ಆಷಾಢ ಅಮಾವಾಸ್ಯೆಯಂದು ಅಗ್ನಿಗೆ ಕೃತಜ್ಞತೆಯನ್ನು ಸಲ್ಲಿಸಲು ದೀಪ ಪೂಜೆಯನ್ನು ಮಾಡಬೇಕು.
1. ದೀಪ ಪೂಜೆಯನ್ನು ಮಾಡುವ ಶಾಸ್ತ್ರ:
ದೀಪದ ಜ್ಯೋತಿಯು ಅಗ್ನಿತತ್ವದ ಪ್ರತೀಕವಾಗಿದೆ. ಅಗ್ನಿಗೆ ಕೃತಜ್ಞತೆಯನ್ನು ಸಲ್ಲಿಸಲು ದೀಪ ಪೂಜೆಯನ್ನು ಮಾಡುತ್ತೇವೆ.
2. ಪಂಚತತ್ತ್ವಗಳಲ್ಲಿ ಒಂದಾದ ಅಗ್ನಿತತ್ತ್ವದ ಅಸಾಮಾನ್ಯ ಮಹತ್ವ:
ಈ ಸಮಸ್ತ ಸೃಷ್ಟಿಯು ಪಂಚತತ್ತ್ವಗಳಿಂದ ಅಂದರೆ ಪೃಥ್ವಿ, ನೀರು (ಆಪ), ಅಗ್ನಿ (ತೇಜ), ವಾಯು ಮತ್ತು ಆಕಾಶ ಈ ತತ್ತ್ವಗಳಿಂದ ನಿರ್ಮಾಣವಾಗಿದೆ. ಈ ಪಂಚತತ್ತ್ವಗಳಲ್ಲಿ ಅಗ್ನಿ ತತ್ತ್ವದ ಮಹತ್ತ್ವವು ಅಸಾಮಾನ್ಯವಾಗಿದೆ. ನೇತ್ರಗಳು (ಕಣ್ಣುಗಳು) ಇವು ಅಗ್ನಿತತ್ತ್ವಕ್ಕೆ ಸಂಬಂಧಪಡುವ ಜ್ಞಾನೇಂದ್ರಿಯಗಳು, ಅಗ್ನಿ ತತ್ತ್ವದ ಕಾರಣ ನಮಗೆ ನಮ್ಮ ಮುಂದಿರುವ ವಸ್ತುವು ಕಾಣಿಸುತ್ತದೆ.
ಅಗ್ನಿಯು ತನ್ನ ಪ್ರಕಾಶದಿಂದ ಅಂಧಕಾರವನ್ನು ದೂರಗೊಳಿಸಿ ಸತ್ಯದ ಜ್ಞಾನವನ್ನು ಪ್ರದಾನಿಸುತ್ತದೆ. ಸಮಸ್ತ ಪ್ರಾಣಿಗಳ ಹೊಟ್ಟೆಯಲ್ಲಿರುವ ‘ವೈಶ್ವಾನರ’ ಕೂಡ ಇದೇ ಅಗ್ನಿಯ ರೂಪ. ಈ ಅಗ್ನಿಯಿಂದ ನಾವು ಸೇವಿಸುವ ಅನ್ನವು ಜೀರ್ಣವಾಗುತ್ತದೆ. ಗ್ರಹಗಳ ಅಧಿಪತಿ ಸೂರ್ಯನೂ ಅಗ್ನಿಯ ರೂಪವೇ. ಈ ಸೂರ್ಯನು ಸೃಷ್ಟಿಯನ್ನೇ ಸಂಭಾಳಿಸುತ್ತಾನೆ.
ವೈದಿಕ ಸಮಯದಲ್ಲಿ ಅಗ್ನಿದೇವತೆಗೆ ಸರ್ವೋಚ್ಚ ಸ್ಥಾನವನ್ನು ನೀಡಲಾಗಿತ್ತು. ಋಗ್ವೇದದಲ್ಲಿ ಅಗ್ನಿಯನ್ನು ಸಂಬೊಧಿಸುವಾಗ ‘ಹೋತಾ’ ಎಂಬ ವಿಶೇಷಣವನ್ನು ಉಪಯೋಗಿಸಲಾಗಿದೆ. ‘ಹೋತಾ’ ಅಂದರೆ ದೇವತೆಗಳನ್ನು ಅಥವಾ ಶಕ್ತಿಯನ್ನು ಆಹ್ವಾನಿಸುವ ಮಾಧ್ಯಮ. ಯಜ್ಞದ ಪ್ರಧಾನ ದೇವತೆಯನ್ನು ಆಹ್ವಾನಿಸಿದ ಮೇಲೆ ಯಜ್ಞದ ಅಗ್ನಿಯು ಆ ದೇವತೆಗೆ ಹವಿಸ್ಸನ್ನು ತಲುಪಿಸುತ್ತದೆ. ಆದುದರಿಂದ ಅಗ್ನಿಯನ್ನು ಮನುಷ್ಯರನ್ನು ಮತ್ತು ದೇವತೆಗಳನ್ನು ಜೋಡಿಸುವ ಕೊಂಡಿ ಎಂದು ಪರಿಗಣಿಸಲಾಗಿದೆ.
3. ದೀಪಾನ್ವಿತ್ ಅಮಾವಾಸ್ಯೆ:
ಆಷಾಢ ಅಮಾವಾಸ್ಯೆಯನ್ನು ದೀಪಾನ್ವಿತ್ ಅಮಾವಾಸ್ಯೆ ಎಂದು ಕೂಡ ಕರೆಯುತ್ತಾರೆ. ಈ ದಿನದಂದು ದೀಪಗಳ ಪೂಜೆಯನ್ನು ಮಾಡುತ್ತಾರೆ. ಸುಮಂಗಲೆಯರು ಮನೆಯಲ್ಲಿರುವ ದೀಪಗಳ ಸ್ವಚ್ಛತೆ ಮಾಡಿ, ಅವುಗಳನ್ನು ಒಂದೆಡೆ ಸೇರಿಸಿ, ದೀಪಗಳನ್ನು ಅಲಂಕರಿಸಿ, ಅವುಗಳ ಸುತ್ತ ರಂಗೋಲಿಯನ್ನು ಬಿಡಿಸುತ್ತಾರೆ. ಈ ದೀಪಗಳನ್ನು ಉರಿಸಿ, ಅವುಗಳ ಪೂಜೆಯನ್ನು ಮಾಡುತ್ತಾರೆ. ನೈವೇದ್ಯವನ್ನು ಇಟ್ಟು, ಮುಂದೆ ನೀಡಿರುವ ಮಂತ್ರಗಳನ್ನು ಹೇಳಿ ದೀಪಗಳಿಗೆ ಪ್ರಾರ್ಥನೆಯನ್ನು ಮಾಡುತ್ತಾರೆ.
ದೀಪ ಸೂರ್ಯಾಗ್ನಿರೂಪಾಸ್ತ್ವಮ್ ತೇಜ ಉತ್ತಮಮ್ |
ಗೃಹಾಣ ಮತ್ಕೃತಾಂ ಪೂಜಾಮ್ ಸರ್ವಕಾಮಪ್ರದೋ ಭಾವ ||
ಅರ್ಥ: ಹೇ ಸೂರ್ಯ ರೂಪ ಮತ್ತು ಅಗ್ನಿ ರೂಪ ದೀಪವೇ, ತೇಜಗಳಲ್ಲಿ ನಿನ್ನ ತೇಜ ಅತ್ಯುತ್ತಮವಾಗಿದೆ. ನಾನು ಮಾಡಿರುವ ಪೂಜೆಯನ್ನು ಸ್ವೀಕರಿಸಿ, ನನ್ನೆಲ್ಲ ಇಚ್ಛೆಗಳನ್ನು ಪೂರ್ಣಗೊಳಿಸು.
ಇದಾದ ನಂತರ ದೀಪದ ಕಥೆಯನ್ನು ಕೇಳುತ್ತಾರೆ. ಈ ರೀತಿ ದೀಪ ಪೂಜೆಯನ್ನು ಮಾಡುವುದರಿಂದ ಆಯುರಾರೋಗ್ಯ ಮತ್ತು ಧನಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
-ವಿನೋದ್ ಕಾಮತ್
ವಕ್ತಾರರು, ಸನಾತನ ಸಂಸ್ಥೆ
ಸಂಪರ್ಕ : 9342599299
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ