ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನಲ್ಲಿ ವಿಶ್ವ ಸಮಾಜಕಾರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆಯ ಬುಡಕಟ್ಟು ಆರೋಗ್ಯ ವಿಭಾಗದ ಸಂಯೋಜಕರಾದ ಕು. ಸುಶೀಲಾ ಅವರು ಮಾತನಾಡಿ “ತಳಸಮುದಾಯದವರು ಬದುಕು ಕಟ್ಟಿಕೊಳ್ಳಲು ಶಿಕ್ಷಣ ಸಹಕಾರಿಯಾಗಿದೆ. ಅದರಲ್ಲೂ ಎಂ.ಎಸ್.ಡಬ್ಲ್ಯು ಶಿಕ್ಷಣ ಪಡೆದ ನನ್ನ ಬದುಕು ಉಜ್ವಲವಾಗಿದೆ. ನನ್ನಂತಹ ಬುಡಕಟ್ಟು ಜನರ ಕ್ಷೇತ್ರದಲ್ಲಿಯೇ ವೃತ್ತಿ ಮುಂದುವರೆಸಿಕೊಂಡು, ಸಮುದಾಯದ ಜನರಿಗೂ ಮಾರ್ಗದರ್ಶನ ನೀಡಲು ಸಹಕಾರಿಯಾಗಿದೆ. ವೃತ್ತಿ ಜೀವನದ ಮೊದಲ ಹಂತಗಳಲ್ಲಿ ಸಮಸ್ಯೆಗಳು ಸಾಮಾನ್ಯ. ಇವುಗಳನ್ನೆಲ್ಲಾ ಮೀರಿ ಸಾಧನೆ ಮಾಡಬೇಕಾಗಿರುತ್ತದೆ.” ಎಂದು ತಮ್ಮ ವೃತ್ತಿ ಜೀವನದ ಹಲವು ಮಜಲುಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ಉಡುಪಿ ಕಲ್ಯಾಣಪುರದ ಗೊರೆಟ್ಟಿ ಆಸ್ಫತ್ರೆಯ ಸಮಾಜ ಕಾರ್ಯಕರ್ತರಾದ ರಾಕೇಶ್ ಅವರು ಮಾತನಾಡಿ, “ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ನಿಮ್ಮ ಕೈಯ್ಯಲ್ಲೇ ಇರುತ್ತದೆ. ಭವಿಷ್ಯದ ಜೀವನಕ್ಕೆ ಬೇಕಾದ ಜ್ಞಾನ, ಕೌಶಲ್ಯಗಳನ್ನು ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸಂಪಾದಿಸಲು ಇದು ಸಕಾಲ. ಈಗ ವಿರಮಿಸಿದರೆ ಭವಿಷ್ಯದಲ್ಲಿ ಕಷ್ಟಪಡಬೇಕು; ಈಗ ಕಷ್ಟಪಟ್ಟು ಕೌಶಲ್ಯಗಳನ್ನು ಕಲಿತರೆ ಭವಿಷ್ಯ ಉಜ್ವಲವಾಗುವುದು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ಉಪ್ಪೂರು ಕೊಳಲಗಿರಿ ಸ್ವರ್ಗ ಆಶ್ರಮದ ಸಹ ಸಂಸ್ಥಾಪಕರಾದ ಮಹೇಶ್ ಎಸ್.ಎಸ್. ಅವರು ಮಾತನಾಡಿ “ಸಮಾಜಕಾರ್ಯ ಶಿಕ್ಷಣವು ವೈಯುಕ್ತಿಕವಾಗಿ ನಮ್ಮ ಅಭಿವೃದ್ಧಿಯೊಂದಿಗೆ ಸಮಾಜದ ಅಭಿವೃದ್ಧಿ ಮಾಡಲು ನಮ್ಮನ್ನು ಪ್ರೇರೇಪಿಸುತ್ತದೆ. ಇದಕ್ಕಾಗಿ ಅಗತ್ಯ ಇರುವ ಕೌಶಲ್ಯಗಳನ್ನು ವಿದ್ಯಾರ್ಥಿ ಜೀವನದಲ್ಲೇ ಅಭಿವೃದ್ಧಿಗೊಳಿಸಲು ಪ್ರಯತ್ನ ಪಡಬೇಕು.” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜಕಾರ್ಯ ವಿಭಾಗದ ಉಪನ್ಯಾಸಕಿ ಡಾ. ಪ್ರಮೀಳ ಜೆ. ವಾಜ್ ಇವರು ವಿಶ್ವ ಸಮಾಜಕಾರ್ಯ ದಿನಾಚರಣೆಯ ಹಿನ್ನೆಲೆ ಮತ್ತು ಪ್ರಸ್ತುತತೆಯನ್ನು ಪ್ರಾಸ್ತಾವಿಕ ಮಾತಿನಲ್ಲಿ ಹೇಳಿದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಮಮತ ಇವರು ಸಮಾಜಕಾರ್ಯ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಹಮೀದ ಬಾನು ಬೇಗಂ ಬಿ. ವಹಿಸಿದರು. ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಸುಷ್ಮಾ ಟಿ. ಸ್ವಾಗತಿಸಿ, ವಿದ್ಯಾರ್ಥಿನಿ ಶಿವಾನಿ ವಂದಿಸಿ, ಕು.ಪ್ರಿಯಾ ಆರ್.ಎಲ್. ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಐಕ್ಯುಎಸಿ ಸಂಚಾಲಕಿ ಡಾ.ಮೇವಿ ಮಿರಾಂಡ, ಸಮಾಜಕಾರ್ಯ ಸಹಾಯಕ ಪ್ರಾಧ್ಯಾಪಕರಾದ ರುಖಿಯತ್, ಸಮಾಜಕಾರ್ಯ ವೇದಿಕೆಯ ಅಧ್ಯಕ್ಷೆ ಕು. ಸೋನಿ ವಿಲ್ಮ ಸಾಲಿನ್ಸ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ