ಬೆಂಗಳೂರು: ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ಹಾಗೂ ಜ್ಞಾನದೀಪ ಯೋಗ ಸಂಸ್ಥೆಯ ಸಹಯೋಗದಲ್ಲಿ ಶನಿವಾರ (ಜೂ.21) ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಡಾ. ರಘೋತ್ತಮಾಚಾರ್ ಯು.ಆರ್. ಹಾಗೂ ಅತಿಥಿಗಳಾಗಿ ಜ್ಞಾನದೀಪ ಯೋಗ ಸಂಸ್ಥೆಯ ಸಂಸ್ಥಾಪಕರು, ಯೋಗ ಶಿಕ್ಷಕರಾದ ಗೀತಾ ಶ್ರೀಪಾದಸ್ವಾಮಿ, ಮತ್ತೊಬ್ಬ ಯೋಗ ಶಿಕ್ಷಕರಾದ ನಿತಿನ ಕೊರಹಳ್ಳಿ ಆಗಮಿಸಿದ್ದರು.
ಧ್ಯಾನ ಮತ್ತು ಯೋಗದ ಕುರಿತಾಗಿ ಪಿಹೆಚ್‌ಡಿ ಪದವಿ ಪಡೆದ ಡಾ.ರಘೋತ್ತಮಾಚಾರ್ ಯು.ಆರ್. ಅವರು ಮಾತನಾಡಿ, ಈ ಸೃಷ್ಟಿಗೆ ಬಂದ ನಮಗೆ, ಗುರಿಯಾದ ಮೋಕ್ಷ ಎಂದರೆ 'ಸಂಸಾರ ತಾಪದಿಂದ ಬಿಡುಗಡೆ' ಎಂಬುದೇ ಮುಖ್ಯವಾದದ್ದು. ಅದನ್ನು ಸಾಧಿಸಲು ದೇಹ ಮನಸ್ಸುಗಳು ಆರೋಗ್ಯವಾಗಿರಬೇಕು. ಗುರಿಯ ದಾರಿಯ ತಿಳುವಳಿಕೆಯು ಸ್ಪಷ್ಟವಾಗಿರಬೇಕು. ಇಲ್ಲಿಗೆ, ಯೋಗದ ಬಾಗಿಲು ವಿಶಾಲವಾಗಿ ತೆರೆದಂತಾಯಿತು. ಇಲ್ಲಿ ವೈಚಾರಿಕತೆ, ಪ್ರಮಾಣಗಳು, ಅವುಗಳ ನಿಷ್ಕರ್ಷೆ ಮೊದಲಾದ ಶಾಸ್ತ್ರವೆಂಬ ಸಮುದ್ರಕ್ಕೆ ಪ್ರವೇಶ ಮಾಡಿದಂತಾಯಿತು. ನಾವು ಯಾವುದನ್ನು ಒಪ್ಪಿ, ನಂಬಿ ಮುನ್ನಡೆಯುತ್ತಿದ್ದೇವೋ ಅದರ ದೃಢತೆಯನ್ನು ಮೊಟ್ಟಮೊದಲು ಪರೀಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಹಂತ ಮುಖ್ಯವಾಗಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರಗಳ ನಂತರದ್ದು. ಇವು ಎಲ್ಲ ಸಾಧಕರಿಗೂ ಸಾಮಾನ್ಯವೇ. ಭಾಗವತ, ಭಗವದ್ಗೀತೆ, ಪುರಾಣಗಳು, ಉಪನಿಷತ್ತುಗಳು ಭಗವಂತನ ಉಪಾಸನೆಯನ್ನೇ ಹೇಳುತ್ತವೆ. ಹರಿದಾಸರ ಮತವೂ ಅದೇ. ಹೀಗಾಗಿ, ಯೋಗದ ಅಷ್ಠಾಂಗಗಳನ್ನು ಪರಿಶೀಲಿಸಬೇಕು. ಯೋಗ ಭಗವಂತನ ಜೊತೆಗೆ ಉಂಟಾಗುವ ಸಂಬಂಧ. ನಮ್ಮ ಸ್ವರೂಪವಾದ ಜ್ಞಾನ ಆನಂದಗಳ ಅನುಭವಗಳ ಸಂಬಂಧ ಎಂಬ ಯೋಗ, ಇದು ಗುರಿ. ಇದು ಯೋಗ ಮಾರ್ಗ. ಸಾಧನೆಯ ದಾರಿಯಲ್ಲಿ ನಡೆಯೋಣ. ಹರಿದಾಸರು ತೋರಿದ ದಾರಿ ಸುಲಭ. ಯೋಗದ ವಿಚಾರಗಳು ಹರಿದಾಸ ಸಾಹಿತ್ಯದಲ್ಲಿ ವಿಪುಲವಾಗಿವೆ. ಭಕ್ತರ, ಜ್ಞಾನಿಗಳ ಮಾರ್ಗದರ್ಶನವೆಂಬ ಬೆಳಕಿದೆ. ಸಫಲರಾಗಲು ಭಗವಂತನಲ್ಲಿ ಪ್ರಾರ್ಥಿಸೋಣ. ಈ ನಿಟ್ಟಿನಲ್ಲಿ ಮಹಿಳಾ ಹರಿದಾಸರ ಕುರಿತಾಗಿ, ಮೈತ್ರೇಯಿ ಸಂಸ್ಥೆಯ ಕಾರ್ಯಕ್ರಮವನ್ನು ಶ್ಲಾಘಿಸಿದರು.
ನಿತಿನ್ ಕೊರಹಳ್ಳಿ ಅವರು ಮಾತನಾಡುತ್ತ, ಎಲ್ಲರಿಗೂ ಯೋಗ ಅತ್ಯಂತ ಅವಶ್ಯಕ. ಅದರಲ್ಲೂ ಹೆಣ್ಣು ಮಕ್ಕಳಿಗೆ ಯೋಗ ಅರಾಮದಾಯಕ.
ಅನೇಕ ಒತ್ತಡ ಹಾಗೂ ನಿರಂತರ ಕೆಲಸ ಮಾಡುವ ದೇಹ ಆರೋಗ್ಯಕರವಾಗಿರಲು, ಮನಸ್ಸು ಶಾಂತವಾಗಿರಲು ಯೋಗ, ಪ್ರಾಣಾಯಾಮ, ಸೂರ್ಯ ನಮಸ್ಕಾರ ಬಹಳ ಅತ್ಯವಶ್ಯಕ ಎಂದು ಹೇಳಿ, ಎಲ್ಲರಿಗೂ, ಕೆಲ ನಿಮಿಷಗಳ ಕಾಲ ಭ್ರಾಮರಿ ಹಾಗೂ ಪ್ರಾಣಾಯಾಮ ಮಾಡಿಸಿದರು.
ಒಂದು ದಿನ ಮಾಡಿ ಎರಡನೇ ದಿನ ಯೋಗ ಬಿಡುವಂತಿಲ್ಲ. ದಯವಿಟ್ಟು ಯೋಗ ಮಾಡುವುದನ್ನು ರೂಢಿಸಿಕೊಳ್ಳಿ ಎನ್ನುವ ತಿಳುವಳಿಕೆಯ ಮಾತನ್ನು ಹೇಳಿದರು.
ಜ್ಞಾನದೀಪ ಯೋಗ ಸಂಸ್ಥೆಯ ಸಂಸ್ಥಾಪಕಿ ಶ್ರೀಮತಿ ಗೀತಾ ಶ್ರೀಪಾದಸ್ವಾಮಿ ಮಾತನಾಡಿ, ತಾವೆಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿರುವುದು ಯೋಗದ ಕುರಿತಾಗಿ ಆಸಕ್ತಿ ತೋರಿಸುತ್ತಿರುವುದು ಬಹಳ ಸಂತೋಷಕರವಾದ ವಿಷಯ. ಈ ಮೈತ್ರೇಯಿ ಟ್ರಸ್ಟ್ ನ ಎಲ್ಲಾ ಕಾರ್ಯಕ್ರಮಗಳಿಗೂ ಜ್ಞಾನ ದೀಪ ಯೋಗ ಸಂಸ್ಥೆಯ ಸಹಕಾರವಿದೆ ಎಂದು ತಿಳಿಸಿ, ಟ್ರಸ್ಟನ ಧ್ಯೇಯೋದ್ದೇಶಗಳು, ಅಪೂರ್ವವಾಗಿವೆ ಎಂದು ಹರ್ಷಿಸಿದರು.
ಮೈತ್ರೇಯಿ ಟ್ರಸ್ಟ್‌ನ ಉಪಾಧ್ಯಕ್ಷರಾದ ಡಾ. ಶಾಂತಾ ರಘೋತ್ತಮಾಚಾರ್ ಅವರು ಸ್ವಾಗತಿಸಿದರು. ಕಾರ್ಯದರ್ಶಿ ಡಾ. ವಿದ್ಯಾ ಕಸ್ಬೆ ಕಾರ್ಯಕ್ರಮ ನಿರೂಪಿಸಿದರು.
ಸದಸ್ಯರಾದ ಶ್ರೀಮತಿ ಲತಾ ಉಟಗಿ ಅವರು, ಶ್ರೀ ಶಾಂತಾ ರಘೋತ್ತಮಾಚಾರ್ಯ ಅವರ ರಚನೆಯ ಮೈತ್ರೇಯಿ ಕುರಿತಾದ ನಮೋ ಗೀತೆ, ಪ್ರಾರ್ಥನಾ ಗೀತೆ ಹಾಡಿದರು. ಡಾ. ಸುಧಾ ನರಸಿಂಗರಾವ್ ಅವರು ಅಧ್ಯಕ್ಷತೆವಹಿಸಿ ಮಾತನಾಡಿದರು. ತ್ಯಾಗರಾಜನಗರದ ಜ್ಞಾನದೀಪ ಯೋಗ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯೋಗಾಸಕ್ತರು ಹಾಗೂ ಮೈತ್ರೇಯಿ ಟ್ರಸ್ಟ್‌ನ ಸದಸ್ಯರು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ