ಬಳ್ಳಾರಿ: ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಶಾಖೆ ಹಾಗೂ ಸರ್ಕಾರಿ ಮಾಜಿ ಪುರಸಭೆ ಸಂಯುಕ್ತ ಪದವಿ ಪೂರ್ವ ಕಾಲೇಜು ಸಹಯೋಗದೊಂದಿಗೆ ಜುಲೈ 11 ನೇ ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ಅರಿವು ಮತ್ತು ಪ್ರಬಂಧ ಸ್ಪರ್ಧೆಯನ್ನು ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳ್ಳಾರಿ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಮೇಶ್ ಬಾಬು ಮಾತನಾಡುತ್ತಾ, ಯುವಕರೇ ನಿಮ್ಮ ಉತ್ತಮ ಶಕ್ತಿ ಎಂದರೆ ತಾಳ್ಮೆ ಅದನ್ನು ನೀವು ಅಭ್ಯಾಸ ಮಾಡಿಕೊಂಡಲ್ಲಿ ಸಾಧನೆ ಎನ್ನುವುದು ಕಟ್ಟಿಟ್ಟ ಬುತ್ತಿ ಆದ್ದರಿಂದ ಯುವಕರೇ ಹೆಣ್ಣಾಗಲಿ, ಗಂಡಾಗಲೀ ಅವಸರದಲ್ಲಿ ಮದುವೆ ಮಾಡಿ ಕೊಳ್ಳಬೇಡಿ. ಏಕೆಂದರೆ ನಿಮ್ಮ ಸ್ವತಃ ತೀರ್ಮಾನ ತೆಗೆದುಕೊಳ್ಳುವ ಶಕ್ತಿ ಹಾಗೂ ಜೀವನ ಸಂಗಾತಿಯನ್ನು ಆಯ್ದುಕೊಳ್ಳುವ ಶಕ್ತಿ ಮತ್ತು ವಿದ್ಯಾಭ್ಯಾಸ ಮುಗಿಸಿ ಉತ್ತಮ ಜೀವನ ಕಟ್ಟಿಕೊಳ್ಳಲು ಸಮಯ ಬೇಕಾಗುತ್ತದೆ. ಆದ್ದರಿಂದ 25 ವರ್ಷದವರೆಗೂ ಮದುವೆ ಆಗಬೇಡಿ ಎಂದು ಕರೆ ಕೊಟ್ಟರು.
ಎಫ್‌ಪಿಎಐ ಅಧ್ಯಕ್ಷ ಟಿ.ಜಿ. ವಿಠ್ಠಲ್ ಮಾತನಾಡಿ, “ಉತ್ತಮ ಸಮಾಜ ನಿರ್ಮಾಣದೊಂದಿಗೆ ಭದ್ರ ಭವಿಷ್ಯದ ಬದುಕು ಕಟ್ಟಿಕೊಳ್ಳುವುದು ಪ್ರಮುಖ. ಸಂತಾನೋತ್ಪತ್ತಿ, ಪ್ರಜನನ ಆರೋಗ್ಯ ಹಾಗೂ ಸಂಬಂಧಿತ ಹಕ್ಕುಗಳ ಅರಿವು ಯುವಕರಿಗೆ ಅಗತ್ಯವಾಗಿದೆ. ಎಫ್ಪಿಎಐ ಈ ವಿಷಯಗಳಲ್ಲಿ ಮಾಹಿತಿ ನೀಡಲು ಯಾವಾಗಲೂ ಸಿದ್ಧವಾಗಿದೆ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಸುಂಕಪ್ಪ ಅವರು, ಯುವಕರಲ್ಲಿ ಜಾಗೃತಿ ಮೂಡಬೇಕು ಏನು ಮಾಡಬೇಕು, ಏನು ಮಾಡಬಾರದು ಎನ್ನುವ ಚಿಂತನೆ ಬಂದಾಗ ಮಾತ್ರ ಯುವಕರು ಸಬಲೀಕರಣಗೊಳ್ಳುವುದು. ಆದ್ದರಿಂದ ಎಲ್ಲಾ ಯುವಕರೇ ನಿಮ್ಮ ಆರೋಗ್ಯದ ಕಡೆ ಗಮನಹರಿಸಿ ಸುಸಜ್ಜಿತ ಕುಟುಂಬದ ಕನಸನ್ನು ನನಸು ಮಾಡುವುದಕ್ಕೆ ಬೇಕಾದ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಎಫ್‌ಪಿಎಐ ವ್ಯವಸ್ಥಾಪಕಿ ಎಸ್ ವಿಜಯಲಕ್ಷ್ಮಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಪ್ರಬಂಧ ಸ್ಪರ್ಧೆಯಲ್ಲಿ ಒಟ್ಟಾರೆ 48 ಮಕ್ಕಳು ಭಾಗವಹಿಸಿದ್ದು ಮೊದಲನೇ ಸ್ಥಾನ ಪವನ್, ಎರಡನೇ ಸ್ಥಾನ ಪದ್ಮಾವತಿ ಹಾಗೂ ಮೂರನೇ ಸ್ಥಾನ ಮಣಿಕಂಠ ಪಡೆದರು. ಗೆದ್ದ ಸ್ಪರ್ಧಾಳುಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ