ಬೆಂಗಳೂರು: ‘ತಂತ್ರಜ್ಞಾನದ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇವಲ ದೈನಂದಿನ ಚಟುವಟಿಕೆಯಾಗಬಾರದು, ಅದು ಹೊಸ ಹೊಸತನ್ನು ಕಾಣುವ ಹಾಗೂ ಸುಸ್ಥಿರ ಮನಸ್ಥಿತಿಯನ್ನು ಅಳವಡಿಸಿಕೊಂಡ ಸಂಶೋಧಕರ ಗಂಭೀರ ಕ್ಷೇತ್ರವಾಗಿ ಪರಿಣಮಿಸಬೇಕು.
ಅತ್ಯಂತ ಬದ್ಧತೆಯಿಂದ ಸಮಸ್ಯೆಗಳನ್ನು ಪರಿಹರಿಸಿ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡುವ ನಿಟ್ಟಿನಲ್ಲಿ ಅವರು ಹೆಜ್ಜೆ ಇಡುವಾಗ ತಾವು ಕಂಡುಕೊಂಡಂತ ಪರಿಹಾರಗಳು ಪರಿಸರ ಸ್ನೇಹಿಯಾಗಿರ ಬೇಕೆಂಬುದನ್ನು ಮರೆಯಬಾರದು’, ಎಂದು ಭಾರತ ಸರ್ಕಾರದ ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಒ)’ಯ ‘ಜಿ’ ಶ್ರೇಣಿಯ ವಿಜ್ಞಾನಿ ಹಾಗೂ ವೈಮಾನಿಕ ಘಟಕದ ನಿರ್ದೇಶಕ ಡಾ. ಟಿ.ಎನ್. ಸತೀಶ್ ನುಡಿದರು.
ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನೂತನವಾಗಿ ಸ್ಥಾಪಿತವಾಗಿರುವ ‘ಸಂಶೋಧನೆ ಮತ್ತು ಅಭಿವೃದ್ಧಿ ಕ್ಲಬ್’ಅನ್ನು ವಿಧ್ಯುಕ್ತವಾಗಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದುವರಿದು ಶ್ರೀಯುತರು, ‘ಸಂಶೋಧನೆ ಮತ್ತು ಅಭಿವೃದ್ಧಿ ಬಹುಶಿಸ್ತೀಯ ಚಟುವಟಿಕೆ. ಇಲ್ಲಿ ಇಂಜಿನಿಯರಿಂಗ್‌ನ ವಿವಿಧ ವಿಭಾಗಗಳ ನಡುವೆ ಇರುವ ವ್ಯತ್ಯಾಸಗಳು ನಗಣ್ಯವಾಗುತ್ತವೆ. ಜ್ಞಾನದ ವಿವಿಧ ಶಾಖೆಗಳು ಒಗ್ಗೂಡಿ ಮಾಡಬೇಕಾದ ಬಹುದೊಡ್ಡ ಕಾರ್ಯ ಇಲ್ಲಿ ನಡೆಯಬೇಕಿದೆ’, ಎಂದರು.
ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದವರು ಮತ್ತೋರ್ವ ಮುಖ್ಯ ಅತಿಥಿ- ಡಿ.ಆರ್.ಡಿ.ಒ.ನ ಯುವ ಸಂಶೋಧಕರ ಪ್ರಯೋಗಾಲಯದ ನಿರ್ದೇಶಕ ಸನ್ನಿ ಮನ್‌ಚಂದ. ತಮ್ಮ ಭಾಷಣದಲ್ಲಿ ಶ್ರೀಯುತರು, ‘ಪ್ರಕೃತಿ ಅನೇಕ ರಹಸ್ಯಗಳನ್ನು ಗರ್ಭೀಕರಿಸಿಕೊಂಡಿದೆ. ಈ ರಹಸ್ಯಗಳನ್ನು ತದೇಕಚಿತ್ತತೆಯಿಂದ ಭೇದಿಸುವ ಹಾಗೂ ಅವುಗಳನ್ನು ಮಾನವ ಸಮಾಜದ ಪ್ರಗತಿಗೆ ಬಳಸಿಕೊಳ್ಳುವ ಹೊಣೆ ಸಂಶೋಧಕರ ಮೇಲಿದೆ.
ಈಗಂತೂ ‘ಕೃತಕ ಬುದ್ದಿಮತ್ತೆ’ಯ ಅನ್ವೇಷಣೆಯಿಂದ ಅವರು ಈ ನಿಟ್ಟಿನಲ್ಲಿ ಸರಾಗವಾಗಿ ಮುನ್ನಡೆಯಬಲ್ಲರು. ನಮ್ಮ ಯುವಸಂಶೋಧಕರು ಇದನ್ನು ಪಠ್ಯೇತರ ಚಟುವಟಿಕೆ ಎಂದು ಭಾವಿಸದೆ ತಮ್ಮೆಲ್ಲ ಶಕ್ತಿಯನ್ನು ಇಲ್ಲಿ ವಿನಿಯೋಗಿಸಬೇಕು’, ಎಂದು ವಿಶ್ಲೇಷಿಸಿದರು.
‘ನಿಟ್ಟೆ ಆರ್ ಆ್ಯಂಡ್ ಡಿ ಕ್ಲಬ್’ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದವರು- ಸಂಸ್ಥೆಯ ವೈಮಾನಿಕ ತಂತ್ರಜ್ಞಾನ ಇಂಜಿನಿಯರಿಂಗ್ ವಿಭಾಗದ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಡಾ. ಪ್ರಹ್ಲಾದ್ ಎನ್. ತೆಂಗಳಿ. ಅವರು ತಮ್ಮ ಭಾಷಣದಲ್ಲಿ, ‘ಪ್ರಸ್ತುತ ಪ್ರಾರಂಭವಾಗಿರುವ ಈ ಕ್ಲಬ್ ಸದಾ ಸಂಶೋಧಕರು ತಮ್ಮ ಅನ್ವೇಷಣೆಗಳಲ್ಲಿ ಜೀವಪರ ಧೋರಣೆಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ. ಪ್ರಕೋಪಗಳ ಪರಿಹಾರ, ಆರ್ಥಿಕ ಚಟುವಟಿಕೆಗಳಿಗೆ ತಂತ್ರಜ್ಞಾನದ ಬೆಂಬಲ ಹಾಗೂ ಮನುಷ್ಯರ ಉತ್ತಮ ಭವಿಷ್ಯಕ್ಕೆ ನೆರವಾಗುವ ತಂತ್ರಜ್ಞಾನದ ಅನ್ವೇಷಣೆಗಳಿಗೆ ಇಲ್ಲಿ ಆದ್ಯತೆ ನೀಡಲಾಗುತ್ತದೆ’, ಎಂದರು.
ಪ್ರಾರಂಭದಲ್ಲಿ ಸರ್ವರನ್ನೂ ಸ್ವಾಗತಿಸಿದವರು- ಸಂಸ್ಥೆಯ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಅವರು. ಸಂಸ್ಥೆಯ ಕಾರ್ಪೊರೇಟ್ ಸಂಬಂಧಗಳ ನಿರ್ದೇಶಕ ಕೆ.ಬಿ. ರಾವ್, ಸಂಸ್ಥೆಯ ವೈಮಾನಿಕ ತಂತ್ರಜ್ಞಾನ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್ ಎಚ್.ವಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ