ರಾಜ್ಯ ರಾಷ್ಟ್ರ ವ್ಯಾಪಿಯಾಗಿ ಭಾಷಾ ನೀತಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ಬೂಕರ್ ಪ್ರಶಸ್ತಿ ಪುರಸ್ಕೃತ ಹಾಗೂ ಮುಂದಿನ 88 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಆಯ್ಕೆಯಾಗಿರುವ ಬಾನು ಮುಷ್ತಾಕ್ ರವರು ತಮ್ಮ ಪತ್ರಿಕಾ ಸಂದರ್ಶನದಲ್ಲಿ "ರಾಜ್ಯಕ್ಕೆ ದ್ವಿ ಭಾಷಾ ನೀತಿ ಸಾಕು" ಅನ್ನುವ ಅಭಿಪ್ರಾಯ ಮುಂದಿಟ್ಟಿದ್ದಾರೆ. ಇದು ಅವರ ಮನದಾಳದ ಮಾತೋ? ಅಥವಾ ಕನ್ನಡಿಗರನ್ನು ಮತ್ತು ಸರ್ಕಾರವನ್ನು ತೃಪ್ತಿಪಡಿಸುವ ಮಾತೋ ಗೊತ್ತಿಲ್ಲ.
ಕನ್ನಡ ನಾಡಿನಲ್ಲಿರುವ ಪ್ರತಿಯೊಬ್ಬರು ಕನ್ನಡಿಗರಿಗೆ ಓದು ಬರಹ ಲೆಕ್ಕ ಕನ್ನಡದ ಮಾತೃ ಭಾಷೆಯಲ್ಲಿ ತಿಳಿಯಬೇಕಾದದ್ದು ಅಗತ್ಯವೂ ಹೌದು. ಆದರೆ ಕೇವಲ ಇಂಗ್ಲಿಷ್ ಮತ್ತು ಕನ್ನಡಕ್ಕೆ ಮಾತ್ರ ನಮ್ಮ ಭಾಷಾ ನೀತಿಯನ್ನು ಮಿತಿಗೊಳಿಸುವುದು ಕನ್ನಡಿಗರ ಸಮಗ್ರ ಬದುಕು ಉದ್ಯೋಗ ಸಾಂಸ್ಕೃತಿಕ ಬೆಳವಣಿಗೆಯ ದೃಷ್ಟಿಯಿಂದ ಒಪ್ಪಿಕೊಳ್ಳುವ ನೀತಿಯಂತೂ ಖಂಡಿತವಾಗಿಯೂ ಆಗಲಾರದು ಅನ್ನುವುದು ನನ್ನ ಖಚಿತವಾದ ಅಭಿಪ್ರಾಯ.
ಇಲ್ಲಿ ನಮ್ಮನ್ನು ಮೊದಲಾಗಿ ಕಾಡುವ ಮೊದಲ ಮೂಲಭೂತ ಪ್ರಶ್ನೆ ಅಂದರೆ ಇಂಗ್ಲಿಷ್ ಭಾಷೆಯ ಅನಿವಾರ್ಯತೆಯನ್ನು ಗುರುತಿಸುವ ನಾವು ನಮ್ಮ ದೇಶದಲ್ಲಿ ಬಹು ಮುಖ್ಯವಾಗಿ ಮಾತನಾಡುವ ಹಿಂದಿಯನ್ನು ಯಾಕೆ ವಿರೇೂಧಿಸಬೇಕು. ದೇಶದ ಉತ್ತರದ ಯಾವ ಭಾಗಕ್ಕೆ ಹೇೂಗಿ ಬರ ಬೇಕಾದರೂ ಹಿಂದಿ ಭಾಷಾ ಅನಿವಾರ್ಯತೆ ಎಷ್ಟಿದೆ ಅನ್ನುವುದು ನಮ್ಮೆಲ್ಲರ ಅನುಭವಕ್ಕೆ ಬಂದಿದೆ. ಮಾತ್ರವಲ್ಲ ಕೊನೆಯ ಪಕ್ಷ ಕನಾ೯ಟಕ ರಾಜ್ಯ ಬಿಟ್ಟು ಬೇರೆ ಯಾವುದೆ ರಾಜ್ಯಗಳಲ್ಲಿ ಹೇೂಗಿ ನೆಲಸಿ ಬದುಕನ್ನು ಕಟ್ಟಿಕೊಳ್ಳಬೇಕಾದರೂ ಹಿಂದಿ ಭಾಷೆಯ ಅಗತ್ಯವಿದೆ. ಅಲ್ಲಿ ನಮ್ಮ ಇಂಗ್ಲಿಷ್ ಭಾಷೆ ನಡೆಯುವುದಿಲ್ಲ ಅನ್ನುವ ವಾಸ್ತವಿಕ ಅರಿವು ಬೇಕು.
ಹಾಗಾದರೆ ಕನ್ನಡ ಇಂಗ್ಲಿಷ್ ಎರಡೇ ಭಾಷಾ ನೀತಿ ಸಾಕು ಅನ್ನುವುದರ ಅರ್ಥ ನಮ್ಮ ಮಕ್ಕಳು ಈ ದೇಶವನ್ನು ಬಿಟ್ಟು ವಿದೇಶಕ್ಕೆ ಹೇೂಗಿ ನೆಲಸಲ್ಲಿ ಅನ್ನುವ ಅಭಿಪ್ರಾಯದ ಸಂಕೇತವೇ ಹೇಗೆ?
ನಮ್ಮ ಮಕ್ಕಳು ಹಿಂದಿ ಕಲಿಯಲೇಬೇಕು ಅನ್ನುವುದು ನನ್ನ ವಾದವಲ್ಲ. ಅವರ ಕಲಿಕೆಗೆ ಅಡ್ಡ ಬರುವ ಭಾಷಾ ನೀತಿ ರೂಪಿಸುವ ನಿರ್ಧಾರ ಬೇಡ ಅಷ್ಟೇ. ತಾವು ಯಾವ ಭಾಷೆಯಲ್ಲಿ ಕಲಿಬೇಕು ಮಾತಾಡಬೇಕು ಅಂದು ನಿರ್ಧರಿಸುವುದು ಪ್ರತಿಯೊಂದು ಮಗುವಿನ ಭಾಷಾ ಹಕ್ಕೂ ಹೌದು. ಅದನ್ನು ನಿರ್ಬಂಧಿಸುವ ಹಕ್ಕು ನಮಗಿಲ್ಲ.
ಹಿಂದಿಯನ್ನು ಭಾಷಾ ನೀತಿಯ ಹೆಸರಿನಲ್ಲಿ ಹಿಂದೆ ಸರಿಸುವ ಮೊದಲು ನಾವು ಶೈಕ್ಷಣಿಕ ವಲಯದಲ್ಲಿನ ವಾಸ್ತವಿಕ ಸ್ಥಿತಿ ಗತಿಯ ಕಡೆಗೆ ನೇೂಡಲೇ ಬೇಕು.ಇಂದು ಕನ್ನಡವನ್ನು ಬದಿಗೆ ಸರಿಸಿ ಹಿಂದಿಯನ್ನು ಭಾಷಾ ವಿಷಯದ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಸಮೂಹದಾಯವರು ಇದಕ್ಕೆ ಮುಖ್ಯ ಕಾರಣ ಅವರ ಮಾತೃ ಭಾಷೆ ಹಿಂದಿಯನ್ನು ಹೆಚ್ಚು ಸೆಳೆಯುತ್ತಿದೆ. ಮಾತ್ರವಲ್ಲ ಕನ್ನಡ ಭಾಷೆ ಅಕ್ಷರ ಕಲಿಕೆ ಅವರ ಪಾಲಿಗೆ ಹೆಚ್ಚು ತ್ರಾಸವಾಗುತ್ತಿದೆ ಅನ್ನುವುದು ನನ್ನ 35 ವರುಷಗಳ ಶಿಕ್ಷಣ ಕ್ಷೇತ್ರದಲ್ಲಿನ ಅನುಭವದಿಂದ ನಾನು ಕಲಿತುಕೊಂಡ ಮಾಹಿತಿ. ಮಾತ್ರವಲ್ಲ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ಬಂದ ವಿದ್ಯಾರ್ಥಿಗಳು ಭಾಷಾ ಅಧ್ಯಯನಕ್ಕೆ ಸಂಬಂಧಿಸಿ ಆಯ್ಕೆ ಮಾಡಿಕೊಳ್ಳುವುದು ಹಿಂದಿ ಬಿಟ್ಟರೆ ಕನ್ನಡವಲ್ಲ. ಕನ್ನಡ ಭಾಷೆಯನ್ನು ಮೆಚ್ಚಿ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳುವುದರಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅನ್ನುವುದು ಕೂಡಾ ಅಷ್ಟೇ ಸತ್ಯ.
ಹಾಗಾಗಿ ಈ ವಾಸ್ತವಿಕ ಅಂಶವನ್ನು ತಿಳಿಯಬೇಕಾದರೆ ಶಾಲಾ ಕಾಲೇಜಿನಲ್ಲಿ ಭಾಷಾ ಅಧ್ಯಯನಕ್ಕೆ ವಿದ್ಯಾರ್ಥಿಗಳ ಬೇಡಿಕೆ ಒಲವು ಯಾವ ಕಡೆ ಹೆಚ್ಚು ಇದೆ ಅನ್ನುವುದನ್ನು ಸರ್ಕಾರ ಅಧ್ಯಯನ ನಡೆಸ ಬೇಕಾಗಿದೆ.
ಕನ್ನಡಿಗರ ಬದುಕಿನ ಸಮಗ್ರ ಬೆಳವಣಿಗೆಯ ದೃಷ್ಟಿ ಕೇೂನದಿಂದ ಕರ್ನಾಟಕದಲ್ಲಿ ತ್ರಿಭಾಷಾ ನೀತಿಯನ್ನು ಉಳಿಸಿಕೊಂಡು ಕನ್ನಡವನ್ನು ಅನ್ನದ ಹೃದಯದ ಭಾಷೆಯಾಗಿ ಉಳಿಸಿ ಬೆಳೆಸಬೇಕಾಗಿದೆ ಅನ್ನುವುದು ನಮ್ಮೆಲ್ಲರ ನಿಖರವಾದ ಅನಿಸಿಕೆಯೂ ಹೌದು.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ