ಶ್ರೀ ಮಹಾದೇವಪ್ಪ ಕಡೇಚೂರರು ರಜಾಕಾರರ ವಿರುದ್ಧ ಹೋರಾಡಿದವರು. ತಾಯ್ನೆಲದ ಋಣವನ್ನು ಈ ಮೂಲಕ ತೀರಿಸಿದವರು. ವಿಶ್ವಹಿಂದು ಪರಿಷತ್, ಹಿಂದು ಜಾಗರಣವೇದಿಕೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸಿದವರು. ಅನೇಕ ಇಂದಿನ ನಾಯಕರನ್ನು ಬೆಳೆಸಿದವರು ಬೆಂಬಲಿಸಿದವರು. ತಮ್ಮ ತನು, ಮನ, ಧನವನ್ನು ಸಮಾಜಕ್ಕಾಗಿ ಅರ್ಪಿಸಿದವರು ದೇಶಭಕ್ತಿಯನ್ನು ಮೈಮನಗಳಲ್ಲಿ ತುಂಬಿಕೊಂಡವರು.
ಉತ್ತಮ ಸಮಾಜ ನಿರ್ಮಾಣದ ಕನಸು ಕಂಡು, ಅದರ ಸಾಧ್ಯಾಸಾಧ್ಯತೆಗೆ ಪ್ರಯತ್ನಿಸಿ ಅದರಲ್ಲಿ ಯಶಸ್ಸು ಕಂಡು, ಆ ಯಶಸ್ಸಿನ ಅನುಭವಗಳನ್ನು ಮೆಲುಕು ಹಾಕಿ, ಖುಷಿ ಪಡುವವರು ನಮ್ಮ ಪ್ರೀತಿಯ ಮೇಷ್ಟ್ರು ಶ್ರೀ ಮಹಾದೇವಪ್ಪ ಕಡೇಚೂರ ಅವರು! ಹೌದು, ಇವರು ಗಂಧ ತೇದಂತೆ ತೇದು ಸಮಾಜದ ಬೆಳಕಿಂಡಿಗೆ ರಂಗುರಂಗಿನ ಗ್ಲಾಸ್ ಕೂಡಿಸಿದವರು. ಕೈಲಾಗದವರಿಗೆ ಸಹಾಯ ಹಸ್ತ ನೀಡಿದವರು, ಬಡಮಕ್ಕಳಿಗೆ ಮಹಾದೇವರಾಗಿ ಆಭಯ ಹಸ್ತ ನೀಡಿದವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಶಿಸ್ತನ್ನು, ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರು. ಶಿಕ್ಷಕರಾಗಿ ಬೋಧನೆಯೊಂದಿಗೆ ಕ್ರೀಡೆಗಳನ್ನು ತುಂಬ ಪ್ರೀತಿಸಿದವರು. ವಾಲಿಬಾಲ್, ಕಬಡ್ಡಿ, ಕೇರಂಗಳು ಇವರ ನೆಚ್ಚಿನ ಆಟಗಳಾಗಿದ್ದವು. ತಮ್ಮ ಮನೆಯನ್ನು, ಮಕ್ಕಳನ್ನು ನೆರೆಹೊರೆಯವರನ್ನು ಪ್ರೀತಿಸಿದಂತೆ ಇಡೀ ಸಮಾಜಕ್ಕೆ ತಮ್ಮ ಬೆಚ್ಚನೆ ಪ್ರೀತಿಯನ್ನು ಹಂಚಿದವರು.
ಪಾತಿಯನ್ನು ಹಂಚಿದವರು ರಂಗಂಪೇಟೆಯ ಪ್ರಿಯಗಣ್ಯರಾಗಿದ್ದ ಮಹಾದೇವಪ್ಪ ಕಡೇಚೂರವರು.
ಪ್ರಿಯ ಜನ ಮಾನಸದ ಕವಿ ಬೇಂದ್ರೆ ಅವರಂದಂತೆ,
'ಹುಟ್ಟು ಋಷಿಯಲ್ಲದವನ ಕಬ್ಬ ಜಗಕ್ಕೆ! ಎಂದು
ಇದು ಕಾವ್ಯಲೋಕದ ಅಚ್ಚರಿ, ಸಮಾಜದ ವಿಸ್ಮಯ! ಹಾಗೆಯೇ ಕಡೇಚೂರರು ಕೂಡ ಈ ಸಮಾಜದ ವಿಸ್ಮಯ ಘನ ಅಚ್ಚರಿ'
1930 ಮೇ 30ರಂದು ಜನಿಸಿದ್ದ ಮಹಾದೇವಪ್ಪ ಕಡೇಚೂರ ಅವರು, ಆಗಿನ ಕಾಲಕ್ಕೆನೇ ಎಂ.ಎ.ಬಿ.ಇಡಿ, ಎಂ.ಐ.ಎಚ್ ಮೊದಲಾದ ಡಿಗ್ರಿಗಳನ್ನು ಪಡೆದು ವಿದ್ಯೆ ವಿನಯದಿಂದ ಕಂಗೊಳಿಸಿದ್ದರು. ಹಿಂದುಳಿದ ಈಡಿಗ ಜನಾಂಗದಲ್ಲಿ ಜನಿಸಿ, ಸಮಾಜದ ಉನ್ನತ ಸ್ಥಾನಕ್ಕೆ ತಮ್ಮ ಅವಿರತ ಸ್ವ-ಪ್ರಯತ್ನದಿಂದ ಏರಿದರು.
'ಬಾನಗಣ್ಣಿನ ಬೆಳಕು ಹರಡಿ
ಜನಮನ ನಲಿಯಿತು ಸಂತಸದಿಂದ
ಅರಿವಿನ ಬೆಳಕಿನ ಒಡೆಯ ತಾ
ಬಂದ ಬಲು ಸಡಗರದಿಂದ!'- ಎಂಬಂತೆ
ಮಹಾದೇವಪ್ಪನವರು ಎಲ್ಲಡೆ ಅವಿರತ ಸುತ್ತಿದರು. ಜ್ಞಾನದಾಹದಿಂದ ಅದನ್ನು ಪಡೆಯಲು ಅರಿವಿನ ಅರಮನೆಗೆ ನಡೆದರು. ಸತ್ಸಂಗಿಗಳ ಸಂಗದಿಂದ ಕಂಗೊಳಿಸಿದರು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದರು. ಆಕಾಶವಾಣಿಯ ಶ್ರೇಷ್ಠ ಪ್ರತಿಭೆ(ಈಗ AIRದಲ್ಲಿಯ ನಿವೃತ್ತಿ ನಂತರ ಸದಾನಂದ ಪೇರ್ಲ್ ಅವರು ಕಲಬುರಗಿ ದೂರದರ್ಶನ ಕೇಂದ್ರದ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ) ಸದಾಹಸನ್ಮುಖಿ ಕಾಸರಗೋಡಿನ ಪೇರ್ಲದ ಡಾ.ಸದಾನಂದ ಪೆರ್ಲರಿಗೆ ತಮ್ಮ ಪ್ರೀತಿಯ ಪುತ್ರಿ ಪ್ರಮೀಳಾರನ್ನು ಧಾರೆ ಎರೆದು ಕೊಟ್ಟು ತಮ್ಮ ವಾತ್ಸಲ್ಯದ ಕಡಲಲ್ಲಿ ಸೇರಿಸಿಕೊಂಡರು. ಪ್ರಮೀಳಾ ಎಂ ಕೆ ಅವರೀಗ ಕಲಬುರಗಿಯಲ್ಲಿ ಹಿರಿಯ ಕೆಎಎಸ್ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ಗುರುಗಳನ್ನು ಹಿರಿಯರನ್ನು ಗೌರವಿಸಿದರು.
'ಈ ಜಗವೇ ತನ್ನ ಮನೆ ಅಲ್ಲಿಯ ಎಲ್ಲರೂ ತನ್ನವರೇ ಪ್ರೀತಿಯೇ ಜಗದ ದುಃಖ ದೂರಮಾಡಬಲ್ಲುದು ಅಲ್ಲವೆ?' ಎಂಬುದೇ ಶ್ರೀ ಮಹಾದೇವಪ್ಪ ಕಡೆಚೂರರ ಧ್ಯೇಯ ವಾಕ್ಯವಾಗಿತ್ತು.
ಅವರ 92ರ ಹರೆಯದಲ್ಲಿಯೂ ಅವರ ಉತ್ಸಾಹವೇನೂ ಕುಗ್ಗಿರಲಿಲ್ಲ, ಅದೇ ಅವರ ನಿಜವಾದ ಸಂಪತ್ತಾಗಿತ್ತು. ಅವರಿಗೆ ಆಗ 'ಅಭಿನಂದನಾ ಗ್ರಂಥ'ವೆಂಬ ಗುಲಾಬಿ ಪಕಳೆಗಳನ್ನು ಅರ್ಪಿಸಲಾಗಿತ್ತು.ಆಗ ಕೋವಿಡ್ ಸಮಯವಾಗಿತ್ತು. ಎಲ್ಲರಲ್ಲಿಯೂ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕಿತ್ತು.ಅದು ಆಗ ಅನೇಕ ವೈದ್ಯರು, ಕವಿಗಳು,ಸಾಹಿತಿಗಳು,ದಾದಿಯರ,ಸಮಶಾಸ್ತ್ರಜ್ಞರ ಮೂಲಕ ನಡೆದಿತ್ತು ಕೂಡ.ಆಗ ನಮಗೆ ಕಡೆಚೂರರಂತಹ ಮಹನೀಯರ ಆದರ್ಶದ ಬದುಕು ಕೂಡ 'ಮೌನಧೈರ್ಯ' ನೀಡಿತ್ತು. ಆಗ ಇದು ಈ ಸಮಾಜದ ಅದೃಷ್ಟ ಕೂಡ ಆಗಿತ್ತು.!
ಮಹಾದೇವಪ್ಪ ಕಡೇಚೂರರು ದೇಶಭಕ್ತಿಯನ್ನು ಮೈಮನಗಳಲ್ಲಿ ತುಂಬಿಕೊಂಡಿದ್ದರು, "ಕಲಬುರಗಿ ಕಹಳೆ' ಪತ್ರಿಕೆಯ ಮೂಲಕ ದಮನಿತರಿಗೆ ದನಿಯಾಗಿದ್ದರು. ಅಲ್ಲದೆ ರಾಷ್ಟ್ರೀಯತೆ ಕುರಿತು ಅನೇಕ ಲೇಖನಗಳನ್ನು ಪತ್ರಿಕೆಗಳಿಗೆ ಬರೆದು ಜನರಲ್ಲಿ ದೇಶಾಭಿಮಾನವನ್ನು ಮೂಡಿಸಿದ್ದರು. ಇವರು ಬರೆದ 'ಕಣ್ಮಣಿ', 'ಬೆನ್ನಬೆಳಕು' 'ಕಲಬುರಗಿ ಜಿಲ್ಲಾ ಜನಸಂಘ ಕಟ್ಟಿ ಬೆಳೆಸಿದ ಧುರೀಣರು', 'ಸ್ನೇಹ ಸರಪಳಿ' ಮೊದಲಾದ ಗ್ರಂಥಗಳು ನಾಡವರ ಗಮನ ಸೆಳೆದಿವೆ. ಇವರಿಗೆ ಕಲಿಸಿದ ಗುರುಗಳ ಬಗ್ಗೆ ಒಂದು ಗ್ರಂಥವನ್ನೇ ಬರೆದು ಗುರುಋಣ ತೀರಿಸಿದ್ದಾರೆ. ಇಂದಿನ ಭಾಜಪದ ಅನೇಕ ಧುರೀಣರನ್ನು ಇವರು ಬೆಳೆಸಿದ್ದಾರೆ. ಆದರೆ ಯಾವುದೇ ಫಲಾಪೇಕ್ಷೆಯನ್ನು ಇವರು ಪಡೆದ ಉದಾಹರಣೆಗಳಿಲ್ಲ. ಈ ನಿಸ್ವಾರ್ಥಸೇವೆ ಇವರನ್ನು ಶ್ರೇಷ್ಠರ ಸಾಲಿನಲ್ಲಿ ನಿಲ್ಲಿಸಿದೆ. ಇವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
'ಇದ್ದದ್ದು ಬಾಗುತ್ತದೆ. ಇಲ್ಲದ್ದು ಬೀಗುತ್ತದೆ'
'ಎಲ್ಲ ಕೇಳಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ಎನಗೆ!' ಎಂದು ಕವಿ ಹಾಡಿದಂತೆ ಇವರು ಸಮಾಜಕ್ಕೆ ತಂಪಿನ ನೆರಳಾಗಿದ್ದರು. ತಮ್ಮಷ್ಟಕ್ಕೆ ತಾವು ಸಮಾಜ ಸೇವೆ ಮಾಡುತ್ತಾ ನಡೆದರು, ಆ ಹೆಮ್ಮೆಯ ಹೆಜ್ಜೆಗಳು ಇವರ ಧೀಮಂತ ಬಾಳಿನ ಹೆಗ್ಗುರುತು ಆಗಿವೆ.
ಶ್ರೀಮೌನೇಶ್ವರರು ಹೇಳಿದಂತೆ-
'ಮೆಟ್ಟು ಮಾರುವವನಾಗಲಿ, ಕಟ್ಟಿಗೆ ತರುವವನಾಗಲಿ, ಕಷ್ಟವ ಮಾಡಿ ಉಂಬುವರ ಮನೆಯಲ್ಲಿ, ಮುಷ್ಟಿ ತುಂಬ ಅನ್ನ ಉಣಬೇಕೋ ಬಸವಣ್ಣ!' ಇದು ಇವರ ತತ್ವವಾಗಿತ್ತು, ಶ್ರಮಜೀವಿಗಳೆಂದರೆ ಇವರಿಗೆ ಪ್ರಾಣ! ಮೈಗಳ್ಳರೆಂದರೆ ಇವರಿಗೆ ಬೆಂಕಿ! '
'ಭಾವಶುದ್ದಿ ಕಾವ್ಯಶುದ್ದಿಗೆ
ಮುತ್ತು ಕೋದಿದೆ ಈ ನೆಲ
ಭೋಗ ದಾಸಿಮ ಸತ್ಯ ಶರಣರು
ಗಂಧ ತೀಡಿದ ದೇಗುಲ'
ಈ ಕವಿವಾಣಿಯಂತೆ ಬಾಳಿ ಬದುಕಿದ ಹಿರಿಯ ಜೀವಿ ಮಹಾದೇವಪ್ಪನವರು. ಈ ನೆಲದ ಮರೆಯ ನಿದಾನ, 'ತವನಿಧಿ'ಯ ಪ್ರೀತಿ ಇವರಲ್ಲಿತ್ತು. ಅದಕ್ಕೇ ನಾವು ಒಕ್ಕೊರಲಿನಿಂದ ಹೇಳುತ್ತೇವೆ.... ಅವರ ಬಂಧುಗಳ ಜೊತೆ ಸೇರಿ ಅಭಿಮಾನಿಗಳ ಹಾರ್ದಿಕ ಸ್ವಾಗತದೊಂದಿಗೆ -
'ನೀವಿಲ್ಲದ ಈ ಮನದೊಳಗೇನಿದೆ?
ನೀವಿದ್ದರೇ ಹೂವಿದೆ ಹೊಸ ಜೇನಿದೆ' ಎಂದು.
ದುಷ್ಟಶಕ್ತಿಯ ನಾಶವಾಗದೇ ಸಾತ್ವಿಕ ಶಕ್ತಿ ಬೆಳಗಲಾರದು ಎನ್ನುವುದು ಕಡೇಚೂರರ ಅಭಿಮತವಾಗಿತ್ತು. ಇವರು ಹಾಗೂ ಇವರ ಕುಟುಂಬ ಇಂದು ತುಂಬ ಯಶಸ್ಸನ್ನು ಪಡೆದ ಉದಾಹರಣೆ ನಮ್ಮ ಮುಂದಿದೆ. ಕಡೇಚೂರರು ಯಾವಾಗಲೂ ಹೇಳುತ್ತಿದ್ದರು. 'ಗುರಿಯ ಬಗ್ಗೆ ಹೊಂದಿರುವ ಸ್ಪಷ್ಟತೆಯು ಎಲ್ಲ ಯಶಸ್ಸುಗಳಿಗೂ ಆರಂಭಿಕ ಬಿಂದು' ಎಂದು.
'ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ನಮ್ಮ ಕಷ್ಟಗಳು ಕೂಡಾ! ಅಜ್ಞಾನ,ಅಂಧಕಾರ,ಮೌಢ್ಯತೆ ತೊಲಗಿ, ವೈಚಾರಿಕತೆ, ಜ್ಞಾನ ಎಲ್ಲರಲಿ ಮೂಡಲಿ!' ಎಂದು. ಸದಾ ಕನ್ನಡವನ್ನು ತುಂಬ ಪ್ರೀತಿಸಿದರು ನಮ್ಮ ಕಡೇಚೂರರು.
'ಎನಿತು ಇನಿದು ಈ ಕನ್ನಡ ನುಡಿಯು
ಮನವನು ತಣಿಸುವ ಮೋಹನ ಸುಧೆಯು!'
ಆನಂದಕಂದರ ಅಮರ ನುಡಿಯು, ಇವರಿಗೆ ಸದಾ ವೇದ ವಾಕ್ಯವಾಗಿತ್ತು.
'ಜಗದ ಶಾಶ್ವತ ಬೆರಗು
ನೆಲಬಾನುಗಳ ಉತ್ಕಟ ಪ್ರೀತಿ
ಶಬ್ದದೊಳಗಣ ನಿಶಬ್ದ ಬೆಳಕು
ಮನಬಂದ ಪರಿಯಲಿ ನುಡಿಸಕೊಂಡು
ನಕ್ಷತ್ರಗಳ ಹರಡಿಕೊಂಡಿರುವ
ಇವರೇ ಇವರು ಎಲ್ಲರ ಪ್ರೀತಿಯ
ಅನನ್ಯ ಮಹಾದೇವರು!'
ಹೀಗೆ ಸದಾ ಸರ್ವರ ಪ್ರೀತಿಸುವ ಮಹಾದೇವರು ಅನನ್ಯರಾಗಿ, ಇನ್ನೂ ಖುಷಿಯಾಗಿ ಖುಷಿಯಾಗಿ ನೂರಾರುವರುಷ ಬಾಳಲಿ, ಶುಭೋದಯ ತೆರೆಯಲಿ ಮನೆಮನಗಳ ಅಂಗಳದೀ ಸಮಾಜ ಸೇವೆಯ 'ರಂಗೋಲಿ' ಇಡಲಿ. ಬರುವ ಭಾಗ್ಯವ ಬರಲಿ, ಬಂದ ಹರುಷವ ಇರಿಸು ಎದೆ ತುಂಬಿ ಹಾಡೂಮ್ಮೆ ಪ್ರೀತಿಪಾತ್ರರ ಗೀತೆ ಎಂದು ನಾವೆಲ್ಲಾ ಹಾಡಿದ್ದೇವು. ಆದರೆ ವಿಧಿಯಾಟವೇ ಬೇರೆಯಾಗಿತ್ತು ಎಂದು ಕಾಣುತ್ತದೆ. ಅವರು 24 ಜೂನ 2025ರಂದು ನಮ್ಮನ್ನೆಲ್ಲಾ ಅಗಲಿದರು. ಅವರ ಧರ್ಮಪತ್ನಿ ಅವರು ಮಾರ್ಚ 2025ರಲ್ಲಿ ನಿಧನರಾಗಿದ್ದರು.
ಅವರಿಗೆ ನಾಲ್ಕು ಜನ ಗಂಡು ಮಕ್ಕಳು ಹಾಗೂ ಒಬ್ಬ ಮಗಳು, ಅಳಿಯ, ಸೊಸೆಯಂದಿರು ಮೊಮ್ಮಕ್ಕಳು ಹೀಗೆ ದೊಡ್ಡ ಕುಟುಂಬವೇ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಸಮಾಜ ಅವರೊಂದಿಗೆ ಇದೆ. ಇವರು ಈಡಿಗ ಸಮಾಜದ ಕಣ್ಣಾಗಿದ್ದರು.
ಇವರಿಗೆ ಮಾನ್ಯರಾದ ಸು.ರಾಮಣ್ಣ, ಕೆ ಎನ್ ಗೋವಿಂದಾಚಾರ್ಯ, ಅಡ್ವಾಣಿ, ವಾಜಪೇಯಿ, ಬಸವರಾಜ ಪಾಟೀಲ ಸೇಡಂ, ಅನಂತಕುಮಾರ, ಯಡಿಯೂರಪ್ಪ, ಈಶ್ವರಪ್ಪ..... ಮೊದಲಾದವರು ಆತ್ಮೀಯರಾಗಿದ್ದರು.
'ಎನಿತು ಜನುಮದಲಿ ಎನಿತು ಜೀವರಿಗೆ
ಎನಿತು ನಾವು ಋಣಿಯೋ
ತಿಳಿದು ನೋಡಿದರೆ ಬಾಳು ಎಂಬುದು
ಋಣದ ರತ್ನ ಗಣಿಯೋ!'
ಕವಿಗಳ ಆಶಯದಂತೆ ಅನನ್ಯ ಮಹಾದೇವರು ಸಮಾಜದ ಕನ್ನಡಿಯಾದರು, ಆ ಮುಖಾಂತರ ಸಮಾಜದಲ್ಲಿರುವ ಅಸಮತೋಲನ ನಿವಾರಣೆಯಾಗುವ ಪ್ರಯತ್ನ ನಡೆದಿತ್ತು.
'ಇಂಥ ಮಹನೀಯರ ಮಮಕಾರದ ಮಳೆಯಲ್ಲಿ ದ್ವೇಷದ ಬೆಂಕಿ ಆರಲಿ'!
'ಸಾಲುದೀಪಗಳ ಹಚ್ಚಿ ಮರೆಯಲ್ಲಿ ನಿಂತ
ಸಂತ ಸಿದ್ದೇಶ್ವರ ಸ್ವಾಮೀಜಿಗಳ ಬದುಕು ನಮಗೆಲ್ಲ ಆದರ್ಶವಾಗಬೇಕು'
'ಹರಿವ ನದಿಗೆ ಬಿಂಬದ ಹಂಗಿಲ್ಲ'
'ಅನುಭಾವದ ಹಂತದಲ್ಲಿ ಬಿಡುಗಡೆ ಹಾಗೂ ಬಂಧನ ಎರಡೂ ಒಂದೆ"!
ಬೆಳಂದಿಗಳ ಹಾಲಲ್ಲಿ ಅದ್ದಿ ತೆಗೆದ ನವಿರು ಪ್ರೀತಿ ಸುಜ್ಞಾನವ ಮೂಡಿಸಲಿ ನಾಡವರ ಮನಮನದಲಿ ನಿಶಬ್ದದ ಪ್ರಜ್ವಲತೆ ಆತ್ಮಪ್ರಕಾಶ ನಳನಳಿಸಲಿ ಮಾನವತೆಯರಳಲಿ ಹೃದಯದರಮನೆಯಲಿ!'
ಅವರಿಗೆ ನಮ್ಮದೊಂದು ಪ್ರೀತಿಯ ಸೆಲ್ಯೂಟ್!
-ಶ್ರೀನಿವಾಸ ಜಾಲವಾದಿ, ಸುರಪುರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ