'ಈ ಪ್ರಪಂಚವೆಂಬುದು ಒಂದು ಗರಡಿ ಮನೆಯಿದ್ದಂತೆ' ಸ್ವಾಮಿ ವಿವೇಕಾನಂದರ ನುಡಿ. ಹೌದಲ್ವಾ?ಗರಡಿಯಲ್ಲಿ ಸೆಣಸಲೂ ಧಂ ಬೇಕು, ಧೈರ್ಯ ಬೇಕು. ಸುಮ್ಮನೆ ಹೋದವನು ಕೈಕಾಲು ಮುಖಮೂತಿ ಎಲ್ಲವನ್ನೂ ಹೊಡೆಸಿಕೊಂಡು ಆಸ್ಪತ್ರೆಗೆ ಸೇರಬೇಕಾಗಬಹುದು. ನೋವಿನಿಂದ ಸಂಕಟ ಪಡಬೇಕಾಗಬಹುದು. ಗರಡಿಯಲ್ಲಿ ಪಳಗಲು ಅಭ್ಯಾಸ, ಸತತ ಪ್ರಯತ್ನ, ನಿಷ್ಠೆ, ಹಠ, ಛಲ, ಗುರಿ ತಲುಪಿಯೇ ತಲುಪುವೆ ಎನ್ನುವ ಆತ್ಮ ವಿಶ್ವಾಸ ಬೇಕು. ಅದೇ ಇಲ್ಲದವನ ಬದುಕು ಗೋಳೇ ಸರಿ. ಧೈರ್ಯದಿಂದ ಮುನ್ನುಗ್ಗುವ ತರಬೇತಿ, ಮನಸ್ಸು ಎರಡೂ ಬೇಕು. ಮನದ ಸಂಶಯಗಳನ್ನು, ಡೋಲಾಯಮಾನ ಚಿಂತನೆಗಳನ್ನು ಬಿಡಬೇಕು. ನಿರ್ಧಾರ ಮುಖ್ಯ. ಹೇಡಿತನ ಸಲ್ಲದು. ಬಲಿಷ್ಠರಾಗುವುದೇ ಇಲ್ಲಿಯ ಗುರಿ. ಕಾಠಿಣ್ಯತೆಗಳನ್ನು ಒಪ್ಪಿ ಅಪ್ಪಿಕೊಳ್ಳುವ ಮನಸ್ಸಿದ್ದರೆ ಮುಂದೆ ನಡೆಯುವ ದಾರಿ ಸುಗಮವೆನಿಸಬಹುದು. ಧೀರರಾಗಿ, ನೀತಿವಂತರಾಗಿ, ಮಾದರಿಯಾಗಿ ಬೆಳೆದು, ಬೆಳಗುವುದೇ ಜೀವನ.
ಮನಸ್ಸನ್ನು ಬಲಗೊಳಿಸಬೇಕು. ಶಿಸ್ತು ಪ್ರತಿ ಹೆಜ್ಜೆಯಲ್ಲೂ ಕಾಣಬೇಕು. ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸಲು ನಾವು ಹೆದರಬಾರದು. ಉತ್ತಮರ ಸ್ನೇಹ ನಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಬಹುದು. ಕಷ್ಟ-ನಷ್ಟಗಳಿಗೆ ಸಹಕರಿಸುವವರು ಬಾಳ ಹಾದಿಯಲ್ಲಿರಬೇಕು. ಜೊತೆಗೆ ಸದೃಢ ಮನ ನಮ್ಮದಾದರೆ, ಯಾವುದೇ ನೋವಿಗೂ ಹೆದರುವ ಪ್ರಸಂಗ ಬಾರದು. ಬದುಕೆಂಬ ಸಾಗರದಿ ಅಪ್ಪಳಿಸುವ ಅಲೆಗಳಿಗೆ ಅಂಜದೆ, ಎಲ್ಲವನ್ನೂ ನಿಭಾಯಿಸುವೆನೆಂಬ ಆತ್ಮವಿಶ್ವಾಸದಿಂದ ಒಟ್ಟಾಗಿ ಬದುಕಲು ಕಲಿಯೋಣ.
-ರತ್ನಾ ಕೆ ಭಟ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ