ಯೋಗವನು ಅರಿತವನು ಆಗುವನು ನಿರೋಗಿ
ಭೋಗದಲಿ ಯೋಗವನು ಕಂಡವನು ತ್ಯಾಗಿ|
ಯೋಗ-ಭೋಗ ಸಮನ್ವಯಕಾರ ಶಿವಯೋಗಿ
ಭಾಗವನು ಕಲಿತವನು ನಡೆಯಲರಿಯನು ಬಾಗಿ || || ೧ ||
ಯೋಗವೇತಕೆ ಬೇಕು ಬಾಗಲರಿಯದ ಮನಕೆ
ಹಾಗ ತೂಕವು ಇರದ ಯೋಗ್ಯತೆಯ ಜನಕೆ|
ಬೀಗುವರು ಏಗುವರು ಸಾಗುವರು ತಪಕೆ
ಸೋಗಲಾಡಿಗರೇರುವರೆ ಸಾಧನೆಯ ಪಥಕೆ|| || ೨ ||
ನರಜನ್ಮ ವರವಾಗೆ ಸಾಧನೆಯ ಹಟ ಬೇಕು
ಪರಬೊಮ್ಮನರಿಯುವರೆ ಸ್ಥಿರಮನವು ಸಾಕು|
ವರವೀವ ಶಿವದೇವನಿರುವಿಕೆಯೆ ನಾಕ
ಮೊರೆಯಿಟ್ಟು ಧ್ಯಾನಿಸಲು ಬೇಕಿಲ್ಲ ಜಪದೆಣಿಕೆ|| || ೩ ||
ಧ್ಯಾನ ಮಾಡುವ ಮನಕೆ ತೊಡುಗೆ ಏಕಾಗ್ರತೆಯು
ಮಾನವಂತನ ಜೀವನಕದುವೆ ಭದ್ರತೆಯು|
ಸಾನುರಾಗದಿ ಪೇಳ್ವ ಯೋಗಗುರು ದೇವತೆಯ.
ಭಾನುಕಿರಣದ ನುಡಿಯೆ ಜ್ಞಾನಸುಧೆಯು|| || ೪ ||
ಸಾರಿದನು ಜಗದ ಗುರು ಚೆಲುವ ಶ್ರೀಕೃಷ್ಣ
ಏರಿದನು ಯೋಗದಲಿ ಉತ್ತುಂಗ ಬಲುತೀಕ್ಷ್ಣ|
ಹರಿ ಸಾರ್ವಭೌಮನವತಾರ ವರ ರಾಮಕೃಷ್ಣ
ಅರಿತ ಮನುಜರ ಪಾಲಿಗಾಗದಿದು ಮೃಗತೃಷ್ಣ|| || ೫ ||
ವಿಶ್ವಯೋಗದ ದಿನವು ಮುಟ್ಟಯಿಸಿ ಬಂದಿಹುದು
ಅಶ್ವಹೃದಯದ ಮರ್ಮ ವೇಗ ಮೀರಿಹುದು|
ನಶ್ವರದ ಸುಖಭೋಗ ದೂರ ಸರಿದಿಹುದು
ಶಾಶ್ವತದ ಧ್ರುವಕೀರ್ತಿ ಜಗದಿ ತುಂಬಿಹುದು|| || ೬ ||
ಯಮ ನಿಯಮಗಳನರಿತವಗೆ ಬೇಕು
ಸಮವೆನಿಪಾಸನ ಪ್ರಾಣಾಯಾಮಗಳ ಸರಕು|
ಸುಮ ಸೌರಭದ ಪ್ರತ್ಯಾಹಾರದೊಡನೆ ಧಾರಣದ ನಾಕ
ದಮವೆನಿಪ ಧ್ಯಾನಸಮಾಧಿಯೊಳು ಮರೆವೆನೀ ಲೋಕ|| || ೭||
---------------------------------------------------------------------------
ಛಂದಸ್ಸು: ಪ್ರತಿಯೊಂದು ಪದ್ಯದಲ್ಲಿಯೂ ಒಂದೇ ರೀತಿಯಲ್ಲಿ ಆದಿ ಪ್ರಾಸ ಮತ್ತು ಅಂತ್ಯ ಪ್ರಾಸಗಳೆರಡೂ ಇರುವ ಸುಲಭ ಚೌಪದಿ.
ವಿಶ್ವ ಯೋಗ ದಿನಾಚರಣೆಯ ನಿಮಿತ್ತ ಒಂದು ಆಶು ಕವನ
ರಚನೆ: ವಿ.ಬಿ. ಕುಳಮರ್ವ, ಕುಂಬ್ಳೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ