ವಿರಾಜ್ ಅಡೂರ್ ಗೆ ಚಂದನ ಸಾಹಿತ್ಯ ರತ್ನ ಪ್ರಶಸ್ತಿ

Upayuktha
0



ಸುಳ್ಯ: ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ 20ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತಿ ಎಚ್ ಭೀಮರಾವ್ ವಾಷ್ಠರ್ ಅವರ ನೇತೃತ್ವದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮ-2025 ಸಮಾರಂಭವು ಮಾ. 23ರಂದು ಬೆಳಗ್ಗೆ 10ರಿಂದ ಜರುಗಲಿದೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾಸರಗೋಡು ಜಿಲ್ಲೆಯ ಸಾಹಿತಿ ವಿರಾಜ್ ಅಡೂರು ಅವರು ಈ ವರ್ಷದ ‘ಚಂದನ ಸಾಹಿತ್ಯ ರತ್ನ ಪ್ರಶಸ್ತಿ’ಗೆ ಆಯ್ಕೆ ಆಗಿದ್ದಾರೆ.


2025 ಮಾರ್ಚ್ 23ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯುವ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಸಾಹಿತ್ಯ ಸಮಾರಂಭದಲ್ಲಿ ಚಂದನ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್. ಭೀಮರಾವ್ ವಾಷ್ಠರ್ ಸುಳ್ಯ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವಿರಾಜ್ ಅಡೂರು ಅವರು ಸಾಹಿತ್ಯ, ವ್ಯಂಗ್ಯಚಿತ್ರ ರಚನೆ, ಅಂಕಣ ಬರಹ, ಪತ್ರಿಕೋದ್ಯಮ, ಶಿಬಿರ ಸಂಘಟನೆ, ಶಿಬಿರ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತರಾಗಿದ್ದಾರೆ. ಇವರು ಚುಟುಕುಟುಕು (ಚುಟುಕು ಸಂಕಲನ), ಬಾನುಲಿಯಿತು (ಆಕಾಶವಾಣಿ ಪ್ರಸಾರಿತ ಕವನಗಳ ಸಂಕಲನ), ನಗಿಸುವ ಚಿತ್ರಗಳು (ವ್ಯಂಗ್ಯಚಿತ್ರ ಸಂಕಲನ), ಗಾದೆ ಗಮ್ಮತ್ತು(ಅಂಕಣ ಬರಹ ಸಂಕಲನ, ನಾಲ್ಕು ಸಂಪುಟಗಳಲ್ಲಿ), ಉಪನಯನ (ಧಾರ್ಮಿಕ ಸಂಕಲನ), ಶಿವಗಿರಿ (ಸಂಪಾದಿತ ಕೃತಿ), ಕಾಂತಾವರ ಕನ್ನಡ ಸಂಘದ, ‘ನಾಡಿಗೆ ನಮಸ್ಕಾರ’ ಪುಸ್ತಕ ಮಾಲಿಕೆಯಲ್ಲಿ, ಗಡಿನಾಡಿನ ಸಾಹಿತ್ಯ ಶ್ರೀನಿಧಿ- ವಿ ಬಿ ಕುಳಮರ್ವ ಹಾಗೂ ಮಕ್ಕಳ ಸಾಹಿತ್ಯ ಸಂಗಮದ ಜಂಗಮ- ಬಿ ಶ್ರೀನಿವಾಸ ರಾವ್ (ವ್ಯಕ್ತಿ ಪರಿಚಯ) ಕೃತಿಗಳನ್ನು ಬರೆದಿದ್ದಾರೆ.


ಇವರಿಗೆ ಕೇರಳ ರಾಜ್ಯ ಮಟ್ಟದ ಮಾಧ್ವ ಬ್ರಾಹ್ಮಣ ಅತ್ಯುತ್ತಮ ಚಿತ್ರ ಕಲಾವಿದ ಪ್ರಶಸ್ತಿ, ಕಾಸರಗೋಡಿನ ಕನ್ನಡ ಭವನದ ಕನ್ನಡ ಪಯಸ್ವಿನಿ ಪ್ರಶಸ್ತಿ, ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದಿಂದ ಗಡಿನಾಡ ಚೈತನ್ಯ ಪ್ರಶಸ್ತಿ, ಕೋಟೆಗದ್ದೆ ಸೀತಾರಾಮ ಅಡಿಗ ಸ್ಮಾರಕ ಪಾಶುಪತ ಸಾಹಿತ್ಯ ಪ್ರಶಸ್ತಿ,ಕಾಸರಗೋಡಿನ ಪಾಂಗೋಡು ಶ್ರೀಕ್ಷೇತ್ರದಿಂದ ಕಾಸರಗೋಡು ದಸರಾ ಕವಿಶ್ರೇಷ್ಠ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳು ದೊರೆತಿವೆ.


ಉಡುಪಿಯ ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಪುತ್ತಿಗೆ ಮಠ ಹಾಗೂ ಮಂಗಳೂರಿನ ಕಥಾಬಿಂದು ಪ್ರಕಾಶನದ ಆಶ್ರಯದಲ್ಲಿ ನಡೆದ ಭಗವದ್ಗೀತೆಯ ಕುರಿತಾದ ಕವನ ರಚನೆಯಲ್ಲಿ ವಿರಾಜ್ ಅಡೂರು ರಚಿಸಿದ ‘ಸನಾತನದ ಸಾಗರ ಕವನಕ್ಕೆ ಮೊದಲ ಬಹುಮಾನದ ಜತೆಗೆ ಚೈತನ್ಯಶ್ರೀ ಪುರಸ್ಕಾರ ದೊರೆತಿದೆ. ವಿರಾಜ್ ಅಡೂರು ರಚಿಸಿದ ಸುಮಾರು 2000 ವ್ಯಂಗ್ಯಚಿತ್ರಗಳು, 500ರಷ್ಟು ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರು ಕಾಸರಗೋಡು ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರಿನ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top