ಹಿರಿಯ ವಿದ್ವಾಂಸ ಪ್ರೊ ಹೆರಂಜೆ ಕೃಷ್ಣ ಭಟ್ ವಿಧಿವಶ

Upayuktha
0

 


ಉಡುಪಿ: ಹಿರಿಯ ಸಾಂಸ್ಕೃತಿಕ ಅಧ್ವರ್ಯು, ನಿವೃತ್ತ ಉಪನ್ಯಾಸಕ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ‌ ಕೇಂದ್ರದ ಮಾಜಿ ನಿರ್ದೇಶಕ ಪ್ರೊ‌ ಹೆರಂಜೆ ಕೃಷ್ಣ ಭಟ್ಟರು ಗುರುವಾರ ಸಂಜೆ ವಯೋಸಹಜ ಅಸ್ವಾಸ್ಥ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು‌.


ಅವರಿಗೆ 84 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಭಟ್ಟರು ಅಗಲಿದ್ದಾರೆ.‌


ಉಡುಪಿಯ ಎಂಜಿಎಂ‌ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರು, ವಿಭಾಗ ಮುಖ್ಯಸ್ಥರಾಗಿ ಸುದೀರ್ಘ ಅವಧಿ ಸೇವೆ ಸಲ್ಲಿಸಿದ್ದ ಭಟ್ಟರು ನಿವೃತ್ತಿಯ ಬಳಿಕ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕರಾಗಿ ಅನೇಕ ವರ್ಷಗಳ ಕಾಲ ಮಹತ್ವದ ಸೇವೆ ಸಲ್ಲಿಸಿ ಕೇಂದ್ರದ ಮೂಲಕ ಅನೇಕ ಸಾಹಿತ್ಯ ಸಾಂಸ್ಕೃತಿಕ ಕೈಂಕರ್ಯಗಳನ್ನು ಯಶಸ್ವಿಯಾಗಿ ಸಂಯೋಜಿಸಿದ್ದರು.


ಉಡುಪಿಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮೇರುಸ್ವರೂಪರಾಗಿದ್ದ ಕು,ಶಿ ಹರಿದಾಸ ಭಟ್ಟರ ಗರಡಿಯಲ್ಲಿ ಪಳಗಿದ್ದ ಕೃಷ್ಣ ಭಟ್ಟರು ತಾನೂ ಅದೇ ರೀತಿಯಲ್ಲಿ ಓರ್ವ ಧೀಮಂತ ಸಾಂಸ್ಕೃತಿಕ ಸಂಘಟಕರಾಗಿ ರೂಪುಗೊಂಡಿದ್ದರು. ಸುಮಾರು 5 ದಶಕಗಳ ಉಡುಪಿಯ ಅನೇಕ ಪರ್ಯಾಯೋತ್ಸಗಳು, ವಾದಿರಾಜ ಕನಕ ದಾಸ ಸಂಗೀತೋತ್ಸವಗಳು, ಹತ್ತಾರು ಸಾಹಿತ್ಯ ಸಾಂಸ್ಕೃತಿಕ ಹಬ್ಬಗಳು, ವಿಶ್ವತುಳು ಸಮ್ಮೇಳನ, ನಡಾವಳಿಯೇ ಮುಂತಾಗಿ ದೊಡ್ಡ ದೊಡ್ಡ ಕಾರ್ಯಕ್ರಮಗಳು ಭಟ್ರ ಸಂಯೋಜನೆ ಮಾರ್ಗದರ್ಶನ ಮುತುವರ್ಜಿಯಲ್ಲಿ ಯಶಸ್ವಿಯಾಗಿ ಆಯೋಜನೆಗೊಂಡಿವೆ.‌


ಜಾನಪದ ಸಂಶೋಧನ ಕೇಂದ್ರದ ಮೂಲಕ‌ ಅನೇಕ ನೇಪಥ್ಯಕ್ಕೆ ಸರಿಯುತ್ತಿರುವ ಜನಪದೀಯ ಕಲೆಗಳ ದಾಖಲೀಕರಣಗಳೂ ಭಟ್ರ ಮಾರ್ಗದರ್ಶನದಲ್ಲೇ ನಡೆದಿರುವುದು ವಿಶೇಷ.


ಈ ರೀತಿಯ ತಮ್ಮ ಬಹುಮುಖಿ ಸಾಮಾಜಿಕ ಕರ್ತವ್ಯಗಳ ಮೂಲಕ ಸಿದ್ಧರೂ ಪ್ರಸಿದ್ಧರೂ ಆಗಿದ್ದ ಭಟ್ರಿಗೆ ಉಡುಪಿ ಕೃಷ್ಣ ಮಠ ಅಷ್ಟಮಠಗಳ ಅನೇಕ‌ಗೌರವ ಸಂಮಾನಗಳು, 2007ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಂಮೇಳನದ ಪುರಸ್ಕಾರ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ತಿಂಗಳೆ ಗರಡಿ ಉತ್ಸವದ ಪುರಸ್ಕಾರಗಳೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.


ಇಳಿವಯಸ್ಸಿನಲ್ಲೂ ವೇದಾಧ್ಯಯನ ನಡೆಸಿ ಪ್ರತಿನಿತ್ಯವೆಂಬಂತೆ ಪವಮಾನಸೂಕ್ತಾದಿಗಳನ್ನು ಪಾರಾಯಣ ನಡೆಸುತ್ತಿದ್ದರು.


ಪುತ್ತಿಗೆ ಕೃಷ್ಣಾಪುರ, ಪೇಜಾವರ ಕಾಣಿಯೂರು ಅದಮಾರು ಪಲಿಮಾರು ಸೋದೆ ಶೀರೂರು ಭಂಡಾರಕೇರಿ ಶ್ರೀಪಾದರುಗಳು ಕೃಷ್ಣ ಭಟ್ಟರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು ಶ್ರೀಕೃಷ್ಣ ಮುಖ್ಯಪ್ರಾಣರ ವಿಶೇಷ ಸೇವೆ ಸಲ್ಲಿಸಿದ್ದ ಭಟ್ಟರು ವೈಶಾಖ ಶುದ್ಧ ಏಕಾದಶಿ ಪರ್ವ ದಿನದಂದೇ ಹರಿಪಾದ ಸೇರಿರುವುದು ವಿಶೇಷವಾಗಿದೆ.‌ ಭಗವಂತನು ಅವರಿಗೆ  ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಡಾ ಡಿ ವೀರೇಂದ್ರ ಹೆಗ್ಗಡೆ, ಶಾಸಕ ಯಶ್ಪಾಲ್ ಸುವರ್ಣ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ ರಘುಪತಿ ಭಟ್, ಡಾ ಮೋಹನ ಆಳ್ವಾ ಮುಂತಾದ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top