ಪುತ್ತೂರು: ಕಳೆದ ಕೆಲವು ವರ್ಷಗಳಿಂದ ಶಾಂತವಾಗಿದ್ದ ಕಣಿವೆ ಪ್ರದೇಶ ಇದೀಗ ಬೀಭತ್ಸ ದೃಶ್ಯಾವಳಿಗಳಿಗೆ ಸಾಕ್ಷಿಯಾಗಿ ನಿಂತಿದೆ. ದೇಶದ ಸೌಂದರ್ಯವನ್ನು ಆಸ್ವಾದಿಸಲು ಹೋದವರು, ಮದುವೆಯ ಸಂಭ್ರಮವನ್ನು ಸವಿನೆನಪಾಗಿ ಪರಿವರ್ತಿ ಸಲು ಪ್ರಯಾಣ ಮಾಡಿದವರು ಶೋಕ ಸಮುದ್ರದಲ್ಲಿ ಮುಳುಗಿದ್ದಾರೆ. ದುರುಳ ಭಯೋತ್ಪಾದಕರ ವಿಧ್ವಂಸಕಾರಿ ದುರಾಚಾರಕ್ಕೆ ಇಡಿಯ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿದೆ. ತೀವ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದೆ.
ನಮ್ಮ ದೇಶದೊಳಗಿದ್ದು, ದೇಶದ ಅನ್ನವನ್ನೇ ಉಂಡು ಈ ದೇಶಕ್ಕೆ ದ್ರೋಹ ಬಗೆಯುವ ವ್ಯಕ್ತಿಗಳೂ ಅಲ್ಲಿಲ್ಲಿ ಮನೆಮಾಡಿಕೊಂಡು ಭಯೋತ್ಪಾದಕರ ಜತೆ ಶಾಮೀಲಾಗುತ್ತಿರುವುದು ದುರಂತ ಹಾಗೂ ಶಿಕ್ಷಾರ್ಹವಾದದ್ದು. ಈ ನೆಲೆಯಲ್ಲಿ ಭಯೋತ್ಪಾದಕ ಶಕ್ತಿಯ ಜತೆಗೆ ಅವರಿಗೆ ಆಶ್ರಯವೀಯುವ ಮಂದಿಯನ್ನೂ ಮಟ್ಟ ಹಾಕಬೇಕೆಂಬುದು ಉಲ್ಲೇಖಾರ್ಹ. ಈ ಮಧ್ಯೆ ಸಂತ್ರಸ್ತರ ಜತೆ ನಿಲ್ಲಬೇಕಾದದ್ದು ಸಮಸ್ತ ನಾಗರಿಕ ಸಮುದಾಯದ ಜವಾಬ್ದಾರಿಯೂ ಹೌದು. ಈ ಹಿನ್ನೆಲೆಯಲ್ಲಿ ಸದಾ ದೇಶಪ್ರೇಮ, ಧರ್ಮ ರಕ್ಷಣೆ ಬಗೆಗೆ ತುಡಿಯುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳೂ ಕಾಶ್ಮೀರ ದಾಳಿಯ ಸಂತ್ರಸ್ತರ ಜತೆ ನಿಲ್ಲುವ ಮೂಲಕ ಅವರಿಗೊಂದು ಸಾಂತ್ವನ ನೀಡುವ ಪ್ರಯತ್ನಕ್ಕಿಳಿಯುತ್ತಿದೆ. ಈ ನಿಟ್ಟಿನಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕರ ದುಷ್ಕೃತ್ಯಕ್ಕೆ ಬಲಿಯಾದ ವ್ಯಕ್ತಿಗಳ ಮಗ ಅಥವ ಮಗಳಿಗೆ ಸಂಪೂರ್ಣ ಉಚಿತ ಶಿಕ್ಷಣವನ್ನು ನೀಡುವುದಕ್ಕೆ ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ನಿರ್ಧರಿಸಿವೆ.
ನಟ್ಟೋಜ ಫೌಂಡೇಶನ್ ಟ್ರಸ್ಟ್ ತನ್ನ ಆಶ್ರಯದಲ್ಲಿ ಅಂಬಿಕಾ ವಿದ್ಯಾಲಯ (ಸಿಬಿಎಸ್‌ಇ), ವಸತಿಯುಕ್ತ ಹಾಗೂ ದೈನಂದಿನ ಓಡಾಟಕ್ಕನುಗುಣವಾಗಿನ ಎರಡು ಪ್ರತ್ಯೇಕ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳು ಹಾಗೂ ಅಂಬಿಕಾ ಪದವಿ ಮಹಾವಿದ್ಯಾಲಯವನ್ನು ನಡೆಸುತ್ತಿದೆ. ಎಲ್.ಕೆ.ಜಿ ತರಗತಿಯಿಂದ ತೊಡಗಿ ಪದವಿ ಹಂತದವರೆಗೆ ಯಾವುದೇ ತರಗತಿಯಲ್ಲಿ ಓದಲು ಬಯಸುವ ಕಾಶ್ಮೀರದ ಭಯೋತ್ಪಾದಕ ದಾಳಿಯ ಸಂತ್ರಸ್ತರ ಮಕ್ಕಳಿಗೆ ಈ ಉಚಿತ ಶಿಕ್ಷಣದ ಸೌಲಭ್ಯ ದೊರಕಲಿದೆ. ಜತೆಗೆ ಊಟೋಪಚಾರ ವಸತಿಗಳೂ ಶುಲ್ಕರಹಿತವಾಗಿ ಲಭ್ಯವಾಗಲಿದೆ.
ಫೌಂಡೇಶನ್ ಟ್ರಸ್ಟ್ ಈ ಹಿಂದೆ ಕಾಶ್ಮೀರದ ಪಂಡಿತರ ಮೇಲಾದ ದೌರ್ಜನ್ಯದ ಘೋರತೆಯನ್ನು ಮನಗಂಡು ಕಾಶ್ಮೀರಿ ಸಂತ್ರಸ್ತ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಘೋಷಿಸಿತ್ತು. ಅದರನ್ವಯ ಇಬ್ಬರು ವಿದ್ಯಾರ್ಥಿಗಳು ಕಾಶ್ಮೀರದಿಂದ ಪುತ್ತೂರಿನ ಅಂಬಿಕಾ ಪದವಿಪೂರ್ವ ವಿದ್ಯಾಲಯಕ್ಕೆ ಆಗಮಿಸಿ ಪಿಯು ಶಿಕ್ಷಣಕ್ಕಾಗಿ ದಾಖಲಾತಿ ಹೊಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ದೇಶದ ರಕ್ಷಣೆಗಾಗಿ ತಮ್ಮ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ನಮ್ಮೆಲ್ಲರನ್ನು ಸಂರಕ್ಷಿಸುವ ಸೈನಿಕರ ಮಕ್ಕಳಿಗೆ ಹಲವು ವರ್ಷಗಳಿಂದ ಅಂಬಿಕಾ ರಿಯಾಯಿತಿ ಶುಲ್ಕದೊಂದಿಗೆ ಶಿಕ್ಷಣ ನೀಡುತ್ತಿದೆ. ಪುತ್ತೂರು ಸುತ್ತಮುತ್ತಲಿನ ಪ್ರದೇಶದ ಸೈನಿಕರು ನಿವೃತ್ತರಾಗಿ ಮರಳಿ ಬಂದಾಗ ಅವರನ್ನು ಮೆರವಣಿಗೆ ಮೂಲಕ ಕರೆತಂದು ಸನ್ಮಾನಿಸುವ ಪದ್ಧತಿಯನ್ನೂ ಅಂಬಿಕಾ ನಡೆಸಿಕೊಂಡು ಬರುತ್ತಿದೆ. ಪುತ್ತೂರಿನಲ್ಲಿ ದಿನಪೂರ್ತಿ ಜ್ಯೋತಿ ಉರಿಯುತ್ತಿರುವ ದಕ್ಷಿಣ ಭಾರತದ ಏಕೈಕ ಅಮರ್ ಜವಾನ್ ಜ್ಯೋತಿ ಸ್ಮಾರಕ ರಚಿಸಿದ ಧನ್ಯತೆಯೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಗಿವೆ.
ಈಗಾಗಲೇ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಸಂಘಗಳ ವತಿಯಿಂದ ಕಾಶ್ಮೀರದಲ್ಲಿನ ಭಯೋತ್ಪಾದಕ ದಾಳಿಯ ವಿರುದ್ಧ ತೀವ್ರ ಪ್ರತಿಭಟನೆ ನಡೆದು, ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕುವಂತೆ ದೇಶದ ಗೃಹ ಸಚಿವರಿಗೆ ಆಗ್ರಹಪೂರ್ವಕ ಪತ್ರವನ್ನು ಪುತ್ತೂರಿನ ಸಹಾಯಕ ಆಯುಕ್ತರ ಮುಖೇನ ಕಳುಹಿಸಿಕೊಡಲಾಗಿದೆ. ಮುಂದುವರಿದ ಭಾಗವಾಗಿ, ಸಂತ್ರಸ್ತರ ಜತೆ ನಿಲ್ಲುವ, ತನ್ಮೂಲಕ ಅವರಿಗೆ ನೈತಿಕ ಬೆಂಬಲ ನೀಡುವುದರೊಂದಿಗೆ ತಮ್ಮ ತಂದೆಯನ್ನು ಕಳೆದು ಕೊಂಡ ಮಕ್ಕಳು ಶಿಕ್ಷಣಕ್ಕಾಗಿ ಕಿಂಚಿತ್ತೂ ಕಷ್ಟಪಡುವಂತಾಗ ಬಾರದೆಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಹಾಸ್ಟೆಲ್ ಸಹಿತ ಸಂಪೂರ್ಣ ಉಚಿತ ಶಿಕ್ಷಣವನ್ನು ಘೋಷಿಸಲಾಗುತ್ತಿದೆ.
ಸಂಪರ್ಕ ಸಂಖ್ಯೆ: 9448835488 / 8197251489
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ