಪನ್ಯಾಸಕಿ ಕು. ಯೋಷಿತಾ ಎಸ್ ಸೊನಲೆ ಅವರು ಕಾರ್ಯಕ್ರಮ ನಿರೂಪಿಸಿದರು.


ನಿರ್ದೇಶಕರಾದ ಡಾ. ರಾಜೇಂದ್ರ ಚೆನ್ನಿ, ಆಡಳಿತಾಧಿಕಾರಿಗಳಾದ ಪ್ರೊ. ರಾಮಚಂದ್ರ ಬಾಳಿಗ ಹಾಗೂ ಐಕ್ಯೂಎಸಿ ಸಂಯೋಜಕರಾದ ಡಾ. ಅರ್ಚನಾ ಭಟ್, ವಿಭಾಗದ ಉಪನ್ಯಾಸಕರಾದ ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕು. ಐಶ್ವರ್ಯ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top