ಮೊನ್ನೆಯ 'ಅಟೆಮ್ಟು ಕಪಾಳಮೋಕ್ಷ' ಪ್ರಸಂಗವೊಂದು ಇವತ್ತು ಬಾರಿ ಗಂಭೀರ ಮತ್ತು ಹಾಸ್ಯಾಸ್ಪದ ವಿಷಯವಾಗಿ ವೈರಲ್, ಫಂಗಲ್, ಬ್ಯಾಕ್ಟೀರಿಯಲ್ ಎಲ್ಲಾ ಆಗ್ತಾ ಇದೆ!!
ಕಳೆದ ಕೆಲವು ದಿನಗಳಿಂದ ಬೀಳುತ್ತಿರುವ ಅಕಾಲಿಕ ಮಳೆಯಿಂದ ಸೊಳ್ಳೆಗಳ ಕಾಟ ಹೆಚ್ಚಿದ್ದು, ಅವುಗಳು ಕಚ್ಚುವಾಗ, ನಮ್ಮ ಕೆನ್ನೆಗೆ ನಾವೇ ಕಪಾಳಮೋಕ್ಷ ಮಾಡಿಕೊಂಡಿದ್ದೇವೆ. "ಏ ಯಾರಯ್ಯ ಇಲ್ಲಿ ಕೆನ್ನೆ ಕಚ್ಚುವುದು? ಕಿವಿಯ ಹತ್ರ ಗುಯ್ಞ್ ಗುಡುವುದು? ಅಂತ ಹೇಳುವುದಕ್ಕೆ ಮುಂಚೆಯೇ, ಕಪಾಳಮೋಕ್ಷ ಮಾಡಿ, ಸೊಳ್ಳೆ ಹೊಸಿಕಿ ಹಾಕುವ ಪ್ರಯತ್ನ ಮಾಡುತ್ತೇವೆ!!. ಆದರೆ, ಇವತ್ತು ವೈರಲ್, ಫಂಗಲ್, ಬ್ಯಾಕ್ಟೀರಿಯಲ್ ಆಗುತ್ತಿರುವ ಕಪಾಳಮೋಕ್ಷ ಪ್ರಸಂಗ ಬೇರೆ. ಈ ವೈರಲ್ ಕಪಾಳಮೋಕ್ಷಕ್ಕೂ, ಮಸ್ಕಿಟೋ ಕಪಾಳಮೋಕ್ಷಕ್ಕೂ ಯಾವುದೇ ಸಂಬಂಧ ಇಲ್ಲ.
**
'ಅಟೆಮ್ಟು ಕಪಾಳಮೋಕ್ಷ' ಪ್ರಸಂಗದ ಈ ವೀಡಿಯೋ ನೀವು ನೋಡಿಲ್ಲ ಅಂದ್ರೆ ಒಮ್ಮೆ ನೋಡಿಬಿಡಿ.
https://youtu.be/46_WQQcbx3E?si=euDLdoBpM67pDTtn
(ಈ ವೀಡಿಯೋ ಇನ್ನು ಯಾವ ಯಾವ, ಸದಾ ಹೊಡ್ತ ಬಡ್ತ ಮಾಡುತ್ತಿರುವ ದೇಶಗಳಲ್ಲಿ ಫೇಮಸ್ ಆಗಲಿಕ್ಕಿದೆಯೇನೋ!?)
**
"ಏ ಬಾರಯ್ಯ ಇಲ್ಲಿ, ಯಾವನೋ ಅವನು ಶಾಸಕ? ಏನ್ಮಾಡ್ತಾ ಇದ್ದೀರಿ ನೀವು?" ಅಂತ ಮತದಾರರೂ ನಾಳೆ ಅಕಸ್ಮಾತ್ ಯಾವುದಾದರು ಶಾಸಕ ತನ್ನ ಕ್ಷೇತ್ರಕ್ಕೆ ಅಕಸ್ಮಾತ್ ಬಂದರೆ ಕೇಳಬಹುದಾ!? (ನಾಯಕರೇ ಮತದಾರರಿಗೆ 'ಚಾಳಿ' ಕಲಿಸುವ 'ಹಿರಿಯಕ್ಕ' ಅಲ್ವಾ!!? ಮತದಾರರು ಕಲಿಯಬಹುದು)
ಕೇಳಬಹುದು. ಆಯ್ಕೆಯಾದವರು ಸೇವಕರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಭುಗಳು ಸೇವಕರನ್ನು ಕೇಳಬಹುದು. ಧೈರ್ಯ ಬೇಕು ಅಷ್ಟೆ!
ಹಾಗೆ ಕೇಳಿದಾಗ, ಪೊಲೀಸ್‌ನವರು ಮತದಾರನನ್ನು ಒಳಗೆ ಹಾಕಲು ಮುಂದಾದರೆ!? ಆಗ "ಏ ಬಾರಯ್ಯ ಇಲ್ಲಿ, ಯಾವನೋ ಅವನು SP? ಏನ್ಮಾಡ್ತಾ ಇದ್ದೀರಿ ನೀವು?" ಅಂತ ಮತದಾರರು ಪೋಲೀಸ್ ಮೇಲೆ ಕೈ ಎತ್ತಿದರೆ? ಪ್ರಜಾಪ್ರಭುತ್ವದಲ್ಲಿ ಸರಕಾರಿ ಅಧಿಕಾರಿಗಳೂ ಸರ್ವೆಂಟ್‌ಗಳೆ!
(ಹಾಗೆ ಕೇಳುವ ಧೈರ್ಯ ಇರುವುದಿಲ್ಲ ಅಂತ ಹೇಳಲು ಸಾಧ್ಯವಿಲ್ಲ! ಪೋಲೀಸ್ ಸ್ಟೇಷನ್‌ಗೆ ಬೆಂಕಿ ಹಚ್ಚಿ, 'ಬೇಯಿಲ್' ತಗೊಂಡವರೂ ಇದ್ದಾರಲ್ಲ! ಜೊತೆಗೆ, ನಾಯಕನ ಹಿರಿಯಕ್ಕನ ಚಾಳಿ ಊರು ಮಂದಿಗೆಲ್ಲ ಹಬ್ಬಿ....!?)
**
ಅದೇನೋ ರೂಲ್ ಇದೆಯಂತೆ, ಯುನಿಫಾರಂನಲ್ಲಿ ಡ್ಯೂಟಿ ಮೇಲಿದ್ದ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡುವ ಹಾಗಿಲ್ಲ ಅಂತ!? ಶಾಸಕರು ಕಪಾಳಮೋಕ್ಷ ಹಲ್ಲೆ ಪ್ರಯತ್ನ ಮಾಡುವುದು ರೂಲ್ ಒಳಗಡೆ ಅನುಮತಿಸಲಾಗಿದೆಯಾ?
***
ಶಾಸಕರು (ಸರ್ವೆಂಟ್) ಅಧಿಕಾರಿಯ (ಸರ್ವೆಂಟ್) ಕಪಾಳಕ್ಕೆ ಬಾರಿಸಿದಾಗ, ಅಧಿಕಾರಿ ಸಾವನ್ನಪ್ಪಿದರೆ ಕೇಸ್ ಯಾವ ರೀತಿ ನೆಡೆಯಬಹುದು!? ಕಂಪ್ಲೇಂಟ್, FIR, SIT, ಬೇಲ್, FSL ವರದಿ, ಚಾರ್ಜ್ ಶೀಟ್, ಸಾಕ್ಷಿ, ವಿಚಾರಣೆ, ಮಧ್ಯಂತರ ವರದಿ, ರಾಜಕೀಯ ಟ್ವಿಸ್ಟ್, ಅಂತಿಮ ತೀರ್ಪು... ಎಲ್ಲ ಇರಬೇಕಾ?
***
ಕಪಾಳಮೋಕ್ಷ ಅನ್ನುವ ಟೈಟಲ್‌ನಲ್ಲಿ ಒಂದು ಸಿನಿಮಾ ಮಾಡಿದರೆ, ಅದರ ಬಿಡುಗಡೆಗೆ ಬೆಂಗಳೂರಿನ ಪ್ರೈಮ್ ಥಿಯೇಟರ್ ಕಪಾಲಿ ಆಗುತ್ತಿತ್ತು. ಆದರೆ.... ಆ ಸಿನಿಮಾ ಮಂದಿರ ಈಗ ಪ್ರದರ್ಶನಕ್ಕೆ ಇಲ್ವಂತೆ! ಹಾಗಾದಲ್ಲಿ, ಸಿದ್ದೇಶ್ವರ ಆಗಬಹುದಾ!?
***
ಶಾಸಕ ಅಧಿಕಾರಿಯ ಮೇಲೆ ಬೈದು ಕೈ ಎತ್ತುವುದು ಅನ್ ಪಾರ್ಲಿಮೆಂಟರಿ ಬಿಹೇವಿಯರ್ ಆಗಲ್ವಾ? ಅನ್ ಪಾರ್ಲಿಮೆಂಟರಿ ವರ್ಡ್ ಇದ್ದ ಹಾಗೆ!?
**
ಕೈ ಪಕ್ಷದವರು ಕೈ ಎತ್ತಬಹುದು ಅಂತಾದರೆ, ನಾಳೆ ಆಮ್ ಆದ್ಮಿ ಪಕ್ಷದ ಶಾಸಕರು ಪೊರಕೆ ಯನ್ನು ಸಾರ್ವಜನಿಕರ ಸಭೆಗೆ ತಂದು, ಆಕ್ರಮಣಕ್ಕೆ ಮುಂದಾಗಬಹುದಾ!!? ಕಮಲ ಪಕ್ಷದವರು ಹೂವಿನ ಬುಡದಲ್ಲಿರುವ ಕೆಸರನ್ನು ಆಕ್ರಮಣಕ್ಕೆ ಬಳಸಬಹುದು ಅಲ್ವಾ!? ಕೈ ಎತ್ತುವುದು, ಪೊರಕೆ ಪೂಜೆ, ಕೆರೆರಚಾಟ, ಕಲ್ಲು ಹೊಡೆಯುವುದು ಇತ್ಯಾದಿಗಳೆಲ್ಲ ಇನ್ನೂ ಹೆಚ್ಚು ಕಾಮನ್ ಆಗಬಹುದು!?
**
"ನಾವು ಶಾಂತಿ ಪ್ರಿಯರು. ವಿರೋಧಿ ಬ್ರದರ್ ದೇಶದ ಜೊತೆ ಯುದ್ಧ ಬೇಡ" ಎಂದು ಹೇಳಿದವರು, ಲೋಕಲ್ ಅಧಿಕಾರಿಗಳ ಜೊತೆ ಯುದ್ಧಕ್ಕೆ ನಿಂತ್ರಾ!!? ಅಥವಾ ಯುದ್ಧ ಬೇಕು ಅಂತ ಉಲ್ಟಾ ಹೊಡೆದು, ಇಲ್ಲೇ ತಾಲೀಮು ಶುರು ಮಾಡಿದ್ರಾ!?
**
'ಶಾಸಕಾಂಗದವರ' ಕಪಾಳ ಮೋಕ್ಷ ಆಕ್ರಮಣದಿಂದ ರಕ್ಷಣೆ ಬಯಸುವ 'ಕಾರ್ಯಾಂಗದ' ರಕ್ಷಣಾ ಅಧಿಕಾರಿಗಳು ಇನ್ನು ಮುಂದೆ, ಕ್ರಿಕೇಟ್ ಬ್ಯಾಟ್ಸಮನ್ ಧರಿಸುವ ರೀತಿಯ ಸೇಫ್ಟಿ ಹೆಲ್ಮೆಟ್‌ಗಳನ್ನು ಕೇಳಬಹುದು!? ('ನ್ಯಾಯಾಂಗದ' ಅನುಮತಿಯೊಂದಿಗೆ!?)
**
ವೈರಲ್ ವೀಡಿಯೋದಲ್ಲಿ, ಮಂತ್ರಿಗಳು ಕೈ ಎತ್ತಿದ್ದು ಮತ್ತು ಹಿಂದಿನಿಂದ ಇನ್ನೊಂದು ಸರಕಾರಕ್ಕೆ ದಿಕ್ಕಾರ ಕೂಗಿದ್ದು, ಒಂದಕ್ಕೊಂದು ಲಿಂಕ್ ಆದ ಹಾಗಿದೆ! ಕೈ ಎತ್ತಿದ್ದು ಅಧಿಕಾರಿಗಾದರೂ ಸಾಂಕೇತಿಕವಾಗಿ ಮತ್ತೊಂದು ಸರಕಾರಕ್ಕೆ ಎಂಬಂತಿದೆ!
**
ಮೇಷ್ಟು ಪಾಠ ಮಾಡುವಾಗ ಮಕ್ಕಳಿಗೆ ಹೊಡೆಯುವ ಹಾಗಿಲ್ಲ. (2009 ರ ಶಿಕ್ಷಣ ಹಕ್ಕು ಕಾಯ್ದೆ. ಸೆಕ್ಷನ್ 17 ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವುದನ್ನು ನಿಷೇಧಿಸುತ್ತದೆಯಂತೆ).
ಪಕ್ಕದ ನೇಪಾಳವೂ ಸೇರಿದಂತೆ, ಕೆಲವು ದೇಶಗಳು ಮಕ್ಕಳ ವಿರುದ್ಧ ಕಪಾಳಮೋಕ್ಷ ಮತ್ತು ಎಲ್ಲಾ ರೀತಿಯ ದೈಹಿಕ ಶಿಕ್ಷೆಯನ್ನು ನಿಷೇಧಿಸಿವೆ. ಮನೆಯಲ್ಲಿ ಪೋಷಕರು ಮಕ್ಕಳಿಗೆ ಹೊಡೆದರೆ, ಮಕ್ಕಳು ರಕ್ಷಣಾ ಇಲಾಖೆಗೆ ಕರೆ ಮಾಡಿ ಕಂಪ್ಲೇಂಟ್ ಕೊಡಬಹುದು. ಪೋಷಕರು ಕಂಬಿ ಎಣಿಸಬೇಕಾಗುತ್ತೆ. ಶಿಕ್ಷಕರು, ಪೋಷಕರು ಕಪಾಳಮೋಕ್ಷ ಮಾಡುವ ಹಾಗಿಲ್ಲ. ಆದರೆ, ಕರ್ನಾಟಕದಲ್ಲಿ ಶಾಸಕರು ಕಪಾಳಮೋಕ್ಷ ಅಧಿಕಾರವನ್ನು ಈಗಲೂ ಹೊಂದಿದ್ದಾರಾ!? ಒಂದು ತನಿಖಾ ವರದಿ ಮಾಡಬೇಕು!.
***
ಇನ್ನೂ ಏನೇನೆಲ್ಲ ನಡೆಯಲಿಕ್ಕಿದೆ?
ವ್ಯಂಗ್ಯ ಚಿತ್ರಕಾರರಿಗೆ ರುಚಿಕಟ್ಟಾದ ವ್ಯಂಗ್ಯಚಿತ್ರಗಳ ಅಡಿಗೆ ಬಡಿಸುವ ಅವಕಾಶ!!! ಓದುಗರಿಗೆ ನಗುವಿನ ವಾತ(ವರಣ) ಹೆಚ್ಚಿಸುವ ಸುಗ್ರಾಸ ಭೋಜನ!
(ಇದೊಂದು ವಿಡಂಬನಾ ಬರಹ ಅಷ್ಟೆ. ಯಾರೂ ಸೀರಿಯಸ್ಸಾಗಿ 'ಕಪಾಳಮೋಕ್ಷ' ಮಾಡಬೇಡಿ!! ನಿನ್ನೆ ಸಹಜವಾಗಿ ಹುಳುಕಾದ ಹಲ್ಲೊಂದನ್ನು ಕೀಳಿಸಿಕೊಳ್ಳಲಾಗಿದೆ!)
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ