ಶುದ್ಧ ಕನ್ನಡದಲ್ಲೇ ಸಂವಾದ ನಡೆಸಿ: ರಾಘವೇಶ್ವರ ಶ್ರೀ

Upayuktha
0


ಗೋಕರ್ಣ: ಸ್ವಭಾಷೆ ಬಗ್ಗೆ ಆತ್ಮಾಭಿಮಾನ ಮೂಡಿಸುವ ನಿಟ್ಟಿನಲ್ಲಿ ಇನ್ನು ಮುಂದೆ ಶ್ರೀರಾಮಚಂದ್ರಾಪುರ ಮಠದ ವ್ಯಾಪ್ತಿಯಲ್ಲಿ ಎಲ್ಲ ಸಂಘಟನೆಗಳ ಸಂವಾದಗಳು ಸ್ವಭಾಷೆಯಲ್ಲೇ ನಡೆಯಲಿವೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಪ್ರಕಟಿಸಿದರು.


ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 20ನೇ ದಿನವಾದ ಮಂಗಳವಾರ ಹುಬ್ಬಳ್ಳಿ-ಧಾರವಾಡ ವಲಯದ ಶಿಷ್ಯಭಕ್ತರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಭಾಷಾಭಿಮಾನ ಮೂಡಿಸುವ ಪ್ರಯತ್ನವಾಗಿ ಹವ್ಯಕ ಮಹಾಮಂಡಲದಿಂದ ಹಿಡಿದು ಘಟಕಗಳ ವರೆಗೆ ಎಲ್ಲ ಸಭೆಗಳನ್ನು ಶುದ್ಧ ಕನ್ನಡದಲ್ಲೇ ನಿರ್ವಹಿಸಬೇಕು ಎಂದು ಪದಾಧಿಕಾರಿಗಳಿಗೆ ಸೂಚನೆ ನೀಡಿದರು.


ಸ್ವಭಾಷಾ ತತ್ವ ಎಲ್ಲ ಹಂತಗಳಲ್ಲಿ ಅನುಷ್ಠಾನಕ್ಕೆ ಬರಬೇಕು. ಸ್ವಭಾಷಾ ಅಭಿಯಾನ ಕೇವಲ ಔಪಚಾರಿಕವಾಗದೇ ನಮ್ಮ ದೈನಂದಿನ ವ್ಯವಹಾರಗಳಲ್ಲಿ ಸ್ವಭಾಷೆಗೇ ಒತ್ತು ನೀಡುವ ಮೂಲಕ ಮುಂದಿನ ಪೀಳಿಗೆಗೆ ನಮ್ಮ ಭಾಷೆ- ಸಂಸ್ಕೃತಿ ಉಳಿಸುವ ಮಹತ್ವದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಎಚ್ಚರಿಸಿದರು.


ನಾವು ಪರಸ್ಪರ ಸೇರಿದಾಗ ಮನೆ ಮಾತು ಆಡೋಣ; ಸಮಾಜದ ಬೇರೆಯವರ ಜತೆ ಸಂವಾದ ನಡೆಸುವಾಗ ಶುದ್ಧ ಕನ್ನಡ ಮಾತನಾಡೋಣ. ಕನ್ನಡ ಈಗಾಗಲೇ ಸಾಕಷ್ಟು ಹದಗೆಟ್ಟಿದ್ದು, ಕನ್ನಡದ ಜತೆ ಇತರ ಭಾಷೆಗಳ ಕಲಬೆರಕೆ ಮುಂದುವರಿದರೆ ಮುಂದಿನ ಪೀಳಿಗೆಗೆ ಕನ್ನಡ ಭಾಷೆಯೇ ನಾಶವಾಗುವ ಅಪಾಯವಿದೆ ಎಂದರು.


ನಮ್ಮ ಹಿರಿಯರು ಬಳಸುತ್ತಿದ್ದ ಬಹಳಷ್ಟು ಪದಗಳು ಈಗಾಗಲೇ ಅನ್ಯಭಾಷೆಯ ಪ್ರಭಾವದಿಂದ ಮರೆಯಾಗಿದ್ದು, ಅವುಗಳನ್ನು ಹುಡುಕಿ ತೆಗೆದು ಮರು ಚಾಲ್ತಿಗೆ ತರಬೇಕು ಎಂದು ಸೂಚಿಸಿದರು.


ಹುಬ್ಬಳ್ಳಿ-ಧಾರವಾಡ ವಲಯದ ನೂತನ ಅಧ್ಯಕ್ಷರಾಗಿ ಆರ್.ಜಿ.ಹೆಗಡೆ ಮತ್ತು ಕಾರ್ಯದರ್ಶಿಯಾಗಿ ಗಜಾನನ ಭಾಗ್ವತ್ ಅವರನ್ನು ನಿಯುಕ್ತಿಗೊಳಿಸಲಾಯಿತು. ಪ್ರತಿಯೊಬ್ಬ ಶಿಷ್ಯರೂ ಒಂದಲ್ಲ ಒಂದು ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಸೇವಾಶೂನ್ಯ ಶಿಷ್ಯರು ಯಾರೂ ಇರದಂತೆ ನೋಡಿಕೊಳ್ಳುವ ಹೊಣೆ ಆಯಾ ಹಂತದ ಪದಾಧಿಕಾರಿಗಳದ್ದು ಎಂದು ಹೇಳಿದರು.


ನಾಗರ ಪಂಚಮಿ ಅಂಗವಾಗಿ ಅಶೋಕೆಯ ನಾಗಬನಕ್ಕೆ ತೆರಳಿ ಪರಮಪೂಜ್ಯರು ನಾಗದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top