ಶುಭನುಡಿ: ದುಡುಕದಿರು ತಿದ್ದಿಕೆಗೆ

Upayuktha
0


ಎಲ್ಲಿ ಸರಿಪಡಿಸಲು ಸಾಧ್ಯವಾಗದೋ ಅಲ್ಲಿ ಮೌನವೇ ಲೇಸು. ಸಾಧ್ಯ ಎನಿಸಿದರೆ ಮಾತ್ರ ಕೈಜೋಡಿಸಬೇಕು.


ಒಡೆಯದಿರು ತಳಹದಿಯ ಸರಿಪಡಿಪೆನದನೆಂದು/

ಸಡಿಲಿಸುವ ನೀಂ ಮರಳಿ ಕಟ್ಟಲರಿತವನೇಂ?//

ಗಿಡವ ಸರಿ ಬೆಳೆಯಿಸಲು ಬುಡವ ಕೀಳ್ವುದು ಸರಿಯೆ/

ದುಡುಕದಿರು ತಿದ್ದಿಕೆಗೆ- ಮಂಕುತಿಮ್ಮ//


ಸಮಯ ಸಂದರ್ಭ ಗಮನಿಸಿ ಬುದ್ಧಿವಾದ ಹೇಳುವುದು ಸೂಕ್ತ. ಒಟ್ಟಾರೆಯಾಗಿ ಬಾಯಿ ಹಾಕಿದರೆ ಮತ್ತಷ್ಟೂ ಹದಗೆಡಬಹುದು. 'ಒಡೆದ ಕನ್ನಡಿಯನ್ನು ಮರಳಿ ಜೋಡಿಸಲಾಗದು. ಸಂಬಂಧಗಳು ಸಹ ಹಾಗೆಯೆ. ಸಸಿಯನ್ನು ನೆಟ್ಟು ಬುಡಸಹಿತ ಕೀಳದೆ, ಅದಕ್ಕೇನು ಬೇಕೋ ಅದನ್ನು ಹಾಕಬೇಕು. ದುಡುಕುತನ ಬೇಡ. ಸಾಧ್ಯವಾದರೆ ಯೋಚಿಸಿ ನಿರ್ಧಾರಕ್ಕೆ ಬರುವುದು ಜಾಣತನ.


'ಬೆಂಕಿ ಹಚ್ಚುವುದು ಸುಲಭ, ದೀಪ ಹಚ್ಚುವುದು ಕಷ್ಟ 'ಶ್ರೀ ತರಳಬಾಳು ಜಗದ್ಗುರು ಡಾ. ಶಿವಾಚಾರ್ಯ ಮಹಾಸ್ವಾಮಿಗಳವರು ಬರೆದ ಕೃತಿಯಲ್ಲಿ ಓದುತ್ತಾ ಹೋದಂತೆ ಮನಸೆಳೆದ ಸಾಲು. ಹೌದಲ್ವಾ? ಎಲ್ಲೆಂದರಲ್ಲಿ ಬೆಂಕಿಯೇನೋ ಹಚ್ಚಿಬಿಡುತ್ತೇವೆ, ಆದರೆ ದೀಪ ಹಚ್ಚುವುದು ಸುಲಭದ ಮಾತಲ್ಲ. ಎಣ್ಣೆ, ಬತ್ತಿ, ಬೀಸಿದ ಗಾಳಿ ಸೋಕದಂತೆ ತಡೆ ಎಲ್ಲವೂ ಬೇಕು. ಇದೇ ರೀತಿ ಜೀವನದ ಹಾದಿ ಸಹ. ಒಳ್ಳೆಯದಾದರೆ ಸರಿ. ಇಲ್ಲದಿದ್ದರೆ ಈರ್ವರ ನಡುವೆ ತಂದಿಕ್ಕಿ ಚಂದ ನೋಡುವವರೇ ಜಾಸ್ತಿ. 'ಅಲ್ಲಿ ದ್ವೇಷ, ಸಿಟ್ಟು, ಕೋಪ, ಮತ್ಸರ'ವೆಂಬ ಬೆಂಕಿಯನ್ನು ಹಾಕಿ, ಉರಿಯುವ ಚಂದವನ್ನು ದೂರದಿಂದ ನೋಡಿ ನಗುವವರೇ ಬಹಳ ಮಂದಿ. ಈ ಬೆಂಕಿಗೆ ತುಪ್ಪ, ಎಣ್ಣೆ ಸುರಿಯುವವರು ಮತ್ತಷ್ಟು ಮಂದಿ. ಯಾಕೆ ನೀರು ಹಾಯಿಸಿ ನಂದಿಸುವ ಕೆಲಸ ಮಾಡಬಾರದು? ಅದು ನಮ್ಮಿಂದಾಗಬೇಕು. 'ಇಬ್ಬರ ಜಗಳ ಮೂರನೆಯವನಿಗೆ ಲಾಭ ಬೇಡ. ಕುಟುಂಬ ಸದಸ್ಯರ ನಡುವೆ, ಬಂಧುಗಳ ನಡುವೆ ವೈಷಮ್ಯದ ಬೀಜ ಬಿತ್ತುವ ಕೆಲಸ ಮಾಡಬಾರದು. ಇದರಿಂದ ಸಂಬಂಧಗಳೇ ಹಾಳಾಗಬಹುದು. ಎಲುಬಿಲ್ಲದ ನಾಲಿಗೆಯನ್ನು ಹಿಡಿತದಲ್ಲಿಟ್ಟು ಕೊಂಡು, ನಮ್ಮ ಅಂಗೈಯೊಳಗೆ ನಮ್ಮ ಬುದ್ಧಿ ಇರುವಂತೆ ನೋಡಿಕೊಳ್ಳೋಣ. 'ದೀಪ ಹಚ್ಚುವ ಕೆಲಸ' ಮಾಡೋಣ, ಮನೆ ಮನಸ್ಸನ್ನು ಬೆಸೆಯೋಣ, ಜನ್ಮ ಸಾರ್ಥಕ ಪಡಿಸಿಕೊಳ್ಳೋಣ.


ಆಕರ ಕಗ್ಗ: ಡಿ.ವಿ.ಜಿ ಯವರ ಮಂಕುತಿಮ್ಮನ ಕಗ್ಗ


- ರತ್ನಾ ಕೆ ಭಟ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top