ಕವನ: ಯುಗದ ಉತ್ಸಾಹ

Upayuktha
0



ಬಸವ ಜಯಂತಿಯಲಿ ಶತಮಾನದಾಚರಣೆ

ಒಸೆದು ಪಡೆವೆವು ನಾವು ನಿಜದಿ ಗುರುಕರುಣೆ || 


ಬಸವಣ್ಣನೇ ಯುಗದ ಉತ್ಸಾಹಕ್ಕೆ ಮೂರ್ತರೂಪ

ಮಾತಿನಲಿ ಕಾರ್ಯದಲಿ ಶುದ್ಧಾಂತಃಕರಣದಲಿ| 

ಬಿದ್ದವರ ಎತ್ತುವನು ಹೊಸಯುಗಕೆ ಒಯ್ಯುವನು 

ಮಾಣಿಕ್ಯದ ದೀಪ್ತಿಯಲಿ ಸ್ಫಟಿಕದ ಶಲಾಕೆಯಲಿ || 


ಕಲಿಯುಗದ ಕಲ್ಪತರು ಸುರಲೋಕ ಪಥದರ್ಶಿ 

ಯುಗಪುರುಷ ಜಗಹರುಷ ಕರುನಾಡ ವರಪುತ್ರ |

ಅರಿತವರ ಅರಿಯವದವರ ಮನದಲ್ಲಿ ನೆಲಸುತ್ತ 

ದೀನದುರ್ಬಲರನ್ನು ಹಿಡಿದೆತ್ತಿ ಹರಸುವ ಮಿತ್ರ || 


ಒಣತತ್ತ್ವ ಒಣಜಂಭ ಪೊಳ್ಳು ಆಶ್ವಾಸಗಳ 

ಕೊಳ್ಳುಕೊಡೆಗಳ ಹರಕೆ ಅಂತರಾಳದ ಮರ್ಮ | 

ಕುರುಡನಿಗು ಹೆಳವನಿಗು ಜೀವನದಿ ಉತ್ಸಾಹ

ಪುಟಿದೆದ್ದು ಹರಿಸುವುದೆ ನಿಜವಾದ ನರಧರ್ಮ || 


ಸತ್ಯ ಅಹಿಂಸೆ ಧರ್ಮ ನ್ಯಾಯ ಪರೋಪಕಾರ 

ಸನ್ನಡತೆಗಳಲಡಗಿಹುದು ಬಸವೇಶ್ವರ ತತ್ತ್ವ | 

ಆಚಾರದೊಳು ನಾಕ ಅನಾಚಾರದೊಳು ನರಕ 

ಪ್ರೀತಿ ವಿಶ್ವಾಸದೊಳು ಶರಣಸಖ ಮಿತ್ರತ್ವ || 


ಪಾಪ ಪುಣ್ಯಗಳೆರಡು ನಮ್ಮ ಕೈಯೊಳಗಿರಲು 

ಸ್ವಾರ್ಥ ಪರಾರ್ಥಗಳು ತೊರೆದು ಹೋಗುವವೆ |

ಪರಚಿಂತೆ ನಮಗೇಕೆ ನಮ್ಮ ಚಿಂತೆಯು ಸಾಲದೆ 

ಹಾಸಿ ಹೊದೆಯಲಿರುವಾಗ ಶಿವಾತ್ಮನಲಿ ಮತ್ಸರವೆ ||


ಮಾನವನು ದಾನವನಾಗೆ ಶರಣಾರ್ಥಿ ನೆಲೆಯೇನು 

ದಾನವನು ಮಾನವನಾಗೆ ಪುರುಷಾರ್ಥ ಗೆಲುವೇನು |

ಶರಣ ಗುರು ಲಿಂಗ ಜಂಗಮರ ಕಾಯಕದ ಬೆಲೆಯೇನು 

ಕರುಣಿ ಕೂಡಲ ಸಂಗಮನ ನಿಜವನರಿಯುವೆಯೇನು ||  


ದೇಹವೇ ದೇಗುಲವಾಗಿ ಜೀವವೇ ಪರಮಾತ್ಮನಾಗೆ 

ಡಂಭಿನಾ ಭಕುತಿಯಲಿ ನಿಲುಕದವ ಶಿವಶರಣ |

ಬೇಕಿಂದು ನಮಗೆಲ್ಲ ಯುಗಪೂರ್ತಿ ಉತ್ಸಾಹ 

ಕರುಣಿಸದೆ ನೆಲೆಯಿಲ್ಲ ದೊರೆವನಕ ಗುರುಚರಣ || 


(ಬಸವ ಜಯಂತಿಯ ಹಾರ್ದಿಕ ಶುಭಾಶಯಗಳೊಂದಿಗೆ)


- ವಿ.ಬಿ.ಕುಳಮರ್ವ, ಕುಂಬ್ಳೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top