ಬದಿಯಡ್ಕ: ಅಪ್ಪಎಂದರೆ ಎಲ್ಲರ ಬಾಯಲ್ಲೂ ನೀರೂರುವುದು ಸಹಜ. ಅದರಲ್ಲೂ ಹಲಸಿನ ಹಣ್ಣಿನ ಅಪ್ಪ ಭಾರಿ ರುಚಿಯಾದ ತಿನಿಸು ಆಗಿದೆ. ಹಲಸಿನ ಕಾಯಿಗೆ ಇಂದು ವಿಶೇಷ ಸ್ಥಾನವಿದೆ. ಇದರ ಕಾಯಿ, ಹಣ್ಣುಗಳಿಂದ ಅನೇಕ ಖಾದ್ಯಗಳನ್ನು ತಯಾರಿಸಲಾಗುತ್ತಿದ್ದು ಅತಿ ಬೇಡಿಕೆ ಇರುವ ಆಹಾರ ವಸ್ತುವಾಗಿದೆ. ಅನೇಕ ತರವಾಡು ಮನೆಗಳಲ್ಲಿ ನಡೆಯುವ ಧಾರ್ಮಿಕ ಕ್ರಿಯೆಗಳಲ್ಲೂ ಹಲಸಿನ ಕಾಯಿ ಮತ್ತು ಹಣ್ಣನ್ನು ಉಪಯೋಗಿಸುವುದು ಕಂಡುಬರುತ್ತಿದೆ.
ದೇವರಿಗೆ ಸಮರ್ಪಣೆ ಮಾಡಿದ ಮೇಲೆಯೇ ದೋಸೆ, ಅಪ್ಪವನ್ನು ಕುಟುಂಬದವರು ಉಪಯೋಗಿಸುವ ಕ್ರಮ ರೂಢಿಯಲ್ಲಿದೆ.
ಹಲಸಿನ ಹಣ್ಣಿನ ಅಪ್ಪಸೇವೆ: ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ದೇವರಿಗೆ ಹಲಸಿನ ಹಣ್ಣಿನ ಅಪ್ಪ ಸೇವೆ ನಡೆಯುತ್ತಿದೆ. ಜೂನ್, ಜುಲೈ ತಿಂಗಳಲ್ಲಿ ನಡೆಯುವ ಈ ವಿಶೇಷ ಸೇವೆಯು ಈ ಬಾರಿ ಜೂ. 29ರಂದು ನಡೆಯಲಿದೆ. ಈ ಸೇವೆ ಬೇರೆ ಯಾವ ದೇವಸ್ಥಾನದಲ್ಲೂ ಕಾಣ ಸಿಗುವುದಿಲ್ಲ. ತುಳುವಿನ ಕಾರಾ ತಿಂಗಳಿನ ಒಂದು ದಿನ ಹಲಸಿನ ಹಣ್ಣಿನಿಂದ ತಯಾರಿಸಿದ ಅಪ್ಪವನ್ನು ದೇವರಿಗೆ ಸಮರ್ಪಿಸಲಾಗುವುದು. ಅನೇಕ ವರ್ಷಗಳಿಂದ ಈ ಸೇವೆ ನಡೆದುಬರುತ್ತಿದೆ. ಶುದ್ಧವಾದ ದೇಶೀ ದನದ ತುಪ್ಪದಿಂದಲೇ ಅಪ್ಪವನ್ನು ತಯಾರಿಸಲಾಗುತ್ತದೆ.
1944ರಲ್ಲಿ ಪಡ್ರೆ ಗ್ರಾಮದ ಈ ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಆಸುಪಾಸಿನ ಜಾಗವನ್ನು ಏತಡ್ಕ ದಿ. ಸುಬ್ರಾಯ ಭಟ್ಟರು ಖರೀದಿಸಿದ್ದರು. ಆಗ ದೇವಸ್ಥಾನ ಮುಳಿಹುಲ್ಲಿನಿಂದ ಕೂಡಿತ್ತು. 1948ರಲ್ಲಿ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಲಾಯಿತು. ಅಂದಿನಿಂದ ಹಲಸಿನ ಹಣ್ಣಿನ ಅಪ್ಪ ಸೇವೆ ನಿರಂತರವಾಗಿ ನಡೆಯುತ್ತಿದೆ. ಕಾರಾ ತಿಂಗಳು ಜನರು ತುಂಬಾ ಕಷ್ಟದಲ್ಲಿರುತ್ತಿದ್ದರು. ಬಡತನದ ಹಿನ್ನೆಲೆಯಲ್ಲಿ ಜನರು ಹಲಸಿನ ಉತ್ಪನ್ನಗಳನ್ನೇ ತಿಂದು ಜೀವನ ಸಾಗಿಸುತ್ತಿದ್ದ ಕಾಲವೊಂದಿತ್ತು. ತಮ್ಮ ಹಸಿವನ್ನು ನೀಗಿಸಿದ ಹಲಸನ್ನು ದೇವರಿಗೆ ಸಮರ್ಪಿಸುವುದು ಒಂದು ವಾಡಿಕೆಯಾಗಿ ಮುಂದುವರಿಯಿತು. ಇಂದಿಗೂ ಆ ಸೇವೆಯನ್ನು ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ. 2024 ರಲ್ಲಿ ಶ್ರೀ ದೇವರ ಬ್ರಹ್ಮಕಲಶಾಭಿಷೇಕ ಮಹೋತ್ಸವ ಊರ ಪರವೂರ ಭಗವದ್ಭಕ್ತರ ಸಹಕಾರದಲ್ಲಿ ವಿಜೃಂಭಣೆಯಿಂದ ನೆರವೇರಿತ್ತು.
ಜೂ. 29ರಂದು ಬೆಳಗ್ಗೆ 9.30ಕ್ಕೆ ಜರುಗುವ ಹಲಸಿನ ಹಣ್ಣಿನ ಅಪ್ಪ ಸೇವೆ ಸಂದರ್ಭ ಶ್ರೀ ದೇವರಿಗೆ ರುದ್ರಾಭಿಷೇಕ, ಮಧ್ಯಾಹ್ನ ಮಹಾ ಪೂಜೆ ಜರುಗಲಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ