ಜೆ.ಟಿ. ಶ್ರೀಧರ ಶರ್ಮಾ ಅವರ 'ಶಾಶ್ವತ ಮೌಲ್ಯಗಳು' ಕೃತಿಯ ಹೆಸರೇ ಆನೇಕ ನಿರೀಕ್ಷೆಗಳನ್ನು ಹುಟ್ಟಿಸುತ್ತದೆ. ಮುಖ್ಯವಾಗಿ ಇಂದಿನ ಯುವಜನರಿಗೆ ವೇದಗಳ ಆನಂತ ಸಾಗರದಲ್ಲಿ ಹೆಕ್ಕಿ ತೆಗೆದ 108 ಮಂತ್ರಗಳನ್ನು ಉಲ್ಲೇಖಿಸಿ ಶರ್ಮಾ ಅವುಗಳನ್ನು ಅರ್ಥೈಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.
ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನಮ್ಮ ಪ್ರಾಚೀನ ಪೂರ್ವಿಕರು ಸಾಮಾಜಿಕ, ನೈತಿಕ ಮೌಲ್ಯಗಳ ಬಗ್ಗೆ ಹೇಗೆಲ್ಲಾ ಚಿಂತಿಸುತ್ತಿದ್ದರು ಎಂಬುದು ಈ ಕೃತಿಯಿಂದ ತಿಳಿದುಬರುತ್ತದೆ. ಲೇಖಕ ಶ್ರೀಧರ ಶರ್ಮಾರಿಗೆ ಆಧ್ಯಾತ್ಮಿಕ ಚಿಂತನೆಯೇ ಮೂಲದ್ರವ್ಯ ಹಾಗಾಗಿ ಈ ಕೃತಿಯೂ ಅವರ ಅದೇ ಚಿಂತನೆಯ ಸಾಲಿಗೆ ಸೇರುತ್ತದೆ.
108 ಶ್ಲೋಕಗಳಲ್ಲಿ ಉದಾಹರಣೆಯಾಗಿ ನೋಡುವುದಾದರೆ, ಯಾನ್ಯಸ್ಮಾಕಗ್೦ ಸುಚರಿತಾನಿ । ತಾನಿ ತ್ವಯೋಪಾಸ್ವಾನಿ | ನೋ ಇತರಾಣಿ ||
ಈ ಮಂತ್ರವನ್ನು ಗುರು ಶಿಷ್ಯನಿಗೆ ಹೇಳುತ್ತಾನೆ. "ನಾವು ಮಾಡುವಂಥ ಉತ್ತಮ ಕಾರ್ಯಗಳು ನಿನ್ನಿಂದ ಆಚರಿಸಲ್ಪಡಲಿ. ಬೇರೆ ಯಾವುದೂ ಇಲ್ಲ" ಎಂದು ಮಂತ್ರದ ಅರ್ಥವನ್ನು ವಿವರಿಸಿರುವ ಲೇಖಕ ಶರ್ಮಾ ಅವರು, 'ಗುರುವನ್ನು ಶಿಷ್ಯನು ಅನುಸರಿಸಬೇಕು ನಿಜ. ಆದರೆ ಯಾವುದನ್ನು? ಉತ್ತಮ ಕಾರ್ಯಗಳನ್ನು ಮಾತ್ರ" ಎಂದು ವಿವರಿಸುತ್ತಾರೆ.
ಸ ಮು ತೇ ಮಹತೀರಪಃ
ಸಂ ಕ್ಷೋಣೀ ಸಮ ಸೂರ್ಯಮ್ ।
ಸಂ ವಜ್ರಂ ಪರ್ವಶೋ ದಧುಃ ||
ರಾಷ್ಟ್ರದಲ್ಲಿ ಕಾಲಕಾಲಕ್ಕೆ ಮಳೆಯಾಗಬೇಕು. ಕೆರೆ-ಕೊಳಗಳು ಮುಂತಾದವುಗಳು ಸದಾ ತುಂಬಿರಬೇಕು. ನೀರನ್ನು ಶುದ್ಧವಾಗಿಡಲು ಸೂರ್ಯನು ಚೆನ್ನಾಗಿ ಪ್ರಕಾಶಿಸುತ್ತಿರಬೇಕು. ಅಂಥ ಸ್ಥಿತಿಯಲ್ಲಿ ಆ ರಾಷ್ಟ್ರದ ಪ್ರಜೆಗಳೆಲ್ಲರೂ ಆರೋಗ್ಯವಂತರೂ, ಬಲಾಡ್ಯರೂ, ಸುಖಿಗಳೂ ಆಗಿರುತ್ತಾರೆ. ಹೀಗೆ ವೇದ, ಉಪನಿಷತ್ತುಗಳಿಂದ ಆಯ್ದ ಅಮೃತ ನುಡಿಗಳನ್ನು ಸರಳವಾಗಿ, ಸುಂದರವಾಗಿ ಮೂಲಮಂತ್ರ ದೊಂದಿಗೆ ಸೂಕ್ತ ವಿವರಣೆಯೊಂದಿಗೆ ಈ ಕೃತಿಯಲ್ಲಿ ನೀಡಿದ್ದಾರೆ. 'ಶಾಶ್ವತ ಮೌಲ್ಯಗಳು' ಕೃತಿಯಲ್ಲಿ ಈಗಾಗಲೇ ತಿಳಿಸಿದಷ್ಟು ಸಂಖ್ಯೆಯ ಅರ್ಥಸಹಿತ ಮಂತ್ರಗಳಿವೆ.
ಕೆಲವು ಸಲ ಮಂತ್ರಗಳಿಗೆ ಅರ್ಥ ಹೇಳುತ್ತಾ, ತಮ್ಮದೇ ಕೆಲವು ವಿಚಾರಗಳನ್ನು ಮಂಡಿಸಿದ್ದಾರೆ. ರವೀಂದ್ರ ಶರ್ಮಾ, ಕೋಣನಕಟ್ಟೆ ಅವರು ವಿದ್ವತ್ ಪೂರ್ಣ ಮುನ್ನುಡಿ ಬರೆದಿದ್ದಾರೆ. ಶ್ರೀಮತಿ ರೋಹಿಣಿ ಶರ್ಮಾ ಅವರು ಬೆನ್ನುಡಿ ಬರೆದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಕೃತಿ ಬರಲು ಕಾರಣರಾದ ಶರ್ಮಾರ ಅಜ್ಜಂಪುರದ ಜಾಣ ಶಿಷ್ಠೆಯರ ಉಲ್ಲೇಖವು ಇದೆ. ಎಪ್ಪತ್ತು ಪುಟಗಳ ಪುಟ್ಟ ಪುಸ್ತಕ ಜ್ಞಾನದ ತೂಕದಲ್ಲಿಅಂದ ಹಾಗೆ ಪುಸ್ತಕಕ್ಕೆ ಶಾಶ್ವತ ಮೌಲ್ಯಗಳು ಎಂಬ ಶೀರ್ಷಿಕೆಯನ್ನು ಅವರು ತಮ್ಮ ವಿದ್ಯಾರ್ಥಿಗಳಿಂದ ಪಡೆದುಕೊಂಡದ್ದು. ವೇದ ಬಹಳ ಆಗಾಧವಾದುದು. ಆ ಜ್ಞಾನರಾಶಿಯಿಂದ ಎಲ್ಲಾ ರೀತಿಯಲ್ಲೂ ಉಪಯುಕ್ತವಾಗುವಂತಹ ಮಂತ್ರಗಳನ್ನು ಆಯ್ಕೆ ಮಾಡಿರುವುದು ಪುಸ್ತಕದ ವಿಶೇಷ. ವೇದಗಳ ಬಗೆಗಿನ ಜ್ಞಾನ ಸಿಗಲು, ಧರ್ಮದ ಕುರಿತಾದ ಗೌರವ ಹೆಚ್ಚಾಗಲು, ಉತ್ತಮ ಜೀವನದ ಹಾದಿ ತೋರಲು ಈ ಪುಸ್ತಕ ನಿಜವಾಗಿಯೂ ಮಾರ್ಗದರ್ಶಕವಾಗಬಲ್ಲದು.
ಪರೋಪಕಾರ, ದಾನದ ಮಹತ್ವ, ಶ್ರದ್ಧೆಯ ಉಪಯುಕ್ತತೆ, ದೈವೀ ಶಕ್ತಿ. ಪರಿಸರ ಎಲ್ಲವನ್ನೂ ಒಳಗೊಂಡಿರುವ ಈ ಮಂತ್ರಗಳು ಓದುಗರಿಗೆ ಮಾಹಿತಿಯ ಜೊತೆಗೆ ಸತ್ವಪೂರ್ಣ ಬದುಕಿಗೆ ಅನುವು ಮಾಡಿಕೊಡಬಲ್ಲವು.
ಕೃತಿ: ಶಾಶ್ವತ ಮೌಲ್ಯಗಳು ಲೇಖಕರು: ಜಿ.ಟಿ. ಶ್ರೀಧರ ಶರ್ಮಾ | ಪ್ರಕಾಶನ: ಭೂಮಿ ಪುಸ್ತಕ | ಪುಟಗಳು: 70 | ಬೆಲೆ: 70 ರೂ | ಸಂಪರ್ಕ: 7019637741
- ಅಪೂರ್ವ ಅಜ್ಜಂಪುರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ