ಎಕೆಬಿಎಂಎಸ್ ಚುನಾವಣೆ: ವೇದಬ್ರಹ್ಮ ಡಾ. ಭಾನುಪ್ರಕಾಶ ಶರ್ಮ ಅಖಾಡದಲ್ಲಿ

Upayuktha
0


ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್) ನೂತನ ಅಧ್ಯಕ್ಷರ ಆಯ್ಕೆಗೆ ಏಪ್ರಿಲ್ 13 ಭಾನುವಾರದಂದು ಮತದಾನ ನಡೆಯಲಿದ್ದು, ಪ್ರಚಾರ ಅಂತಿಮ ಹಂತದಲ್ಲಿದೆ. 


ಅಧ್ಯಕ್ಷ ಸ್ಥಾನಕ್ಕೆ ಶ್ರೀರಂಗಪಟ್ಟಣದ ವೇದ ವಿದ್ವಾಂಸ ಡಾ.ಭಾನುಪ್ರಕಾಶ್ ಶರ್ಮಾ ಸ್ಪರ್ಧಿಸಿದ್ದು, ಅವರಿಗೆ ಎಲ್ಲೆಡೆ ಭರ್ಜರಿ ಬೆಂಬಲ ವ್ಯಕ್ತವಾಗುತ್ತಿದೆ.  


ಬ್ರಾಹ್ಮಣ್ಯಕ್ಕಾಗಿಯೇ ತಮ್ಮ ಬದುಕು ಮುಡಿಪಾಗಿಟ್ಟಿರುವ ಡಾ. ಭಾನುಪ್ರಕಾಶ್ ಶರ್ಮಾ ದೇಶ-ವಿದೇಶಗಳಲ್ಲಿ ಚಿರಪರಿಚಿತ ಹೆಸರು. ಸಮರ್ಥ ಆಡಳಿತಗಾರ, ಧರ್ಮ ಪೋಷಕ, ಪ್ರತಿ ಬ್ರಾಹ್ಮಣರ ಬಂಧು ಹೀಗೆ ಅಜಾತಶತ್ರುವಾಗಿರುವ ಅವರು ಸರ್ಕಾರದಲ್ಲಿ ಪ್ರಭಾವ ಹೊಂದಿರುವವರು. ಆಡಳಿತ ಯಂತ್ರದೊಂದಿಗೆ ನಿಕಟ ಸಂಪರ್ಕ ಹೊಂದಿರುವ ಅವರು ಪಕ್ಷಾತೀತವಾಗಿ ಭಕ್ತರನ್ನು, ಅಭಿಮಾನಿಗಳನ್ನು ಹೊಂದಿದ್ದಾರೆ. ಇದು ಇವರಿಗೆ ಸಮಾಜದ ಅಭಿವೃದ್ಧಿಗೆ ಇನ್ನಷ್ಟು ದೊಡ್ಡ ಮಟ್ಟದ ಕೊಡುಗೆ ನೀಡಲು ಸಾಧ್ಯ ಅನ್ನುವ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ.


ವೈದಿಕ ಪರಂಪರೆಯ ವ್ಯಕ್ತಿ ಇದೇ ಮೊದಲು: ಮಹಾಸಭಾದ ಐವತ್ತು ವರ್ಷಗಳ ಇತಿಹಾಸದಲ್ಲಿ ವೈದಿಕ ಪರಂಪರೆಯಲ್ಲಿ ತೊಡಗಿಸಿಕೊಂಡ ಯಾರೊಬ್ಬರೂ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಯಾಗಿ ಸ್ಪರ್ಧಿಸಿರಲಿಲ್ಲ. ಈ ಬಾರಿ ಈ ಕೊರತೆಯನ್ನು ತುಂಬಿಸಿರುವ ಭಾನುಪ್ರಕಾಶ್ ಶರ್ಮಾ ಅವರಿಗೆ ಎಲ್ಲಡೆಯಿಂದ ಬೆಂಬಲ ಹರಿದುಬರುತ್ತಿದೆ.


ಸನಾತನ ಪರಂಪರೆಯ ದ್ಯೋತಕ: ವೈದಿಕ ಪರಂಪರೆ ಎಂಬುದು ವೇದಕಾಲದಿಂದಲೂ ಬಂದಿರುವ ಒಂದು ಪದ್ಧತಿ. ಅದನ್ನು ಅಕ್ಷರಶಃ ಪಾಲಿಸುವುದು ಬಹಳಷ್ಟು ಕಷ್ಟದ ಕೆಲಸ. ದೇವರ ಪೂಜೆ ಮಾಡದೆ ಬಾಳಬಹುದು, ಪಿತೃ ಕಾರ್ಯ ಮಾಡದೆ ಬಾಳಲು ಅಸಾಧ್ಯ ಎಂಬ ವಿಷಯ ಎಲ್ಲರಿಗೂ ಗೊತ್ತಿರುವಂತದ್ದೇ, ಹೀಗೆ ಸನಾತನ ಧರ್ಮದಲ್ಲಿ ಇರುವ ಆಚರಣೆ, ಪದ್ಧತಿಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ತಮ್ಮ ಜೀವನವನ್ನು ಶ್ರೀಗಂಧದAತೆ ತೇಯುತ್ತಿರುವ ಭಾನುಪ್ರಕಾಶ ಶರ್ಮಾ ಅವರು ಗಳಿಸಿದ್ದನ್ನು ತಮಗೆ ಉಳಿಸಿದ್ದು ಸ್ವಲ್ಪ, ಸಮಾಜಕ್ಕೆ ಕೊಟ್ಟಿದ್ದೇ ಸರ್ವಸ್ವ.


ಕೋವಿಡ್ ಸಮಯದಲ್ಲಿ ತಾವೇ ಮುಂದೆ ನಿಂತು ನೂರಾರು ಆತ್ಮಗಳಿಗೆ ಪಿಂಡ ಪ್ರದಾನ ಮಾಡಿದ್ದು ಸಣ್ಣ ವಿಷಯವೇನಲ್ಲ. ಇಲ್ಲಿ ಅವರು ಜಾತಿ ನೋಡಲಿಲ್ಲ. ಕಾವೇರಿ ನದಿ ನೀರಿಗಾಗಿ ಹೋರಾಟ ಮಾಡಿದಾಗ ಅವರ ಮನದಲ್ಲಿ ಇದ್ದುದು ಸಮಸ್ತ ಸಮಾಜದ ಸುಖ. ಎರಡು ಶಾಲೆಗಳ ಮುಖ್ಯಸ್ಥರಾಗಿ ದುಡಿಯುತ್ತಿರುವ ಅವರ ಕಣ್ಣ ಮುಂದೆ ಇರುವುದು ಬಡಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂಬ ತುಡಿತ ಮಾತ್ರ.


ಸಮರ್ಥ ಆಡಳಿತಗಾರ: ಭಾನುಪ್ರಕಾಶ್ ಶರ್ಮಾ ಅವರ ಪ್ರಭೆ ಕನ್ನಡ ನಾಡಿಗಷ್ಟೇ ಸೀಮಿತವಲ್ಲ. ಅಮೆರಿಕ ಸಹಿತ ಐದಾರು ದೇಶಗಳಲ್ಲಿ ಅವರು ಬ್ರಾಹ್ಮಣ ಸಮಾಜವನ್ನು ಹುಟ್ಟುಹಾಕಿದ್ದಾರೆ. ಈ ಮೂಲಕ ತಾವೊಬ್ಬ ಸಮರ್ಥ ಆಡಳಿತಗಾರ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ.


ಮಹಾಸಭೆಯಲ್ಲಿ ಕಳೆದ 30 ವರ್ಷಗಳಿಂದ ಸದಸ್ಯನಾಗಿ ವಿವಿಧ ಹಂತಗಳ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಭಾನುಪ್ರಕಾಶ್ ಶರ್ಮಾ ಏಳು ಬಾರಿ ಉಪಾಧ್ಯಕ್ಷರಾಗಿ ಸಮಾಜದ ಸೇವೆ ಸಲ್ಲಿಸಿದ್ದಾರೆ. ರಾಜ್ಯದಾದ್ಯಂತ ಹಾಲಿ ಅಧ್ಯಕ್ಷ ಶ್ರೀ ಅಶೋಕ ಹಾರನಹಳ್ಳಿ ಅವರ ಜೊತೆಯಲ್ಲಿ ಮತ್ತು ಹಿಂದಿನ ಅಧ್ಯಕ್ಷರುಗಳ ಜೊತೆಯಲ್ಲಿ ಅವರ ಮಾರ್ಗದರ್ಶನದಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ನಿರ್ವಹಿಸಿ ಯಶಸ್ವಿ ಸಂಘಟಕರೆAದು ಎಲ್ಲರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.


ಹಾಲಿ ಅಧ್ಯಕ್ಷರ ಆಡಳಿತ ವೈಖರಿಯನ್ನು ಹತ್ತಿರದಿಂದ ನೋಡಿ ತಿಳಿದುಕೊಂಡಿರುವ ಶರ್ಮಾ ಅವರು,  ಹಾರನಹಳ್ಳಿ ಅವರು ತೋರಿಸಿಕೊಟ್ಟ ದಾರಿಯಲ್ಲೇ ನಡೆಯುವವರು. ಮಹಾಸಭಾಕ್ಕೆ 50 ವರ್ಷ ತುಂಬಿರುವ ಕಾರಣ ಸುವರ್ಣ ಭವನ ನಿರ್ಮಿಸಬೇಕೆಂಬ ಗುರಿ ಇಟ್ಟುಕೊಂಡಿದ್ದು, ಅದನ್ನು ಸಾಧಿಸುವ ನಿಟ್ಟಿನಲ್ಲಿ ಈಗಾಗಲೇ ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ.


ಶರ್ಮಾ ಅವರು ವಿಶ್ವ ಹಿಂದೂ ಪರಿಷತ್‌ನಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. ಆ ಸಂಘಟನೆ ಇರುವುದು ಸನಾತನ ಹಿಂದೂ ಧರ್ಮ ರಕ್ಷಣೆಗೆ ಎಂಬುದನ್ನು ಮರೆಯಲಾಗದು. ಅದೇ ರೀತಿ ಸನಾತನ ಬ್ರಾಹ್ಮಣ್ಯದ ರಕ್ಷಣೆಗಾಗಿಯೇ ಇರುವಂತಹ ಮಹಾಸಭಾದ ಚುಕ್ಕಾಣಿ ಹಿಡಿಯಲು ಶರ್ಮಾ ಅವರಿಗೆ ಯೋಗ್ಯತೆ ಇದೆ, ಯೋಗವಂತೂ ಇದ್ದೇ ಇರುತ್ತದೆ ಎಂಬ ಭಾವನೆ ಸಾರ್ವತ್ರಿಕವಾಗಿದೆ.


ಅನೇಕ ಮಠ ಮಾನ್ಯಗಳ ಗುರುಗಳೊಂದಿಗೆ ನಿರಂತರ ಸಂಪರ್ಕದಿಂದ ಗುರು ಸೇವಾ ಹಾಗೂ ವಿಪ್ರಜನರ ಸೇವೆಯಿಂದ ಸಮಾಜದ ಏಳಿಗೆಗೆ ತನ್ನನ್ನು ತಾನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಮಕ್ಕಳಲ್ಲಿ ಧರ್ಮ ಜಾಗೃತಿಯನ್ನು ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಲ್ಲದೆ, 14 ಶಾಲೆಗಳ ಆಡಳಿತ ಮಂಡಳಿಯಲ್ಲಿ ಜವಾಬ್ದಾರಿ ನಿರ್ವಹಿಸಿ ಶಿಕ್ಷಣ ಸಂಸ್ಥೆಗಳಿಗೆ ಮತ್ತು ವಿಶೇಷವಾಗಿ ಸಮಾಜಕ್ಕೆ ತನ್ನದೇ ಆದಂತಹ ಕೊಡುಗೆ ನೀಡಿದ್ದಾರೆ.


ಧರ್ಮ ಸಂರಕ್ಷಣೆ ಹಾಗು ಗೋ ಸಂರಕ್ಷಣಾ ವಿಚಾರದಲ್ಲಿ ಅನೇಕ ವಿಚಾರಗೋಷ್ಠಿಗಳನ್ನು ನಡೆಸಿ ತಾವೇ ಖುದ್ದಾಗಿ ಗೋಪಾಲನೆಗೆ ಒತ್ತುಕೊಟ್ಟಿದ್ದಾರೆ. ಕನ್ನಡ ಮತ್ತು ಸಂಸ್ಕೃತವನ್ನು ಸಾಂಸ್ಕೃತಿಕವಾಗಿ ಮನದಟ್ಟಾಗುವಂತೆ ಸಮಾಜದ ಮಹಿಳೆಯರು ಮತ್ತು ಯುವ ಜನಾಂಗಕ್ಕೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಕನ್ನಡ ಭಾಷೆ ಹಾಗೂ ಕಾವೇರಿ ಉಳಿಸಿ ಹೋರಾಟದಲ್ಲಿ ನಿರಂತರವಾಗಿ ಭಾಗವಹಿಸಿ ನೆಲ-ಜಲ ರಕ್ಷಣೆ  ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದು, ತಮ್ಮದೇ ಆದ ಕಾರ್ಯಕರ್ತರ ಪಡೆಯನ್ನು ಕಟ್ಟಿದ್ದಾರೆ. ಮೈಸೂರು ಮಹಾರಾಜರ ರಾಜಮನೆತನದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿ ರಾಜಮನೆತನದೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದ್ದಾರೆ.


ದಕ್ಷಿಣ ಭಾರತದ ಪುರೋಹಿತರ ಸಂಘದ ಉಪಾಧ್ಯಕ್ಷರಾಗಿ, ವಿದ್ಯಾಭಾರತಿ ಶಾಲೆಯ ಅಧ್ಯಕ್ಷರಾಗಿ, ಸರ್ವಜ್ನ್ಯ ಪ್ರೌಢ ಶಾಲೆಯ ಅಧ್ಯಕ್ಷರಾಗಿ, ಸುಪ್ರಭಾತ ಪ್ರೌಢ ಶಾಲೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಶರ್ಮಾ ಅವರ ಆಡಳಿತ ಅನುಭವ ಅಪಾರ. ಶ್ರೀರಂಗಪಟ್ಟಣದಲ್ಲಿ ನಿತ್ಯ ದಾಸೋಹ ಕೈಂಕರ್ಯದಲ್ಲಿ ತೊಡಗಿರುವ ಭಾನುಪ್ರಕಾಶ್ ಶರ್ಮಾ ಅವರಿಗೆ ಇರುವ ಸಮಾಜ, ಜನರ ಮೇಲಿನ ಪ್ರೀತಿ ಅಪಾರ.

ಶ್ರೀ ಶರ್ಮ ಅವರ ಸಮಾಜ ಸೇವಾ ಮನೋಭಾವ, ಸಾಧನೆ, ಶ್ರೇಷ್ಠರೇ ಅರಿತು ಇದೀಗ ಅವರಿಗೆ ದೊಡ್ಡ ಮಟ್ಟದ ಬೆಂಬಲ ಎಲ್ಲೆಡೆಯಿಂದ ಹರಿದು ಬರುತ್ತಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top