ಸಮಾಜವಾದದ ಪರಿಕಲ್ಪನೆ ಮೂಡಿಸಿದ ಯುಗ ಪ್ರವರ್ತಕ ಬಸವಣ್ಣ

Upayuktha
0



ಬೆನ್ನ ಹಿಂದೆ ನೆರಿಕೆಯನ್ನು ಕಟ್ಟಿಕೊಂಡು ಬಗಲಲ್ಲಿ ಆಗ ತಾನೆ ಮಾಡಿದ ಚಮ್ಮಾವುಗೆಗಳನ್ನು ಇಟ್ಟುಕೊಂಡು ಕುಲೀನರ ಬೀದಿಯಲ್ಲಿ ಜೋರಾಗಿ ಕೂಗುತ್ತಾ  ಬಂದ ಆತ ಅವರ ಮನೆಯ ಮುಂದೆ ಬಂದು ಅವ್ವಾರೇ ಎಂದು ಕೂಗಿದ. ಮನೆಯ ಯಜಮಾನಿ ಹೊರ ಬಂದು ತನ್ನ ಪುಟ್ಟ ಮಗ ಬಸವನನ್ನು ಕರೆದು ಹೊಲೆಯರಾತ ಆಗ ತಾನೆ ಕೆಳಗೆ ಇಟ್ಟ ಚಪ್ಪಲಿಗಳಿಗೆ ನೀರನ್ನು ಹಾಕಿ ಒಳಗೆ ತೆಗೆದುಕೊಳ್ಳಲು ಮಗನಿಗೆ ಹೇಳಿದಳು. ತಾಯಿ ಹೇಳಿದಂತೆ ಚಪ್ಪಲಿಗಳಿಗೆ ನೀರನ್ನು ಹಾಕಿ ಒಳಗೆ ತೆಗೆದುಕೊಂಡ ಬಾಲಕನ ಮನಸ್ಸಿನಲ್ಲಿ ಯೋಚನೆಗಳ ಮಂಥನ ನಡೆಯುತ್ತಿತ್ತು.

ಮಗ ತಾಯಿಯನ್ನು ಪ್ರಶ್ನಿಸಿದ ಅವ್ವ ಅವನೇಕೆ ಹಾಗೆ ಕೂಗುತ್ತಾ ಬಂದ? ಬೆನ್ನ ಹಿಂದೆ ನೆರಿಕೆ ಕಟ್ಟಿಕೊಂಡಿರುವುದೇಕೆ? ಅವರು ಹೊಲೆಯರು ಮಗಾ... ಕಪ್ಪು ಕಡಿ ತಿನ್ನುವ ಜನ.ಊರೊಳಗೆ ಬರುವಂತಿಲ್ಲ, ಅಕಸ್ಮಾತ್ ಬಂದರೂ ಅವರ ನೆರಳು ಅವರ ಕಾಲಡಿ ಬೀಳುವಂತಹ ಏರುಬಿಸಿಲಿನ ಹೊತ್ತಿನಲ್ಲಿ ಮಾತ್ರ ಬರಬೇಕು. ಕೂಗುತ್ತಾ ಬರುವುದು ಇಲ್ಲವೇ ಗಂಟೆ ಕಟ್ಟಿಕೊಂಡು ಬರುವ ಮೂಲಕ ಮಡಿವಂತರು ಮನೆಯ ಹೊರ ಬರದಂತೆ ಎಚ್ಚರಿಸುವುದಕ್ಕೆ ಮತ್ತು ಅವರ ಹೆಜ್ಜೆಯ ಗುರುತು ಅಳಿಸಿ ಹಾಕಲು ಅವರು ಹಾಗೆ ಬೆನ್ನಿಗೆ ನೆರಿಕೆ ಕಟ್ಟಿಕೊಂಡಿರುತ್ತಾರೆ ಎಂದು ತಾಯಿ ಮಗನಿಗೆ ತಿಳಿಹೇಳಿದಳು.


ಅವರಾ ಹೊಲೆಯರು! ಎಂದು ಮಗ ಕೇಳಿದ. ಅವರು ದನದ ಚರ್ಮದಿಂದ ಚಪ್ಪಲಿ ಮಾಡುವ ಅವರು ಹೊಲೆಯರು ಎಂದಾದರೆ ಆ ಚಪ್ಪಲಿಗಳನ್ನು ಮೆಡುವ ನಾವು ಹೇಗೆ ಕುಲೀನರಾಗುತ್ತೇವೆ ಅವ್ವ ಎಂದು ಮಗ ಪ್ರಶ್ನಿಸಿದಾಗ ಆ ತಾಯಿ ಉತ್ತರಿಸಲಾಗದೆ ದಿಗ್ಬಮೆಯಿಂದ ನಿಂತಳು.


 ಎಂಟು ಶತಮಾನಗಳ ಹಿಂದೆ ಹೀಗೆ ಜಾತಿಯ ಕುರಿತು ಮಾತನಾಡಿದ ವ್ಯಕ್ತಿ ಮುಂದೆ ವಚನಗಳ ಸರಳ ಅಭಿವ್ಯಕ್ತಿಯ ಮೂಲಕ ವಚನ ಭಂಡಾರಿಯಾಗಿ, ಸ್ತ್ರೀ ಪುರುಷ ಸಮಾನತೆಯ ಸಮ ಸಮಾಜವನ್ನು ಕಟ್ಟುವ ಕ್ರಾಂತಿಕಾರಿಯಾಗಿ ಅನುಭವ ಮಂಟಪದ ಮೂಲಕ ಜಗತ್ತಿನ ಮೊತ್ತ ಮೊದಲ ಸಂಸತ್ತನ್ನು ನಿರ್ಮಿಸಿದ ಧೀಮಂತ ಪುರುಷನಾಗಿ ವಿಶ್ವಗುರುವಾದ ಬಸವಣ್ಣ.

 ಕಾರ್ಲ್ ಮಾರ್ಕ್ಸ್ ನಿಗಿಂತ ಎಷ್ಟೋ ಶತಮಾನಗಳ ಮುಂಚೆಯೇ ಸಮಾಜವಾದದ ಪರಿಕಲ್ಪನೆಯನ್ನು ಮೂಡಿಸಿದ ಬಸವಣ್ಣ ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿ ಇಡೀ ಜಗತ್ತಿನಲ್ಲಿ ತನ್ನ ಪ್ರಖರ ಜ್ಞಾನ ಸುಧೆಯನ್ನು ಹರಿಸಿದ ಅಸೀಮ ವ್ಯಕ್ತಿ.


 ಹುಟ್ಟಿದ್ದು ಕುಲೀನ ಮನೆತನದಲ್ಲಾದರೂ ಬಸವಣ್ಣನವರು ಸಾಮಾಜಿಕ ಮೇಲು-ಕೀಳುಗಳನ್ನು ಪ್ರಶ್ನಿಸಿದರು. ನಾವು ನಡೆಯುವ ನೆಲ, ಕುಡಿಯುವ ನೀರು,ಸೇವಿಸುವ ಗಾಳಿ, ನಮ್ಮ ದೇಹದಲ್ಲಿ ಹರಿಯುವ ರಕ್ತ ಎಲ್ಲವೂ ಒಂದೇ ಇರುವಾಗ ಅದು ಹೇಗೆ ನಾವು ಮೇಲು ಕೀಳು ಎಂದು ವಿಭಜಿಸಬೇಕು. ಹೊಲಸು ತಿಂಬುವನೇ ಮಾದಿಗ ಸದಾಚಾರ ಸನ್ನಡತೆಗಳನ್ನು ಹೊಂದಿರುವಾತನೇ ಕುಲೀನ ಎಂದು ಬಸವಣ್ಣನವರು ಹೇಳಿದರು. ಬ್ರಾಹ್ಮಣ ಯುಗದಲ್ಲಿ ವೇದೋಪನಿಷತ್ತುಗಳಲ್ಲಿ ಅಡಕವಾಗಿರುವ ಅತ್ಯುನ್ನತವಾದ ತತ್ವಗಳನ್ನೆಲ್ಲಾ ಮರೆತು ಕೇವಲ ಬಾಹ್ಯಾಚಾರಗಳಲ್ಲಿ ಹೆಮ್ಮೆಪಟ್ಟುಕೊಂಡ ಸಮಯದಲ್ಲಿ ಬಾಹ್ಯ ಆಚಾರಗಳು ಮೇಲು ಕೀಳು ಗಳೆಂಬ ಅಸಮಾನತೆಗೆ ಎಡೆ ಮಾಡಿಕೊಟ್ಟವು. ಜಾತಿ ಪದ್ಧತಿಯು ಚತುರ್ವರ್ಣಗಳಿಗೆ ದಾರಿ ಮಾಡಿದವು ಪುರೋಹಿತಶಾಹಿ ವ್ಯವಸ್ಥೆ ತಲೆಯೆತ್ತಿಸಮಾಜದ ಉಳಿದ ವರ್ಗದವರು ಇದಕ್ಕೆ ತಲೆ ಬಾಗಿದರು. ಆದರೆ ಇದರ ವಿರುದ್ಧ 'ಮಾನವ ಜಾತಿ ತಾನೊಂದೇ ವಲಂ' ಎಂದು ಹೇಳುವ ಬಸವ ತತ್ವ ಕೇವಲ ಸಿದ್ದಾಂತವಲ್ಲ ಅದೊಂದು ಕ್ರಾಂತಿಕಾರಿ ತತ್ವ.... ಈ ತತ್ವವನ್ನು ಹುಟ್ಟು ಹಾಕಿದಾತನೇ ಬಸವಣ್ಣ.


ಅಸ್ಪೃಶ್ಯತಾ ನಿವಾರಣೆಗಾಗಿ ಬಸವಣ್ಣನವರು 800 ವರ್ಷಗಳ ಕೆಳಗೆ ಮಾಡಿದ ವರ್ಣಸಂಕರ ವಿವಾಹವು ಜಗತ್ತಿನ ಯಾವುದೇ ಸಮಾಜ ಸುಧಾರಕರು ಕ್ರಾಂತಿ ಪುರುಷರು ಮಾಡದ ಕಾರ್ಯವಾಗಿತ್ತು. ಇಂದಿಗೂ ಕೂಡ ಬಹುತೇಕ ಮಠಗಳ ಪೀಠಾಧಿಪತಿಗಳು ಈ ಧೈರ್ಯವನ್ನು ಮಾಡದೆ ಇರಲು ಕಾರಣ ಸಾಮಾಜಿಕವಾಗಿ ಅವರಿಗೆ ಉಂಟಾಗುವ ವಿರೋಧಗಳು.


ವಿಶ್ವ ಮಾನವ ತತ್ವವನ್ನು ಜಗತ್ತಿಗೆ ಸಾರಿದ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಕುವೆಂಪು ಅವರು "ಸಾಮಾಜಿಕ ದೃಷ್ಟಿಯಿಂದ ಬಸವೇಶ್ವರರಷ್ಟು ಅದ್ಭುತ ಕೆಲಸ ಮಾಡಿದವರು ಯಾರು ಇಲ್ಲ. ಅಂದು ಬಸವಣ್ಣನವರು ಮಾಡಿದ ಸಾಮಾಜಿಕ ಪರಿವರ್ತನೆಯನ್ನು ನಮ್ಮ ದೇಶ ಆಗ ಒಪ್ಪಿಕೊಂಡಿದ್ದ ಪಕ್ಷದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು ಇಲ್ಲಿಗೆ ಬಂದು ಬೇರು ಬಿಡುತ್ತಿರಲಿಲ್ಲ ನಾನು ಈಗ ಹೇಳುವ ವಿಶ್ವಮಾನವ ತತ್ವವು ಎಂದೋ ಬರುತ್ತಿತ್ತು ನಮ್ಮಲ್ಲಿ ಸಾಕಷ್ಟು ದೊಡ್ಡ ದೊಡ್ಡ ಸಾಹಿತಿಗಳಿದ್ದಾರೆ, ಸಾಹಿತ್ಯ ದೃಷ್ಟಿಯಿಂದ ಮಹೋನ್ನತರು ಹೌದು, ಆದರೆ ಸಾಮಾಜಿಕ ದೃಷ್ಟಿಯಿಂದ ಇನ್ನೂ ಸಂಪ್ರದಾಯಕ್ಕೆ ಅಂಟಿಕೊಂಡಿದ್ದಾರೆ. ಮಠಾಧೀಶರನ್ನಂತೂ ಬಿಟ್ಟುಬಿಡಿ ಎಂದು 1983 ರಲ್ಲಿ ಕನ್ನಡಪ್ರಭ ಪತ್ರಿಕೆಯ  ಬಿ ಎಂ ಚಂದ್ರಕಾಂತರಿಗೆ ಕೊಟ್ಟ ವಿಶೇಷ ಸಂದರ್ಶನದಲ್ಲಿ  ಕುವೆಂಪು ಅವರು ಬಸವಣ್ಣನವರನ್ನು ಕುರಿತು ಕೊಂಡಾಡಿದ್ದರು. ಅವರ ಮಾತು ಸತ್ಯವಲ್ಲವೇ ?


ಸಕಲ ಮಾನವರು ಒಂದೇ ಎಂದು ಬಸವಣ್ಣ ಬರಿ ಮಾತಿನ ಶಾಸ್ತ್ರವನ್ನು ಹೇಳದೆ ಬದುಕಿನ ಎಲ್ಲ ಕ್ಷೇತ್ರದಲ್ಲೂ ನಡೆದು ತೋರಿಸಿದ.ಧಾರ್ಮಿಕ ಕ್ಷೇತ್ರದಲ್ಲೂ ಕೂಡ.  "ಭಕ್ತನ ಕುಲವಾವುದೆಂದು ಕೇಳಿದರೆ ತಲೆದಂಡ ತಲೆದಂಡ' ಎಂದು ಶಪಥ ಮಾಡಿದರು ಬಸವಣ್ಣ. ವ್ಯಕ್ತಿಯು ಮಾಡುವ ಕಸುಬಿಗೂ, ಹಾಗೆಯೇ ಆತ ಮಾಡುವ ಕಾಯಕಕ್ಕೂ ಮೇಲು ಕೀಳು ಎಂಬುದು ಇಲ್ಲ. ಕಾಯಕ ಯಾವುದಾದರೇನು? ಕಾಯಕ ಸಾಮಾಜಿಕ ಮತ್ತು ಆರ್ಥಿಕ ಸರಿ ಸಮಾನತೆಯ ಸೂತ್ರ.  ಎಲ್ಲರೂ ಕಾಯಕದ ಬದುಕಿನಿಂದಲೇ ಬದುಕಬೇಕು ಚರ್ಮದ ಕಸುಬು ಮಾಡುವವರನ್ನು ಅತ್ಯಂತ ನಿಕೃಷ್ಟ ದೃಷ್ಟಿಯಿಂದ ನೋಡುತ್ತಾ ಬಂದಿರುವ ಸಮಾಜದಲ್ಲಿ ಬಸವಣ್ಣನವರು ಅವರಿಗೆ ಸಮಾನ ಸ್ಥಾನಮಾನವನ್ನು ಕೊಟ್ಟು ಅಸ್ಪೃಶ್ಯರನ್ನೆಲ್ಲ ಲಿಂಗಧಾರಿಗಳನ್ನಾಗಿಸಿದ ಮಹನೀಯ. ಆದ್ದರಿಂದಲೇ ಆತ ಕಾಯಕ ತತ್ವದ ಮಹಾ ಶಿಲ್ಪಿಯಾದ. ಬಸವಣ್ಣನವರ ಕಾಲದಲ್ಲಿಯೇ ಮಾದಾರ ಚೆನ್ನಯ್ಯ, ಸೂಳೆ ಸಂಕವ್ವೆ, ಕಸಗುಡಿಸುವ ಸತ್ಯಕ್ಕ,ಬಹುರೂಪಿ ಚೌಡಯ್ಯ ಹಡಪದ ಅಪ್ಪಣ್ಣ, ಡೋಹರ ಕಕ್ಕಯ್ಯ, ನುಲಿಯ ಚಂದಯ್ಯ, ಕಂಬಳಿ ನಾಗದೇವ, ಮಡಿವಾಳ ಮಾಚಿದೇವ ಮುಂತಾದ ಶರಣರು ಮೂಡಿ ಬಂದರು. ಸರ್ವ ಧರ್ಮ ಸಮಾನತೆ ಸರ್ವ ಜನ ಸಮಾನತೆಯನ್ತು ಅಂದು ಬಸವಣ್ಣ ತೋರಿದ. ಆ ಹಾದಿಯು ಇಂದು ನಮಗೆ ಸಂವಿಧಾನದತ್ತ ಹಕ್ಕಾಗಿದ್ದರೂ ಕೂಡ  ಇಂದಿಗೂ ಕೂಡ ಜಾತೀಯ ದ್ವೇಷ ಅಸೂಯೆ ನಮ್ಮಲ್ಲಿ ಹಾಸು ಹೊಕ್ಕಾಗಿದೆ. 


ಅಸ್ಪೃಶ್ಯತೆಯು ಅನೈತಿಕತೆಯ ಕುರುಹು, ಅವನತಿಯ ಚಿಹ್ನೆ, ನಾಡಿನ ಕೇಡಿಗೆ ಮೂಲ ಎಂದು ಹೇಳಿದ ಬಸವಣ್ಣ ಅಸ್ಪೃಶ್ಯತೆಯು ರಾಷ್ಟ್ರೀಯ ಸ್ವಾತಂತ್ರ್ಯದ ಹರಣಕ್ಕೆ ಕಾರಣ.ವಿದೇಶಿ ಮತಗಳ ಪ್ರಚಾರಕ್ಕೆ ಜಾತೀಯತೆ ಮತ್ತು ಅಸ್ಪೃಶ್ಯತೆಗಳೇ ಮುಖ್ಯ ಕಾರಣ ಎಂಬುದನ್ನು ನಾವು ಇಂದು ಇತಿಹಾಸದಿಂದ ತಿಳಿಯಬಹುದಾಗಿದೆ ಎಂದು ಲೇಖಕರಾದ ದೇ.ಜವರೇಗೌಡ ಅವರು ಹೇಳಿದ್ದಾರೆ. ಅಸ್ಪೃಶ್ಯತೆಯ ನಿರ್ಮೂಲನಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕೊಡ್ಡಿದ ಮಹಾವ್ಯಕ್ತಿ ಬಸವಣ್ಣ.


ಕನಿಷ್ಟ ಕುಲದಲ್ಲಿ ಹುಟ್ಟಿದ ಕರ್ಮವ ಕಳೆದು 
ಮುಟ್ಟಿ ಪಾವನ ಮಾಡಿಕೊಟ್ಟನಯ್ಯ 
ಎನ್ನ ಕರಸ್ಥಳಕ್ಕೆ ಲಿಂಗವ ಕೊಟ್ಟನಯ್ಯ
ಆ ಲಿಂಗ ಬಂದು ಸೋಂಕಿದೊಡನೆ 
ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯಾ


ಎನ್ನುವ ಡೋಹರ ಕಕ್ಕಯ್ಯ ನ ವಚನವು ಬಸವಣ್ಣನವರ ದಲಿತೋದ್ಧಾರದ ಕೃತ್ಯಕ್ಕೆ ಸಾಕ್ಷಿಯಾಗಿತ್ತು ಎಂದರೆ ತಪ್ಪಿಲ್ಲ. ಬಸವಣ್ಣನವರು ಮಾತಿನ ಏಣಿ ಹಾಕಿದವರಲ್ಲ ಕ್ರಿಯಾಶೀಲರು ಎನ್ನುವುದಕ್ಕೆ ಅವರ ಕ್ರಾಂತಿಕಾರಕ ಬದಲಾವಣೆಗಳೇ ಕಾರಣ.


ಬಸವಣ್ಣನವರು ತನ್ನಲ್ಲಿಯೇ ಎಲ್ಲರನ್ನು, ಎಲ್ಲರಲ್ಲೂ ತನ್ನನ್ನೇ ಕಂಡು ಲೌಕಿಕ ಜೀವನದಲ್ಲಿ ಬೇಕಾದ ಸರಿ ಸಮಾನತೆಯನ್ನು ಬದುಕಿ ತೋರಿಸಿದರು.  ಬಸವಣ್ಣನವರು ಕುಲ ಹದಿನೆಂಟು ಜಾತಿಯರನ್ನು ಒಂದೇ ಎಂದು ಕಂಡರೆ  ಬಸವ ಭಕ್ತರಲ್ಲೇ ಕುಲ ಹದಿನೆಂಟು ಒಳಪಂಗಡಗಳಾಗಿವೆ. ಇದು ಖಂಡಿತವಾಗಿಯೂ ಸಲ್ಲದು.


ಮೌಡ್ಯವೇ ಮನುಷ್ಯನ ಎಲ್ಲಾ ಸಂಕಟಗಳಿಗೂ ಮೂಲ ಕಾರಣ ಆದ್ದರಿಂದ ಮನುಷ್ಯನ ಮನಸ್ಸಿಗೆ ಮಂಕು ಬೂದಿ ಚೆಲ್ಲಿ ಮಾಡಬಾರದ ಅನ್ಯಾಯಗಳನ್ನು ಮಾಡುತ್ತಾ ಬಂದಿರುವ ಬಲ್ಲವರು ಬಲ್ಲಿದರು ಧರ್ಮದ ವ್ಯಾಪಾರಿಗಳಾಗಿದ್ದರು. ಇಂತಹ ಧರ್ಮದ ವ್ಯಾಪಾರಿಗಳನ್ನು ಅನಾಮತ್ತಾಗಿ ಸವರಿ ಹಾಕಿ ಗುಡಿ ಗುಂಡಾರಗಳಿಗೆ ಹೋಗುವುದನ್ನು ತಪ್ಪಿಸಿ, ಹೋಗಲಾರದವರನ್ನು ಕೂಡ ಒಲಿಸಿ ಇಷ್ಟ ಲಿಂಗವನ್ನು ಕರಸ್ತಲದಲ್ಲಿ ತಂದು ಇಟ್ಟು ಪೂಜಿಸಲು ಹೇಳಿದಾತ ಬಸವಣ್ಣ. ಕಾಯಕವೇ ಕೈಲಾಸ ಎಂದು ಕಾಯಕದ ಮಹತ್ವವನ್ನು ತಿಳಿಸಿದರು.


"ಎನ್ನ ಕಾಲೇ ಕಂಬಗಳು ದೇಹವೇ ದೇವಾಲಯ ಶಿರವೇ ಹೊನ್ನ ಕಳಸ" ಎಂದು ದೇಹವನ್ನು ದೇಗುಲವಾಗಿಸಿಕೊಳ್ಳುವ ನಿಟ್ಟಿನಲ್ಲಿ ಬಸವಣ್ಣನವರು ಎಲ್ಲ ವರ್ಗದವರಿಗೂ ಸೂಚಿಸಿ ಅಂತೆಯೇ ನಡೆದು ತೋರಿದರು. ಬಸವಣ್ಣನವರ ಅನುಭವ ಮಂಟಪದಲ್ಲಿ ಎಲ್ಲ ಜಾತಿ ಧರ್ಮಗಳ ಎಲ್ಲಾ ಕುಲ ವರ್ಗಗಳ ಬಡವ ಬಲ್ಲಿದನೆಂಬ ಭೇದವಿಲ್ಲದೆ ಎಲ್ಲರಿಗೂ ಅವಕಾಶ  ಒದಗಿಸಲಾಗಿತ್ತು. 


ತನ್ನ ಅಕ್ಕನಿಗೆ ಇಲ್ಲದ ಜನಿವಾರ ತನಗೇಕೆ? ಎಂದು ಪ್ರಶ್ನಿಸಿದ ಬಾಲಕ ಬಸವಣ್ಣ ಸ್ತ್ರೀ ಪುರುಷ ಸಮಾನತೆಗೆ ನಾಂದಿ ಹಾಡಿ ಅಂದಿನ ಸಾಮಾಜಿಕ ಸಂಪ್ರದಾಯಗಳ ವಿರುದ್ಧ ಕಿಡಿ ಕಾರಿದರು. ಬಸವಣ್ಣವರ ಕಾಲದಲ್ಲಿದ್ದ ಮುನ್ನೂರು ಶರಣರಲ್ಲಿ 70 ಜನ ಶರಣೆಯರಿದ್ದರು ಎಂದರೆ ಅದರ ಮಹತ್ವ ನಮಗೆ ಅರಿವಾದೀತು.


ಸ್ತ್ರೀಯರ ಮನದ ಒಳದನಿಗೆ ಮಾತಿನ ರೂಪ ಕೊಟ್ಟಾತ ಬಸವಣ್ಣ. ಅನಾದಿಕಾಲದಿಂದಲೂ ತೊತ್ತಿನಂತೆ,ಸೊತ್ತಿನಂತೆ ಭಾಸವಾಗುತ್ತಿದ್ದ ಹೆಣ್ಣಿಗೆ ಆತ್ಮದ ಒಳ ಅರಿವನ್ನು ಮಾಡಿಕೊಟ್ಟಾತ ಬಸವಣ್ಣ. ಹೆಣ್ಣು ಮಕ್ಕಳಿಗೆ ಅವರ ಅಸ್ಮಿತೆಯ ಅನುಭವ ದರ್ಶನ ಮಾಡಿಸಿದಾತ ಬಸವಣ್ಣ.


ಕಳಚೂರ್ಯ ವಂಶದ ಬಿಜ್ಜಳ ಮಹಾರಾಜನ ಸಹೋದರಿಯನ್ನೇ ಮದುವೆಯಾಗಿದ್ದರೂ ಕೂಡ ದೊರೆ ಆತನಿಗೆ ಪರಮಾಪ್ತನಾಗಿದ್ದರೂ ಕೂಡ ಎಂದೂ ತನ್ನ ಎಲ್ಲೆಯನ್ನು ಮೀರದ ಬಸವಣ್ಣ ಶುದ್ಧ ಸ್ನೇಹವನ್ನು ಕಾಪಾಡಿಕೊಂಡು ಬಂದಾತ. ಬಿಜ್ಜಳನ ಪ್ರಾಣ ಹಾರಿಹೋಯಿತು ಎಂಬ ಸುದ್ದಿಯನ್ನು ತಿಳಿದಾಗ ನೊಂದು ಕಣ್ಣೀರಿಟ್ಟ ಬಸವಣ್ಣ. ಯಾರ ಮುಖ ನೋಡಿದರೆ ಅಪಶಕುನ ಎಂದು ಹೇಳುತ್ತಿದ್ದರೋ ಅಂತಹ ಹಡಪದ ಜನಾಂಗದ ಅಪ್ಪಣ್ಣನವರನ್ನು  ನೋಡಿಯೇ ತನ್ನ ಬಳಿ ಬರಬೇಕು ಎಂದು ಕಟ್ಟಳೆಯನ್ನು ವಿಧಿಸಿ ಸಾಮಾಜಿಕ ಮೌಡ್ಯವನ್ನು ವಿರೋಧಿಸಿದಾತ ಬಸವಣ್ಣ.


 ಬಸವಣ್ಣನವರು ಇಹಲೋಕ ಬಂಧನದಿಂದ ಪಾರಾಗಲು ಕಾಡು ಪಾಲಾಗುವ ಪಲಾಯನ ಮಾರ್ಗವನ್ನು ಬೋಧಿಸಲಿಲ್ಲ ಕಾಯಕವೇ ಕೈಲಾಸ ಎಂದು ಬೋಧಿಸಿ ಸಕಲ ಕರ್ಮವು ಶ್ರೇಷ್ಠ ಎಂದು ಬೋಧಿಸಿದರು.


ಜೀವಕ್ಕೆ ಜನನ ಮರಣಗಳು ತಪ್ಪಿದ್ದಲ್ಲ, ಹುಟ್ಟಿದ ಮೇಲೆ ಕರ್ಮ ಬಿಟ್ಟಿದ್ದಲ್ಲ ಪ್ರತಿನಿತ್ಯವೂ ನಾವು ಆಹಾರ ಎನ್ನುವ ಅನ್ನವನ್ನು ಈ ಘಟಕ್ಕೆ ಹಾಕಲೇಬೇಕಾದ ಕೂಳು ಎಂದು ಚಪ್ಪರಿಸುವ ಬದಲು ಭಗವಂತನಿಗೆ ಎಡೆ ಮಾಡಿ ಅವನು ನೀಡಿದ ಪ್ರಸಾದ ಎಂದು ಸೇವಿಸಿದರೆ ಮನಸ್ಸು ಪ್ರಶಾಂತತೆಯನ್ನು ಅನುಭವಿಸುತ್ತದೆ. ಹೊಟ್ಟೆಗೆ ಬೇಕಾಗುವ ಆಹಾರವನ್ನು ಸೇವಿಸಲು ಅವಶ್ಯಕವಾದ ದುಡಿಮೆಯನ್ನು ಕೆಲಸ ಎಂದು ಭಾವಿಸದೆ ಕಾಯಕ ಎಂದು ದೈವಿಕ ಕಾರ್ಯವೆಂಬಂತೆ ಮಾಡಿದಲ್ಲಿ ಕಾಯ ಮತ್ತು ಕಾಯಕಗಳು ಕೈಲಾಸವಾಗಿ ತೋರುವದರಲ್ಲಿ ಅಚ್ಚರಿಯೇನಲ್ಲ ಎಂದು ಹೇಳಿಕೊಟ್ಟವರು ಬಸವಣ್ಣ.


ಮಾನವ ಕುಲದ ಏಕತೆಯನ್ನು ಸಾಧಿಸುವಲ್ಲಿ ಧರ್ಮದ ಪಾತ್ರ ಮಹತ್ವವಾದದ್ದು ಎಂಬ ದಿಶೆಯಲ್ಲಿ ಆಧ್ಯಾತ್ಮಿಕ ತಳಹದಿಯ ಮೇಲೆ ಸರ್ವ ಸಮಾನತೆಯ ಸಮಾಜವನ್ನು ಕಟ್ಟಲು ಬಸವಣ್ಣನವರು ಹೆಣಗಿದರು. ಧರ್ಮಕ್ಕೆ ಇರುವ ಸಾಂಪ್ರದಾಯಿಕತೆ ಮತ್ತು ಚಿರಂತನ ವಾದ ಎರಡು ಮುಖಗಳನ್ನು ಕಟ್ಟುನಿಟ್ಟಾದ ಧರ್ಮದ ಅಚರಣೆಗಳು ಮತ್ತು ಸಂಪ್ರದಾಯದ ಆಚರಣೆಗಳಿಗೆ ಮೊದಲನೆಯದ್ದು ಆಕರವಾದರೆ ಎರಡನೆಯ ಮುಖವಾದ ಚಿರಂತನ ಮೌಲ್ಯದಲ್ಲಿ ಮಾನವೀಯ ಮೌಲ್ಯಗಳಾದ ಸತ್ಯ, ಅಹಿಂಸೆ, ದಯೆ, ಜನ ಸೇವೆ, ವಿಶ್ವ ಬ್ರಾತೃತ್ವ ಹಾಗೂ ಪರಮತ ಸಹಿಷ್ಣುತೆಗಳು ಸೇರಿವೆ. ವ್ಯಕ್ತಿ ಹಾಗೂ ಸಮಾಜದ ವಿಕಾಸಕ್ಕಾಗಿ ಇವೆರಡು ಅಂಶಗಳ ತೂಕ ಬದ್ಧವಾದ ಪಾಲನೆ ಅವಶ್ಯವಾಗಿದ್ದು ಈ ಮೌಲ್ಯಗಳನ್ನು ತೂಕ ತಪ್ಪದಂತೆ ಆಚರಿಸಬೇಕು.


ಬಸವಣ್ಣನವರು ಸಾಂಪ್ರದಾಯಿಕತೆಗಿಂತ ಮಾನವೀಯ ಮೌಲ್ಯಗಳಿಗೆ ಹೆಚ್ಚು ಮಹತ್ವವನ್ನು ನೀಡಿ ಮೌಲ್ಯಗಳ ತಳಹದಿಯ ಮೇಲೆ ನವ ಸಮಾಜದ ನಿರ್ಮಾಣ ಮಾಡಲು ಯತ್ನಿಸಿದರು. ನಾವೆಲ್ಲ ಒಂದೇ ಮೂಲದಿಂದ ಬಂದವರೆಂದು ವಿವಿಧ ಧರ್ಮಗಳು ಪ್ರತಿಪಾದಿಸುವಂತೆ ಇಂದಿನ ವೈಜ್ಞಾನಿಕ ಶೋಧನೆಗಳು ಒಳಪಡಿಸುತ್ತವೆ ಇದನ್ನು ಮನಗಂಡ ಬಸವಣ್ಣನವರು "ದೇವನೊಬ್ಬ ನಾಮ ಹಲವು"  ಪರಮ ಪ್ರತಿವ್ರತೆಗೆ ಗಂಡನೊಬ್ಬ  ಮತ್ತೊಂದಕ್ಕೆರಗಿದಡೆ ಕಿವಿ ಮೂಗ ಕೊಯ್ಯುವನು ಹಲವು ದೈವದ ಎಂಜಲು ತಿಂಬುವರನೇನೆಂಬೆ ಕೂಡಲಸಂಗಮದೇವ  ಎಂದು ಹೇಳಿದ್ದಾರೆ.

 ಇಬ್ಬರೂ ಮೂವರು ದೇವರೆಂದು ಉಬ್ಬುಬ್ಬಿ ಮಾತಾಡಬೇಡ  ಒಬ್ಬನೇ ಕಾಣಿರೋ ಇಬ್ಬರೆಂಬುದು ಹುಸಿ ನೋಡ ಕೂಡಲಸಂಗಮ ದೇವನಲ್ಲದೆ ಇಲ್ಲವೆಂದಿತ್ತು ವೇದ  ಎಂದು ಇಡೀ ಮಾನವ ಕುಲ ಕೋಟಿಗೆ ಸಕಲ ಜೀವರಾಶಿಗಳಿಗೆ ದೇವರೊಬ್ಬನೇ ಒಡೆಯ ಎಂದು ಒತ್ತಿ ಹೇಳಿದ್ದಾರೆ. 


ಇವನಾರವ ಇವನಾರವ ಇವನಾರವ ಎಂದೆಣಿಸದಿರಯ್ಯ 
 ಇವ ನಮ್ಮವ ಇವ ನಮ್ಮವ ಇವ ನಮ್ಮವ ನೆಂದೆಣಿಸಯ್ಯ ಕೂಡಲಸಂಗಮದೇವ 
ನಿಮ್ಮ ಮನೆಯ ಮಗನೆನಿಸಯ್ಯ 

ಎಂದು ವಿಶ್ವ ಬಂಧುತ್ವವನ್ನು ಸಾರುವ ಬಸವಣ್ಣನವರ ಈ ವಚನದ ಸಾರವನ್ನು ಅರಿತು ಬಾಳಿದರೆ ನಮ್ಮ ದೇಶದಲ್ಲಷ್ಟೇ ಅಲ್ಲ ಇಡೀ ವಿಶ್ವದ ಎಲ್ಲ ಸಮಸ್ಯೆಗಳು ತಾವಾಗಿಯೇ ಪರಿಹಾರವಾಗುತ್ತದೆ.


ಮನುಷ್ಯ ತಾನು ದುಡಿದದ್ದರಲ್ಲಿ ಒಂದು ಪಾಲು ತನ್ನ ಕುಟುಂಬವನ್ನು ನೋಡಿಕೊಳ್ಳಲು, ಮತ್ತೊಂದು ಪಾಲು ಮಕ್ಕಳ ಸಲುವಾಗಿ ಇನ್ನೊಂದು ಪಾಲನ್ನು ದಾಸೋಹ ರೂಪದಲ್ಲಿ ಸಮಾಜದ ದೀನ ದಲಿತರ, ಬಡ ದರಿದ್ರರ ಉದ್ಧಾರಕ್ಕಾಗಿ ನೀಡಲೇಬೇಕು ಎಂಬ ಅಲಿಖಿತ ನಿಯಮವನ್ನು ಮಾಡಿದ ಬಸವಣ್ಣನವರು ಕಾಯಕದಿಂದ ಪಡೆದ ಸಂಪತ್ತನ್ನು ದಾಸೋಹದ ಮೂಲಕ ವಿನಿಯೋಗಿಸ ಬೇಕು ಎಂಬ ತತ್ವವನ್ನು ಜಗತ್ತಿಗೆ ಬೋಧಿಸಿದರು.


 "ಅನ್ಯರ ಒಂದು ಪೈಸೆಯನ್ನು ಮುಟ್ಟಿದೆನಾದೆಡೆ ನನ್ನ ಕೊರಳ ಲಿಂಗದ ಆಣೆ" ಎಂಬ ಮಾತನ್ನು ಹೇಳುತ್ತಾ ಅಪರಿಗ್ರಹ ತತ್ವವನ್ನು ಪಾಲಿಸಿದವರು ಬಸವಣ್ಣ. ತನ್ನ ಮನೆಗೆ ಕಳ್ಳತನಕ್ಕೆ ಬಂದ ವ್ಯಕ್ತಿಗೆ  ಪತ್ನಿಯ ಕಿವಿಯೋಲೆಯನ್ನು ಬಿಚ್ಚಿಸಿಕೊಟ್ಟ ಮಹಾನುಭಾವ ಬಸವಣ್ಣ ಅಗತ್ಯಕ್ಕಿಂತ ಹೆಚ್ಚಿನ ಸಂಗ್ರಹವನ್ನು ನಿಷ್ಟುರವಾಗಿ ವಿರೋಧಿಸಿದವರು.


ಕೇವಲ ಪಂಡಿತರ ಜ್ಞಾನಿಗಳ ಆಚಾರ್ಯರ ಸ್ವತ್ತಾಗಿದ್ದ ಸಾಹಿತ್ಯವನ್ನು ಅತ್ಯಂತ ಸರಳವಾದ ಆಡು ಭಾಷೆಯಲ್ಲಿ ಜನಸಾಮಾನ್ಯರು ಕೂಡ ರಚಿಸಲು ಸಾಧ್ಯವಾಗುವಂತಹ ವಚನಗಳ ರೂಪದಲ್ಲಿ ಬರೆಸಿದರು. ಬರೆದಂತೆ ಬದುಕಿದ ಅನುಭವಿಸಿದ ಎಲ್ಲವನ್ನು ಅನುಭಾವದ ಮೂಸೆಯಲ್ಲಿ ಪರೀಕ್ಷಿಸಿ  ವಚನಗಳ ರೂಪದಲ್ಲಿ ಕಟ್ಟಿಕೊಡಲು ಕಾರಣೀಭೂತರಾದರು. ಮೌಲ್ಯಗಳನ್ನು ಬದುಕಿನ ಮೂಲ ಆಧಾರವನ್ನಾಗಿಸಿಕೊಂಡು ಶರಣರು ಬದುಕು ಬರಹಗಳನ್ನು ಒಂದಾಗಿಸಲು ಪ್ರೇರಕರಾದರು.


ಧಾರ್ಮಿಕವಾಗಿ, ಸಾಮಾಜಿಕವಾಗಿ, ಸಮ ಸಮಾಜದ ಕನಸು ಕಂಡು ಅದರ ನಿರ್ಮಾಣಕ್ಕೆ ತನ್ನ ತನು ಮನ ಧನವನ್ನು ಅರ್ಪಿಸಿ ಬಹಳಷ್ಟು ಯಶಸ್ಸನ್ನು ಕಂಡ ಬಸವಣ್ಣ ಯುಗ ಪ್ರವರ್ತಕ ಎಂದರೆ ಅಚ್ಚರಿ ಏನಲ್ಲ. 

ಬಸವ ಭಕ್ತರೆಂಬ ಹೆಸರಿನಲ್ಲಿ ನಾವು ಆತನ ಸಂದೇಶವನ್ನು ಜಗತ್ತಿಗೆ ಸಾರಬೇಕು ಅದಕ್ಕಿಂತ ಹೆಚ್ಚಾಗಿ ಆಚರಣೆಯಲ್ಲಿ ತರಬೇಕು. ಮಾನವೀಯ ಮೌಲ್ಯಗಳನ್ನು ನಮ್ಮದಾಗಿಸಿಕೊಂಡು ಕಾಯಕ ದಾಸೋಹ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಹಾ ಯುಗ ಪ್ರವರ್ತಕ ಬಸವಣ್ಣನಿಗೆ ಗೌರವ ಸಮರ್ಪಣೆ ಮಾಡೋಣ.

-ವೀಣಾ ಹೇಮಂತ್ ಗೌಡ ಪಾಟೀಲ್
 ಮುಂಡರಗಿ, ಗದಗ್




Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top