ಹೆದ್ದಾರಿ ಕ್ರಾಸಿಂಗ್ ಕಾಮಗಾರಿ ಅಪೂರ್ಣ: ಸ್ಥಳೀಯರ ಸಂಕಷ್ಟ ಕೇಳುವವರಿಲ್ಲ

Upayuktha
0



ಮಂಗಳೂರು: ಕಣ್ಣಗುಡ್ಡ ನೂಜಿ ಸರಿಪಲ್ಲ ಹೈವೇ ಕ್ರಾಸಿಂಗ್ ಕಾಮಗಾರಿ ಅಪೂರ್ಣಗೊಂಡಿದೆ. ಚುನಾವಣೆ ವೇಳೆ ತ್ವರಿತಗತಿಯಲ್ಲಿ ಸಾಗುತ್ತಿದ್ದ ರಸ್ತೆ ಕಾಮಗಾರಿ, ಬಳಿಕ ಅರ್ಧಕ್ಕೆ ನಿಂತಿದೆ. ರಸ್ತೆ ಅಗೆದು ಜಲ್ಲಿ ಹಾಕಿಸಿ ಹೋದ ಗುತ್ತಿಗೆದಾರ ನಂತರ ಈ ಕಡೆ ಮರಳಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಗುತ್ತಿಗೆದಾರನಿಗೆ, ಇಂಜಿನಿಯರ್‌ಗೆ ಫೋನ್‌ ಮಾಡಿದರೆ ಸ್ವೀಕರಿಸುತ್ತಿಲ್ಲ, ಇದರಿಂದ ನಿವಾಸಿಗಳಿಗೆ ಸಂಚಾರ ಸಂಕಷ್ಟ ಎದುರಾಗಿದ್ದು, ಈ ರಸ್ತೆಯಲ್ಲಿ ಯಾವುದಾದರೂ ದೊಡ್ಡ ವಾಹನ ಬಂದರೆ ಜನಸಾಮಾನ್ಯರೂ ಪಕ್ಕದ ಚರಂಡಿಗೆ ಇಳಿದು ನಿಲ್ಲುವ ಪರಿಸ್ಥಿತಿ ಎದುರಾಗಿದೆ.


ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನಗಳು ಇಲ್ಲಿ ಸಂಚರಿಸುವುದೇ ಒಂದು ದೊಡ್ಡ ಸವಾಲಾಗಿದೆ. ಬೈಕ್ ಸವಾರರು ಸ್ವಲ್ಪ ನಿರ್ಲಕ್ಷ್ಯ ಮಾಡಿದರೆ ಆಸ್ಪತ್ರೆ ಪಕ್ಕಾ ಎನ್ನುವಂತಿದೆ. ರಸ್ತೆಗಳ ತುಂಬಾ ತಗ್ಗು ದಿಣ್ಣೆಗಳು, ರಸ್ತೆಯಲ್ಲಿ ಗುಂಡಿಗಳಿವೆಯೋ, ಗುಂಡಿಯಲ್ಲಿಯೇ ರಸ್ತೆಗಳಿವೆಯೋ ಎನ್ನುವ ಅನುಮಾನ ಕಾಡುತ್ತದೆ.


ಪ್ರತಿನಿತ್ಯ ಈ ದಾರಿಯಲ್ಲಿ ನೂರಾರು ವಾಹನಗಳು ಸಂಚಾರ ನಡೆಸುತ್ತವೆ. ಆದರೂ ರಸ್ತೆ ಕಾಮಗಾರಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲಕರವಾದಂತಿಲ್ಲ. ಕಾಮಗಾರಿ ಆರಂಭವಾದರೂ ಸಹ ಇನ್ನೂ ಪೂರ್ಣಗೊಂಡಿಲ್ಲ. ಜನರು ವಾಹನ ಬಿಟ್ಟು ವಿಮಾನದಲ್ಲಿ ಸಂಚಾರ ನಡೆಸಬೇಕೆ? ಎಂದು ಜನರು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ಈ ರಸ್ತೆಯಲ್ಲಿ ಘಾಟ್ ಇದೆ. ಇಲ್ಲಿ ರಸ್ತೆ ಹಾಗೂ ತಿರುವುಗಳು ಹೊಸ ಸೇತುವೆ ನಿರ್ಮಾಣ, ಕಾರ್ಯ ನಡೆಯದೆ ಇರುವುದರಿಂದ ಮಂಗಳೂರಿನ ಕಡೆಗೆ ವಾಹನ ಕಳಿಸಿದರೆ ಮುಂಗಡವಾಗಿ ಟಯರ್ ಬುಕ್ ಮಾಡಿ ಇಡಬೇಕಾದ ಪರಿಸ್ಥಿತಿ ಇದೆ" ಎಂದು ಸ್ಥಳೀಯರು ರಸ್ತೆಯ ಸ್ಥಿತಿಯ ವಿವರ ನೀಡಿದ್ದಾರೆ. 


ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಚಿವರುಗಳು ದಯಮಾಡಿ ಆ ರಸ್ತೆಯಲ್ಲಿ ತಮ್ಮ (ಖಾಸಗಿ ವಾಹನ) ವಾಹನದಲ್ಲಿ ಸಂಚಾರ ನಡೆಸಿ ರಸ್ತೆಯನ್ನು ಒಮ್ಮೆ ನೋಡಿ ಬರಲಿ. ರಸ್ತೆ ಬಳಕೆ ಮಾಡುವವರ ಮೇಲೆ ಸ್ವಲ್ಪ ಆದರೂ ಇವರಿಗೆ ಕಳಕಳಿ ಇರಲಿ. ರಸ್ತೆ ಅವ್ಯವಸ್ಥೆ ಬಗ್ಗೆ ಏಕೆ ಅವರು ಮಾತನಾಡುತ್ತಿಲ್ಲ" ಎಂದು ಪ್ರಶ್ನೆಮಾಡಿದ್ದಾರೆ.


ಈಗ ಬಾಕಿ ಇರುವ ಕಾಮಗಾರಿಗಳನ್ನು ಯಾವಾಗ ಪೂರ್ಣ ಮಾಡುತ್ತೀರಿ. ಹೊಸ ರಸ್ತೆ ನಿರ್ಮಾಣ ಮಾಡುವ ಬದಲು ಈಗಿರುವ ರಸ್ತೆಯನ್ನು ವಾಹನ ಸವಾರರಿಗೆ ಅನುಕೂಲವಾಗುವಂತೆ ಮಾಡಿ ಎಂದು ಒತ್ತಾಯಿಸಲಾಗಿದೆ. ಕ್ಷೇತ್ರದಲ್ಲಿ ಸಾವಿರಾರು ಕೋಟಿ ಅನುದಾನದ ಕಾಮಗಾರಿಯಾಗಿದೆ ಎಂದು ಬೊಗಳೆ ಬಿಡುವ ಶಾಸಕರು ಇಂತಹ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಹದಗೆಟ್ಟಿರುವ ಬಗ್ಗೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ರೂ ತನಗೂ ಅದಕ್ಕೂ ಸಂಬಂಧವೇ ಇಲ್ಲ ಅನ್ನೋ ಹಾಗೆ ವರ್ತಿಸಿದ್ದಾರೆ ಎಂಬ ಬೇಸರದ ಮಾತು ಸ್ಥಳೀಯರಿಂದ ಕೇಳಿ ಬರುತ್ತಿದೆ.


ದಪ್ಪ ಚರ್ಮದ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬೇಸತ್ತು ಗ್ರಾಮಸ್ಥರೇ ನಾವೇ ರಸ್ತೆ ದುರಸ್ಥಿಗೆ ಮುಂದಾಗಬೇಕೇನೋ ಇಲ್ಲದಿದ್ದರೆ, ಇಲ್ಲಿನ ಶಾಸಕರಾಗಲೀ, ಅಥವಾ ಅಧಿಕಾರಿಗಳಾಗಲೀ ಎಚ್ಚೆತ್ತುಕೊಳ್ಳುತ್ತಾರಾ ಕಾದು ನೋಡ್ಬೇಕಿದೆ ಎಂದು ಕಾಯುತ್ತಿದ್ದಾರೆ. ಇಲ್ಲಿನ ಸ್ಥಳೀಯ ರಾಜಕಾರಣಿಗಳು ಖಾಲಿ ಚುನಾವಣೆಯ ಸಮಯದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮನೆ ಬಾಗಿಲಿಗೆ ಒಂದು ನಮಗೆ ಮತ ನೀಡಿ ಮತ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಾರೆ. ಆದರೆ ಜನಸಾಮಾನ್ಯರಿಗೆ ಈ ರೀತಿ ಓಡಾಟ ನಡೆಸಲು ತೊಂದರೆ ಆದಾಗ ಯಾವ ಪಕ್ಷದ ಅಧಿಕಾರಿಯು ಬಂದು ಹೇಗಿದ್ದೀರಿ ಅಂತ ಕೇಳುವ ಸೌಜನ್ಯ ಅವರಲ್ಲಿ ಇಲ್ಲ, ಇನ್ನೊಮ್ಮೆ ಚುನಾವಣೆ ಸಮೀಪಿಸಲಿ ಆಗ ಅವರು ನಮಗೆ ಮತ ನೀಡಿ ಎಂದು ಮನೆ ಬಾಗಿಲಿಗೆ ಬಂದಾಗ ಚಪ್ಪಲಿ ಸೇವೆ ಮಾಡದೆ ಬಿಡುವುದಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದಕ್ಕೆ ಮುಖ್ಯ ಕಾರಣ ಆ ವೈಜ್ಞಾನಿಕ ಕಳಪೆ ಕಾಮಗಾರಿ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇನ್ನಾದರೂ ಸರಕಾರ ಹಾಗೂ ಮುಖ್ಯ ಜನಪ್ರತಿನಿಧಿಗಳು ಇದರ ಕಾಮಗಾರಿ ಪೂರ್ಣಗೊಳ್ಳುವಂತೆ ಸಹಕರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಇದರಲ್ಲಿ ಯಾವುದೇ ಮತ ಜಾತಿ ಭೇದ ಪಕ್ಷ ಸಂಘಟನೆ ರಾಜಕೀಯ ಮಾಡದೆ ಈ ಕಾಮಗಾರಿಯ ಪ್ರಗತಿಗೆ ನಿಷ್ಪಕ್ಷಪಾತವಾಗಿ ಸಹಕರಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top