ಉತ್ತರ ಕರ್ನಾಟಕದ ಪ್ರಥಮ ದೇವಸ್ಥಾನವೆಂಬ ಹೆಗ್ಗಳಿಕೆಯ ಹುಬ್ಬಳ್ಳಿಯ ಶ್ರೀ ಧನ್ವಂತರಿ ದೇವಸ್ಥಾನ

Upayuktha
0

ಗವಂತನು ದೇಶ, ಕಾಲಮಾನಕ್ಕನುಗುಣ ವಾಗಿ ತನ್ನ ಭಕ್ತರನ್ನು ಉದ್ಧರಿಸಲು ದಶಾವತಾರಗಳನ್ನು ತಾಳಿದ ವಿಷಯ ನಮಗೆಲ್ಲ ಚಿರಪರಿಚಿತ. ಅದೇ ರೀತಿಯಿಂದ ಶ್ರೀಹರಿಯ ಪೂರ್ಣವಾದ ಹನ್ನೆರಡನೆಯ ಅವತಾರವೇ ಶ್ರೀ ಧನ್ವಂತರಿ. ದೇವತೆಗಳ ರಾಜನಾದ ಇಂದ್ರ & ಬಲಿ ಚಕ್ರವರ್ತಿ ಮತ್ತಿತರ ದೇವ ದಾನವರು ಸಮುದ್ರ ಮಂಥನಕ್ಕೆ ಸಿದ್ಧರಾಗುವ ಕಥೆಯು ನಮಗೆ ಪುರಾಣಗಳಿಂದ ತಿಳಿದುಬರುತ್ತದೆ.


ವಾಸುಕಿ ಶೇಷನನ್ನು ಹಗ್ಗವಾಗಿ,ಮಂದರ ಪರ್ವತವನ್ನು ಕಡಗೋಲನ್ನಾಗಿ ಮಾಡಿ ಕ್ಷೀರಸಾಗರದಲ್ಲಿ ಗರಿಕೆ, ಔಷಧಿಗಳನ್ನು ಹಾಕಿ ಅಜಿತನಾಮಕ ಪರಮಾತ್ಮನ ಸಹಿತವಾಗಿ ದೇವತೆಗಳು ಶೇಷನ ಬಾಲವನ್ನು ಹಿಡಿದರೆ ದೈತ್ಯರು ಹೆಡೆಯನ್ನು ಹಿಡಿಯುತ್ತಾರೆ. ಮಂಥನವು ಪ್ರಾರಂಭವಾಗಿ ಮಂದ್ರ ಪರ್ವತವು ಮುಳುಗಲಾರಂಭಿಸಿತು.


ಆಗ ಭಗವಂತ ಕೂರ್ಮ ರೂಪದಲ್ಲಿ ಅದನ್ನು ಎತ್ತಿ ಹಿಡಿದ, ಇನ್ನೊಂದು ರೂಪದಿಂದ ಪರ್ವತದ ತುದಿಯಲ್ಲಿ ಕುಳಿತ ದೇವದಾನವರಲ್ಲಿ ಹಾಸುಹೊಕ್ಕು ಶಕ್ತಿಯ ರೂಪದಲ್ಲಿ ನಿಂತು ಅಮೃತವು ಬರದೇ ಇದ್ದಾಗ ಅಜಿತ ರೂಪದಿಂದ ಸಮುದ್ರವನ್ನು ತೀವ್ರಗತಿಯಲ್ಲಿ ಕಡೆದಾಗ ವಾಸುಕಿ ಶೇಷನ ಸಾವಿರ ಬಾಯಿಯಿಂದ ಹಾಲಾಹಲ ವಿಷಾಗ್ನಿ ಹೊರಬಿದ್ದಾಗ  ಅದನ್ನು ಅಮೃತರಾದ ವಾಯುದೇವರು ಕುಡಿದು ಸ್ವಲ್ಪ ಉಳಿದದ್ದನ್ನ ನಿರ್ವಿಣ್ಣವನ್ನಾಗಿ ಮಾಡಿ ಶಿವನಿಗೆ ಕೊಡುತ್ತಾರೆ. ಅದನ್ನು ಶಿವನು "ಅಚ್ಯುತಾಯ ನಮಃ , ಅನಂತಾಯ ನಮಃ, ಗೋವಿಂದಾಯ ನಮಃ" ಎಂದು ಭಗವಂತನ ನಾಮೋಚ್ಛಾರಣೆ ಮಾಡುತ್ತ  ಆ ವಿಷವನ್ನು ಕುಡಿದು ನೀಲಕಂಠರಾದರು.


ಸಮುದ್ರಮಥನದ ಆರಂಭದಲ್ಲಿ ಕಾಮಧೇನು ಸಿಕ್ಕಾಗ ಅದನ್ನು ಋಷಿಗಳು, ನಂತರ ಉಚ್ಛಶ್ರವಾ ಹೆಸರಿನ ಕುದುರೆಯನ್ನು ಬಲಿಯು, ಐರಾವತವನ್ನು ಇಂದ್ರನು, ಕೌಸ್ತುಭ ಮಣಿಯನ್ನು ಶ್ರೀಹರಿಯು ಸ್ವೀಕರಿಸಿದರು. ತರುವಾಯ ಕಲ್ಪವೃಕ್ಷ, ಅಪ್ಸರಾಸ್ತ್ರೀಯರು ಬಂದರು.


ಶ್ರೀಲಕ್ಷ್ಮೀದೇವಿಯು ರಮಾ ರೂಪದಿಂದ ಪ್ರಾಪ್ತಳಾಗಿ ಶ್ರೀಹರಿಯನ್ನು ವರಿಸಿದಳು. ಹಾಗೆ ಸಮುದ್ರಮಥನವು ಮುಂದುವರೆದಾಗ ಓರ್ವ ಅಲೌಕಿಕ ಪುರುಷ ಪ್ರಕಟವಾದ.ದೀರ್ಘವಾದ ತೋಳುಗಳು, ಶಂಖಕ್ಕೆ ಸಮನಾದ ಕುತ್ತಿಗೆ,ರಕ್ತದ ಕಣ್ಣಂಚು, ನೀಳವಾದ ದೇಹದ ಬಣ್ಣ, ಕೊರಳಲ್ಲಿ ಮಾಲೆ, ವಿವಿಧ ಆಭರಣಗಳು, ಪೀತಾಂಬರ, ಕಿವಿಯಲ್ಲಿ ಕುಂಡಲಿಗಳು, ಅಗಲವಾದ ಎದೆ, ಗುಂಗುರು ಕೂದಲುಗಳು ಹೀಗೆ ಅನುಪಮ ಸುಂದರನಾದ ಅವನ ಕೈಯಲ್ಲಿ ಅಮೃತದ ಕಲಶವಿತ್ತು, ಇವನೇ ದೇವ ಧನ್ವಂತರಿ.


ಇವನು ಭಾದ್ರಪದ ಶುದ್ಧ ತೃತೀಯಾದಂದು ಅವತರಿಸಿದ ಕಾರಣ ಅಂದು ಧನ್ವಂತರಿ ಜಯಂತಿಯನ್ನು ಆಚರಿಸಲಾಗುತ್ತದೆ. ಧನ್ವಂತರಿಯ ಕೈಯಲ್ಲಿದ್ದ ಅಮೃತದ ಕಲಶವನ್ನು ದೈತ್ಯರು ಕಸಿಯಲು ಪ್ರಯತ್ನಿಸಿದಾಗ ಶ್ರೀಹರಿಯು ಮೋಹಿನಿರೂಪದಿಂದ ಬಂದು ಆ ಅಮೃತವನ್ನು ದೇವತೆಗಳಿಗೆ ಹಂಚುತ್ತಾನೆ. ದಾನವರು ಈ ಸಮುದ್ರ ಮಥನದಲ್ಲಿ ಕಷ್ಟಪಟ್ಟರೂ ಅವರಿಗೆ ಭಗವಂತನ ಕೃಪಾಕಟಾಕ್ಷ ಇಲ್ಲದ್ದರಿಂದ ಅಮೃತ ದೊರಕಲಿಲ್ಲ. 


ನಮ್ಮ ಜೀವನದಲ್ಲೂ ಕೂಡ ಮನಸ್ಸು ಅನ್ನುವ ಸಮುದ್ರದಲ್ಲಿ ಮಥನ ನಡೆಯುತ್ತ ಇರುತ್ತದೆ. ಇದರಿಂದ ವಿಷ ಮತ್ತು ಅಮೃತ ಎರಡನ್ನೂ ಪಡೆಯುತ್ತೇವೆ.  ನಮ್ಮ ದೇಹದಲ್ಲಿರುವ ನಾಡಿ ಚಕ್ರಗಳಲ್ಲಿದ್ದುಕೊಂಡು ಅಮೃತವನ್ನು ಸುರಿಯುತ್ತಿರುವ ಶ್ರೀ ಧನ್ವಂತರಿಯು ಎಲ್ಲರ ಆರೋಗ್ಯಕ್ಕೆ ಮುಖ್ಯಾಧಾರನಾಗಿದ್ದಾನೆ. 


ಎಲ್ಲ ವೈದ್ಯಕೀಯ ಶಾಸ್ತ್ರಗಳಿಗೆ ಆಧಾರನಾದ, ಎಲ್ಲರ ದೇಹದಲ್ಲಿದ್ದು ರಕ್ಷಿಸುವ ಧನ್ವಂತರಿಯು ಆಯುರ್ವೇದದ ಪ್ರವರ್ತಕನಾದನು. ಈ ದೇವರ ದೇವಸ್ಥಾನಗಳು ಅತಿವಿರಳ, ಇಂತಹದೊಂದು ಧನ್ವಂತರಿ ದೇವಸ್ಥಾನವು ನಮ್ಮ ಹುಬ್ಬಳ್ಳಿಯಲ್ಲಿರುವುದು ಹೆಮ್ಮೆಯ ವಿಷಯ.


ಉತ್ತರ ಕರ್ನಾಟಕದಲ್ಲಿಯೇ ಇದು ಧನ್ವಂತರಿಯ ಪ್ರಥಮ ದೇವಸ್ಥಾನವಾಗಿದ್ದು ಇಂತಹ ದೇವಸ್ಥಾನವನ್ನು ಕಟ್ಟಲು ಶ್ರೀ ರಾಮಚಂದ್ರ ಜಹಾಗೀರದಾರಿಗೆ ಪ್ರೇರಣೆಯಾಗಿದ್ದು , ಅವರ ಮುತ್ತಜ್ಜರಾದ ಅಪರೋಕ್ಷ ಜ್ಞಾನಿಗಳಾದ ಮುಂಢೇವಾಡಿಯ ರಾಮದಾಸರಾಯರು. ಇವರು ಧನ್ವಂತರಿಯ ಉಪಾಸಕರು & ತಿರುಪತಿಗೆ ದಂಡನಮಸ್ಕಾರಪೂರ್ವಕ ಹೋಗಿ ತಿರುಮಲೇಶನ ಪಾದಕಮಲವನ್ನು ಮುಟ್ಟಿ ಭಜಿಸಿದ ಮಹಾಮಹಿಮರು.


ಹುಬ್ಬಳ್ಳಿಯ ಉಣಕಲ್ ಕೆರೆಯ ಬಲದಂಡೆಯಲ್ಲಿರುವ ಈ ದೇವಸ್ಥಾನದಲ್ಲಿನ ವಿಗ್ರಹವನ್ನು ತಂತ್ರಸಾರ ಸಂಗ್ರಹಸಾರೋಕ್ತ ಸಾಲಿಗ್ರಾಮ ಶಿಲೆಯಲ್ಲಿ ಅತೀ ಸುಂದರವಾಗಿ ಕೆತ್ತಲಾಗಿದೆ.ಶ್ರೀ ಧನ್ವಂತರಿ ದೇವರು ಕಮಲ ಪೀಠದ ಮೇಲೆ ನಿಂತಿದ್ದು ನಾಲ್ಕು ಕೈಗಳಲ್ಲಿ ಕ್ರಮಶಃ ಚಕ್ರ,ಶಂಖ, ಅಮೃತ ಕಲಶ & ಔಷಧಲತೆಯನ್ನು ಹಿಡಿದಿದ್ದಾನೆ.


ಶ್ರೀ ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಮಠಾಧೀಶರಾದ ಶ್ರೀ ರಘುವಿಜಯತೀರ್ಥರಿಂದ ಪ್ರತಿಷ್ಠಾಪನೆಗೊಂಡು ಉಡುಪಿಯ ಫಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥರಿಂದ ಪುನರ್ ಪ್ರತಿಷ್ಠಾಪನೆಗೊಂಡಿದೆ.ಈ ದೇವಸ್ಥಾನದಲ್ಲಿ ಸಾಮಾಜಿಕ ಕಾರ್ಯಕ್ರಮಗಳಾದ ಆರೋಗ್ಯಶಿಬಿರ, ಪ್ರಾಣಾಯಾಮ, ಯೋಗ ಶಿಬಿರಗಳು ಹಾಗೂ  ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.


ಧನ್ವಂತರಿಯ ವಾರವಾದ ಭಾನುವಾರದಂದು ರೋಗ ನಿವಾರಣೆಗಾಗಿ ಸಾಮೂಹಿಕ ಜಪ, ಪಾರಾಯಣ, ಹೋಮ ಇತ್ಯಾದಿಗಳು ನಡೆಯುತ್ತವೆ. ಭಾದ್ರಪದ ಶುದ್ಧ ದ್ವಿತೀಯದಂದು ಧನ್ವಂತರಿ ಜಯಂತಿಯನ್ನು ಆಚರಿಸಲಾಗುತ್ತದೆ. ಅಂದು ಧನ್ವಂತರಿ ಗಿಡಮೂಲಿಕೆಗಳಿಂದ ಅಭಿಷೇಕ, ಗಿಡಮೂಲಿಕೆಗಳಿಂದ ಹೋಮವು ವಿಶೇಷವಾಗಿರುತ್ತದೆ.


ಧನತ್ರಯೋದಶಿಯ ದಿನದ ಸಾಯಂಕಾಲ ವಿಶೇಷ ಪೂಜಾದಿಗಳು ನಡೆಯುತ್ತವೆ. ಅಲ್ಲದೇ ಕಾರ್ತಿಕ ದೀಪಾರಾಧನೆಯು ಧನತ್ರಯೋದಶಿಯಿಂದ ಪ್ರಾರಂಭಗೊಂಡು ಮಾರ್ಗಶಿರ ಹುಣ್ಣಿಮೆಗೆ ಕೊನೆಗೊಳ್ಳುತ್ತದೆ. ದೀಪಾವಳಿಯ ಪಾಡ್ಯದಂದು ಸಹಸ್ರ ಶಂಖಾಭಿಷೇಕ, ಅಕ್ಷಯತೃತೀಯದಂದು ಶ್ರೀಗಂಧಲೇಪನ ಮಾಡಲಾಗುವುದು. ಚಿಕ್ಕ ಮಕ್ಕಳ ಬಾಲಾರಿಷ್ಟದೋಷ ಪರಿಹಾರಕ್ಕಾಗಿ ಭಕ್ತರು ಇಲ್ಲಿಗೆ ಬರುವುದು ವಿಶೇಷ. 


ಈ ದೇವಸ್ಥಾನವು ಉಣಕಲ್ಲ ಸಿದ್ದಪ್ಪಜ್ಜನ ಗುಡಿಯ ಹಿಂದುಗಡೆಯಿಂದ ಅರ್ಧ ಕಿ.ಮೀ ದೂರ, ಉಣಕಲ್ಲ ಕೆರೆಯ ದಕ್ಷಿಣ ದಂಡೆಯಲ್ಲಿದೆ. ಲಕ್ಷ್ಮೀನಗರ ಬಸ್ ನಿಂದ ಅಥವಾ ರಾಜೀವ ನಗರದ ಕೊನೆಯ ಬಸ್ ನಿಲ್ದಾಣದಿಂದ ನಡೆದುಕೊಂಡು ಬರಬಹುದು. ಶ್ರೀ ಧನ್ವಂತರಿ ದೇವರು ಎಲ್ಲರಿಗೂ ಆಯುರ್ ಆರೋಗ್ಯ ಕೊಡಲಿ ಎಂದು ಪ್ರಾರ್ಥಿಸೋಣ.

" ಸರ್ವಂ ತೆ ದುರಿತಂ ಛಿನತ್ತು ಭಗವಾನ ಧನ್ವಂತರಿ ಸಂತತಮ್"


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 





Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top