ಬದಿಯಡ್ಕ: ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ 75 ನೇ ವರ್ಷದ ಹಲಸಿನ ಹಣ್ಣಿನ ಅಪ್ಪ ಸೇವೆ ಭಾನುವಾರ (ಜೂ.29) ಊರ ಪರವೂರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು.
ಬೆಳಿಗ್ಗೆ 6ಕ್ಕೆ ಭಕ್ತಾದಿಗಳು ಅರ್ಪಿಸಿದ ಹಲಸಿನ ಹಣ್ಣನ್ನು ಸಂಸ್ಕರಣೆ ಕಾರ್ಯ ಆರಂಭಿಸಲಾಯಿತು. ಹಲಸಿನ ಹಣ್ಣಿನ ತೊಳೆ, ಬೆಲ್ಲ, ತೆಂಗಿನಕಾಯಿ ತುರಿ, ಏಲಕ್ಕಿಯ ಪಾಕವನ್ನು ಸಾಂಪ್ರದಾಯಿಕ ಕಟ್ಟಿಗೆ ಒಲೆಯಲ್ಲಿ ಅಪ್ಪದ ಉರುಳಿಯಲ್ಲಿ ನಿರಂತರ ಮಧ್ಯಾಹ್ನ ತನಕ ಬೇಯಿಸಲಾಯಿತು. ಬಳಿಕ ದೇವರಿಗೆ ಸಮರ್ಪಣೆ ಮಾಡಲಾಯಿತು. ಶ್ರೀದೇವರ ಪೂಜೆಯ ಬಳಿಕ ಸುಮಾರು 2500 ಅಪ್ಪವನ್ನು ಭಕ್ತರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಹಾ ಪೂಜೆ ಸಂದರ್ಭದಲ್ಲಿ ಭಕ್ತರನ್ನುದ್ದೇಶಿಸಿ ಆಡಳಿತ ಮೊಕ್ತೇಸರ ಚಂದ್ರಶೇಖರ ಏತಡ್ಕ ಮಾತನಾಡಿ, ನಿರಂತರ ಸಾಗಿ ಬಂದ ಹಲಸಿನ ಹಣ್ಣಿನ ಅಪ್ಪ ಸೇವೆಗೀಗ 75ನೇ ವರ್ಷ. ಹಿಂದೆ ಆಹಾರದ ಅಭಾವದಿನದ ಮೂರೂ ಹೊತ್ತು ಹಸಿವು ನೀಗಿಸಿ ಆಹಾರ ಸುರಕ್ಷತೆ, ಭದ್ರತೆ ನೀಡಿದ ಹಲಸನ್ನು ಈ ದೇವಸ್ಥಾನದ ಭಕ್ತರು ಮರೆಯಲಿಲ್ಲ. ಶ್ರೀ ಸದಾಶಿವ ದೇವರಿಗೆ ಹಣ್ಣಿನ ಅಪ್ಪವನ್ನು ಅರ್ಪಿಸುವ ಪದ್ಧತಿ ಬೆಳೆದು ಬಂದಿದೆ. ಅಂದು ಆಹಾರ ಭದ್ರತೆ ಒದಗಿಸಿದ ಹಲಸು ಆರೋಗ್ಯದಾಯಕ ವಿಷಮುಕ್ತ, ಪರಿಶುದ್ಧ, ದೇವರು ಅನುಗ್ರಹಿಸಿದ ಹಣ್ಣಾಗಿ ಭಕ್ತರಿಗೆ ಗೋಚರಿಸುತ್ತಿದೆ. ಹಲಸು ಹಲವು ಸಂದೇಶಗಳನ್ನು ಈ ಸೇವೆಯ ಮೂಲಕ ನೀಡುತ್ತಿದೆ ಎಂದು ನುಡಿದರು.
ಮಂಗಳೂರು, ಕಾಂಞಂಗಾಡು, ಉದುಮ, ಪುತ್ತೂರು, ಪಾಣಾಜೆ ಊರುಗಳಿಂದಲೂ ಭಕ್ತರು, ಆಸಕ್ತರು ವಿಶೇಷ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ಸಾಮೂಹಿಕ ಸಂಕಲ್ಪ ಮಹಾಪೂಜೆ ಬಳಿಕ ಬಲಿವಾಡು ಕೂಟ ಅನ್ನಸಂತರ್ಪಣೆ ನಡೆಯಿತು. ಸಾಮಾಜಿಕ ಕಾರ್ಯಕರ್ತ, ನೀರ್ಚಾಲಿನ ಎಂ.ಎಚ್ ಜನಾರ್ದನ ಒದಗಿಸಿದ ರುದ್ರಾಕ್ಷಿ ಹಲಸಿನ ಅಲಂಕಾರ ಭಕ್ತರ ಗಮನ ಸೆಳೆಯಿತು. ಅನ್ನ ಸಂತರ್ಪಣೆಯಲ್ಲಿ ಹಲಸಿನ ಹಣ್ಣಿನ ಪಾಯಸ ವಿಶೇಷವಾಗಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ