- ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ಆಯೋಜನೆ
- ಅನುಭವದ ಪಕ್ವತೆಯ ತೀವ್ರತೆಯೇ ಕವನದ ಹುಟ್ಟಿಗೆ ಕಾರಣ
ತೀರ್ಥಹಳ್ಳಿ / ಕುಪ್ಪಳ್ಳಿ: ಅನುಭವವು ತೀವ್ರವಾಗಿ ಬಾಧಿಸಬೇಕು; ಕಾಡಬೇಕು. ಅನುಭವದ ಪಕ್ವತೆಯ ತೀವ್ರತೆಯೇ ಭಾಷಿಕವಾಗಿ ಅರಳಿ ಕವನವನ್ನು ಹುಟ್ಟಿಸುತ್ತದೆ ಎಂದು ಕುಪ್ಪಳಿಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ.ಎಂ. ಪುಟ್ಟಯ್ಯ ಅಭಿಪ್ರಾಯಪಟ್ಟರು.
ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಜಿಲ್ಲಾ ಘಟಕ ಶಿವಮೊಗ್ಗ, ತಾಲ್ಲೂಕು ಘಟಕ ತೀರ್ಥಹಳ್ಳಿ ವತಿಯಿಂದ ಕುವೆಂಪು ನೆಲೆವೀಡು ಕುಪ್ಪಳ್ಳಿಯ ಹೇಮಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕವನ ಎಂದುಕೊಂಡು ಬರೆದವರೆಲ್ಲ ಕವಿಗಳಾಗುವುದಿಲ್ಲ; ಕವಿ ಎಂದುಕೊಂಡು ಬರೆದುದೆಲ್ಲ ಕವನ ಆಗುವುದಿಲ್ಲ. ಲೋಕವನ್ನು ಹೀಗೇ ನೋಡಿ ಎಂದು ಸಮಾಜ ಒಪ್ಪಿಸಿರುವ ದೃಷ್ಟಿಕೋನವನ್ನು ಬದಲಾಯಿಸಿಕೊಂಡು ಲೋಕವನ್ನು ಭಿನ್ನವಾಗಿ, ಸೂಕ್ಷ್ಮವಾಗಿ ಗ್ರಹಿಸಬೇಕು. ಅನುಭವವು ತೀವ್ರವಾಗಿ ಬಾಧಿಸಬೇಕು; ಕಾಡಬೇಕು. ಅನುಭವದ ಪಕ್ವತೆಯ ತೀವ್ರತೆಯೇ ಭಾಷಿಕವಾಗಿ ಅರಳಿ ಕವನವನ್ನು ಹುಟ್ಟಿಸುತ್ತದೆ. ಕವಿತೆ ಸಾಮಾಜಿಕ ಒತ್ತಡದಿಂದ ಹುಟ್ಟುತ್ತದೆ. ಹಾಗಾಗಿ ಕವನ ಬರೆಯುವವರು ಸಮಾಜದ ಪಲ್ಲಟಗಳನ್ನು ಗಂಭೀರವಾಗಿ ಗ್ರಹಿಸಬೇಕು. ಎಲ್ಲರೂ ಬರೆದುದನ್ನೇ ಬರೆಯುವುದು ಕವಿತೆ ಅಲ್ಲ. ಇರುವುದನ್ನು ಇದ್ದಂತೆಯೇ ಬರೆಯಲು ಆಗುವುದಿಲ್ಲ. ಬದುಕಿನಲ್ಲಿ ಬದಲಾವಣೆ ನಡೆಯುತ್ತಿರುತ್ತದೆ. ಈ ಬದಲಾವಣೆಯನ್ನು ಆಳವಾಗಿ ಗ್ರಹಿಸಿ ಬರೆಯಬೇಕು. ಕವಿತೆಗೆ ವಸ್ತು ಮತ್ತು ಆಶಯ ಮಾತ್ರ ಮುಖ್ಯವಲ್ಲ. ಕವಿತೆಯ ರಚನೆಯ ವಿನ್ಯಾಸ, ನಾದ, ಲಯ, ಪ್ರಾಸಗಳೂ ಮುಖ್ಯ. ಕವಿತೆಯ ನಾದವು ಕವಿತೆಗೆ ವಿಶಿಷ್ಟವಾದ ಭಾವವನ್ನು, ಭಾವತೀವ್ರತೆಯನ್ನು ತರುತ್ತದೆ. ಈಗಿನ ಲೋಕದ ಸನ್ನಿವೇಶವು ವಿಷಾದದಿಂದ ಕೂಡಿದೆ. ಹಾಗಾಗಿ ಲೋಕವನ್ನು ವಿಷಾದಿಂದ ಗ್ರಹಿಸಿ, ಕವಿತೆಯಲ್ಲಿ ವಿಷಾದದ ಭಾವವನ್ನು ಮೂಡಿಸಿ, ಆಶಾದಾಯಕ ಭಾವವನ್ನು ಸೃಷ್ಟಿಸಿ, ಪರಿಣಾಮಕಾರಿಯಾದ ಕವನಗಳನ್ನು ಕಟ್ಟಬೇಕಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಡಿ.ಎಸ್. ವಿಶ್ವನಾಥಶೆಟ್ಟಿ ಮಾತನಾಡಿ ಹಸೀನಾರವರು ಬಡಕುಟುಂಬದ ಹಿನ್ನೆಲೆಯಿಂದ ಬೆಳೆದುಬಂದು ಇಂದು ಉಪನ್ಯಾಸಕಿಯಾಗಿ ವೃತ್ತಿ ಮಾಡುತ್ತಾ ಪ್ರವೃತ್ತಿಯಲ್ಲಿ ಹಲವಾರು ಯುವ ಬರಹಗಾರರಿಗೆ ವೇದಿಕೆಯನ್ನು ಒದಗಿಸುತ್ತಾ ಇನ್ನೋರ್ವರ ಏಳ್ಗೆಗಾಗಿ ಶ್ರಮಿಸುತ್ತಿರುವುದು ಅಭಿನಂದನೀಯ. ಅವರ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಿಗೆ ಸದಾ ನಮ್ಮ ಬೆಂಬಲವಿರುತ್ತದೆ. ಈ ಹಿಂದೆ ನಮ್ಮ ಪತ್ರಿಕೆಯಲ್ಲಿಯೇ ಕೆಲವು ವರ್ಷಗಳ ಕಾಲ ಕೆಲಸ ನಿರ್ವಹಿಸಿ, ಸದ್ಯ ಬೋಧಕಿಯಾಗಿ, ಬರಹಗಾರ್ತಿಯಾಗಿ, ಸಂಘಟಕಿಯಾಗಿ, ಹಾಡುಗಾರ್ತಿಯಾಗಿ, ಉತ್ತಮ ವಾಗ್ಮಿಯಾಗಿ ಗುರುತಿಸಿಕೊಂಡಿರುವ ನಮ್ಮ ತೀರ್ಥಹಳ್ಳಿಯ ಹೆಣ್ಣುಮಗಳಿಂದು ಬಹುಮುಖ ಪ್ರತಿಭೆಯಾಗಿ ಅರಳುತ್ತಿರುವುದು ತುಂಬಾ ಸಂತಸದ ಸಂಗತಿಯಾಗಿದೆ ಎಂದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷೆ ಡಾ. ಎಚ್. ಹಸೀನಾ ಮಾತನಾಡಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಇದೊಂದು ಕೇವಲ ಸಂಘಟನೆಯಲ್ಲ, ನಾಡುನುಡಿ ಮನೋತುಡಿತವನ್ನು ಹೊಂದಿರುವ ಸಮಸಮಾಜದ ಕನಸ್ಹೊತ್ತ ಸಮಾನ ಮನಸ್ಕರ ಪ್ರೀತಿ ಬಂಧುರದ ಕುಟುಂಬವಾಗಿದೆ. ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್ ಹಾಗೂ ಟ್ರಸ್ಟಿಗಳ ಮಾರ್ಗದರ್ಶನದಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಎಲೆಮರೆಕಾಯಿಯಂತಹ ಸಾಧಕರನ್ನು ಗುರುತಿಸಿ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ನಾವೆಲ್ಲಾ ಕನ್ನಡದ ಕೈಂಕರ್ಯ ಮಾಡುತ್ತಿದ್ದೇವೆ ಎಂದರು.
ತೀರ್ಥಹಳ್ಳಿ ತಾಲ್ಲೂಕು ಘಟಕದ ನೂತನ ಅಧ್ಯಕ್ಷೆ ಸುಜಾತ ಎಸ್. ಹೇಮಂತ್ ಅಧಿಕಾರ ಸ್ವೀಕರಿಸಿ ಮಾತನಾಡಿ ಈ ಹಿಂದೆ ಹಾವೇರಿ ಜಿಲ್ಲೆಯ ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದೆ. ವೇದಿಕೆಯಿಂದ ನಾನು ತುಂಬಾ ಕಲಿತಿದ್ದೇನೆ. ಪ್ರಸ್ತುತ ತೀರ್ಥಹಳ್ಳಿ ತಾಲ್ಲೂಕು ಘಟಕದ ಜವಬ್ಧಾರಿ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸಮಿತಿ, ಜಿಲ್ಲಾ ಸಮಿತಿಯ ಮಾರ್ಗದರ್ಶನದಲ್ಲಿ ವೇದಿಕೆಯ ಬೈಲಾದಡಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡುತ್ತೇನೆ ಎಂದರು.
ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಶರೀಫ್ ಪರ್ಲಿಯಾ, ಬಂಟ್ವಾಳ; ಲತಾಮಣಿ ಎಂ.ಕೆ. ತುರುವೇಕೆರೆ; ಬಿ.ಎಂ. ಕಿನ್ಯಾ, ಉಳ್ಳಾಲ; ಪಾಥರಾಜು ಎಸ್. ಡಿ.; ಇಂದಿರಾ ಪ್ರಕಾಶ್, ಶಿವಮೊಗ್ಗ; ರೂಪೇಶ್ ಸಾಗರ; ಸುಹಾಸಿನಿ ಕುಕಡೊಳ್ಳಿ, ಧಾರವಾಡ; ಜಯಶಂಕರ್ ಬೆಳಗುಂಬ; ಗಿರಿಜಾ ನಿರ್ವಾಣಿ, ಹಾಸನ; ಸರಳ ಗಿರೀಶ್, ಕೊಪ್ಪ; ಲತಾ ಎ.ಆರ್. ಬಾಳೆಹೊನ್ನೂರು; ನೀಲಾವತಿ ಸಿ.ಎನ್. ಹಾಸನ; ಪಾರ್ವತಿ ಚಿನ್ನೇನಹಳ್ಳಿ; ನೇತ್ರಾ ವಿನಯ್, ಶೃಂಗೇರಿ; ಮಂಜುಳಾ ಮಹೇಶ್, ಬಾಗಲಗದ್ದೆ; ದೀಪಿಕಾ ನಂದನ್, ಚಕ್ಕೋಡಬೈಲು; ವೀಣಾ ಆರ್. ಕಾರಂತ್, ತೀರ್ಥಹಳ್ಳಿ; ಸೈಫುಲ್ಲಾ ಡಿ.ಎಂ. ಅರಸೀಕೆರೆ; ಮಲ್ಲೇಶ್ ಜಿ. ಹಾಸನ; ಕೆ. ಎನ್. ರಮೇಶ್, ಶಂಕರಘಟ್ಟ; ಆರ್.ಪಿ. ಚೇತನಾ, ಸಾಗರ; ಸುನೀತಾ ನೆಲೆಗದ್ದೆ, ತೀರ್ಥಹಳ್ಳಿ; ಪದ್ಮಾವತಿ ವೆಂಕಟೇಶ್, ಹಾಸನ; ಕೃಪಾ ಸಂತೋಷ್,ತೀರ್ಥಹಳ್ಳಿ; ರಂಜಿತಾ, ಸೊರಬ; ಅಣ್ಣಪ್ಪ ಅರಬಗಟ್ಟೆ ಸೇರಿದಂತೆ ಸುಮಾರು ೨೫ಕ್ಕೂ ಹೆಚ್ಚು ಜನ ಕವಿಗಳು ಕವನ ವಾಚನ ಮಾಡಿದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ. ಬಿ. ಗಣಪತಿ ಸಾಧಕರಿಗೆ “ಶರಣ ಸಂಕುಲ ರತ್ನ ರಾಜ್ಯ ಪ್ರಶಸ್ತಿ” ಪ್ರದಾನ ಮಾಡಿದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷೆ ಡಾ. ಹಸೀನಾ ಎಚ್. ಕೆ. ತೀರ್ಥಹಳ್ಳಿ ತಾಲ್ಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ನೂತನ ಅಧ್ಯಕ್ಷೆ ಸುಜಾತ ಎಸ್. ಹೇಮಂತ್ ಅವರಿಗೆ ಪದಗ್ರಹಣ ನೆರವೇರಿಸಿದರು. ವೇದಿಕೆಯಲ್ಲಿ ಕೇಂದ್ರ ಸಮಿತಿಯ ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಡಿ.ಎಸ್. ವಿಶ್ವನಾಥಶೆಟ್ಟಿ, ಶಿವಮೊಗ್ಗದ ಪಾರಂಪರಿಕ ವೈದ್ಯ ಸೈಯದ್ ಮುಹಿಬುಲ್ಲ ಖಾದ್ರಿ, ತೀರ್ಥಹಳ್ಳಿಯ ಸಿವಿಲ್ ಇಂಜೀನಿಯರ್ ಎಂ. ಬಿ. ಹೇಮಂತ್, ರಾಜ್ಯ ಕೋಶಾಧ್ಯಕ್ಷ ಎಚ್.ಎಸ್.ಬಸವರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು ಸಮುದ್ರವಳ್ಳಿ, ತಿಪಟೂರು ತಾಲ್ಲೂಕು ಸಹ ಕಾರ್ಯದರ್ಶಿ ಕುಸುಮ ಕೆ.ಜೆ. ತುರುವೇಕೆರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ