ಹಲೋ, ಹೇಗಿದ್ದೀರಾ?
ಜೀವನೋತ್ಸಾಹ ಎಂಬುದು ಸುಂದರ ಮತ್ತು ನೆಮ್ಮದಿಯ ಜೀವನವನ್ನು ನಡೆಸಲು ಅವಶ್ಯಕ. ಬದುಕು ಒಂದು ಯಾತ್ರೆಯೂ ಹೌದು. ಜೀವನೋತ್ಸಾಹ ಎಂಬ ಸೆಲೆ ಮರಳುಗಾಡಿನಲ್ಲಿ ಓಯಸಿಸ್ ಇದ್ದಂತೆ. ಜೀವನೋತ್ಸಾಹ ಎಂಬುದು ದೇವರು ಕೊಟ್ಟ ಬದುಕನ್ನು ಸುಂದರವಾಗಿ ಜೀವಿಸಲು ನಮ್ಮನ್ನು ಯಾವಾಗಲೂ ಚೈತನ್ಯವನ್ನು ನೀಡುತ್ತದೆ.
"ಅನುಗಾಲವು ಚಿಂತೆ ಈ ಜೀವಕೆ" ಎಂಬುದು ನಿಜವಾದರೂ ಅದರಲ್ಲೂ ಸಣ್ಣ ಸಣ್ಣ ಸಂಗತಿಗಳಿಂದ ಖುಷಿಯನ್ನು ಹಂಚಿಕೊಳ್ಳುವ ಅವಕಾಶ ಸಿಗುವುದು ಈ ಜೀವನೋತ್ಸಾಹ ಇದ್ದರೆ ಮಾತ್ರ. "ನೀರ ಮೇಲಿನ ಗುಳ್ಳೆ ನಿಜವಲ್ಲ ಹರಿಯೇ" ಎಂದು ದಾಸರು ಹಾಡಿದರೂ ಬದುಕನ್ನು ಜೀವಿಸಲೇ ಬೇಕು.
ಆದರೆ ಇದಕ್ಕೆ ತದ್ವಿರುದ್ಧವಾಗಿ ಜೀವನಕ್ಕೆ ಬೇಸರ ಮಾಡಿ ಕೊಳ್ಳುವ ಜನರನ್ನು ನಾವು ನೋಡ ಬಹುದು.
ಬಿ.ಪಿ. ಡಯಾಬಿಟೀಸ್ ಆಧುನಿಕ ಕಾಲದಲ್ಲಿ ಪಿತ್ರಾರ್ಜಿತ ಆಸ್ತಿಯಾದರೂ, ನಮ್ಮ ಜೀವನವನ್ನು ನಡೆಸಲು ಅವು ಕಡೆಗಣಿಸುವ ಸಂಗತಿಗಳಷ್ಟೇ.
ಬೆಳಿಗ್ಗೆ ಎದ್ದೊಡನೆ ಯಾಕಾದರೂ ಬೆಳಗಾಯಿತು? ಎಂದು ಮುಖ ಚಿಕ್ಕದು ಮಾಡಿಕೊಂಡು ಏಳುವ, ಕೆಲಸಕ್ಕೆ ಜೋಲು ಮೋರೆ ಹಾಕಿಕೊಂಡು ನಡೆಯುವ, ಜೀವನನೇ ಬ್ಯಾಸರ ಆಗ್ಯಾತಿ ಎಂದು ಭೆಟ್ಟಿ ಆದವರ ಮುಂದೆ ಹೇಳುವ, ಜನರ ಮಧ್ಯೆ, ಬೆಳಿಗ್ಗೆ ಎದ್ದು ಜಿಮ್ ವರ್ಕೌಟ್ ಮಾಡಿ, ಧ್ಯಾನ, ಮಾಡುವ, ಎಲ್ಲರ ಜೊತೆ ಖುಷಿಯಾಗಿ ಓಡಾಡಿಕೊಂಡು ತಕ್ಕಷ್ಟು ಸಮಾಜ ದೇವೆ ಮಾಡಿಕೊಂಡು, ಬದುಕನ್ನು ಪ್ರೀತಿಸುವ ಹಿರಿಯ ಜೀವಗಳಿಗೆ ಏನು ಕೊರತೆ ಇಲ್ಲ.
"ಪಾಲಿಗೆ ಬಂದದ್ದು ಪಂಚಾಮೃತ" ಎಂದು ಎಲ್ಲ ಜವಾಬ್ದಾರಿ ಮುಗಿಸಿ ಜೀವನದ ಸಂಧ್ಯಾ ಕಾಲದಲ್ಲಿ ಅಧ್ಯಯನ, ಓದು, ಬರವಣಿಗೆ, ಕೈತೋಟದಂತಹ ಹವ್ಯಾಸಗಳನ್ನು ಬೆಳೆಸಿಕೊಂಡು ಜೀವನವನ್ನು ಸಾರ್ಥಕವಾಗಿ ಮುಗಿಸಿ ನೆಮ್ಮದಿಯಾಗಿ ಉಸಿರು ಬಿಟ್ಟ ಜೀವಗಳು. ನಮಗೆ ಜೀವನೋತ್ಸಾಹದ ಪಾಠವನ್ನು ಕಲಿಸುತ್ತವೆ.
ನಿಶ್ಚಿತ ಅತಿಥಿಯಾದ ಸಾವಿನ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಬದುಕನ್ನು ಭಾರವಾಗಿಸಿಕೊಂಡು ಹಪಹಪಿ ಮಾಡದೆ ಪರೋಪಕಾರಿಯಾಗಿ ಜೀವನ ಸಾಗಿಸಿದರೆ ಹುಟ್ಟಿಸಿದ ದೇವನ ಋಣ ತೀರಿಸಿದಂತೆ. ಬನ್ನಿ, ಜೀವನೋತ್ಸಾಹ ಸೆಲೆಯನ್ನು ಚಿಮುಕಿಸುತ್ತ, ಜೀವನಕ್ಕೆ ಒಂದಿಷ್ಟು ಅರ್ಥ ಕಲ್ಪಿಸಿ ಮುಂದಕ್ಕೆ ಸಾಗೋಣ.
ಏನಂತೀರಾ?
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ