ಸಂಘಟನೆಗಳಿಗೆ ಪಾರದರ್ಶಕತೆ, ಪ್ರಾಮಾಣಿಕತೆ, ತತ್ತ್ವ ಸಿದ್ಧಾಂತ, ಬದ್ಧತೆ ಬಹಳ ಮುಖ್ಯ: ಕೊಟ್ರೇಶ್ ಎಸ್. ಉಪ್ಪಾರ್

Upayuktha
0


ತೀರ್ಥಹಳ್ಳಿ / ಕುಪ್ಪಳ್ಳಿ: ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಳಕಳಿ ಹೊಂದಿ ಕಾರ್ಯೋನ್ಮುಖವಾಗುವ ಕನ್ನಡಪರ ಸಂಘಟನೆಗಳಿಗೆ ಪಾರದರ್ಶಕತೆ, ಪ್ರಾಮಾಣಿಕತೆ, ತತ್ವ ಸಿದ್ಧಾಂತ ಹಾಗೂ ಬದ್ಧತೆ ಬಹಳ ಮುಖ್ಯ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.


ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಜಿಲ್ಲಾ ಘಟಕ ಶಿವಮೊಗ್ಗ, ತಾಲ್ಲೂಕು ಘಟಕ ತೀರ್ಥಹಳ್ಳಿ ವತಿಯಿಂದ ಕುವೆಂಪು ನೆಲೆವೀಡು ಕುಪ್ಪಳ್ಳಿಯ ಹೇಮಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಘಟಕ ಪದಗ್ರಹಣ ಹಾಗೂ ಶರಣ ಸಂಕುಲ ರತ್ನ ರಾಜ್ಯ ಪ್ರಶಸ್ತಿ ಸಮಾರಂಭವನ್ನು ದೀಪ ಬೆಳೆಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಸಾಹಿತ್ಯ ವೇದಿಕೆ ಹುಟ್ಟಿರುವುದೇ ಎಲೆಮರೆಕಾಯಿಯಂತಹ ಸಾಧಕರನ್ನು ಗುರುತಿಸಿ ಮುಖ್ಯ ವಾಹಿನಿಗೆ ತರುವುದಕ್ಕಾಗಿ. ಇತ್ತೀಚಿನ ದಿನಮಾನಗಳಲ್ಲಿ ಪ್ರಶಸ್ತಿಗಳೆಂದರೆ ಲಾಬಿಯಂತಾಗಿವೆ. ಜಾತಿ, ಧರ್ಮ, ರಾಜಕಾರಣ, ಹಣದ ಆಮಿಷಕ್ಕೆ ಪ್ರಶಸ್ತಿಗಳು ಬಿಕರಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಇಂತಹ ಕೆಟ್ಟ ಸಂಪ್ರದಾಯಗಳನ್ನು ಮೆಟ್ಟಿ ಪಾರದರ್ಶಕತೆಯಿಂದ ನಿಜವಾದ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ನಮ್ಮ ವೇದಿಕೆ ಕಳೆದ ಏಳೆಂಟು ವರ್ಷಗಳಿಂದ ಮಾಡುತ್ತಾ ಬಂದಿದೆ ಎಂದು ತಿಳಿಸಿದರು.


ರಾಜ್ಯದ ಅನೇಕ ಹಿರಿಯ ಸಾಹಿತಿಗಳು ನಮ್ಮ ವೇದಿಕೆಗೆ ಬೆಂಬಲವಾಗಿ ನಿಂತಿದ್ದಾರೆ. ಇಲ್ಲಿ ಯಾವುದೇ ಅನುದಾನವಿಲ್ಲ. ಆಸಕ್ತ ಮನಸ್ಸುಗಳ ಸಹಾಕಾರದಿಂದ ಹಾಗೂ ತಾಲ್ಲೂಕು ಅಧ್ಯಕ್ಷರು, ಜಿಲ್ಲಾಧ್ಯಕ್ಷರು ಮತ್ತು ನಮ್ಮ ಟ್ರಸ್ಟಿಗಳು ಸಮಾನವಾಗಿ ಭರಿಸುತ್ತಾ ನಾಡುನುಡಿಗೆ ಕೈಲಾದಷ್ಟು ಸೇವೆ ಸಲ್ಲಿಸುತ್ತಿದ್ದೇವೆ. ಸಾಹಿತ್ಯ ಸೇವೆ ಕೇವಲ ಪರಿಷತ್ತಿಗೆ ಮಾತ್ರ ಸೀಮಿತವಲ್ಲ. ಸುಮಾರು ಐದು ಸಾವಿರ ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿದ ಕನ್ನಡ ಸಾಹಿತ್ಯವನ್ನು ನಾಡಿಗರಿಗೆ ಪಸರಿಸಲು ಪರಿಷತ್ತಿನೊಂದರಿಂದಲೇ ಸಾಧ್ಯವಿಲ್ಲ. ಆದ್ದರಿಂದ ಇಂದು ನಮ್ಮ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಂತೆಯೇ ರಾಜ್ಯದಲ್ಲಿ ಶರಣ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತು, ಮಕ್ಕಳ ಸಾಹಿತ್ಯ ಪರಿಷತ್ತು ಸೇರಿದಂತೆ ನೂರಾರು ಸಂಘಟನೆಗಳು ಕಾರ್ಯೋನ್ಮುಖವಾಗಿವೆ. ಬರಹಗಾರರಿಂದ ಬರಹಗಾರರಿಗಾಗಿಯೇ ಹುಟ್ಟಿ ಅದೇ ಚೌಕಟ್ಟಿನಲ್ಲಿಯೇ ಕಾರ್ಯೋನ್ಮುಖವಾಗಿರುವ ನಮ್ಮ ವೇದಿಕೆ ಕೇವಲ ಸಾಹಿತಿಗಳಿಗಾಗಿಯೇ ಮೀಸಲಾಗಿದೆ. ನಮ್ಮಲ್ಲಿ ಪ್ರಶಸ್ತಿಗಳಿಗಾಗಿ ಯಾವುದೇ ಅರ್ಜಿ ಹಾಕುವ ಸಂಪ್ರದಾಯಗಳಿಲ್ಲ, ತಾಲ್ಲೂಕು ಅಧ್ಯಕ್ಷರು, ಜಿಲ್ಲಾಧ್ಯಕ್ಷರು, ಕೇಂದ್ರ ಸಮಿತಿಯ ಟ್ರಸ್ಟಿಗಳ ಸಲಹೆಗಳಂತೆ ಸೂಕ್ತ ಯುವ ಹಾಗೂ ಉದಯೋನ್ಮುಖ ಸಾಧಕರನ್ನು ಗುರುತಿಸಿ ಅನಂತರ ಕವಿಗಳಿಗೆ ಫೋನಾಯಿಸಿ ತಿಳಿಸಿ, ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇವೆ. ಇದರಲ್ಲಿ ಬಹುಪಾಲು ಕವಿಗಳು ಜುಲುಮೆಯಿಂದಲೇ ಒಪ್ಪಿಕೊಂಡು ಬರುತ್ತಾರೆ ಎಂದರು.


ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷರಾದ ಡಾ. ಹಸೀನಾ ಎಚ್.ಕೆ. ಅವರು ತೀರ್ಥಹಳ್ಳಿ ತಾಲ್ಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ನೂತನ ಅಧ್ಯಕ್ಷೆಯಾದ ಸುಜಾತ ಎಸ್. ಹೇಮಂತ್ ಅವರಿಗೆ ಪದಗ್ರಹಣ ನೆರವೇರಿಸಿದರು.


ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ. ಬಿ. ಗಣಪತಿ ರಾಜ್ಯದ ವಿವಿಧ ಭಾಗದ ಸಾಧಕರಿಗೆ “ಶರಣ ಸಂಕುಲ ರತ್ನ ರಾಜ್ಯ ಪ್ರಶಸ್ತಿ” ಪ್ರದಾನ ಮಾಡಿ ಮಾತನಾಡಿ, ಕುವೆಂಪು  ಊರಾದ ಕುಪ್ಪಳಿಯ ಹೇಮಾಂಗಣದಲ್ಲಿ ನಾವೆಲ್ಲರೂ ಸೇರಿದ್ದೇವೆ. ನೀವೆಲ್ಲರೂ ಕರ್ನಾಟಕದ ಬೇರೆ ಬೇರೆ ಊರುಗಳಿಂದ ಇಲ್ಲಿಗೆ ಬಂದಿದ್ದೀರಿ. ಬೇರೆ ಬೇರೆ ವೃತ್ತಿ ಮಾಡುವವರಿದ್ದೀರಿ. ಸ್ವತಃ ಕವಿಗಳೂ ಸಾಹಿತ್ಯ ರಚಕರೂ ಆಗಿದ್ದೀರಿ. ಇವತ್ತು ಇಲ್ಲಿ ಶರಣ ಸಾಹಿತ್ಯ ರತ್ನ ಪ್ರಶಸ್ತಿಯನ್ನು ಪಡೆದ ಎಲ್ಲಾ ಸಾಹಿತ್ಯ ರತ್ನಗಳಿಗೂ ಅಭಿನಂದನೆಗಳು. ಪ್ರಶಸ್ತಿಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಎಂದರು.


ನಾನೊಂದು ಕಿವಿಮಾತು ಹೇಳಿದರೆ ತಾವ್ಯಾರೂ ಅನ್ಯಥಾ ಭಾವಿಸಬಾರದು. ಇಂದು ಗಿಡಗಳನ್ನು ಬೆಳೆಸುವವರಿಗೆ  ಬೇಕಾದಷ್ಟು ಕಸಿಮಾಡಿದ ಗಿಡಗಳು ಸಿಗುತ್ತವೆ. ಏಕೆಂದರೆ ದಾರಿಯ ಬದಿಗಳಲ್ಲಿ ಹಲವು ನರ್ಸರಿಗಳು ತಲೆಯೆತ್ತಿವೆ. ಅಲ್ಲಿಂದ ಗಿಡಗಳನ್ನು ತಂದು ಹಣ್ಣಿನ ತೋಟ ಮಾಡುವವರಿಗೆ ನರ್ಸರಿಮನ್ ಒಂದು ಎಚ್ಚರಿಕೆ ಕೊಡುತ್ತಾನೆ. ಅದೇನೆಂದರೆ ಎರಡು ಮೂರು ವರ್ಷ ಈ ಗಿಡಗಳಲ್ಲಿ ಹೂ ಹೀಚು ಕಾಯಿಗಳು ಬಂದರೆ ಅವುಗಳನ್ನು ಕಿತ್ತುಹಾಕಿ; ಹಾಗೆ ಮಾಡದಿದ್ದರೆ ಗಿಡಗಳ ಬೆಳವಣಿಗೆ ಚೆನ್ನಾಗುವುದಿಲ್ಲ. ಭವಿಷ್ಯದ ತೋಟದ ಸಮೃದ್ಧಿ ಹೆಚ್ಚುವುದಿಲ್ಲ ಅಂತ. ಹೊಸ ಕವಿಗಳು, ಇದೀಗ ಬರವಣಿಗೆ ಆರಂಭಿಸಿದ ಬರಹಗಾರರು ತಮ್ಮ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಅವಸರಿಸದೇ ಹಣ್ಣಿನ ತೋಟ ಮಾಡುವ ತೋಟಗಾರನಂತೆ ತಮ್ಮ ಬರಹಗಳನ್ನು ಕೆಲವು ಕಾಲ ಇಟ್ಟುಕೊಂಡು ಮತ್ತೆ ಮತ್ತೆ ಓದಬೇಕು; ಹಾಗೆ ಓದುವಾಗೆಲ್ಲಾ ಚೆನ್ನಾಗಿದೆ ಅನ್ನಿಸಿದರೆ, ಇದನ್ನು ಬೇರೆಯವರೂ ಓದಬೇಕು ಅನ್ನಿಸಿದರೆ ಆಗ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು ಎಂದು ನುಡಿದರು.


ಕುವೆಂಪು ಅವರ ಕಾವ್ಯ-ಸಾಹಿತ್ಯ ರಾಶಿಯಲ್ಲಿ ನನಗೆ ಬಹಳ ಮುಖ್ಯವಾದ ಎರಡು ಸಾಲುಗಳು ಹೀಗಿವೆ. "ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?" ಅಂತ. ಹೀಗೆ ಹೇಳುವ ಮೂಲಕ ಕುವೆಂಪು ನಮ್ಮ ಇಡೀ ಮನುಕುಲದ ಕಾಲ ದೇಶಗಳನ್ನು ಮೀರಿ ಯೋಚಿಸುವ ಅಗತ್ಯವನ್ನು ಮನಗಾಣಿಸಿದ್ದಾರೆ. ಕವಿ, ಬರಹಗಾರ ಯಾವಾಗಲೂ ಮೌಢ್ಯಬಿಟ್ಟು ವಾಸ್ತವದ ವರ್ತಮಾನಕ್ಕೆ ತೆರೆದುಕೊಳ್ಳಬೇಕು. ಮಿತಿಗಳನ್ನು ಮೀರಿ ಬೆಳೆಯಬೇಕು. ಅದಕ್ಕಾಗಿ ಸುವಿಶಾಲ ಆಲೋಚನೆ ಮಾಡಬೇಕು. ಅಂತಹ ಕವಿ ಬರಹಗಾರರ ಹುಟ್ಟಿಗೆ ನಿಮ್ಮ ಬಳಗ ಕಾರಣವಾಗಲಿ. ಒಂದು ಭಿನ್ನ ಕಾರಣಕ್ಕಾಗಿ ರಚನೆಗೊಂಡ ಈ ಸಾಹಿತ್ಯ ವೇದಿಕೆ ನಿಮಗೆ ಆ ಬಗೆಯ ಬೆಳಕು ತೋರಲಿ. ಅದಕ್ಕಾಗಿ ತಾವೆಲ್ಲರೂ ಸಾಹಿತ್ಯವನ್ನು ಧ್ಯನಸ್ಥ ಸ್ತಿತಿಯಲ್ಲಿ ಬಳಸಿ ಎಂದು ಕೋರುವೆ ಎಂದರು.


ಬೆಂಗಳೂರಿನ ಲಕ್ಷ್ಮೀ ಸಿ.ಎಚ್; ತೀಥಹಳ್ಳಿಯ ಪ್ರೊ. ಹರೀಶ್ ಟಿ.ಜಿ.; ಹಾಸನದ ರೇಖಾ ಪ್ರಕಾಶ್ ಹಾಗೂ ಆಲೂರಿನ ಚಂದ್ರಕಲಾ ಎಂ. ರವರುಗಳಿಗೆ 2025 ನೇ ಸಾಲಿನ “ಶರಣ ಸಂಕುಲ ರತ್ನ ರಾಜ್ಯ ಪ್ರಶಸ್ತಿ”ಗೆ ಭಾಜನರಾದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ಬಿ. ಎಂ. ಪುಟ್ಟಯ್ಯ ವಹಿಸಿದ್ದರು. ವೇದಿಕೆಯಲ್ಲಿ ಕೇಂದ್ರ ಸಮಿತಿಯ ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಡಿ.ಎಸ್. ವಿಶ್ವನಾಥ ಶೆಟ್ಟಿ, ಶಿವಮೊಗ್ಗದ ಪಾರಂಪರಿಕ ವೈದ್ಯ ಸೈಯದ್ ಮುಹಿಬುಲ್ಲ ಖಾದ್ರಿ, ತೀರ್ಥಹಳ್ಳಿಯ ಸಿವಿಲ್ ಇಂಜಿನಿಯರ್ ಎಂ. ಬಿ. ಹೇಮಂತ್, ರಾಜ್ಯ ಕೋಶಾಧ್ಯಕ್ಷ ಎಚ್.ಎಸ್. ಬಸವರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು ಸಮುದ್ರವಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top