ಮೇ 11: ವಿಶ್ವ ತಾಯಂದಿರ ದಿನಾಚರಣೆ

Chandrashekhara Kulamarva
0


ಪ್ರತಿ ವರ್ಷ ಮೇ ತಿಂಗಳ 11ನೇ ತಾರೀಖು ವಿಶ್ವ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ಹೇಳಬೇಕೆಂದರೆ ಪ್ರತಿ ದಿನವೂ ಅಮ್ಮನ ದಿನವೆಂದು ಹೇಳಬಹುದು. ಯಾಕೆಂದರೆ ಹುಟ್ಟಿದಾಗ  ಮೊದಲು ನೋಡುವುದು ಅಮ್ಮನ ಮುಖವನ್ನೇ. ನಮಗೆ ಏನಾದರೂ ನೋವಾದಾಗ ಮೊದಲು ನಮ್ಮ ಬಾಯಿಯಿಂದ ಮೊದಲು ಬರುವುದು "ಅಮ್ಮ" ಎಂಬ ಉದ್ಗಾರವೇ. ಅಷ್ಟರ ಮಟ್ಟಿಗೆ ಅಮ್ಮ  ನಮ್ಮತಾಯಿ ನಮ್ಮನ್ನು ಆವರಿಸಿ ಬಿಟ್ಟಿರುತ್ತಾಳೆ. ಬಹುಶಃ ನಮ್ಮ ತಾಯಿ ನಮ್ಮನ್ನು ಪ್ರೀತಿಸಿದಷ್ಟು ನಮ್ಮನ್ನು ಯಾರೂ ಪ್ರೀತಿಸಿರಲಿಕ್ಕಿಲ್ಲ. ನಮ್ಮ ಮೂಗಿನ ಸಿಂಬಳ ಒರೆಸಲು ಅಮ್ಮನ ಸೆರಗನ್ನು ಉಪಯೋಗಿಸಲು ಶುರು ಮಾಡುವ ನಾವು, ಬಿಸಿಲಲ್ಲಿ ನಡೆಯುವಾಗ ಅಮ್ಮನ ಸೆರಗು ನಮಗೆ ಛತ್ರಿ ಇದ್ದ ಹಾಗೆ. ಮನೆಗೆ ಯಾರಾದರೂ ಬಂದರೆ ಅಮ್ಮನ ಸೆರಗಿನಲ್ಲಿ ಕದ್ದು ನೋಡುವ ನಾವು, ದೂರದ ಸಂಬಂಧಿಕರು ಬಂದಾಗ, ದುಡ್ಡು ಕೊಡುವಾಗ, ಅಮ್ಮನ ಕಡೆಯಿಂದ coin ಕೊಡಲು ಅಮ್ಮನ ಶಿಫಾರಸು ಬೇಕೇ ಬೇಕು. ಇವೆಲ್ಲವೂ ಪ್ರತಿಯೊಬ್ಬರ ಬಾಲ್ಯದ ಮಧುರ ನೆನಪುಗಳು.


ಚಿಕ್ಕವರಿದ್ದಾಗ ಹೋಮ್ ವರ್ಕ್ ಮಾಡಲು, ಅಮ್ಮ ಬೇಕೇ ಬೇಕು. ಸ್ಕೂಲ್ನಲ್ಲಿ ಜಗಳವಾಡಿ ಮನೆಗೆ ಬಂದಾಗ ಟೀಚರ್ ಜೊತೆ ವಾದ, ಪ್ರತಿವಾದ ಮಾಡಲು ಅಮ್ಮ ಎಂಬ ಲಾಯರ್ ನಮ್ಮ ಪಾಲಿಗೆ ಆಪತ್ ಬಂಧು.


ಅಮ್ಮ ನಮ್ಮ  ಜೀವನದಲ್ಲಿ ಅಷ್ಟೇ ಅಲ್ಲ, ಪ್ರತಿಯೊಬ್ಬರ ಜೀವನದ ಬುತ್ತಿಯಲ್ಲಿ ಅಮ್ಮ ಎಂಬ ಹೆಸರು ಸಿಹಿ ತುತ್ತಾಗಿದೆ. ತಾನು ಹಳೆಯ ಸೀರೆ ಉಟ್ಟು ಕೊಂಡು, ಸರಿಕರಿಗಿಂತ ಚೆನ್ನಾಗಿ ಬಾಳಿ ಬದುಕಬೇಕೆಂದು ತನ್ನಷ್ಟಕ್ಕೆ ಚಾಲೆಂಜ್ ಹಾಕಿಕೊಂಡು ಮಕ್ಕಳನ್ನು  ನೆಲೆ ಮುಟ್ಟಿಸಿ ತೃಪ್ತಿಯ ನಗೆ ಬೀರುವ ಅಮ್ಮ ಯಾವುದೇ ಸಾಧಕರಿಗೇನು ಕಡಿಮೆ ಇಲ್ಲ.


ಇದ್ದ ಆದಾಯದಲ್ಲಿಯೇ ನೀಟಾಗಿ ಜೀವನ ಸರಿದೂಗಿಸಿ ಮಕ್ಕಳ ಮದುವೆ, ಶಿಕ್ಷಣ, ಮನೆ. ಕಟ್ಟುವುದು, ಇವಕ್ಕೆಲ್ಲಾ ಜಾಣತನದಿಂದ ದುಡ್ಡು ಹೊಂದಿಸುವ ಅಮ್ಮ ಯಾವ ಕಾರ್ಪೊರೇಟ್ ಸಿಇಒಗೆ ಏನೂ ಕಡಿಮೆಯಿಲ್ಲ.


ಆದಿ ಶಂಕರಾಚಾರ್ಯರು ಸಹಿತ ತಾಯಿಯನ್ನು "ಕುಪುತ್ರೋ ಜಾಯತಿ, ಕುಮಾತಮ್ ನ ಭವತಿ" ಎಂದು ಹೊಗಳಿದ್ದಾರೆ. ಅಂದರೆ ಕೆಟ್ಟ ಮಕ್ಕಳು ಹುಟ್ಟ ಬಹುದು, ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ.


ಈಗಲೂ ಎಲ್ಲ ಯತಿಗಳು ಸನ್ಯಾಸ ಆಶ್ರಮದಲ್ಲಿದ್ದರ್ರೂ ಪೂರ್ವಾಶ್ರಮದ ತಾಯಿಯನ್ನು ನೋಡಿದಾಗ ದೀರ್ಘ ದಂಡ ಪ್ರಣಾಮ ಸಲ್ಲಿಸುವುದನ್ನು ನೋಡಬಹುದು.


ಸೋದೆ ವಾದಿರಾಜ ಸ್ವಾಮಿಗಳು ಕೂಡ ಯಶೋಡೆಯನ್ನು "ಜಗದೋದ್ದಾರಕನ ಆಡಿಸಿದಳ ಯಶೋದೆ" ಎಂದು ಯಶೋದೆಯನ್ನು ಹೊಗಳಿದ್ದಾರೆ.


ಬನ್ನಿ, ಮನೆಯಲ್ಲಿ, ಮನದಲ್ಲಿರುವ ತಾಯಿಯನ್ನು ಪ್ರೀತಿಸಿ ಗೌರವಿಸೋಣ, ತಾಯಂದಿರ ದಿನಾಚರಣೆಯನ್ನು ಅರ್ಥಪೂರ್ಣವಾಗಿಸೋಣ.


-ಗಾಯತ್ರಿ ಸುಂಕದ, ಬದಾಮಿ.


إرسال تعليق

0 تعليقات
إرسال تعليق (0)
To Top