ಅಧ್ಯಾತ್ಮ: ಬ್ರಹ್ಮಾಂಡದ ಬೀಜಸ್ವರೂಪಿ ದೇಹ...!

Upayuktha
0


ಒಂದು ಸಾಮಾನ್ಯ ಹೇಳಿಕೆಯುಂಟು, ಅಧ್ಯಾತ್ಮ ಜಗತ್ತಿನಲ್ಲಿ: 'ಬ್ರಹ್ಮಾಂಡದಲ್ಲೇನಿದೆಯೋ ಅದುವೇ ಪಿಂಡಾಂಡದಲ್ಲಿಯೂ ಇದೆ...!' ಎಂಬುದಾಗಿ. ಬ್ರಹ್ಮಾಂಡವೆಂದರೆ ಹೊರಗಿನ ದೃಷ್ಟಿಗೆಲ್ಲವೂ ಗೊಚರವಾಗಿರುವಂತಹದ್ದು, ಮತ್ತು ಸಮಸ್ತವೆಲ್ಲವನ್ನೂ ಒಳಗೊಂಡು ಆವರಿಸಿಕೊಂಡಿರುವುದು, ಎಂದೆನ್ನುವ ಒಂದು ಅನುಭವದ ಅನಿಸಿಕೆ ಇದೆ. ಪಿಂಡಾಂಡ ಎಂದರೆ, ಸೃಷ್ಟಿ ಮುಂದುವರೆಯಲು ಅದರ ಅಂಶಗಳನ್ನೆಲ್ಲ ಒಳಗೊಂಡ ಒಂದು ಬೀಜಸ್ವರೂಪಿ,- ಆಲದಮರವೇ ಅದರ ಬೀಜದಲ್ಲಿರುವಂತೆ.  ನೈಸರ್ಗಿಕವಾಗಿ, ಎರಡು ಅಪೂರ್ಣಾಂಶಗಳು ಸೇರಿ ಒಂದು ಪೂರ್ಣಾಂಶದ ಬೀಜ ಜೀವದ ಉದ್ಭವ, ಉತ್ಪತ್ತಿಯ ಅಂಕುರವಾಗುತ್ತದೆ. ಇದೇ ಬೆಳೆದು ದೊಡ್ಡದಾದಂತೆ, ಅದರಲ್ಲಿಯೂ ಪೂರ್ಣಾಂಶದ ಅಭಿವ್ಯಕ್ತನೆ ಗೋಚರವಾಗುತ್ತದೆ.


ಜೀವದ ಮನೆಯಾದ ದೇಹವೂ ಪೂರ್ಣವಾಗಿಯೇ ಬಂದುದಾಗಿದ್ದು, ಅದರ ಬೆಳವಣಿಗೆಯು ಪೂರ್ಣತ್ವದ ಸ್ಥಿತಿಯಲ್ಲಿ ಒಳಗಿನಿಂದಲೇ ವಿಸ್ತಾರಗೊಳ್ಳುತ್ತ ಬರುತ್ತದೆ. ಎರಡು ಅಪೂರ್ಣಾಂಶಗಳು ಒಳಗಡೆಯೇ ಸೇರಿ ಪೂರ್ಣಗೊಂಡು ಒಂದಾಗಿ ಹೊರಬರುತ್ತದೆ. ಹೀಗಾಗಿ ಒಳಗೆ ನಿರ್ಮಾಣಗೊಂಡ ಪಿಂಡಾಂಡವು, ಹೊರಗಿನ ಬ್ರಹ್ಮಾಂಡದ ಪ್ರತಿರೂಪವೇ ಆಗಿರುತ್ತದೆ. ಕಟ್ಟಡಗಳಂತೆ ಒಳಗಿನಿಂದ ಬಿಡಿಬಿಡಿಯಾಗಿ ರಚಿತವಾಗುತ್ತಾ ಮುಕ್ತಾಯಕ್ಕೆ ಪೂರ್ಣಕಟ್ಟಡ ಗೋಚರವಾಗುವಂತಹದಲ್ಲ ಇದು.


ಇರಲಿ, ಈಗ ಜೀವಿತವಾಗಿರುವ ದೇಹವನ್ನು ಪರಿಶೀಲಿಸುತ್ತಾ ಹೋದಂತೆ, ಅದರಲ್ಲಿ ಹೃದಯಕ್ರಿಯೆಯಿಂದ ರಕ್ತ ಹರಿಯುತ್ತಿರುತ್ತದೆ, ಜೀರ್ಣಾಂಗಗಳು ತಮ್ಮ ಕೆಲಸಗಳನ್ನು ಮಾಡುತ್ತಾ ಶಕ್ತಿ ಪೂರೈಸುತ್ತವೆ, ಪುಪ್ಪುಸಗಳು ಶ್ವಾಸೋಚ್ಛ್ವಾಸದ ತಮ್ಮ ಕ್ರಿಯೆಯಲ್ಲಿ ನಿರತವಾಗಿರುತ್ತವೆ, ವಿಸರ್ಜನಾಂಗಗಳು ದೇಹವ್ಯವಸ್ಥೆಯ ಶುದ್ಧೀಕರಣದಲ್ಲಿ ನಿಮಗ್ನರಾಗಿರುತ್ತವೆ, ಹೀಗೆಯೇ ನೋಡುವಿಕೆ, ಕೇಳುವಿಕೆ, ಮೂಸುವಿಕೆ, ರುಚಿಯ ಸವಿಯುವಿಕೆ, ಸ್ಪರ್ಶನದ ಅನುಭವಿಸುವಿಕೆ ಮುಂತಾದ ಕ್ರಿಯೆಗಳು, ಅದಕ್ಕೆ ನಿರ್ದೇಶಿತವಾದ ಅಂಗಾಂಗಗಳಿಂದ ಮುಂದುವರೆಯುತ್ತಾ ಅದೊಂದು ದೊಡ್ಡ ವ್ಯವಸ್ಥೆಯ ಗೂಡಾಗಿರುತ್ತದೆ, ಮನೆಯಾಗಿರುತ್ತದೆ.


ಇದರಂತೆಯೇ, ಹೊರಗೆ ನೋಡಿದರೆ, ಸೂರ್ಯ ಶಾಖ-ಬೆಳಕು ಕೊಡುತ್ತಿರುತ್ತಾನೆ, ಪೃಥ್ವಿ, ಗ್ರಹ ನಕ್ಷತ್ರಗಳು ತಮಗೆ ನಿರ್ದೇಶಿತವಾದ ಕಾರ್ಯಗಳನ್ನು ಯಾವುದೇ ಬಗೆಯ ಊನ, ತೊಡಕುಗಳಾಗದಂತೆ ಮಾಡುತ್ತಿರುತ್ತವೆ. ವಾಯುಸಂಚಲನ ನಡೆದಿರುತ್ತದೆ, ಮಳೆ ಬರುತ್ತದೆ, ನೀರು ಹರಿಯುತ್ತದೆ, ಅಗ್ನಿ ಪ್ರಜ್ವಲಿಸುತ್ತದೆ, ಭೂಕಂಪನಗಳಾಗುತ್ತವೆ, ಅಗ್ನಿಪರ್ವತ ಸಿಡಿಯುತ್ತವೆ, ರೋಗರುಜಿನಗಳು ಹರಡುತ್ತವೆ, ಕ್ರಿಯೆ-ಪ್ರತಿಕ್ರಿಯೆಗಳು ಸಾಗುತ್ತಿರುತ್ತವೆ...!


ಅಂತರ್ಯದಲ್ಲಿ ದೇಹದ (ಪಿಂಡಾಂಡದ) ಚಲಾವಣೆಗೋಸ್ಕರ ಯಾವೆಲ್ಲಾ ಕ್ರಿಯೆಗಳು ನಡೆಯುತ್ತಿರುತ್ತವೆಯೋ ಅವೆಲ್ಲವು ಬ್ರಹ್ಮಾಂಡದಲ್ಲಿಯೂ ಕ್ರಿಯೆಗಳ ರೂಪಾಂತರದಿಂದ ಹೊರಗೆ ನಡೆಯುತ್ತಿರುತ್ತವೆ. ಹೀಗಾಗಿ ರಚನಾತ್ಮಕವಾಗಿ, ಕ್ರಿಯಾತ್ಮಕವಾಗಿ ಪಿಂಡಾಂಡ, ಬ್ರಹ್ಮಾಂಡಗಳೆರಡರಲ್ಲೂ ಯಾವುದೇ ಬಗೆಯ ಭೇದವಿರದೇ, ಒಂದು ಮತ್ತೊಂದರ ವಿಸ್ತರಿತ ಅಂಶವಾಗಿರುವಂತೆ, ಮತ್ತೊಂದು ಆ ಒಂದರ ಅಂಶಾತ್ಮಕ ರೂಪವಾಗಿದ್ದೂ ಪೂರ್ಣತ್ವವನ್ನು ಹೊಂದಿರುವುದಾಗಿರುತ್ತದೆ.


ಆದ್ದರಿಂದಲೇ ನಮ್ಮ ಪೂರ್ವಿಕರು ಹೇಳಿದ್ದು: 'ಪೂರ್ಣಮದಃ, ಪೂರ್ಣಮಿದಂ, ಪೂರ್ಣಾತ್ ಪೂರ್ಣಮುದಚ್ಯತೆ, ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ...!' ಎಂದು ಹೇಳಿರುವುದು. ಇದರ ಧ್ಯಾನ, ಮನನ ಮಾಡಿಕೊಂಡು ಅನುಭವಿಸಿ, ಅನುಭಾವಿಸಿ...! ಪೂರ್ಣರಾಗಿರುವ ನಾವು ಪೂರ್ಣತ್ವದಿಂದ ಜೀವನಕ್ರಿಯಲ್ಲಿ ನಿಮಗ್ನರಾಗಿರುವುದೇ ಒಂದು ಸೊಗಸು, ಆನಂದ...!


ಇದನ್ನು 'ಅಪೂರ್ಣಮದಃ ಅಪೂರ್ಣಮಿದಂ.......,' ಎಂದು ಅನ್ವಯಿಸಿಕೊಂಡು ನೋಡಲು, ಅನುಭವಿಸಲು ಆಗುತ್ತದಯೋ ಎಂಬುದನ್ನು ಪರ್ಯಾಲೋಚಿಸಿ...!


- ಕುರಾಜನ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top