ಯಾರೋ ಹೇಳಿದರು ಕಾನ್ವೆಂಟ್ ಒಳ್ಳೆಯದು ಅಂತ, ಲಕ್ಷಗಟ್ಟಲೆ ಫೀಸ್ ಕೊಟ್ಟು ಸೇರಿಸಿದ್ದಾಯ್ತು. ಅಲ್ಲೂ ಟು ಟು ಜಾ ಪೋರ್ ಅಂತಲೇ ಕಲಿಸಿ ಕೊಟ್ಟಿದ್ದು!! ನಮ್ಮ ಗುರುಮೂರ್ತಿ ಮೇಷ್ಟ್ರು ಪಾಠ ಮಾಡುವ ಆಲ್ಮೋಸ್ಟ್ ಉಚಿತ ಶಿಕ್ಷಣದ ಸರಕಾರಿ ಶಾಲೆಯಲ್ಲೂ ಟು ಟು ಜಾ ಪೋರ್ ಅಂತಲೇ ಹೇಳಿಕೊಡುವುದು!! ಎಷ್ಟು ಫೀಸ್ ಕೊಟ್ಟರೂ ಟು ಟು ಜಾ ಫೈವ್ ಆಗುವುದಿಲ್ಲ!! ಹಾಗೆ ನೋಡಿದರೆ ಸರಕಾರಿ ಶಾಲೆಯಲ್ಲಿ ಕಲಿತವನೇ ಸ್ಟ್ರಾಂಗ್. ಸಮಾಜ ಮುಖಿಯಾಗಿ ಧೈರ್ಯದಿಂದ ಬದುಕಬಲ್ಲ ಶಕ್ತಿ ಖಾಸಗಿ ಕಾನ್ವೆಂಟ್‌ಗಿಂತ ಸರಕಾರಿ ಶಾಲೆಯ ವಿದ್ಯಾರ್ಥಿಯಲ್ಲಿ ಹೆಚ್ಚಿರುತ್ತೆ.
ಕಾನ್ವೆಂಟ್ ಶಾಲೆಯ HM ರೂಮಲ್ಲಿ ಸರಿಯಾಗಿ ಹಗಲು ಹೊತ್ತಲ್ಲೇ ಲಕ್ಷ ರುಪಾಯಿ ದರೋಡೆ ಆಗಿ, ನಾವು ಮೂರ್ಖರಾಗಿರುತ್ತೇವೆ!!
**
"ಇದು ನೋಡಿ ಸರ್, ಈ ಗಾಡಿಯ ಬ್ರೋಷರ್ ಇದು, 60 ಕಿ.ಮೀ. ಗ್ಯಾರಂಟಿ ಮೈಲೇಜ್ ಕೊಡುತ್ತೆ" ದಪ್ಪ ಆಯಿಲ್ ಪೇಪರ್‌ನಲ್ಲಿ ಐಟಂ ಸಾಂಗ್ ಡ್ಯಾನ್ಸರ್, ದ್ವಿಚಕ್ರ ವಾಹನದ ಪಕ್ಕ ನಿಂತಿರುವ ಫೋಟೋದೊಂದಿಗಿನ ಬ್ರೋಷರ್‌ನ್ನು 'ಶೋರೂಮ್ ಸೇಲ್ಸ್‌ಮ್ಯಾನ್' ಕೈಗಿಡುತ್ತಾನೆ.
"ಹೋ ಸೂಪರ್" ಅಂತ ಮನಸ್ಸಿನಲ್ಲೇ ಅನ್ಕೊಂಡು... 'ಪ್ಯಾಟೆ ಇರೋದು ಮನೆಯಿಂದ 15km., ಒಂದ್ಸಲ ಬಂದು ಹೋದರೆ 30km, ಅದೇ ಕಾನ್ವೆಂಟ್‌ನಲ್ಲಿ ಕಲಿತ ಟೇಬಲ್ಸ್ ಮಗ್ಗಿ ಲೆಕ್ಕ ಹಾಕಿ, ಮತ್ತೆ ಕ್ಯಾಲಿಕ್ಯುಲೇಟರ್ ಬಟನ್ ಒತ್ತಿ ನೋಡಿದರೂ, ವಾರಕ್ಕೆ ಮೂರ ಸಲ ಪ್ಯಾಟಿಗ್ ಬಂದ್ರೆ, ತಿಂಗಳಿಗೆ ಆರು ಲೀಟರ್ ಸಾಕು!!' ಮಸ್ತಕದೊಳಗೇ ಲೆಕ್ಕದ ಪುಸ್ತಕ ಮಡಿಚಿಟ್ಟು ರಥಕ್ಕೆ ಪೂಜೆ ಮಾಡಿಸಿ, 'ಬುದ್ದಿವಂತ' ಸಾರಥಿಯಾಗಿದ್ದಾಯ್ತು!
'ವಾರಕ್ಕೆ ಮೂರ ಸಲ ಪ್ಯಾಟಿಗ್ ಬಂದ್ರೆ, ತಿಂಗಳಿಗೆ ಆರು ಲೀಟರ್ ಸಾಕು!' ಅನ್ನುವ ಲಕ್ಷ ಫೀಸ್ ಕೊಟ್ಟು ಕಲಿತ ಲೆಕ್ಕ ಮಾತ್ರ ಎಲ್ಲೋ ತಪ್ತಾ ಇದೆ!. ಗಾಡಿ ಓಡಿದ್ದು ಸರಿ ಇದೆ, ಆದರೆ ತಿಂಗಳಿಗೆ ಒಂಬತ್ತು ಮುಕ್ಕಾಲ್ ಲೀಟರ್ರೂ ಸಾಕಾಗಲ್ಲ! ಅಂತ ಕಡಿಮೆ ಕುಡಿಯುವ ಗಾಡಿ, ಕುಡಿದು ಊರು ಸುತ್ತಿ ಸತ್ಯ ಹೇಳುತ್ತೆ!! ಲೆಕ್ಕ ಕಲಿತಿದ್ದೂ ಹಗಲು ಹೊತ್ತಲ್ಲೆ, ಲಕ್ಷ ಕೊಟ್ಟು ಗಾಡಿ ತಗೊಂಡಿದ್ದೂ ಹಗಲು ಹೊತ್ತಲ್ಲೆ. ಪೆಟ್ರೂಲ್ ಹಾಕಿದ್ದೂ ಹಗಲು ಹೊತ್ತಲ್ಲೆ. ಗಾಡಿ ಓಡಿಸಿದ್ದೂ ಹಗಲು ಹೊತ್ತಲ್ಲೆ! ದರೋಡೆ ನೆಡೆದು, ನಾವು ಮೂರ್ಖರಾಗುವುದಕ್ಕೆ ಕರೆಂಟ್ ಹೋಗಿರಬೇಕು, ಕತ್ತಲಾಗಿರಬೇಕು ಅಂತೆಲ್ಲ ಏನಿಲ್ಲ!!
ಇದು ಗೊತ್ತಾಗುವಾಗ ಹಗಲು ಮುಗಿದು ಸಂಜೆ ಆಗ್ತಾ ಇರುತ್ತೆ!!
ಲಾಂಗ್ ಸೈಟ್ ಪ್ರಾಬ್ಲಮ್! ಕನ್ನಡಕ ಇಲ್ಲದೆನೆ, ಕ್ಯಾಲೆಂಡರ್ ನೋಡಿದರೆ, ಪ್ರತಿ ದಿನವೂ ಏಪ್ರಿಲ್ ಒಂದು ಅಂತ ಕಾಣಿಸಿದ ಹಾಗಾಗುತ್ತೆ!!
**
ಮೂರ್ಖರ ಸಂತೆಯಲ್ಲಿ ಮೌನವಾಗಿರಬೇಕು, ಬುದ್ದಿವಂತರ ಜೊತೆಯಲ್ಲಿ ಬುದ್ಧನಂತಿರಬೇಕು, ಸಾಧು ಸಂತರ ಜೊತೆಯಲ್ಲಿ ಸೌಮ್ಯವಾಗಿರಬೇಕು, ಸಂಬಂಧಿಗಳ ಜೊತೆಯಲ್ಲಿ ಸಂಸ್ಕಾರದಿಂದಿರಬೇಕು, ದೀನರ ಜೊತೆಯಲ್ಲಿ ಧರ್ಮ ರಾಯನಂತಿರಬೇಕು, ಹೀಗೆಯೇ ಮಿಂಚಿ ಒಂದು ದಿನ ಮರೆಯಾಗಿ ಬಿಡಬೇಕು, ಆ ಮಿಂಚನ್ನು ಇಡಿ ಪ್ರಪಂಚವೆ ಬೆರಗಾಗಿ ನೋಡಬೇಕು" ಅಂತ ಒಂದು ಸುಭಾಷಿತ.
ಉಳಿದಿದ್ದಲ್ಲ ಆಗದೇ ಇದ್ರು, ಮೊದಲ ವಾಕ್ಯದಂತೆ, ಮೂರ್ಖರ ಸಂತೆಯಲ್ಲಿ ಸಹಿಸಿಕೊಂಡು ಮೌನವಾಗಿದ್ದೇವೆ!!!
ಮೌನ ಮುರಿದರೆ, ಮೂರ್ಖರಾಗಿದ್ದು ಸಂತೆಯ ಅಷ್ಟೂ ಜನರಿಗೆ ಗೊತ್ತಾಗುತ್ತೆ!!
ಮೂರ್ಖರಾಗದಾಗ, ಮೌನ ಮಾನದ ಬಂಗಾರ!! ಮಾತು ತುಕ್ಕು ಹಿಡಿದ ಕಬ್ಬಿಣ!!
ಅದೇ ಸುಭಾಷಿತ ಮಾತು ಹೇಳುವಂತೆ, ನಾವೆಲ್ಲ ಅದ್ಭುತವಾದ ಒಂದು ಸಂತೆಯಲ್ಲಿದಿವಿ!! ನಿತ್ಯ ನೆಡೆಯುವ ಸಂತೆಯಲ್ಲಿದ್ದೀವಿ!! ಮತ್ತು ಎಲ್ಲವನ್ನೂ ಮೌನವಾಗಿ ಕೊಂಡುಕೊಳ್ತಾ ಇದ್ದೇವೆ!!
ಗ್ಯಾರಂಟಿ ಕಾರ್ಡ್ ಕೊಡುವವರು, ನುಡಿದಂತೆ ನೆಡೆದಿದ್ದೇವೆ ಅನ್ನುವವರು, ಸತ್ಯ ಹರಿಶ್ಚಂದ್ರನ ನಂತರ ಭೂಮಿಗೆ ಬಂದಿದ್ದೇನೆ ಅಂತ ಹೇಳಿಕೊಳ್ಳುವ ಬಿಳಿ ವಸ್ತ್ರದವರು, ಸರಕಾರಿ ಕಛೇರಿಗಳಲ್ಲಿ ದಕ್ಷಿಣೆ ಕೊಟ್ಟರೆ, ದರ್ಶನ ಕೊಟ್ಟು ಫಲ ಪ್ರಾಸಾದ ಕೊಡುವವರು... ಸಂತೆ ತುಂಬ ವ್ಯಾಪಾರದ ಅಂಗಡಿ ಮುಂಗಟ್ಟು ಇಟ್ಕೊಂಡು ಇದ್ದಾರೆ.
ಶಿಕ್ಷಣ ಸಂತೆ, ವೈದ್ಯಕೀಯ ಸಂತೆ, ಸರಕಾರಿ ಸಂತೆ, ರಾಜಕೀಯ ಸಂತೆ, ಡಿಸ್ಕೌಂಟ್ ಸಂತೆ, ರಿಯಾಯ್ತಿ ಸಂತೆ. ಸಿನಿಮಾ ಸಂತೆ, ಧಾರವಾಹಿ ಸಂತೆ, ಲೋಕದ ಲೌಕಿಕ ಬ್ರೇಕಿಂಗ್ ನ್ಯೂಸ್‌ಗಳಸಂತೆ......
ಸಂತೆಯೊಳಗೊಂದು ಮನೆ ಮಾಡಿದ್ದೇವೆ.
ಹಾಲಿನ ಅಂಗಡಿಯಲ್ಲಿ ಯೂರಿಯ ಬೆರೆಸಿ ಮಾರುತ್ತಿರುವ ಹಾಲು ತಂದು ದಿನಾ ಕುಡಿಯುವುದು.
ಕ್ಯಾನ್ಸರ್ ಕಾರಕದ ಕೆಮಿಕಲ್ ತುಂಬಿದ ಗೋಬಿ ಮಂಚೂರಿಯನ್ನು "ನಾವೇನು ಯಾವಾಗಲು ತಿಂತೀವಾ?" ಅನ್ನುವ ಸಮಜಾಯಿಷಿಯೊಂದಿಗೆ ಕಡ್ಡಿಯಲ್ಲಿ ಚುಚ್ಚಿ ಬಾಯಿಗಿಟ್ಟು ಚಪ್ಪರಿಸುವುದು (ನಾನು ಮಂಚೂರಿಯನ್ನು ಕೈಯಲ್ಲೂ ಮುಟ್ಟಲ್ಲ! (ಕಡ್ಡಿಯಲ್ಲಿ!))
ಒಂದು ಲೀಟರ್ ಸೂರ್ಯಕಾಂತಿ ಎಣ್ಣೆ ತಯಾರಿಸಲು ಐನೂರು ರುಪಾಯಿ ಬೇಕಂತೆ, ಆದ್ರೂ ₹ ನೂರೈವತ್ತಕ್ಕೆ ಒಂದು ಲೀಟರ್ ಪ್ಯೂರ್ ಸೂರ್ಯಕಾಂತಿ ಎಣ್ಣೆ ಮಾರಾಟದ ಆಫರ್‌ನಲ್ಲಿ ಯಶ್ ಹೇಳಿದ್ರು, ರಾಧಿಕ ಉಲಿದರು ಅಂತ ತಿಂಗಳಿಗೆ ಮೂರು ಲೀಟರ್ ಎಣ್ಣೆ ತಂದು ತಿಂದ್ವಿ!! ಐನೂರು ರುಪಾಯಿ ಎಣ್ಣೆಯನ್ನು ನೂರೈವತ್ತಕ್ಕೆ ಹ್ಯಾಗೆ ಕೊಡೋಕೆ ಸಾಧ್ಯ ಅಂತೆಲ್ಲ ಯೋಚನೆ ಮಾಡುವುದನ್ನು ಯಶ್‌ರ ಗಡ್ಡ, ರಾಧಿಕರ ಮಾತು ಕೇಳ್ತಾ ಮರತೇ ಬಿಟ್ಟಿದಿವಿ!
ಟಿವಿ ಜೋತಿಷಿ ಹೇಳಿದ "ಟಿವಿಯನ್ನು ವಾಯುವ್ಯ ಮೂಲೆಗಿಟ್ಟು ಸುವರ್ಣ ಚಾನಲ್ ನ್ಯೂಸ್ ನೋಡಿದ್ರೆ ಕುಂಭ ರಾಶಿಯವರಿಗೆ ಕ್ರೋಧಿ ಸಂವತ್ಸರದಲ್ಲಿ ಧನ ಲಾಭದ ಸುರಿಮಳೆ ಆಗುತ್ತೆ" ಎನ್ನುವುದನ್ನು ಭಗವದ್ಗೀತೆ ಕೇಳಿದ ಪಾರ್ಥನಂತೆ ಕೇಳಿ, ಪಕ್ಕದ ಮನೆಯವರಿಗೆ ಹೊಟ್ಟೆಕಿಚ್ಚಾಗುವ ಟಿವಿಯನ್ನು ವಾಯುವ್ಯ ಮೂಲೆಗಿಟ್ಟು, ಆಗ್ನೇಯಕ್ಕೆ ಸೋಫಾ ಇಟ್ಟು ಕುಕ್ಕುರ್ ಬಡಿದಾಯ್ತು!
ಸೆನ್ಸಾರ್‌ನ U ಸರ್ಟಿಫಿಕೇಟ್ ಜೊತೆಗೆ ದಿನಪತ್ರಿಕೆಯ ನಾಲ್ಕು ನಕ್ಷತ್ರದ ವಿಮರ್ಶೆ ಓದಿ, ಕುಟುಂಬದವರೆಲ್ಲ ಒಟ್ಟಾಗಿ ಹೋಗಿ, ನೋಡಲಾಗದಂತಹ ಮಚ್ಚು, ಕ್ರೌರ್ಯ, ರಕ್ತ, ಅಸಭ್ಯತೆಯ ಡಬಲ್ ಮೀನಿಂಗ್ ಫಿಲಂ ನೋಡಿ ಶುಭಂ ಓದಿ ಮನೆಗೆ ಬಂದ ಮೇಲೂ ಅರ್ಥವಾಗದೇ ಉಳಿದಿದ್ದು 'ಕೊನೆಯಲ್ಲಿ ಶುಭಂ ಅಂತ ಯಾಕೆ ತೋರಿಸಿದರು?' ಅನ್ನುವ ಪ್ರಶ್ನೆ.
**
ಪ್ರತಿ ದಿನ ನೋನಿ ರಸ ಒಂದು ಚಮಚ ಕುಡಿದರೆ ಭೂಲೋಕದಲ್ಲಿ ಇರುವ ರೋಗಗಳು ಮಾತ್ರ ಅಲ್ಲ, ಇತರ ಗ್ರಹಗಳಿಂದ ಬರಬಹುದಾದ ರೋಗಗಳೂ ಬರುವುದಿಲ್ಲ. ಭವಿಷ್ಯದಲ್ಲಿ ಪರಿಣಾಮ ಏನಾಗಬಹುದು!? ಸಧ್ಯದಲ್ಲೇ ಎಲ್ಲ ನರ್ಸಿಂಗ್ ಹೋಮ್‌ಗಳು, ಕ್ಲಿನಿಕ್‌ಗಳು, ಮೆಡಿಕಲ್ ಶಾಪ್‌ಗಳು ಬಾಗಿಲು ಹಾಕುತ್ತವೆ!!? ಫಾರ್ಮಸಿ, MBBS ಮುಗಿಸಿದವರು ನಿರುದ್ಯೋಗ ಸಮಸ್ಯೆಯಿಂದ ಬಳಲಿ, ಬೆಂಡಾಗಿ, ಮಾನಸಿಕವಾಗಿ ಅಸ್ವಸ್ತರಾಗಿ ಕೊನೆಗೆ ಅವರೂ ಒಂದು ಚಮಚ ನೋನಿ ಕುಡಿದು ಜೀವನ ಸಾಗಿಸಬೇಕಾಗಬಹುದು!?
ಮಾರ್ಚ್ 31 ಕ್ಕೆ ಮುಗಿಯುವ ಆರ್ಥಿಕ ವರ್ಷದಲ್ಲಿನ ನೋನಿ ತಯಾರಿಕಾ ಕಂಪನಿಯ ಲಾಭಾಂಶ ಲೆಕ್ಕ ಹಾಕಿ, ಏಪ್ರಿಲ್ ಒಂದನೇ ತಾರೀಖು ಮೂರ್ಖರಾಗಿದ್ದು ಯಾರು ಅಂತ ಯಾರಾದರು ಆಡಿಟ್ ಮಾಡ್ತಾರಾ!!? ನೋ ವೇ!!
*
ತಂತ್ರಜ್ಞಾನದ ಬ್ರಹ್ಮಾಂಡ, ಬೆರಳ ತುದಿಗೆ ಬಂದ ಮೇಲೂ ಮೂರ್ಖರಾಗುವಿಕೆ ಹೆಚ್ಚಾಗಿದೆ.
"ಕತ್ತೆ ಹಾಲಿನಲ್ಲಿ ಅಯಸ್ಸು ವೃದ್ದಿ ಮಾಡುವ ಚೈತನ್ಯ ಶಕ್ತಿ ಇದೆ" ಇದು ಇಸ್ರೋ ಸಂಶೋಧನೆ, ನಾಸಾ ವರದಿ ಮಾಡಿದ್ದು, ದೂರದ ಅಮೇರಿಕಾದಲ್ಲಿ ವಿಜ್ಞಾನಿಗಳ ತಂಡ ಸಂಶೋಧಿಸಿದ್ದು, ಜರ್ಮನಿಯ ಸಂಸ್ಕೃತ ಗ್ರಂಥ ಒಂದರ 420 ನೇ ಪುಟದಲ್ಲಿದೆ ಅಂತ ಬೋಲ್ಡ್ ಲೆಟರ್‌ನಲ್ಲಿ ಬಂದ "ಫಾರ್ವರ್ಡ್ ಮೆನಿಟೈಮ್ಸ್" ಮೆಸೇಜನ್ನು 'ಪರಮ ಸತ್ಯದ ದಿವ್ಯ ದರುಷನದ ವೇದದ ಸಾಲುಗಳು' ಎಂಬಂತೆ 21 ಜನರಿಗೆ ರೀ-ಫಾರ್ವರ್ಡ್ ಮಾಡಿ, ಲೈಕ್ಸ್ ಬರುವುದನ್ನು ಕಾಯುತ್ತ, ಕತ್ತೆ ಹಾಲು ದೊರೆಯುವ ಅಂಗಡಿಯನ್ನು ಗೂಗಲ್ ಮ್ಯಾಪಲ್ಲಿ ಸರ್ಚ್ ಮಾಡ್ತಾ ಇದಿವಿ!!!
**
ಶ್ರೀಯುತ .............. ರವರ ......... ಹೇಳಿಕೆ ಖಂಡನೀಯ. ನೀವಿದನ್ನು ಒಪ್ಪುವುದಾದರೆ, ಶ್ರೀಯುತ............. ರವರಿಗೆ ತಲುಪುವವರೆಗೂ ಶೇರ್ ಮಾಡಿ" ಅಂತ ಕೋರಿಕೆ ಸಲ್ಲಿಸಿದ ಮೆಸೇಜ್‌ಗಳು!!.
ಅದನ್ನು ಯಾರ್ಯಾರಿಗೋ ಫಾರ್ವರ್ಡ್ ಮಾಡಿ, ಶೇರ್ ಮಾಡಿ, ಸ್ಟೇಟಸ್ ಮಾಡಿ, ಅವರು ಮತ್ತೆ ಫಾರ್ವರ್ಡ್ ಮಾಡಿ, ಅವರು ಮತ್ತೆ ಫಾರ್ವರ್ಡ್ ಮಾಡಿ, ಅವರು ಮತ್ತೆ ಫಾರ್ವರ್ಡ್ ಮಾಡಿ....... ಅಂತಿಮವಾಗಿ ಅದು ಗೌರವಾನ್ವಿತರಿಗೆ ತಲುಪಿದೆ ಅಂತ ಗೊತ್ತಾಗುವುದು ಹೇಗೆ!!?
ಇದೇ ರೀತಿ ಬರಗೂರರಿಗೆ, ಚಕ್ರತೀರ್ಥರವರಿಗೆ, ಮೋದಿಗೆ, ರಾಹುಲ್‌ಗೆ, ಸಿದ್ದರಾಮಯ್ಯನವರಿಗೆ, 75000 ವರ್ಷಗಳ ಇತಿಹಾಸ ಸಂಶೋಧಕ ಹಿಂಸಾ ಚೇತನ್‌ಗೆ!! ತಲುಪುವವರೆಗೂ ಶೇರ್ ಮಾಡಿ' ಅಂತ ಬಂದ ಹತ್ತಾರು ಮೆಸೇಜ್‌ಗಳಿವೆ!!!
ಈ ಮೆಸೇಜ್ ನನಗೆ ತಲುಪಿದೆ ಅಂತ ಗೌರವಾನ್ವಿತರು ಸ್ವೀಕೃತಿ ಮೆಸೇಜ್ ಕಳಿಸುತ್ತಾರಾ!!? ಆಮೇಲೆ ನಾನು ಈ ಫಾರ್ವರ್ಡ್ ಪ್ರಕ್ರಿಯೆಯನ್ನು ನಿಲ್ಲಿಸುವುದಾ!!? ಮಂಡೆ 42° ಸೆಲ್ಸಿಯಸ್ ಬಿಸಿಯಾಗುತ್ತೆ!!
ಬಂದ ಮೆಸೇಜ್‌ಗಳನ್ನು ಫಾರ್ವರ್ಡ್ ಮಾಡದೆ, ಭದ್ರವಾಗಿ ಸ್ಟಾರ್ ಮೆಸೇಜ್ ಲಿಸ್ಟ್‌ನಲ್ಲಿ ಹಾಕಿ ಇಟ್ಟಿದ್ದೇನೆ!!!
ಮೇಲಿನ ಯಾರಾದರು ಗೌರವಾನ್ವಿತರು 'ಸಂತೆಯಲ್ಲಿ' ಯಾವಾಗಲಾದರು ಆಕಸ್ಮಿಕವಾಗಿ ಸಿಕ್ಕಿದರೆ, ತಲುಪಿಸಿ ಬಿಡೋಣ ಅಂತ!!!
**
ಮೊನ್ನೆ ಮೊನ್ನೆ RBI ಗೌರ್ನರ್ ನೇರ ಫೋನ್ ಮಾಡಿದ್ರು!. ನನ್ನ ಅಕೌಂಟೇ ಇಲ್ಲದ SBI ನಲ್ಲಿನ ನನ್ನ ಅಕೌಂಟಿಗೆ 50ಲಕ್ಷ ಜಮಾ ಆಗಿದೆ, KYC ಡೀಟೈಲ್ ಕೊಡಿ ಅಂತ SBI 'ಚೀಪ್' ಮ್ಯಾನೇಜರ್ ಹೋದವಾರ ಫೋನ್ ಮಾಡಿದ್ರು!. ಮ್ಯೂಚ್ಯುಯಲ್ ಫಂಡ್‌ನಲ್ಲಿ ಹಣ ಹಾಕಿ, ವರ್ಷಕ್ಕೆ 40% ಹೈಕ್ ಗ್ಯಾರಂಟಿ ಅಂತ ಮುಖ್ಯಮಂತ್ರಿಗಳ ರೀತಿ ಶೇರ್ ಬ್ರೋಕರ್ ಕಂಪನಿಯವರು ಕರೆ ಮಾಡ್ತಾರೆ.
ಕೈಗೆ ಆ್ಯಂಡ್ರಾಯ್ಡ್ ಫೋನ್ ಬಂದ ಮೇಲೆ ಬರೀ VIP ಗಳದ್ದೇ ಫೋನ್!! ಕಾಲ್ ಮೇಲು ಕಾಲು!!
***
"21,000 ಬಂಡವಾಳ ಹೂಡಿದರೆ, 28 ದಿನಗಳಲ್ಲಿ 15,00,000 (ಫಿಗರ್ ಇನ್ ವರ್ಡ್ಸ್: ಹದಿನೈದು ಲಕ್ಷ ರೂಪಾಯಿಗಳು ಮಾತ್ರ ಅಲ್ಲ!! ಮತ್ತೂ...!!) ಗಳಿಸುವ ಅವಕಾಶ ಇನ್ನು ಹತ್ತು ದಿನಗಳು ಮಾತ್ರ ಇಂದೇ ನೊಂದಾಯಿಸಿ. (28 ದಿನಗಳಲ್ಲಿ 15 ಲಕ್ಷ ಆದರೆ ವಾರಕ್ಕೆ 4,55,000 !!! ) ಅಂತ ಸುಧಾ ನಾರಾಯಣ ಮೂರ್ತಿ, ನಿರ್ಮಲಾ ಸೀತಾರಾಮನ್, ಇಂಡಿಯಾ ಟುಡೇ ಪತ್ರಿಕೆಯ ಮುಖ್ಯ ಸಂಪಾದಕರುಗಳು ಫೇಸ್ ಬುಕ್‌ನಲ್ಲಿ ಬಂದು ನೋಟಿಫಿಕೇಷನ್ ಕೊಡ್ತಾ ಇದಾರೆ!!
(ಆ ಪೇಕ್ ಮೆಸೇಜ್ ಲಿಂಕ್‌ಗಳನ್ನು ಇಲ್ಲಿ ಉದ್ದೇಶ ಪೂರ್ವಕವಾಗಿ ಕೊಟ್ಟಿಲ್ಲ. ಆಸಕ್ತರು ಫೇಸ್ ಬುಕ್‌ನಲ್ಲಿ ನೋಡಬಹುದು!!)
ಈಗ ಹೇಳಿ,
ಈ ಸಂತೆಯೊಳಗೊಂದು ಮನೆಯ ಮಾಡಿ, ನಾನು ಮೂರ್ಖನಲ್ಲನೆಂದರೆಂತಯ್ಯ!!!?
ಅಂತ ಏಪ್ರಿಲ್ ಒಂದಕ್ಕೆ ಮೇಲಿನ ಅಷ್ಟೂ ವಿಚಾರಗಳನ್ನು ನಿಮಗೂ ಓದಿಸಿ "ಈ ಸಂತೆಯೊಳಗೊಂದು......." ಅಂತ ಕೇಳಿದ್ದು ಸರಿ ಇಲ್ವಾ!!?
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ