ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ 'ಸಿರಿಚಾವಡಿ' ತುಳುಕೂಟ ಉದ್ಘಾಟನೆ

Upayuktha
0

ಉತ್ಸಾಹೀ ಯುವಕರಿಂದ ತುಳು ಸಂಸ್ಕೃತಿ ಬೆಳೆಯಲಿ: ಭಾಸ್ಕರ ರೈ ಕುಕ್ಕುವಳ್ಳಿ




ಮಂಗಳೂರು: 'ನಮ್ಮ ಕಣ್ಣಿಂದ ಮರೆಯಾಗುತ್ತಿರುವ ತುಳು ಪರಿಸರ, ಜನಪದ ಸಂಸ್ಕೃತಿ, ಇತಿಹಾಸದ ಕುರುಹುಗಳು, ಆಚಾರ ವಿಚಾರ, ಕಟ್ಟು - ಕಟ್ಟಳೆಗಳು ಉಳಿಯಬೇಕಾದರೆ ಯುವಜನರು ಅದರಲ್ಲಿ ಆಸಕ್ತಿ ತೋರಬೇಕು. ಶಾಲಾ ಕಾಲೇಜುಗಳಲ್ಲಿ ತುಳು ಕಾರ್ಯಕ್ರಮಗಳಿಗೆ ಹೆಚ್ಚಿನ ಅವಕಾಶ ಸಿಕ್ಕಿದಾಗ ಅದು ಸಾಧ್ಯ. ತುಳುವನ್ನು ತಲೆಮಾರಿಗೆ ತಲುಪಿಸುವಲ್ಲಿ ಉತ್ಸಾಹೀ ಯುವಕ ಯುವತಿಯರು ಶ್ರಮಿಸಬೇಕಾಗಿದೆ' ಎಂದು ತುಳು- ಕನ್ನಡ ಸಾಹಿತಿ, ಕರ್ನಾಟಕ ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.


ನಗರದ ಗಾಂಧಿನಗರ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ನೂತನವಾಗಿ ಆರಂಭವಾದ 'ಸಿರಿ ಚಾವಡಿ' ತುಳುಕೂಟವನ್ನು ತೆಂಗಿನ ಕೊಂಬು ಅರಳಿಸುವ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟಿಸಿ ಬಳಿಕ ಅವರು ಮಾತನಾಡಿದರು.


'ತುಳು ಸಮೃದ್ಧವಾದ ಭಾಷೆ. ಅಗಾಧವಾದ ಜನಪದ ಸಾಹಿತ್ಯ, ಮೌಖಿಕ ಕಾವ್ಯ, ಸಂಧಿ- ಪಾಡ್ದನ, ಗಾದೆ- ಒಗಟುಗಳ ಕಣಜವಾಗಿರುವ ತುಳು ಭಾಷೆಯಲ್ಲಿ ಇತ್ತೀಚೆಗೆ ಸಾಕಷ್ಟು ಕೃತಿಗಳು ಹಾಗೂ ಸಂಶೋಧನಾತ್ಮಕ ಗ್ರಂಥಗಳು ಪ್ರಕಟವಾಗಿವೆ. ದೈವಾರಾಧನೆ, ನಾಗಾರಾಧನೆ ಮತ್ತು ಯಕ್ಷಾರಾಧನೆಗಳ ಮೂಲಕ ತೌಳವ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಇರುವ ತುಳುವರು ಲೋಕ ಮುಖಕ್ಕೆ ಪರಿಚಯಿಸಿದ್ದಾರೆ' ಎಂದವರು ನುಡಿದರು.


ತುಳು ಬದುಕು ಸಮೃದ್ಧ:

ಕಾರ್ಯಕ್ರಮದಲ್ಲಿ 'ಗೇನದ ಮದಿಪು' ಉಪನ್ಯಾಸ ನೀಡಿದ ಜಾನಪದ ತಜ್ಞ ಕೆ.ಕೆ.ಪೇಜಾವರ ಮಾತನಾಡಿ, 'ಬೇಸಾಯ ಮತ್ತು ದೈವಾರಾಧನೆ ತುಳು ಬದುಕಿನ ಪ್ರಧಾನ ಅಂಗಗಳು. ಇದರೊಂದಿಗೆ ಹಾಸುಹೊಕ್ಕಾಗಿರುವ ಸಂಧಿ- ಪಾಡ್ದನಗಳು ನಮ್ಮ ಮಣ್ಣಿನ ಸತ್ವವನ್ನು ಸಾರಿ ಹೇಳುತ್ತವೆ' ಎಂದು ನುಡಿದರು.


ಹಿರಿಯ ಜಾನಪದ ಕಲಾವಿದೆ ಲೀಲಾವತಿ ಕುಪ್ಪೆಪದವು ಅವರು ತುಳುನಾಡಿನ ಉಗಮದ ಸಂಧಿ ಹಾಗೂ ಓಬೇಲೇ ಪಾಡ್ದನವನ್ನು ಹಾಡಿ ರಂಜಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕ ವಸಂತ್ ಕಾರಂದೂರು ವಹಿಸಿದ್ದರು.


ಸಾಧಕರಿಗೆ ಸನ್ಮಾನ:

ಸಭೆಯಲ್ಲಿ ಹಿರಿಯ ಸಾಧಕರಾದ ಪಾಡ್ದನ ಕಲಾವಿದೆ ಲೀಲಾವತಿ ಮತ್ತು ಪ್ರಸಿದ್ಧ ನಾಟಿ ವೈದ್ಯ ಡಾ.ಮುರಳಿ ಕುಮಾರ್ ಚಿಲಿಂಬಿ ಅವರನ್ನು 'ಸಿರಿ ಚಾವಡಿ' ವತಿಯಿಂದ ಸನ್ಮಾನಿಸಲಾಯಿತು. ಓಟದ ಕೋಣಗಳ ಮಾಲಿಕ ಕೊಂಡಾಣ ಗುತ್ತಿನ ನಾಗೇಶ್ ರೈ ಮತ್ತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಜಯಶ್ರೀ ಅವರನ್ನು ಗೌರವಿಸಲಾಯಿತು. ಗ್ರಂಥ ಪಾಲಕಿ ದಿವ್ಯಾ ಎ. ಮತ್ತು ಎಂ.ಕಾಂ. ಉಪನ್ಯಾಸಕ ಲೆಫ್ಟಿನೆಂಟ್ ಪ್ರವೀಣ್ ಸನ್ಮಾನ ಪತ್ರ ವಾಚಿಸಿದರು. 


ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘದ ಉಪಾಧ್ಯಕ್ಷರಾದ ಶೇಖರ ಪೂಜಾರಿ, ಡಾ‌.ಬಿ.ಜಿ. ಸುವರ್ಣ, ಕಾಲೇಜು ಆಡಳಿತ ಮಂಡಳಿ ಸದಸ್ಯ ರಂಜನ್ ದಾಸ್, ವಿಜಯ್, ಜಯರಾಮ ಕಾರಂದೂರು, ಆಡಳಿತಾಧಿಕಾರಿ ನಾಗೇಶ್ ಕರ್ಕೇರ, ನಿವೃತ್ತ ಪ್ರಾಧ್ಯಾಪಕ ಡಾ.ಉಮ್ಮಪ್ಪ ಪೂಜಾರಿ, ಬಿ. ಎಡ್. ಕಾಲೇಜು ಪ್ರಾಂಶುಪಾಲ ಉದಯಕುಮಾರ್ ಬಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಘುರಾಜ್ ಕದ್ರಿ, ಎಂ.ಕಾಂ. ವಿಭಾಗದ ಸಂಯೋಜಕಿ ಸುಜಾತ, ಐಕ್ಯೂ ಎಸಿ ಸಂಯೋಜಕ ಯತೀನ್, ವಿದ್ಯಾರ್ಥಿ ಪ್ರತಿನಿಧಿಗಳಾದ ನವ್ಯಶ್ರೀ, ಸುಮಿತ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕಿ ಡಾ. ನಿಶಾ ಯುವರಾಜ್ ಮತ್ತು ಡಾ. ಮಂಜುಳಾ ಮಲ್ಯ ಅವರು ಬರೆದ ನೂತನ ಅರ್ಥಶಾಸ್ತ್ರ ಕೃತಿಯನ್ನು ಗಣ್ಯರು ಬಿಡುಗಡೆಗೊಳಿಸಿದರು‌.


'ಸಿರಿ ಚಾವಡಿ' ತುಳುಕೂಟದ ಸಂಯೋಜಕ ವಸಂತ್ ಸ್ವಾಗತಿಸಿದರು. ಪದವಿ ಕಾಲೇಜು ಪ್ರಾಂಶುಪಾಲ ಡಾ.ಬಸವರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ‌ ನಿಶಾ ಯುವರಾಜ್ ಮತ್ತು ಮಿಥುನ್ ಚಂದ್ರ ಆರ್. ಕೆ. ನಿರೂಪಿಸಿದರು‌; ಬಾಲಚಂದ್ರ ವಂದಿಸಿದರು.


ತುಳುವರ ಪ್ರಾಚೀನ ವಸ್ತುಗಳ ಪ್ರದರ್ಶನ, ಕಂಬಳದ ಕೋಣಗಳು ಹಾಗೂ ತುಳು ಬದುಕಿನ ವೈವಿಧ್ಯಮಯ ಅಲಂಕಾರಗಳನ್ನೊಳಗೊಂಡ ಸಭಾಂಗಣ ಮತ್ತು ವೇದಿಕೆ, ಜಾನಪದ ಹಾಡು- ಕುಣಿತ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಕಾಲೇಜಿನ ಹಿರಿಯ ಉಪನ್ಯಾಸಕರು, ಹಳೆ ವಿದ್ಯಾರ್ಥಿಗಳು ಮತ್ತು ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಸಾಂಪ್ರದಾಯಿಕ ವಸ್ತ್ರ ಧರಿಸಿ ಸಂಭ್ರಮದಿಂದ ಪಾಲ್ಗೊಂಡಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top