ಸಮಾಜವನ್ನು ತಿದ್ದುವ ಗುರುಮಠಗಳು

Upayuktha
0


ಗುರುಮಠಗಳು ಹುಟ್ಟಿಕೊಂಡದ್ದು ಸಮಾಜ ತಿದ್ದುವ ದೃಷ್ಟಿಯಿಂದ. ಆ ಕಾರಣದಿಂದ ಎಲ್ಲಾ ಮಠಗಳ ಯತಿ ಶ್ರೇಷ್ಠರುಗಳು ಸದಾ ಸಂಚಾರದಲ್ಲಿಯೇ ಇರುತ್ತಾರೆ. ಸಂಚಾರಿ ಯತಿಗಳಿಗೂ ಒಂದಷ್ಟು ವಿಶ್ರಾಂತಿ ಬೇಕು. ಅಧ್ಯಯನವೂ ಬೇಕು. ತಪಸ್ಸೂ ಬೇಕು. ಸಮಾಜ ತಿದ್ದುವ ಕಾರ್ಯವು ನಡೆಯಬೇಕು. ಸಮಾಜದ ಒಳಿತನ್ನು ಸದಾ ಗಮನಿಸುತ್ತಿರಬೇಕು. ಇದಕ್ಕಾಗಿಯೇ ಮಳೆಗಾಲದಲ್ಲಿ ಸಂಚಾರ ಕಷ್ಟ ಎಂಬ ಕಾರಣದಿಂದ ಚಾತುರ್ಮಾಸ್ಯದ ವ್ರತವನ್ನು ಎಲ್ಲಾ ಗುರುಪೀಠಗಳು ಆಚರಿಸುತ್ತವೆ. ನಮ್ಮ ರಾಮಚಂದ್ರಾಪುರ ಮಠದ ಯತಿ ಶ್ರೇಷ್ಠರು ಈ ಚಾತುರ್ಮಾಸ್ಯಗಳನ್ನು ವರ್ಷವೂ ವಿಶಿಷ್ಟ ಪರಿಕಲ್ಪನೆಯೊಂದಿಗೆ ಆಚರಿಸುವುದು ವಿಶೇಷ.


ಎಲ್ಲರೂ ಒಟ್ಟಾಗಿ ಮುನ್ನಡೆಯಬೇಕೆಂಬ ಸಂದೇಶ ಸಾರುವುದಕ್ಕಾಗಿ ಸಂಘಟನಾ ಚಾತುರ್ಮಾಸ್ಯ, ಗೋವಿರದಿರೆ ಗತಿ ಗೋವಿಂದ ಎಂಬ ಕಾರಣದಿಂದ ಗೋ ವಂಶದ ಮಹತ್ವವನ್ನು ಸಾರುವುದಕ್ಕಾಗಿ ಗೋಚಾತುರ್ಮಾಸ್ಯ, ಮರ್ಯಾದ ಪುರುಷೋತ್ತಮ ರಾಮನಾದರ್ಶವನ್ನು ಪ್ರತಿಯೊಬ್ಬನು ಆಚರಿಸುವುದಕ್ಕಾಗಿ ರಾಮಾಯಣ ಚಾತುರ್ಮಾಸ್ಯ, ಸಮಾಜದ ಅದ್ಭುತ ಕಾರ್ಯಗಳನ್ನು, ತೆರೆಮರೆಯಲ್ಲಿ ಸಾಧಿಸಿದ ವ್ಯಕ್ತಿಗಳನ್ನು, ವಿಶೇಷವಾದ ವಸ್ತುಗಳನ್ನು ಜಗತ್ತಿಗೆ ಅನಾವರಣಗೊಳಿಸಲು ಅನಾವರಣ ಚಾತುರ್ಮಾಸ್ಯ ಮುಂತಾದವುಗಳೆಲ್ಲ ಕೆಲವು ಮಾದರಿಗಳು. ಇವುಗಳ ಸಾಲಿಗೆ ಈ ವರ್ಷದ ಅದ್ಭುತ ಪರಿಕಲ್ಪನೆ ಸ್ವಭಾಷಾ ಚಾತುರ್ಮಾಸ್ಯ. ಕನ್ನಾಡಿನ ನೆಲದ ಭಾಷೆ ಕನ್ನಡ. ಪ್ರತಿಯೊಬ್ಬ ವ್ಯಕ್ತಿಯ ಮನದ ಭಾಷೆ ಕನ್ನಡ. ಪ್ರತಿಯೊಬ್ಬ ವ್ಯಕ್ತಿಯ ಆಲೋಚನೆಗಳು ಬರುವುದು ಕನ್ನಡದಲ್ಲಿ. ಪರ ಊರಿಗೆ ಹೋದಾಗಲಂತೂ ಆತ್ಮೀಯ ಸಂಬಂಧದ ಬೆಸುಗೆ ಹುಟ್ಟುವುದು ಕನ್ನಡದಲ್ಲಿ. ಹೀಗೆಲ್ಲ ಇರುವ ನಾವು ಮಾತನಾಡುವಾಗ ಎಷ್ಟು ಶುದ್ಧ ಕನ್ನಡ ಮಾತನಾಡುತ್ತೇವೆ ಎಂಬುದನ್ನು ಯೋಚಿಸಿದರೆ ಈ ಚಾತುರ್ಮಾಸದ ಮೌಲ್ಯದ ಅರಿವು ನಮಗಾಗುತ್ತದೆ.


ಆಧುನಿಕ ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ ಶಾಲೆಗಳಲ್ಲಿ ಕನ್ನಡ ಪಾಠಕ್ಕೆ ಮಹತ್ವ ಕೊಡುವುದು ಗಣನೀಯವಾಗಿ ಕಡಿಮೆಯಾಯಿತು. ಕನ್ನಡ ಹೇಗಾದರೂ ನಮ್ಮ ಮಾತೃ ಭಾಷೆ ಆ ಕಾರಣದಿಂದ ಅದು ಕಷ್ಟವಲ್ಲ ವ್ಯಾವಹಾರಿಕಕ್ಕಾಗಿ ಆಂಗ್ಲ ಭಾಷೆ ಕಲಿಯುವುದೇ ಇಷ್ಟವಾಗಲಿ ಅಂತ ಆಂಗ್ಲ ಭಾಷೆಗೆ ಒತ್ತು ಜಾಸ್ತಿಯಾಯಿತು. ಪರಿಣಾಮ ಇಂದು ಜನರ ಬಾಯಲ್ಲಿ ಕನ್ನಡ ಕಂಗ್ಲೀಷ್ ಆಗಿದೆ. ಇದು ದುರಂತ.


ಕನ್ನಡ ಭಾಷೆಯಲ್ಲಿ ಅದೆಷ್ಟು ಪಾಂಡಿತ್ಯವಿದೆ. ಅದೆಷ್ಟು ಶಬ್ದ ಭಂಡಾರವಿದೆ. ಅದೆಷ್ಟು ಮೌಲ್ಯಗಳನ್ನು ಸಾರುವ ಸಾಹಿತ್ಯವಿದೆ. ಎಂತೆಂತ ಅದ್ಭುತ ಮೇರು ಕವಿಗಳಿದ್ದಾರೆ ಕನ್ನಡದಲ್ಲಿ. ಇವುಗಳನ್ನೆಲ್ಲ ನಾವು ಗುರುತಿಸದೇ ಕನ್ನಡವನ್ನು ಸಂವಹನದ ತುಣುಕಾಗಿಸಿ ಆಂಗ್ಲ ಭಾಷೆಗೆ ಮಾರುಹೋಗುವುದು  ದುಃಖದ ಸಂಗತಿ.


ಕಗ್ಗದ ಕವಿಯ ಈ ಮಾತು ಎಷ್ಟೊಂದು ಮಾರ್ಮಿಕ ನೋಡಿ.


ಹಳೆಯ ಭಕ್ತಿ ಶ್ರದ್ಧೆಯಳಿಸಿ ಹೋಗಿದೆ ಮಾಸಿ,

ಸುಳಿದಿಲ್ಲವಾವ ಹೊಸ ದರ್ಶನದ ಹೊಳಪು,

ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ,

ತಳ ಮಳಿಸುತಿದೆ ಲೋಕ ಮಂಕುತಿಮ್ಮ.


ಹೌದಲ್ಲವಾ?!! ಎಷ್ಟೊಂದು ವಿಚಿತ್ರ!! ಅತ್ತಲಾಗಿ ಸರಿಯಾದ ಕನ್ನಡವೂ ಬಾರದು ಇತ್ತಲಾಗಿ ಆಂಗ್ಲ ಭಾಷೆಯಲ್ಲಿಯೂ ಪರಿಪಕ್ವತೆ ಇಲ್ಲ. ಎಷ್ಟೋ ವರ್ಷಗಳಿಂದ ಹಳೆ ಮನೆಯನ್ನು ಅಭ್ಯಾಸವಾದ ಕುಂಟ ಕುರುಡರಿಗೆ ಮನೆ ಬಿದ್ದು ಹೋದಾಗ ಅಥವಾ ಹೊಸ ಮನೆಯನ್ನು ಪ್ರವೇಶಿಸಿದಾಗ ಆಗುವ ಅನುಭವವೇ ಈಗ ಲೋಕದಲ್ಲಿ ಭಾಷಾ ಪ್ರಾವೀಣ್ಯತೆ ಇಲ್ಲದೆ ತಳಮಳಕ್ಕೆ ಕಾರಣ.


ಭಾಷೆಯೊಂದರ ಅಳಿವೆಂದರೆ ನಮ್ಮ ಅಸ್ಮಿತೆಯ ಅಳಿವು, ನಮ್ಮ ಆಚಾರ ವಿಚಾರಗಳ ಅಳಿವು, ನಮ್ಮ ಸಂಸ್ಕೃತಿಯ ಅಳಿವು, ಭಾರತೀಯತೆಯ ಅಳಿವು.


ಎಷ್ಟು ಶಬ್ದಗಳು ನಮ್ಮ ಜನಮಾನಸದಿಂದ ಇಂದು ಕಾಣೆಯಾಗಿದ್ದು ಕಾಣುತ್ತೇವೆ. ಹವಿಗನ್ನಡದ ಅಟ್ಟುಂಬೊಳ (ಅಟ್ಟು+ಉಂಬ ಒಳ) ಅಥವಾ ಕನ್ನಡದ ಅಡುಗೆಮನೆ ಕಿಚನ್ ಆಯಿತು. ಮುಖಮಂಟಪ ಹಾಲ್ ಅಥವಾ ಆಫೀಸ್ ರೂಮ್ ಆಯಿತು. ದೇವರ ಕೋಣೆ ಹೆಚ್ಚು ಕಮ್ಮಿ ಮೂಲೆ ಸೇರಿತು. ಬಚ್ಚಲು ಕಕ್ಕುಸು ಇಲ್ಲವಾಗಿಸಿ ಬಾತ್ರೂಮ್, ಟಾಯ್ಲೆಟ್ ಆಗಿ ಈಗ ವಾಶ್ ರೂಂ ಆಯ್ತು. ವಿದ್ಯೆ ಎಜುಕೇಶನಾಯಿತು. ವೃತ್ತಿ ಜೀವನದ ಗುರಿ ಕೆರಿಯರ್ ಆಯಿತು. ಅನೇಕರು ಯಾವುದಾದರೂ ವಿಷಯದಲ್ಲಿ ವಿವರಣೆಗೆ ನಿಂತರೆ ಹುಟ್ಟು ಕನ್ನಡಿಗರಿಗೆ ಅವಮಾನದಂತಿರುತ್ತದೆ. ಹೀಗೆ ಪೀಳಿಗೆಯಿಂದ ಪೀಳಿಗೆಗೆ ಶಬ್ದಗಳು ಮರೆಯಾಗ ಹತ್ತಿದವು.


ಇಂತಹ ವಿಷಯಗಳನ್ನು ಜನಮಾನಸದ ಅರಿವಿಗೆ ತರುವುದು ಸಮರ್ಥ ಗುರು ಒಬ್ಬರಿಂದ ಮಾತ್ರ ಸಾಧ್ಯ. ಚಾತುರ್ಮಾಸ್ಯದ ಅವಧಿ  ಎರಡು ತಿಂಗಳಲ್ಲಿ ಮಠಕ್ಕೆ ಬಾರದ ಶಿಷ್ಯ ಮಂದಿಗಳು ಬಲು ವಿರಳ. ಮನೆ ಮನೆಗಳಿಗೂ ವಿಷಯಗಳು ತಲುಪುತ್ತವೆ. ಮನ ಮನಗಳಿಗೂ ಮುಟ್ಟಿಸಬೇಕಾಗಿದೆ. ಅದಕ್ಕಾಗಿಯೇ ಇರುವುದು ಚಾತುರ್ಮಾಸ್ಯ.


ಸರ್ವಜ್ಞ ಕವಿ ಹೇಳಿದಂತೆ,

ತಂದೆಗೂ ಗುರುವಿಗೂ |ಒಂದು ಅಂತರ ಉಂಟು |

ತಂದೆ ತೋರುವನು ಸದ್ಗುರುವ, ಗುರುರಾಯ | ಬಂಧನವ ಕಳೆವ ಸರ್ವಜ್ಞ.


ಸದ್ಗುರು ಒಬ್ಬರು ನಮಗಿಂದಿದ್ದಾರೆ. ನಮ್ಮೊಳಗಿನ ಅಜ್ಞಾನದ ಬಂಧನವನ್ನು ಬಿಡಿಸಹೊರಟಿದ್ದಾರೆ. ಮುಕ್ತವಾಗಿ ತೆರೆದುಕೊಳ್ಳೋಣ. ಕನ್ನಡವನ್ನು ಉಳಿಸೋಣ ಕನ್ನಡವನ್ನು ಬೆಳೆಸೋಣ ಮಕ್ಕಳೆದುರು ಶುದ್ಧ ಕನ್ನಡದಲ್ಲಿಯೇ ಮಾತನಾಡಲು ಪ್ರಯತ್ನಿಸೋಣ.


ಕನ್ನಡಕ್ಕೆ ಹೋರಾಡು ಕನ್ನಡದ ಕಂದ,

ಕನ್ನಡವ ಕಾಪಾಡು ನಿನ್ನ ಆನಂದ.

ಜೋಗುಳದ ಹರಕೆ ಇದು ಮರೆಯದಿರು ಚಿನ್ನ,

ಮರೆತೆಯಾದರೆ ಅಯ್ಯೋ! ಮರೆತಂತೆ ನನ್ನ.


ಹರೇ ರಾಮ.


-ಎ.ಪಿ. ಸದಾಶಿವ ಮರಿಕೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top