ಉಜಿರೆ: ಜಗತ್ತಿನಲ್ಲಿ ಭಾಷೆ ಇಲ್ಲದಿದ್ದರೆ ಅಂಧಕಾರ ಕವಿಯುತ್ತಿತ್ತು ಎನ್ನುವುದು ಒಂದು ಕವಿವಾಣಿ. ಸಕಲ ಜನರ ಸಂವಹನಕ್ಕೆ, ವ್ಯವಹಾರಕ್ಕೆ ಭಾಷೆಯು ಅನುವಾರ್ಯವಾಗಿದೆ. ಇಂತಹ ಭಾಷೆಗಳಲ್ಲಿ ಸಂಸ್ಕೃತವೂ ಒಂದು. ಸಾಹಿತ್ಯ ಸಂಪತ್ತಿನೊಂದಿಗೆ ಭಾರತೀಯ ವಿಜ್ಞಾನದ ಮೂಲ ಜ್ಞಾನವನ್ನು ಸಂಸ್ಕೃತಜ್ಞರು ನೀಡಿದ್ದಾರೆ. ಪ್ರಾಚೀನ ಸಾಹಿತ್ಯ ಹಾಗೂ ಸಂಸ್ಕೃತಿಯು ಉಳಿವಿಗೆ ಸಂಸ್ಕೃತ ಅಧ್ಯಯನ ಅಗತ್ಯವಾಗಿದೆ. ಒಟ್ಟಾರೆ ವಿಪುಲವಾದ ಜ್ಞಾನ ಸಂಪತ್ತು ಸಂಸ್ಕೃತ ಭಾಷೆಯಲ್ಲಿದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸನಿವಾಸ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ಉಪನ್ಯಾಸಕ ಮಹೇಶ್ ಎಸ್.ಎಸ್ ಅವರು ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇವುಗಳ ಪದಾಧಿಕಾರಿಗಳ ಪದಪ್ರದಾನ ಸಮಾರಂಭದ ಅಭ್ಯಾಗರಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪ ಪ್ರಾಚಾರ್ಯರಾದ ಡಾ. ರಾಜೇಶ್ ಬಿ. ಅವರು ಮಾತನಾಡಿ, ಸಂಸ್ಕೃತವು ಶ್ರೀಮಂತ ಭಾಷೆಯಾಗಿದ್ದು, ಇದರ ಅದ್ಭುತವಾದ ಜ್ಞಾನ ಭಂಡಾರ ಎಲ್ಲರಿಗೂ ಸಿಗಲಿ. ಇಂತಹ ಸಂಘಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಕರೆನೀಡಿದರು.
'ಸುಬೋಧಿನೀ' ಸಂಸ್ಕೃತ ಡಿಜಿಟಲ್ ಭಿತ್ತಿಪತ್ರಿಕೆಯನ್ನು ಉಪ ಪ್ರಾಚಾರ್ಯರು ಅನಾವರಣ ಮಾಡಿದರು. ಹತ್ತನೆಯ ತರಗತಿಯ ಸಂಸ್ಕೃತ ಭಾಷಾ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಳೆದ ವರ್ಷದ ದ್ವಿತೀಯ ಪಿಯುಸಿಯ ಸಂಸ್ಕೃತ ವಿದ್ಯಾರ್ಥಿಗಳು ಸಂಗ್ರಹಿಸಿದ ಸಂಸ್ಕೃತ ಪುಸ್ತಕಗಳನ್ನು ಸಂಸ್ಕೃತ ಸಂಘದ ಅಧ್ಯಕ್ಷನಾಗಿದ್ದ ಗುರುದತ್ತ ಮರಾಠೆ ಇವರು ಸಂಸ್ಕೃತ ವಿಭಾಗದ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಹಸ್ತಾಂತರಿಸಿದರು.
ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಇವರು ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಅನೀಕಾ ತಂಡನವರು ಸಂಸ್ಕೃತ ಗೀತಗಾಯನ ಪ್ರಸ್ತುತಪಡಿಸಿದರು. ಸಂಸ್ಕೃತ ಸಂಘದ ಅಧ್ಯಕ್ಷೆ ಹಂಸಿನಿ ಭಿಡೆ ಸ್ವಾಗತಿಸಿದರು. ಉಪಾಧ್ಯಕ್ಷ ಯಶಸ್ವಿ ಸಂಸ್ಕೃತ ಸಾಧಕರ ಪಟ್ಟಿ ವಾಚಿಸಿದರು. ನಿಜ ಕುಲಾಲ್ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಸನ್ನಾ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ