ಡಾ. ಸಂದೀಪ್ ಶಾಸ್ತ್ರಿ ಅವರ ನೂತನ ರಾಜಕೀಯ ವಿಶ್ಲೇಷಣಾ ಕೃತಿ ಬಿಡುಗಡೆ

Upayuktha
0


ಬೆಂಗಳೂರು: ‘ಪ್ರತಿಯೊಬ್ಬರೂ ರಾಷ್ಟ್ರ ಹಾಗೂ ರಾಜ್ಯಮಟ್ಟದ ರಾಜಕೀಯ ವಿದ್ಯಮಾನಗಳನ್ನು ಸತ್ಯಕ್ಕೆ ಹತ್ತಿರವಾದ ದೃಷ್ಟಿಕೋನಗಳಿಂದ ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದೆ. ಏಕೆಂದರೆ ಈ ವಿದ್ಯಮಾನಗಳು ನಮ್ಮ ದೇಶದ ಭವಿಷ್ಯವನ್ನು ನಿರೂಪಿಸಬಲ್ಲವು, ಇದರ ಜತೆ ನಮ್ಮ ಕರ್ನಾಟಕ ರಾಜ್ಯದಲ್ಲಿನ ರಾಜಕೀಯ ಆಗುಹೋಗುಗಳನ್ನೂ ಅರಿಯಬೇಕಿದೆ. ಏಕೆಂದರೆ ನಾವು ಇಲ್ಲಿಯೇ ನಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದೇವೆ. ಈಗ ಹೊರಬರುತ್ತಿರುವ ಕೃತಿ ಈ ನಿಟ್ಟಿನಲ್ಲಿ ಸಾಕಷ್ಟು ಹೂರಣ ನೀಡಿ ನಮ್ಮನ್ನು ಮತ್ತಷ್ಟು ಈ ನಿಟ್ಟಿನಲ್ಲಿ ಆಲೋಚಿಸಲು ಪ್ರೇರೇಪಿಸುತ್ತದೆ ಎಂಬ ಭರವಸೆ ನನಗಿದೆ’ ಎಂದು ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ ನುಡಿದರು.


ಅವರು, ರಾಷ್ಟ್ರ ರಾಜಕಾರಣ ಹಾಗೂ ಚುನಾವಣೆಗಳನ್ನು ವಿಶೇಷವಾಗಿ ಅಧ್ಯಯಿನಿಸಿರುವ, ಖ್ಯಾತ ರಾಜಕೀಯ ಶಾಸ್ತ್ರದ ತಜ್ಞ ಪ್ರೊ. ಸಂದೀಪ್ ಶಾಸ್ತ್ರಿ ಅವರು ರಚಿಸಿರುವ ‘ಭಾರತದ ರಾಜಕಾರಣದಲ್ಲಿ ಸಮಕಾಲೀನ ವಿದ್ಯಮಾನಗಳ ಹುಡುಕಾಟ– ರಾಷ್ಟ್ರದ ಅಭಿವೃದ್ಧಿಯ ಮೇಲಣ ಪರಿಣಾಮಗಳು ಮತ್ತು ರಾಜ್ಯಗಳಲ್ಲಿ ಪ್ರಾದುರ್ಭಾವಗೊಳ್ಳುತ್ತಿರುವ ವಿದ್ಯಮಾನಗಳು’ ಕೃತಿಯ ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.


ಈ ಕೃತಿಯಲ್ಲಿ ಪ್ರೊ. ಶಾಸ್ತ್ರಿಯವರು 2022 ರಿಂದೀಚೆಗೆ ಪಾಂಡಿತ್ಯಪೂರ್ಣವಾಗಿ ವಿಶ್ಲೇಷಿಸಿರುವ 65 ಅಗ್ರ ಲೇಖನಗಳಿವೆ. ಚುನಾವಣಾಪೂರ್ವ ಹಾಗೂ ಚುನಾವಣೋತ್ತರ ಸ್ಥಿತ್ಯಂತರಗಳನ್ನು ಅತ್ಯಂತ ವಸ್ತುನಿಷ್ಠವಾಗಿ ಹಾಗೂ ವಿಸ್ತಾರವಾಗಿ ಈ ವಿದ್ವತ್ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ. 


ಇದೇ ಸಂದರ್ಭದಲ್ಲಿ ಕೃತಿಯಲ್ಲಿ ಪ್ರಸ್ತಾಪಿತವಾದ ವಿಷಯಗಳ ಬಗ್ಗೆ ಚರ್ಚಿಸಲು ತಜ್ಞರ ವಿಚಾರ ಗೋಷ್ಠಿಯೊಂದು ಜರುಗಿತು. ರಾಜಕೀಯ ವಿಜ್ಞಾನದ ನಿವೃತ್ತ ಪ್ರಾಧ್ಯಾಪಕ ಡಾ. ಪಿ.ಎಸ್. ಜಯರಾಮು, ಕ್ರೈಸ್ಟ್ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ. ನರೇಶ್ ರಾವ್, ಜೈನ್ ವಿಶ್ವವಿದ್ಯಾಲಯದ ಡಾ. ಪ್ರಿಯಾಂಕ ಮಾಥುರ್ ಹಾಗೂ ಪ್ರಸಿದ್ಧ ವಾಹಿನಿಯೊಂದರ ಹಿರಿಯ ಸಹ-ಸಂಪಾದಕಿ ರೋಹಿಣಿ ಸ್ವಾಮಿ ಅವರು ಪಾಲ್ಗೊಂಡಿದ್ದರು.


ಒಟ್ಟು ಚರ್ಚೆಯ ಸಾರಾಂಶ ಹೀಗಿದೆ: ‘ರಾಜಕೀಯದ ವಿದ್ಯಮಾನಗಳು ಇಂದಿಗೆ ಹೊಸತೆನಿಸಿದರೂ ಅವು ಇತಿಹಾಸದ ಗರ್ಭದಲ್ಲಿ ಎಂದೋ ನಡೆದಿರುವಂತವು ಎಂಬುದು ಸತ್ಯ. ಇತಿಹಾಸ ಮರುಕಳಿಸುತ್ತದೆ ಎಂಬಂತೆ ರಾಜಕೀಯವೂ ಕೂಡ ಮರುಕಳಿಸುತ್ತದೆ. ನಾವು ಬಹಳಷ್ಟು ಸಾಗಬೇಕಿದೆ. ಮಹಿಳಾ ಸಬಲೀಕರಣ, ಲಿಂಗ ಸಮಾನತೆ ಇತ್ಯಾದಿಗಳ ಬಗ್ಗೆ ಪಾರದರ್ಶಕವಾದ ಪ್ರಗತಿ ಇನ್ನೂ ಕಾಣಸಿಗುತ್ತಿಲ್ಲ. ಬಹುಶಃ ಲೇಖಕರು ನಿರೀಕ್ಷಿಸಿರುವಂತೆ ಮುಂಬರುವ ತಲೆಮಾರಿನ ಹೆಣ್ಣುಮಕ್ಕಳು ಯಾರ ಸಹಾಯವೂ ಇಲ್ಲದೆ ಮುನ್ನೆಲೆಗೆ ಬರುತ್ತಾರೆ. ಹಾಗೆಯೇ ರಾಷ್ಟ್ರಗಳ ನಡುವಣ ಸಂಘರ್ಷ, ‘ಮಿಲಿಟರಿ ಕದನ’ದ ಹಂತಕ್ಕೆ ಹೋಗದೆ, ನಿರಂತರವಾಗಿ ಬೇರೆ ರೀತಿ ನಡೆಯುತ್ತಲೇ ಇರುತ್ತದೆ. ಏಕೆಂದರೆ ಮಿಲಿಟರಿ ಯುದ್ಧದ ನಿರರ್ಥಕತೆ ಈಗಾಗಲೇ ಸಂವೇದ್ಯವಾಗಿರುವ ಸಂಗತಿ’.


ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಸ್ವಾಗತಿಸಿದವರು. ‘ವಿಜ್ಞಾನ ಕಂಡುಕೊಳ್ಳುವ ಸತ್ಯ ಯಾವಾಗಲೂ ಪ್ರಯೋಗಾಲಯಗಳಲ್ಲಿ ನಡೆವ ಸಂಶೋಧನೆಯ ಅನ್ವೇಷಣೆಯ ಫಲಶ್ರುತಿ ಯಾಗಿರುತ್ತದೆ, ಆದರೆ ಪ್ರಚಲಿತ ವಿದ್ಯಮಾನಗಳನ್ನು ವಿದ್ವತ್ಪೂರ್ಣವಾಗಿ ವಿಶ್ಲೇಷಿಸುವಾಗ ಅನೇಕ ಸತ್ಯಗಳು ಹಾಗೂ ಆ ಸತ್ಯಗಳ ಒಳಪದರುಗಳು ಬೃಹತ್ತಾಗಿ ಕಾಣಸಿಗುತ್ತವೆ. ಶಾಸ್ತ್ರಿಯವರ ಕೃತಿ ಈ ಕಾರಣದಿಂದಲೂ ಅತ್ಯಂತ ಚೇತೋಹರಿಯಾಗಿದೆ. ಇಲ್ಲಿ ಯಾವುದೇ ಭಾವೋದ್ವೇಗಗಳಿಲ್ಲ. ರೋಚಕ ವಿದ್ಯಮಾನಗಳನ್ನು ಪಾಂಡಿತ್ಯಪೂರ್ಣವಾಗಿ ಹಾಗೂ ವಸ್ತುನಿಷ್ಠವಾಗಿ ವಿಶ್ಲೇಷಿಸುವ ಲೇಖಕರ ಚಮತ್ಕಾರವನ್ನು ಇಲ್ಲಿ ಕಾಣಬಹುದು’ ಎಂದರು.


ಸಮಾರಂಭದಲ್ಲಿ ಡಾ. ಸಂದೀಪ್ ಶಾಸ್ತ್ರಿಯವರ ಅಭಿಮಾನಿಗಳು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top