'ಅಧಿವೇಶನ 2025': ಬೆಂಗಳೂರಿನ ಎನ್‌ಎಂಐಟಿಯಲ್ಲಿ ಮ್ಯಾನೇಜ್‌ಮೆಂಟ್ ಫೆಸ್ಟ್

Upayuktha
0


ಬೆಂಗಳೂರು: ‘ಸಕಾರಾತ್ಮಕ ವಾತಾವರಣ ಅತ್ಯಂತ ಅವಶ್ಯ. ಅದರಿಂದ ಮ್ಯಾನೇಜ್‌ಮೆಂಟ್ (ನಿರ್ವಹಣೆಯ) ಕ್ಷೇತ್ರದ ವಿದ್ಯಾರ್ಥಿಗಳು ಹಾಗೂ ವೃತ್ತಿಪರರ ಕಾರ್ಯಕ್ಷಮತೆ ಹೆಚ್ಚುತ್ತದೆ ಮತ್ತು ನಿಗದಿತ ಗುರಿಯನ್ನು ತಲುಪಲು ಅಗತ್ಯ ಸ್ಫೂರ್ತಿ ಲಭಿಸಿದಂತಾಗುತ್ತದೆ. ಆದರೆ ನಿಗದಿತ ಗುರಿಯನ್ನು ತಲುಪುವಲ್ಲಿ ಯಾವುದೇ ಅನೈತಿಕ ಮಾರ್ಗ ಅನುಸರಿಸಬಾರದು. ಈ ತೆರೆನ ಪ್ರಯತ್ನಗಳು ತಾತ್ಕಾಲಿಕ ಯಶಸ್ಸು ತಂದರೂ ಕಾಲಕ್ರಮೇಣ ನಾವು ಅಳವಡಿಸಿಕೊಂಡಿದ್ದ ಅನೈತಿಕ ಮಾರ್ಗಗಳು ಮತ್ತು ಆಲೋಚನೆಗಳು ಬಯಲಾಗುತ್ತವೆ. ಇದು ದೈವದತ್ತ ನಿಸರ್ಗದ ಪ್ರಕ್ರಿಯೆ. ನೈತಿಕತೆಯನ್ನು ದೇವರೆಂದು ಭಾವಿಸುವವರು ಮತ್ತು ಅದನ್ನೇ ಜೀವನ ಮೌಲ್ಯವಾಗಿಸಿಕೊಂಡವರು ಪ್ರಶ್ನಾತೀತವಾದ ಯಶಸ್ಸುಗಳಿಸುತ್ತಾರೆ. ಅಷ್ಟೇ ಅಲ್ಲದೆ, ಇಡೀ ವಿಶ್ವವೇ ಕೊಂಡಾಡುವಂತಹ ಸಾಧನೆ ಮಾಡುತ್ತಾರೆ’ ಎಂದು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ನುಡಿದರು.


ಅವರು ಸಂಸ್ಥೆಯ ಮ್ಯಾನೇಜ್‌ಮೆಂಟ್ ವಿಭಾಗ ಆಯೋಜಿಸಿದ್ದ ರಾಜ್ಯಮಟ್ಟದ ವಾರ್ಷಿಕ ಉತ್ಸವ ‘ಅಧಿವೇಶನ-2025’ ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಅಪೂರ್ವ ಸಮಾವೇಶದಲ್ಲಿ ರಾಜ್ಯದ ವಿವಿಧ ಮ್ಯಾನೇಜ್‌ಮೆಂಟ್ ಹಾಗೂ ತಂತ್ರಜ್ಞಾನ ವಿದ್ಯಾರ್ಥಿಗಳು ಮತ್ತು ವೃತ್ತಿಪರರ ನಿರ್ವಹಣಾ ಪ್ರತಿಭೆಯನ್ನು ಒರೆಗೆ ಹಚ್ಚುವ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. 


‘ನಮ್ಮ ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ಸ್ಪರ್ಧಾತ್ಮಕ ಅವಕಾಶಗಳನ್ನು ಸ್ವಸ್ಥ ಮನಸ್ಥಿತಿಯಿಂದ ಸ್ವೀಕರಿಸಬೇಕು. ಪರಸ್ಪರ ಸಹಯೋಗ, ವಿಚಾರ ವಿನಿಮಯ ಹಾಗೂ ಸಭ್ಯ ನಡೆವಳಿಕೆ ಮಾತ್ರ ಈ ನಿಟ್ಟಿನಲ್ಲಿ ನಮಗೆ ಹೊಸ ಶಕ್ತಿಯನ್ನು ಮತ್ತು ವಿಷಯಕ್ಕೆ ನವನವೀನ ಆಯಾಮಗಳನ್ನು ತಂದುಕೊಡಬಲ್ಲವು ಎಂಬುದನ್ನು ಎಂದೆಂದಿಗೂ ಮರೆಯಬಾರದು. ಆರೋಗ್ಯಕರ ಸ್ಪರ್ಧೆ ಹಾಗೂ ಪ್ರೀತಿಯಿಂದ ಕೂಡಿದ ಸಹಕಾರ ಈ ಕ್ಷೇತ್ರದ ಸ್ಥಿರಸೂತ್ರಗಳಾಗಬೇಕು’ ಎಂದು ಅವರು ವಿಶ್ಲೇಷಿಸಿದರು.


ಎಡು-ಪೈ ಗ್ಲೋಬಲ್ ಸಂಸ್ಥೆಯ ನಿರ್ದೇಶಕ ಎಂ. ಭೀಮಸೇನ್ ಅವರು ವಿವಿಧ ಸ್ಪರ್ಧೆಗಳ ನಿರ್ವಹಣೆಯ ಹೊಣೆ ಹೊತ್ತಿದ್ದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಹಾಯಕ ಉಪಾಧ್ಯಕ್ಷ ಕಮಲ್ ಅರ್ತ್ವಾನಿ ಬಹುಮಾನಗಳನ್ನು ವಿತರಿಸಿದರು. ಅತ್ಯುತ್ತಮ ನಿರ್ವಹಣಾ ಕೌಶಲ್ಯವನ್ನು ಪ್ರದರ್ಶಿಸಿದ್ದಕ್ಕೆ, ಪೂರೈಕೆ ಸರಪಳಿ ನಿರ್ವಹಣೆ ವಿಜ್ಞಾನದಲ್ಲಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಮ್ಯಾನೇಜ್‌ಮೆಂಟ್ ವಿಭಾಗದ ತಂಡ ಮೊದಲ ಬಹುಮಾನ ಗಳಿಸಿತು. ಅರ್ಥನಿರ್ವಹಣೆಯ ವಿಭಾಗದಲ್ಲಿ ಶ್ರೀ ವೆಂಕಟೇಶ್ವರ ಕಾಲೇಜ್ ಆಫ್‌ ಇಂಜಿನಿಯರಿಂಗ್ ತಂಡ ಪ್ರಥಮ ಸ್ಥಾನವನ್ನು ಪಡೆಯಿತು. ಮಾನವಸಂಪನ್ಮೂಲ ಹಾಗೂ ಮಾರ್ಕೆಟಿಂಗ್ ವಿಭಾಗಗಳ ಸ್ಪರ್ಧೆಗಳಲ್ಲಿ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಆಚಾರ್ಯ ಇನ್ಸ್‌ಟಿಟ್ಯೂಟ್ ಆಫ್‌ ಟೆಕ್ನಾಲಜಿಯ ವಿದ್ಯಾರ್ಥಿಗಳು ಕ್ರಮವಾಗಿ ಪ್ರಥಮ ಸ್ಥಾನಗಳನ್ನು ಗಳಿಸಿದರು.


ಸಮಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥೆ ಡಾ. ಶಿಲ್ಪಾ ಅಜಯ್, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top