ಅಭಿಮನ್ಯು ಸುಭದ್ರೆಯ ಗರ್ಭದಲ್ಲಿದ್ದಾಗ ಆಕೆಯನ್ನು ರಥದಲ್ಲಿ ಕರೆದೊಯ್ಯುವ ಸಂದರ್ಭದಲ್ಲಿ ಶ್ರೀಕೃಷ್ಣ ಚಕ್ರವ್ಯೂಹವನ್ನು ಪ್ರವೇಶಿಸುವ ವಿಧಾನವನ್ನು ವಿವರಿಸುತ್ತಿರುತ್ತಾನೆ. ಆದರೆ ಶ್ರೀ ಕೃಷ್ಣನ ವಿವರಣೆಯನ್ನು ಕೇಳುತ್ತಾ ಸುಭ್ರದ್ರೆ ನಿದ್ದೆಗೆ ಜಾರುತ್ತಾಳೆ, ಇದನ್ನು ಅರಿಯದ ಕೃಷ್ಣನಿಗೆ ತನ್ನ ವಿವರಣೆಗೆ "ಹೂಂ"ಎನ್ನುತ್ತಿರುವುದು ಮಾತ್ರ ಕೇಳಿಸುತ್ತಿರುತ್ತದೆ. ಚಕ್ರವ್ಯೂಹ ಪ್ರವೇಶದ ಬಗ್ಗೆ ಹೇಳಿ ಮುಗಿಸಿ ತಿರುಗಿನ ಕೃಷ್ಣನಿಗೆ ಸುಭದ್ರೆ ಗಾಢ ನಿದ್ದೆ ಮಾಡುತ್ತಿರುವುದು ಕಾಣುತ್ತದೆ. ಹಾಗೆಯೇ ಅಷ್ಟು ಸಮಯವೂ ಹೂಂ ಎನ್ನುತ್ತಿದ್ದದ್ದು ಸುಭದ್ರಯ ಗರ್ಭದಲ್ಲಿದ್ದ ಮಗು ಎಂದು ತಿಳಿಯುತ್ತದೆ. ತಕ್ಷಣವೇ ತನ್ನ ವಿವರಣೆಯನ್ನು ನಿಲ್ಲಿಸಿದ ಆದರೆ ಚಕ್ರವ್ಯೂಹದಿಂದ ಹೊರಬರುವ ವಿಧಾನವನ್ನು ಮಾತ್ರ ಹೇಳಲಿಲ್ಲ. ಪರಿಣಾಮವಾಗಿ ಕುರುಕ್ಷೇತ್ರದ ಯುದ್ಧದಲ್ಲಿ ಚಕ್ರವ್ಯೂಹವನ್ನು ಪ್ರವೇಶಿಸಿ ಹೊರಬರಲಾಗದೇ ಮೃತನಾಗುತ್ತಾನೆ.
ಇದು ಮಹಾಭಾರತದ ಕಥೆಯಾದರೆ ರಾಕ್ಷಸ ಹಿರಣ್ಯ ಕಶ್ಯಪನ ಪತ್ನಿ ತನಗೆ ಹುಟ್ಟುವ ಮಗು ಸದ್ಗುಣವನ್ನು ಹೊಂದಿರಲಿ ಎಂಬ ಆಶಯವನ್ನಿಟ್ಟುಕೊಂಡು ಮಹಾವಿಷ್ಣುವಿನ ಕಥೆಗಳನ್ನು ಹೆಚ್ಚು ಪಠಿಸುತ್ತಿರುತ್ತಾಳೆ. ಇದರ ಪರಿಣಾಮವೇನೋ ಎಂಬಂತೆ ಪ್ರಹ್ಲಾದ ಮಹಾನ್ ವಿಷ್ಣು ಭಕ್ತನಾಗುತ್ತಾನೆ. ಅಂದರೆ ಗರ್ಭದಲ್ಲಿರುವ ಭ್ರೂಣ ನಿರ್ದಿಷ್ಟ ಸ್ಥಿತಿ ತಲುಪಿದ ನಂತರ ಹೊರಗಿಗ ಧ್ವನಿಯನ್ನು ಕೇಳುವ ಸಾಮರ್ಥ್ಯ ಹೊಂದಿರುತ್ತವೆ ಎಂಬುದನ್ನು ಈ ಪ್ರಕರಣಗಳು ಸ್ಪಷ್ಟಪಡಿಸುತ್ತವೆ. ಇವೆಲ್ಲವೂ ಮಗು ಗರ್ಭದಲ್ಲಿರುವಾಗಲೇ ಅದಕ್ಕೆ ಉತ್ತಮವಾದ ಸಂಸ್ಕಾರವನ್ನು ನೀಡುವ ಭಾಗವಾಗಿ ನಡೆಸುವ ಕ್ರಿಯೆಗಳಾಗಿದ್ದವು. ಅಂದರೆ ಮಗು ಗರ್ಭದಲ್ಲಿರುವಾಗಲೇ ಅದರ ಸ್ವಭಾವ, ವ್ಯಕ್ತಿತ್ವವನ್ನು ರೂಪಿಸುವುದನ್ನು ಪ್ರಾರಂಭಿಸುವ ಮಾರ್ಗವನ್ನು ಭಾರತೀಯ ಸನಾತನ ಚಿಂತನೆಗಳು ಕಂಡುಕೊಂಡಿದ್ದವು.
ಎಂಥಹ ಅದ್ಭುತ!? ಇನ್ನೂ ಪ್ರಪಂಚವನ್ನೇ ಕಾಣದ ಕೂಸು ಗರ್ಭದಲ್ಲಿ ಬೆಳೆಯುವುದಕ್ಕೂ ಮುನ್ನವೇ ಅದು ಸದ್ಗುಣವಂತವಾಗಿರಲಿ ಎಂಬ ಆಶಯದಿಂದ ನಡೆಸುತ್ತಿದ್ದ ಕ್ರಿಯೆಗಳು ನಿಜಕ್ಕೂ ಬೆರಗು ಮೂಡಿಸುತ್ತವೆ. ಮನುಷ್ಯನ ವ್ಯಕ್ತಿತ್ವ, ಗುಣಗಳನ್ನು ಉತ್ತಮಗೊಳಿಸಲು ಭಾರತೀಯ ಋಷಿ ಪರಂಪರೆ ಶೋಡಷ ಸಂಸ್ಕಾರಗಳನ್ನು ನೀಡಿದೆ. ಅದರಲ್ಲಿ ಮೊದಲನೆಯದ್ದೇ ಈ ಗರ್ಭ ಸಂಸ್ಕಾರ, ಗರ್ಭ ಸಂಸ್ಕಾರದಲ್ಲಿ ಸದ್ಗುಣ, ದೀರ್ಘಾಯುಷ್ಯ ಬಲಿಷ್ಠ ಮಗುವಿಗಾಗಿ ಸಂಕಲ್ಪ ಮಾಡಿ ಹೋಮ ಮೊದಲಾದ ಧಾರ್ಮಿಕ ಕ್ರಿಯೆಗಳನ್ನು ನಡೆಸಲಾಗುತ್ತದೆ. ಹಿರಿಯ ಮುತ್ತೈದೆಯರಿಂದ ಉತ್ತಮ ಸಂತಾನದ ಆಶೀರ್ವಾದ ಪಡೆಯುವುದು ಗರ್ಭ ಸಂಸ್ಕಾರದ ಭಾಗದಲ್ಲಿ ಒಂದು. ಹೋಮ-ಹವನ ಸೇರಿದಂತೆ ಬಹಳಷ್ಟು ಆಚರಣೆಗಳು ವೇದಗಳ ಕಾಲದಲ್ಲಿ ಹೇಳಿದ್ದ ಆಚರಣೆಗಳ ಭಾಗವಾಯಿತು. ಆದರೆ ಆಧುನಿಕ ಯುಗದಲ್ಲೂ ಗರ್ಭ ಸಂಸ್ಕಾರವನ್ನು ಬೇರೆಯದ್ದೇ ಸ್ವರೂಪದಲ್ಲಿ ಆಚರಿಸಲಾಗುತ್ತಿದೆ. ವೇದಗಳ ಕಾಲದಲ್ಲಿ ಹಾಗೂ ಈಗಿನ ಕಾಲದಲ್ಲಿ ಆಚರಿಸಲಾಗುತ್ತಿರುವ ಗರ್ಭ ಸಂಸ್ಕಾರದ ವಿಧಾನದಲ್ಲಿ ಬದಲಾವಣೆಯಾಗಿರಬಹುದು. ಆದರೆ ಬಲಿಷ್ಠ. ಸದ್ಗುಣ ಮಗುವನ್ನು ಪಡೆಯುವ ಉದ್ದೇಶ ಮಾತ್ರ ಒಂದೇ ಆಗಿದೆ.
ವೇದಗಳ ಕಾಲದಲ್ಲಿ ಭ್ರೂಣ ಗರ್ಭದಲ್ಲಿ ಬೆಳೆಯುವುದಕ್ಕೂ ಮುನ್ನವೇ ಪತಿ-ಪತ್ನಿಯರಿಂದ ಗರ್ಭ ಸಂಸ್ಕಾರ ಮಾಡಿಸುವ ಪದ್ಧತಿ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಗರ್ಭ ಸಂಸ್ಕಾರದ ಕುರಿತಾದ ಸಿಡಿ ಡಿವಿಡಿಗಳೂ ಸಹ ಬರುತ್ತಿವೆ. ಗರ್ಭದಲ್ಲಿರುವಾಗಲೇ ಮಗುವಿಗೆ ಉತ್ತಮ ಮೌಲ್ಯಗಳನ್ನು ತಿಳಿಸಿ, ಅದನ್ನು ಅತ್ಯಂತ ಬುದ್ಧಿಶಾಲಿಯನ್ನಾಗಿ ಮಾಡುವುದು ಹೇಗೆ ಎಂಬುದರ ಬಗ್ಗೆ ಆಯುರ್ವೇದ ಕ್ಲಿನಿಕ್ ಗಳೂ ತಿಳಿಸುವ ವ್ಯವಸ್ಥೆ ಇದೆ. ಇದನ್ನೇ ವೇದ ಕಾಲದಲ್ಲಿ ಪುಂಸವನ ಕರ್ಮ ’ಸುಪ್ರಜಾ ಜನನ’ ವೆಂದು ಕರೆಯಲಾಗುತ್ತಿತ್ತು. ಗರ್ಭ ಸಂಸ್ಕಾರ ಕೇವಲ ಒಳಗಿರುವ ಮಗುವಿಗೆ ಮಾತ್ರ ಸಹಕಾರಿಯಾಗದೇ ತಾಯಿ ತನ್ನ ಮಗುವಿನೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲೂ ಸಾಧ್ಯವಾಗುವಂತಹ ಕ್ರಿಯೆ, ಆದ್ದರಿಂದಲೇ ಅದು ಇಂದಿಗೂ ಹೆಚ್ಚು ಪ್ರಸ್ತುತವಾಗಿದೆ.
ಇತ್ತೀಚಿನ ದಿನಗಳಲ್ಲಿ ಶ್ಲೋಕ, ಮಂತ್ರಗಳ ಸಿಡಿಗಳು, ನೀತಿ ಕಥೆಗಳನ್ನೊಳಗೊಂಡ ಸಿಡಿಗಳು ಲಭ್ಯವಿದೆ. ಅಷ್ಟೇ ಅಲ್ಲದೇ ಚಿಂತನೆಗಳನ್ನು ನಿಷ್ಕಲ್ಮಷಗೊಳಿಸುವಂತಹ ಪುಸ್ತಕಗಳೂ ಲಭ್ಯವಿದೆ. ಇದರೊಂದಿಗೆ ತಾಯಂದಿರು ಮಾಡುವ ಯೋಗಾಭ್ಯಾಸ ಸಹ ಹುಟ್ಟಬೇಕಿರುವ ಮಕ್ಕಳಿಗೆ ಶ್ರೇಷ್ಠವಾದದ್ದಾಗಿದ್ದು, ಒಳ್ಳೆಯ ಶ್ಲೋಕಗಳನ್ನು ಕೇಳುವ ಪುಸ್ತಕಗಳನ್ನು ಓದುವ ಮೂಲಕ ತಾಯಂದಿರಾಗುವವರು ಇನ್ನಷ್ಟೇ ಹುಟ್ಟಬೇಕಿರುವ ಮಕ್ಕಳಿಗೆ ಉತ್ತಮವಾದ ಗರ್ಭ ಸಂಸ್ಕಾರ ನೀಡಬಹುದಾಗಿದೆ.
(ಸಂಗ್ರಹ) (ಮೂಲ ಲೇಖಕರಿಗೆ ಕೃತಜ್ಞತೆಗಳು)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ