ಯಕ್ಷಗಾನದಿಂದ ಸನಾತನ ಸಂಸ್ಕೃತಿ ಪ್ರಸಾರ: ಎಂ.ಎ. ರಾಮಚಂದ್ರ

Upayuktha
0



ಬೆಂಗಳೂರು: ಯಕ್ಷಗಾನ ಕಲೆಯ ಮೂಲಕ ನಮ್ಮ ಸನಾತನ ಸಂಸ್ಕೃತಿ ಪ್ರಸರಣಗೊಳ್ಳುತ್ತದೆ  ಹಾಗೂ ರಾಮಾಯಣ, ಮಹಾಭಾರತದ ಕಥಾನಕಗಳ ಮೌಲ್ಯಗಳು ನಮ್ಮ ಜನಜೀವನವನ್ನು ತಲುಪುತ್ತದೆ ಎಂದು ಸಂಸ್ಕಾರ ಭಾರತಿ ಪ್ರಾಂತ ಸಂಘಟನಾ ಕಾರ್ಯದರ್ಶಿ ರಾಮಚಂದ್ರ ಎಂ.ಎ. ಅಭಿಪ್ರಾಯಪಟ್ಟಿದ್ದಾರೆ.


ಅವರು, ಸೋಮವಾರ, ಬೆಂಗಳೂರು ಗಿರಿನಗರದ ರಾಮಾಶ್ರಮದಲ್ಲಿ ಕರ್ನಾಟಕ ಕಲಾದರ್ಶಿನಿ ಸಂಸ್ಥೆಯ ಮಕ್ಕಳ ಯಕ್ಷಗಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.


"ಕಲೆಯನ್ನು ಪೋಷಿಸಿ ಉಳಿಸುವುದರಿಂದ ಸಂಸ್ಕೃತಿ ಉಳಿಯುತ್ತದೆ ಹಾಗೂ ನಮ್ಮ ಸಂಸ್ಕಾರವೂ ಹೆಚ್ಚುತ್ತದೆ," ಎಂದ ಅವರು, "ಯಕ್ಷಗಾನದಲ್ಲಿ ಮೇರು ಪ್ರತಿಭೆಗಳು ಮೆರೆದುಹೋಗಿದ್ದಾರೆ, ಮೆರೆಯುತ್ತಿದ್ದಾರೆ. ಅವರೆಲ್ಲರೂ ಈ ಬಾಲಕಲಾವಿದರ ಮೂಲಕ ಮತ್ತೆ ಕಾಣಿಸಿಕೊಂಡಂತೆ ತೋರುತ್ತಿದೆ," ಎಂದು ಅಭಿಪ್ರಾಯಪಟ್ಟರು.


ಗಿರಿನಗರ ರಾಮಾಶ್ರಮದ ರಾಮಸೇವಾ ಸಮಿತಿ ಅಧ್ಯಕ್ಷ ರಮೇಶ್‌ ಹೆಗಡೆ, ಕಾರ್ಯದರ್ಶಿ ವಾದಿರಾಜ ಸಾಮಗ, ಸಿರಿಗನ್ನಡ ವೇದಿಕೆಯ ಉಮೇಶ್‌  ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದರು.


ಈದೇ ಕಾರ್ಯಕ್ರಮದಲ್ಲಿ ಬಾಲಕಲಾವಿದರಿಂದ ʼವೀರ ವೃಷಸೇನ" ಮತ್ತು ಸಮುದ್ರಮಥನ ಎಂಬ ಯಕ್ಷಗಾನ ಪ್ರಸಂಗಗಳನ್ನು ಬಾಲಕಲಾವಿದರು ನಡೆಸಿಕೊಟ್ಟರು.  ಈ ಪ್ರಸಂಗಗಳನ್ನು ಕರ್ನಾಟಕ ಕಲಾದರ್ಶಿನಿಯ ಯಕ್ಷ ಗುರು ಶ್ರೀನಿವಾಸ ಸಾಸ್ತಾನ ಅವರು ನಿರ್ದೇಶಿಸಿದ್ದರು.


ಮಹಾಭಾರತ ಕಥಾನಕದಲ್ಲಿ ಬರುವ ಕರ್ಣನ ಪುತ್ರ ವೃಷಸೇನ, ಕೌರವ ಸೇನೆಯ ಪರವಾಗಿ ಹೋರಾಡುವ ವೀರ ಬಾಲಕ. ಭೀಮಸೇನನ ಗರ್ವಭಂಗ ಮಾಡುವ ಉದ್ದೇಶದಿಂದ ಕೃಷ್ಣ ನೇಪಥ್ಯದಲ್ಲಿ ಈ ಯುದ್ಧಕ್ಕೆ ಕಾರಣನಾಗುತ್ತಾನೆ. ಕೊನೆಗೆ ಅರ್ಜುನ ಶರಕ್ಕೆ ಆಹುತಿಯಾಗುವ ಈ ಪ್ರಸಂಗವನ್ನು ಬಾಲಕ-ಬಾಲಕಿಯರು ಅಭಿನಯಿಸಿದರು.


ಇನ್ನೊಂದು ಪೌರಾಣಿಕ ಪ್ರಸಂಗವಾದ ಸಮುದ್ರಮಥನದಲ್ಲಿ ದೇವೇಂದ್ರನ ಗರ್ವಭಂಗವಾಗುವುದು, ಋಷಿ ಶಾಪದಿಂದ ಸಂಪತ್ತು ಕಳೆದುಕೊಂಡು ರಾಕ್ಷಸ ರಾಜ ಬಲಿಯ ಸೇವೆ ಮಾಡುವುದು, ಕೊನೆಗೆ ವಿಷ್ಣುವಿನ ಉಪಾಯದಂತೆ ರಕ್ಕಸರ ಜತೆ ಸೇರಿ ಸಮುದ್ರಮಥನ ಮಾಡುವುದು, ಹಾಲಾಹಲವನ್ನು ಶಿವ ನುಂಗಿ ವಿಷಕಂಠನಾಗುವುದು, ಲಕ್ಷೀ -ವಿಷ್ಣುವನ್ನು ವರಿಸುವುದು, ಕೊನೆಗೆ ಸಿಗುವ ಅಮೃತವನ್ನು ರಾಕ್ಷಸರು ಕಸಿದಾಗ, ಮತ್ತೆ ವಶಪಡಿಸಲು ವಿಷ್ಣು- ಮೋಹಿನಿಯ ರೂಪ ತಾಳಿ ಬರುವುದು, ಕೊನೆಗೆ ಅಮೃತ ದೇವತೆಗಳ ಪಾಲಾಗುವುದು.. ಹೀಗೆ ಪ್ರತಿಯೊಂದು ಅಂಶಗಳನ್ನು ಬಾಲಕಲಾವಿದರು ಯಕ್ಷ ವೇಷಧಾರಿಗಳಾಗಿ ಅಭಿನಯಿಸಿದರು.


ಮುಮ್ಮೇಳದಲ್ಲಿ ಬಾಲಕಲಾವಿದರಾದ  ಶ್ರೇಯಸ್‌ ಸರಳಾಯ, ಆಭಿಶ್ರೀ ಶ್ರೀಹರ್ಷ, ಧೃತಿ ಅಮ್ಮೆಂಬಳ, ಸೃಷ್ಟಿ ಚೇತನ್‌ ಜಯಂತ್‌, ಕೃಷ್ಣ ಭಟ್‌, ಸಾಯಿ ಸದ್ಗುಣ್‌ ಶೆಟ್ಟಿ, ಸಾಯಿ ಪ್ರಣಾಮ್‌ ಶೆಟ್ಟಿ, ಶ್ರೇಷ್ಠ ಚೇತನ್‌ ಜಯಂತ್‌, ಕೃತಿ ಅಮ್ಮೆಂಬಳ, ಆಯುಷ್‌ ಎಸ್‌, ಇಶಾನಿ ಎಸ್‌, ಶ್ರೀವತ್ಸ ಸರಳಾಯ, ಅಗಸ್ತ್ಯ ಎಸ್. ರಾವ್‌, ಬಿ.ಎಸ್.‌ ಶ್ರವಣ್‌ ಕಾರಂತ್‌, ಸಚಿತ್‌ ಭಟ್‌ ಪಾತ್ರಧಾರಿಗಳಾಗಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ರಾಮಚಂದ್ರ ಆಚಾರ್ಯ, ಮೃದಂಗದಲ್ಲಿ ನರಸೀಹ ಆಚಾರ್‌ ಮತ್ತು ಗೌತಮ್‌ ಸಾಸ್ತಾನ್‌, ಚಂಡೆ ವಾದಕರಾಗಿ ಸುಬ್ರಹ್ಮಣ್ಯ ಎಂ ಭಾಗವಹಿಸಿದ್ದರು.


ಕಾರ್ಯಕ್ರಮದ ನಿರೂಪಣೆಯನ್ನು ಡಾ. ಸುಪ್ರೀತಾ ಗೌತಮ್‌, ಭಾರ್ಗವಿ ಶ್ರೀ ಹರ್ಷ ನಡೆಸಿಕೊಟ್ಟರೆ, ನಿರ್ವಹಣೆಯನ್ನು ಗೌತಮ ಸಾಸ್ತಾನ ನಡೆಸಿಕೊಟ್ಟರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top