ತಿಂಗಳಗಳ ಹಿಂದೆ ನಾವು ದಂಪತಿಗಳು ಮಿತ್ರರಾರದ್ದೋ ವಿವಾಹ ವಾರ್ಷಿಕೋತ್ಸವಕ್ಕೆ ಹೋಗಿದ್ವಿ. ನನ್ನ ಹೆಂಡತಿ ವಾರ್ಷಿಕೋತ್ಸವ ಆಚರಿಸಿಕೊಳ್ಳುವ "ದಂಪತಿಗಳಿಗೆ' ಏನಾದರೂ "ಉಡುಗೊರೆ ಕೊಡಬೇಕು" ಎಂದು ನನ್ನ ಒತ್ತಾಯ ಮಾಡಿದಳು. ಆದರೆ ನನಗೆ ಉಡುಗೊರೆಯ ಬಗ್ಗೆ "ಕೊಡು- ತೆಗೆದುಕೊಳ್ಳುವ" ಆಸಕ್ತಿ ಇಲ್ಲ. ಎಲ್ಲ "ಸಮೃದ್ಧ"ವಾಗಿರುವವರಿಗೆ ಯಾರಾದರೂ ಏನು ಉಡುಗೊರೆ ಕೊಡಬಹುದು...?
ಈ ಸುಗ್ರಾಸ ಭೋಜನ, ಉಡುಗೊರೆ, ದಾನ ಇವೆಲ್ಲವಕ್ಕೂ ಮೂವತ್ತು ವರ್ಷಗಳ ಹಿಂದಿನ ತನಕವೂ ಒಂದು ಬೆಲೆ ಇತ್ತು. ಈಗ ಬಹುತೇಕ ಎಲ್ಲ ಮನೆಗಳೂ "ತುಂಬಿದ" ಮನೆಗಳೇ.... ಈಗ ಸುಗ್ರಾಸ ಭೋಜನಕ್ಕೆ ಮದುವೆ ಇನ್ನಿತರ ಸಮಾರಂಭಗಳ ತನಕ ಕಾಯಬೇಕಿಲ್ಲ. ಮನೆ ಮನೆಯಲ್ಲೂ ಈಗ ಬೇಕುಬೇಕಾದ ವಸ್ತುಗಳಿವೆ. ಈ ಕಾಲಕ್ಕೆ ಸಾಮಾನ್ಯ ಉಡುಗೊರೆ ಬೇಡ.
ಕೆಲವು ಸಮುದಾಯದಲ್ಲಿ ಮುಯ್ಯಿ ಮಾಡೋದು ಅಂತಿದೆ. ಅದರಲ್ಲಿ ಹಣದ ಮುಯ್ಯಿಯೊಳಗೆ ಬಹಳಷ್ಟು ಉಪಯೋಗ ಇದೆ. ಆದರೆ ಕಾರ್ಯಕ್ಕೆ ಬಾರದ ವಸ್ತುಗಳ ಉಡುಗೊರೆ ಯಾದರೆ ಅದು "ಹೊರೆ"...
ಬಹಳಷ್ಟು ಜನರು ಉಡುಗೊರೆ ವಿಚಾರದಲ್ಲಿ ಕಟ್ಟು ನಿಟ್ಟಿನ ತೀರ್ಮಾನಕ್ಕೆ ಬಂದಿರುತ್ತಾರೆ. ಉಡುಗೊರೆ ತೆಗದುಕೊಳ್ಳೋಲ್ಲ. ಉಡುಗೊರೆ ತೆಗೆದುಕೊಂಡ ಮೇಲೆ ಸಮಯ ಸಂದರ್ಭದಲ್ಲಿ ಒಂದೊಮ್ಮೆ ಉಡುಗೊರೆ ನೀಡಿದವರಿಗೆ ಉಡುಗೊರೆ ನೀಡಬೇಕಾಗುತ್ತದೆ. ಹಾಗಾಗಿ ಕೆಲವರು ಕೊಡುವುದೂ ಇಲ್ಲ ತೆಗೆದುಕೊಳ್ಳುವುದೂ ಇಲ್ಲ. ಇದು ಈ ಕಾಲದಲ್ಲಿ ಒಳ್ಳೆಯ ನಿರ್ಧಾರ ಆಗಿರುತ್ತದೆ.
ಹಸರಣೆಯ ಉಡುಗೊರೆ ಹೊರೆ...
ಒಂದು ಕಾಲದಲ್ಲಿ ಉಡುಗೊರೆ ಎಂದಾಕ್ಷಣ ಮೊದಲು ಉಡುಗೊರೆ ಕೊಡುವವರಿಗೆ ಮೊದಲು ಜ್ಞಾಪಕ ವಾಗುತ್ತಿದ್ದದ್ದೇ "ಗೋಡೆ ಗಡಿಯಾರ"...! ನೀರಿನ ಡ್ರಂ, ಲೋಟಗಳು, ದಬರಿ, ಸ್ಟೀಲ್ ಕೊಡ, ಫಿಲ್ಟರ್, ಸ್ಟೀಲ್ ಡಬ್ಬಿಗಳು, ಗೆಳೆಯರು ಬಂಧುಗಳು ಒಟ್ಟಾಗಿ ಸೇರಿ ಕೊಡುವ ಉಡುಗೊರೆಯಾದ ಕಾಟ್, ಗೋದ್ರೇಜ್ ಬೀರು, ವಾಷಿಂಗ್ ಮಿಷನ್, ಫ್ರಿಡ್ಜು... ಹೀಗೆ ಹತ್ತು ಹಲವಾರು ವಸ್ತುಗಳು ಒಂದು ಕಾಲದಲ್ಲಿ ಉಡುಗೊರೆಯಾಗಿ ಬರುತ್ತಿದ್ದವು.
ಎಷ್ಟು ಬೇಗ ಕಾಲ ಬದಲಾವಣೆ ಆಯತಲ್ವಾ...?
ಈಗ ಎಲ್ಲರ ಮನೆಗಳೂ ಉತ್ಪನ್ನಗಳಿಂದ ತುಂಬಿ ತುಳುಕುತ್ತಿದೆ! ಈ ಕೊಳ್ಳುಬಾಕ ಸಂಸ್ಕೃತಿ. ನಾವ್ಯಾರಿಗೂ ಕಮ್ಮಿ ಇಲ್ಲ ಎನ್ನುವ ಶ್ರೇಷ್ಠತೆಯ ವ್ಯಸನ. ನಮ್ಮ ಮನೆಗಳನ್ನು ವಸ್ತುಗಳಿಂದು ತುಂಬಿ ತುಳುಕುವಂತೆ ಮಾಡುತ್ತಿದೆ! ಈ ಕಾರಣದಿಂದ ನೀವು ಮದ್ಯಮ, ಮೇಲ್ಮದ್ಯಮ ವರ್ಗದ ಮನೆಗೆ ಸರಳ ಸಾಮಾನ್ಯವಾಗಿ ಯಾವುದೇ ಅಪರೂಪದ ಉಡುಗೊರೆ ಕೊಡಲಾರಿರಿ! ಬಹುತೇಕ ಎಲ್ಲ ವಸ್ತುಗಳೂ ಆ ಮನೆಗಳಲ್ಲಿ ಈಗಾಗಲೇ ಇರುತ್ತದೆ. ಈಗ ನಾವು ಕೊಡುವ "ಶಿಷ್ಠಾಚಾರದ" ಯಾವುದೇ ಉಡುಗೊರೆಯೂ ಉಡುಗೊರೆ ಪಡೆದುಕೊಳ್ಳುವ ಕುಟುಂಬಕ್ಕೆ ನೂರಕ್ಕೆ ನೂರರಷ್ಟು "ಕಸ".
ಈಗ ಯಾರೇ ಉಡುಗೊರೆ ಕೊಡುವವರು ಪ್ಲಾಸ್ಟಿಕ್‌ನಲ್ಲಿ ಮಾಡಿದ ಬಣ್ಣ ಬಣ್ಣದ ಗಣೇಶನ ವಿಗ್ರಹ, ಎರಕದ ನಟರಾಜನ ವಿಗ್ರಹ, ಮೇಡ್ ಇನ್ ಚೈನಾ ಗಿಫ್ಟ್ ಐಟಂಗಳು ಚೌಲ್ಟ್ರಿಯಿಂದ "ಚೀಲದಲ್ಲಿ ತುಂಬಿ ನೇರವಾಗಿ ಆ ಮನೆಯ ಅಟ್ಟದ ಚಟ್ಟ ಸೇರುತ್ತದೆ."
ಅತಿಥೇಯರಿಂದ ಬಂಧು ಬಾಂಧವರಿಗೆ ಸೀರೆ, ಪಂಚೆ, ಪ್ಯಾಂಟ್ ಪೀಸ್, ಷರ್ಟ್ ಪೀಸ್‌ಗಳ ಉಡುಗೊರೆ!
ಮೊದಲು ಹೊಲಿಸಿ ತೊಟ್ಟುಕೊಳ್ಳಲು ಬಾರದ, ಕೈ ವರೆಸು ಬಟ್ಟೆ ಯಾಗಿಯೂ ಬಳಸಲು ಬಾರದ with ಇಪ್ಪತ್ತು ರೂಪಾಯಿ ಕುಪ್ಪಸದ ಕಣದ ಸಾಲಿಗೆ ಈಗ ಈ ಸೀರೆ ಪಂಚೆ ಪ್ಯಾಂಟ್ ಷರ್ಟ್ ಪೀಸ್ ಬಟ್ಟೆ ಗಳೂ ಸೇರಿದೆ. ಈ ಪ್ಯಾಂಟ್ ಪೀಸ್ ಷರ್ಟ್ ಪೀಸು ಸೀರೆಗಳು ಪ್ಯಾಕಿಂಗ್ ಓಪನ್ ಆಗದೇ ಕೈ ಬದಲಾವಣೆ ಆಗುತ್ತಾ "ರಿಲೇ ಕೋಲ್" ನಂತೆ ಕೈಯಿಂದ ಕೈಯಿಗೆ ದಾಟುವ ಆಟದ ಸಾಮಾನು ಆಗಿದೆ.
ದೊಡ್ಡ ದೊಡ್ಡ ಬಟ್ಟೆ ಅಂಗಡಿಗಳಲ್ಲಿ ಹೀಗೆ ಉಡುಗೊರೆ ಕೊಡಲೆಂದೇ ಅತ್ಯಂತ ಕಡಿಮೆ ಬೆಲೆಯ ಸೀರೆ ಪಂಚೆ ಪ್ಯಾಂಟ್ ಷರ್ಟ್ ಪೀಸ್ ಮಾರಾಟಕ್ಕೆ ಇರುತ್ತದೆ. ಇವನ್ನು ಉಡುಗೊರೆಗಾಗಿಯೇ ಅತ್ಯಂತ ಸುಂದರವಾಗಿ ಪ್ಯಾಕಿಂಗ್ ಮಾಡಿರುತ್ತಾರೆ. ಈ ಉಡುಗೊರೆಯಲ್ಲಿ ಸೀರೆ ಸ್ವಲ್ಪಮಟ್ಟಿಗಾದರೂ ಬಳಕೆಯಾಗುತ್ತದೆ.
ಆದರೆ ಷರ್ಟ್, ಪ್ಯಾಂಟ್ ಪೀಸ್ ಗಳನ್ನು ನೂರಕ್ಕೆ ತೊಂಬೊತ್ತೊಂಬತ್ತು ಪರ್ಸೆಂಟ್ ಯಾರೂ ಹೊಲಿಸಿ ತೊಟ್ಟು ಕೊಳ್ಳೋಲ್ಲ. ಈಗ ರೆಡಿಮೇಡ್ ಜಮಾನ. ನೂರು ಇನ್ನೂರು ರೂಪಾಯಿಯ ಪ್ಯಾಂಟ್ ಷರ್ಟ್ ಪೀಸ್‌ಗಳಿಗೆ ಐನೂರು, ಸಾವಿರ ಹೊಲಿಗೆ ಮಜೂರಿ ಕೊಟ್ಟು ಯಾರೂ ಹೊಲಿಸಿ ತೊಟ್ಟುಕೊಳ್ಳರು.
ಆಯೋಜಕ ಬಂಧುಗಳಲ್ಲಿ ಸವಿನಯ ವಿನಂತಿ. ದಯವಿಟ್ಟು ಈ ರಿಲೇಕೋಲ್ ಸೀರೆ ಪ್ಯಾಂಟ್ ಪೀಸ್ ಷರ್ಟ್ ಪೀಸ್ ಉಡುಗೊರೆಯನ್ನು ಯಾರಿಗೂ ನೀಡಬೇಡಿ.
ಉಡುಗೊರೆಗಳು ಮಾತನಾಡುತ್ತವೆ....
ನಿರ್ಜೀವ ಉಡುಗೊರೆಯ ವಸ್ತುಗಳು ಮಾತನಾಡುತ್ತವೆಯೆ? ಹೌದು. ನಾನು ಮದುವೆ ಆದ ಹೊಸತರಲ್ಲಿ ನನ್ನ ಕೆಲವು ಸ್ನೇಹಿತರು ಬಂಧುಗಳ ಮನೆಗೆ ನಾವು ದಂಪತಿಗಳು ಹೋಗಿದ್ದೆವು. ಒಬ್ಬರ ಮನೆಯಲ್ಲಿ ನನ್ನ ಹೆಂಡತಿಗೆ ಕೊಟ್ಟ ಸೀರೆ ಅತ್ಯಂತ ಕಳಪೆಯದ್ದಾಗಿತ್ತು.
ಅವರಿಗೆ ಮದುವೆಯಾಗಲು ಸಿದ್ದವಾಗಿದ್ದ ಪುತ್ರನೂ ಇದ್ದ. ಅವರು ಸಾಕಷ್ಟು ಶ್ರೀಮಂತರು. ಅವರು ಈ ಕಾಲದಲ್ಲೂ ಮದುವೆ ಹೆಣ್ಣಿನ ಸಂಬಂಧ ತಮ್ಮ ಮನೆ ಬುಡಕ್ಕೆ ಬರಲಿ ಎಂಬ ಭಾವನೆ ಅಥವಾ ದೋರಣೆ ಇರುವವರು. ಆದರೆ ತಮ್ಮ ಮಗನ ಓರಿಗೆಯ "ಇವನಿಗೆ ಮದುವೆ ಆಯ್ತಲ್ಲ" ಎಂಬ ಭಾವ ಅವರ ಉಡುಗೊರೆಯ ಸೀರೆಯಲ್ಲಿತ್ತು!
ಇನ್ನೊಂದು ಬಂಧುಗಳ ಮನೆಯಲ್ಲೂ ಇದೆ ಬಗೆಯ ಅನುಭವವಾಯಿತು. ಅವರ ಮಗ ಬಹಳ ವರ್ಷದ ಹಿಂದೆ ಅಕಾಲಿಕ ಮರಣಕ್ಕೆ ತುತ್ತಾಗಿದ್ದ. ಅವರ ಮನೆಯಲ್ಲೂ ತೀರಾ ಹಪ್ ಹಿಡಿದ ಸೀರೆಯನ್ನು ನನ್ನ ಹೆಂಡತಿಗೆ ಉಡುಗೊರೆ ಕೊಟ್ಟಿದ್ದರು. ಅವರಿಗೆ ನನ್ನ ನೋಡಿದಾಗ ತಮ್ಮ ಮಗ ಜ್ಞಾಪಕ ಆಗಿ ಆ ನೋವು ಆ ಬೇಸರ ಒಡಲೊಳಗಿನ "ಕಿಚ್ಚು" ಉಡುಗೊರೆಯ ಮೂಲಕ ಕಾಣಿಸಿತು.
ಈ ಮೇಲಿನ ಇಬ್ಬರೂ ಬಂಧುಗಳು ಕೋಟ್ಯಾದೀಶರು. ಇವರ ಮನೆಯ ವಾರ್ಡರೋಬ್ ನಲ್ಲಿ ಸಾವಿರ ಸೀರೆಯ ಸಂಗ್ರಹ ಇರಬಹುದು. ಅಷ್ಟಿದ್ದೂ ಇಂತಹ ಹಪ್ ಗೆಟ್ ಸೀರೆ ಯಾಕೆ ಉಡುಗೊರೆ ಕೊಟ್ಟಿದ್ದಾರೆಂಬುದನ್ನ ಊಹಿಸೋದು ಕಷ್ಟ ಅಲ್ಲ.
ಇನ್ನೊಬ್ಬ ಆಪ್ತರ ಮನೆಗೆ ನಾನು ಮದುವೆ ಆದ ಹೊಸತರಲ್ಲಿ ಹೋದಾಗ ನಾನು ಎಷ್ಟೇ ಬೇಡ ಅಂದರೂ ನನ್ನ ಬಳಿಯೇ ನನ್ನ ಹೆಂಡತಿಗೆ ಸೀರೆ ಉಡುಗೊರೆ ಕೊಟ್ಟು ಕಳಿಸಿದ್ದರು. ಹೆಣ್ಮಕ್ಕಳಿಗೆ ಮನೆಯ ವಾರ್ಡ್ ರೋಬಿನಲ್ಲಿ ಸಾವಿರ ಸೀರೆ ಇದ್ದರೂ ಸಾವಿರದ ಒಂದನೇ ಸೀರೆ ಬಂದರೆ ಖಂಡಿತವಾಗಿಯೂ ಹೆಚ್ಚಲ್ಲ.!
ನನ್ನವಳು ಆ ಸೀರೆಯನ್ನು ಬಿಚ್ಚಿ ನೋಡಿದ್ದಾಳೆ. ಆ ಸೀರೆಯಲ್ಲಿ ದೊಡ್ಡದೊಂದು ತೂತು ಇತ್ತು. ಆ ಮನೆಯ ಹೆಂಗಸು ಉದ್ದೇಶ ಪೂರ್ವಕವಾಗಿಯೇ ಈ ತೂತು ಬಿದ್ದ ಸೀರೆಯನ್ನು ಉಡುಗೊರೆ ಯಾಗಿ ನನ್ನ ಹೆಂಡತಿಗೆ ಕಳಿಸಿದ್ದರು! ಅಥವಾ ಉಡುಗೊರೆಯ ನೆಪದಲ್ಲಿ "ದಾಟಿಸಿದ್ದರು".
ಮತ್ತೊಬ್ಬ ಬಂಧುಗಳು ತಮ್ಮ ಕುಟುಂಬದ ಕೊನೆಯ ಮದುವೆ ಎಂದು ಬಂಧು ಬಳಗದವರಿಗೆಲ್ಲ ಉಡುಗೊರೆ ಕೊಟ್ಟಿದ್ದರು. ನನ್ನ ತಾಯಿಯ ಲೆಕ್ಕದಲ್ಲಿ ಕೊಟ್ಟ ಸೀರೆಯೂ ಯಾತಕ್ಕೂ ಬೇಡದಾಗಿತ್ತು. ನನ್ನ ತಾಯಿ ಪಾಪದ ಹೆಂಗಸು, ಇವರಿಗೆ ಈ ಸೀರೆ ಸಾಕು ಎಂಬ ತಾತ್ಸಾರ ಆ ಸೀರೆ ಯಲ್ಲಿ ಕಾಣಿಸುತ್ತಿತ್ತು. ಸೀರೆ ಕೊಟ್ಟವರ ಕುಟುಂಬದಲ್ಲಿ ಯಾರು ಯಾರಿಗೆ ಯಾವ ಸೀರೆ ಕೊಡಬೇಕು ಎಂಬ ಪರಿಶೀಲನೆ ನಡೆದಾಗ ಯಾತಕ್ಕೂ ಬೇಡದ ಸೀರೆ ಇಂತಹ ಸಸಾರದವರಿಗೆ ಎತ್ತಿಡಲಾಗುತ್ತದೆ.
ತಾಯಿಂದಿರೇ, ಅಕ್ಕಂದಿರೇ, ತಂಗಿಯಂದಿರೇ..
ಇಂದೇ ನಿಮ್ಮ ವಾರ್ಡ್ ರೋಬು ತೆಗದು ನೋಡಿ...
ನಿಮಗೆ ಉಡುಗೊರೆ ಬಂದ ಸೀರೆಗಳು ಮಾತನಾಡುವುದನ್ನ ಆಲಿಸಿ...
ಉಡುಗೊರೆಗಳು ಒಂದು ಕಾಲದಲ್ಲಿ ಪ್ರೀತಿಯ ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡುತ್ತಿತ್ತು. ಬಟ್ಟೆ ಬರೆಯ ಬರದ ಕಾಲವದು. ಆಗಿನ ಕಾಲದಲ್ಲಿ ಸೀರೆ ಬಟ್ಟೆ ಉಡುಗೊರೆ ಪಡೆದವರಿಗೆ ಅನುಕೂಲ ಆಗುತ್ತಿತ್ತು. ಆಗ ಮದುವೆ ಹಬ್ಬದಲ್ಲಿ ಜವಳಿ ತೆಗೆಯೋದು ಎಂಬುದು ಮಹತ್ಕಾರ್ಯವಾಗಿತ್ತು.
ಕಾಲ ಬದಲಾವಣೆ ಆಗಿದೆ. ಈಗ ಯಾರಿಗೂ ಈ ಅಗ್ಗದ ರಿಲೇ ಕೋಲಿ ನಂತಹ ಸೀರೆ ಬಟ್ಟೆಗಳ ಉಡುಗೊರೆಯ ಅವಶ್ಯಕತೆ ಇಲ್ಲ. ಈಗ ಊರೂರಿನಲ್ಲಿ ಜವಳಿ ಮಳಿಗೆಗಳಾಗಿದೆ. ಜೊತೆಗೆ ಮನೆ ಮನೆಯ ಬಾಗಿಲಿಗೆ ಆನ್ ಲೈನ್‌ನಲ್ಲಿ ಬಟ್ಟೆಬರೆ ಬರುತ್ತದೆ. ಈಗ ಎಲ್ಲರಿಗೂ ಇಂತಹದ್ದೇ ಕ್ವಾಲಿಟಿಯ ಇಂತಹದ್ದೇ ಬಣ್ಣದ, ಇಂತಹದ್ದೇ ಮಾದರಿಯ ಬಟ್ಟೆ ಧರಿಸಬೇಕು ಎನ್ನುವ ಕಾಯಿಷ್ ಇದೆ. ಉಡುಗೊರೆ ಕೊಟ್ಟಿದ್ದು ಅಂತ ಅದನ್ನು ಖಂಡಿತವಾಗಿಯೂ ಕಣ್ಣಿಗೆ ಒತ್ತಿಕೊಂಡು ಧರಿಸೋಲ್ಲ!
ಈಗಲೂ ಕೆಲವು ಜನರಿಗೆ ಇಂತಹ ಉಡುಗೊರೆಗಳು ಕೊಡೋದು ಎಂಬುದು ಅವರ ಅಹಂ ದೋರಣೆಯ ಶ್ರೀಮಂತಿಕೆಯ ಪ್ರದರ್ಶನದ ಪ್ರತೀಕವಾಗಿದೆ. ಆದರೆ ಇಂತಹ ಅಹಂಭಾವದಿಂದ ಕೊಟ್ಟ ಉಡುಗೊರೆಗಳು ಏನಾಗುತ್ತದೆ ಎಂಬ ವಿಶ್ಲೇಷಣೆ ಮಾಡಿದರೆ ಉಡುಗೊರೆ ಹೊರೆ ತಪ್ಪಬಹುದೇನೋ. ಬಂಧುಗಳೇ, ಇಂತಹ ಅಪ್ರಯೋಜಕ ಉಡುಗೊರೆ ನೀಡುವ ಸಂಪ್ರದಾಯದಿಂದ ದಯವಿಟ್ಟು ಹೊರಬನ್ನಿ.
ಮೊನ್ನೆ ಯಾರೋ ಈ ಉಡುಗೊರೆ ಕೊಡುವ ಬದಲಾಗಿ ಉಡುಗೊರೆ ಮೊತ್ತವನ್ನು ಸಂಗ್ರಹಿಸಿ ಆ ಹಣವನ್ನು ಗೋಶಾಲೆಗಳಿಗೆ ದೇಣಿಗೆ ನೀಡಿ ಎಂದು ಅಭಿಪ್ರಾಯವನ್ನು ನೀಡಿದ್ದರು. ಖಂಡಿತವಾಗಿಯೂ ಇಂತಹ ಉಡುಗೊರೆ ದೇಣಿಗೆ ಹೀಗೆ ಗೋಶಾಲೆಗಳಿಗೆ ನೀಡಿದರೆ ಖಂಡಿತವಾಗಿಯೂ ಉಪಯೋಗ ಆಗುತ್ತದೆ.
ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲೇ ಅನೇಕ "ಆರ್ತರು" ಇರುತ್ತಾರೆ. ಬಡತನದ ಬೇಗೆಯಲ್ಲಿ ಬೇಯುವವರು ಇರುತ್ತಾರೆ, ಹೆಚ್ಚಿನ ವಿಧ್ಯಾಭ್ಯಾಸ ಮಾಡಲು ಹಣದ ಸಮಸ್ಯೆ ಯಲ್ಲಿರುವವರು ಇರುತ್ತಾರೆ. ಪ್ರಾಣಾಂತಿಕ ಖಾಯಿಲೆಯಿಂದ ಬಳಲುತ್ತಾ ಚಿಕಿತ್ಸೆಯ ಹಣ ಹೊಂದಿಸಲು ಕಷ್ಟ ಪಡು ತ್ತಿರುತ್ತಾರೆ, ಗೋವುಗಳು ಮಾತ್ರವಲ್ಲದೇ ಬೀದಿನಾಯಿ, ಬೆಕ್ಕುಗಳನ್ನು ಮಾನವೀಯತೆಯಿಂದ ಕಷ್ಟ ಪಟ್ಟು ಸಾಕುವವರು ಇರುತ್ತಾರೆ, ಜನರ ದೇಣಿಗೆಯಿಂದ ಅನಾಥಾಶ್ರಮ, ವೃದ್ದಾಶ್ರಮ ನಡೆಸುವವರು ಇರುತ್ತಾರೆ. ಅವಸಾನದ ಅಂಚಿಗೆ ಹೋಗುತ್ತಿರುವ ನಾವೇ ಓದುತ್ತಿರುವ ಸರ್ಕಾರಿ ಶಾಲೆಗಳು ಉನ್ನತೀಕರಣಕ್ಕೆ ಕಾಯುತ್ತಿರುತ್ತವೆ. ಹುಡುಕಿದರೆ ನಮ್ಮ ಉಡುಗೊರೆಯ ಹಣ ಸದ್ವಿನಿಯೋಗವಾಗಲು ಇಂತಹ ಸಾವಿರ ದಾರಿಗಳಿವೆ.
ಬಂಧುಗಳೇ, ಮದುವೆ ಮುಂಜಿ ಇತರೆ ಶುಭ ಸಮಾರಂಭಗಳಲ್ಲಿ ಸಾಮಾನ್ಯ ವಸ್ತುಗಳ ಉಡುಗೊರೆ ನೀಡಬೇಡಿ. ಅಪರೂಪದ, ದೇಸಿ ಗೃಹ ಕೈಗಾರಿಕೆಯ ಉತ್ಪನ್ನಗಳು ಉಡುಗೊರೆ ನೀಡಿದರೆ ಪರವಾಗಿಲ್ಲ. ಆದರೆ ಯಾವುದೇ ಕಾರಣಕ್ಕೂ ಮೇಡ್ ಇನ್ ಚೈನಾ ವಸ್ತುಗಳ ಉಡುಗೊರೆ ನೀಡದಿರಿ. ಪ್ಲಾಸ್ಟಿಕ್ ವಸ್ತುಗಳನ್ನಂತೂ ಉಡುಗೊರೆ ನೀಡಬೇಡಿ ಎಂದು ಕೋರುತ್ತಿದ್ದೇನೆ.
ಉಡುಗೊರೆಯ ಬಗ್ಗೆ ಒಂದಷ್ಟು ಚಿಂತನಾಭಿಪ್ರಾಯಗಳು ನಿಮ್ಮಿಂದ ನಾನು ನಿರೀಕ್ಷಿತ. ವಂದನೆಗಳು.
- ಪ್ರಬಂಧ ಅಂಬುತೀರ್ಥ
9481801869
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ