ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದಿನಂತೆ ಬಹುಸಂಖ್ಯಾತರನ್ನು ಪೂರ್ತಿ ಕಡೆಗಣಿಸಿ, ಅಲ್ಪಸಂಖ್ಯಾತರ ಓಲೈಕೆಯನ್ನು ಈ ಬಜೆಟ್‌ನಲ್ಲೂ ಮುಂದುವರಿಸಿರುವುದು ಸ್ಪಷ್ಟವಾಗಿದೆ ಎಂದು ಮಾಜಿ ಶಾಸಕ ಹಾಗೂ ಹಿರಿಯ ಬಿಜೆಪಿ ನಾಯಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಅವರು, ಸುಮಾರು 4 ಲಕ್ಷ 9 ಸಾವಿರ ಕೋಟಿಯ ಬಜೆಟ್‌ನಲ್ಲಿ 7 ಲಕ್ಷ 64 ಸಾವಿರದ 755 ಕೋಟಿ ಸಾಲದ ಹೊರೆ ಆತಂಕಕಾರಿ. ಇಷ್ಟು ಸಾಕಾಗದೆ ರಾಜ್ಯದ ಅಲ್ಪ ಸಂಖ್ಯಾತ ಮಂತ್ರಿಯೊಬ್ಬರು ಜನಸಂಖ್ಯೆಗೆ ಅನುಗುಣವಾಗಿ 60 ಸಾವಿರ ಕೋಟಿಯಷ್ಟು ಬಜೆಟ್ ಅನುದಾನಕ್ಕೆ ಬೇಡಿಕೆ ಇಟ್ಟಿರುವುದು ಭವಿಷ್ಯದ ಕುರಿತು ಮತ್ತಷ್ಟು ಆತಂಕ ಸೃಷ್ಟಿಸಿದೆ ಎಂದು ಹೇಳಿದ್ದಾರೆ.
ಈ ಹಿಂದಿನ ಬಜೆಟ್ ಘೋಷಣೆಗಳ ಅನುಷ್ಠಾನವನ್ನು ಪರಿಗಣಿಸಿದಾಗ ಈ ಬಜೆಟ್‌ನ ಅಭೂತಪೂರ್ವ ಘೋಷಣೆಗಳು ಮೂಗಿಗೆ ತುಪ್ಪ ಸವರಿದಂತೆ ಗೋಚರಿಸುತ್ತದೆ. ಉದ್ಯೋಗ ಸೃಷ್ಟಿಯ ಅನಿವಾರ್ಯತೆಯಿರುವ ಈ ಕಾಲಘಟ್ಟದಲ್ಲಿ ಕೈಗಾರಿಕಾ ಕ್ಷೇತ್ರವನ್ನು ಪೂರ್ಣ ಕಡೆಗಣಿಸಿರುವುದು ಅಕ್ಷಮ್ಯ. ಈ ಬಜೆಟ್‌ನಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಪೂರ್ಣ ಕಡೆಗಣಿಸಿರುವುದು ಎದ್ದು ಕಾಣುತ್ತಿದೆ ಎಂದು ಕ್ಯಾಪ್ಟನ್ ಕಾರ್ಣಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸದಿರುವುದು ಖಂಡನೀಯ. ಸ್ವಲ್ಪ ಸಂಭಾವನೆ ಹೆಚ್ಚಿಸಿರುವುದು ಸಮಾಧಾನಕರ.
ಬೆಂಗಳೂರು ವಿಶ್ವವಿದ್ಯಾಲಯವನ್ನು ಹೊಸದಾಗಿ ಹೆಸರಿಸುವ ಸಂದರ್ಭದಲ್ಲಿ ರಾಜ್ಯದ ಯಾವುದೇ ಧೀಮಂತ ಸಾಧಕರ ಹೆಸರನ್ನು ಪರಿಗಣಿಸದಿರುವುದು ದೊಡ್ಡ ದುರಂತ. ಬೆಂಗಳೂರು ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿ ದೂರದೃಷ್ಟಿಯ ಯೋಜನೆಗಳ ಘೋಷಣೆ ಸ್ವಾಗತಾರ್ಹ. ಗುಣಮಟ್ಟದ ಅನುಷ್ಠಾನದ ಬಗ್ಗೆ ಚಿಂತೆ ಸಹಜ ಎಂದು ಅವರು ತಿಳಿಸಿದ್ದಾರೆ.
ಆರೋಗ್ಯ ವಿಶ್ವವಿದ್ಯಾಲಯದ ಸ್ಥಾಪನೆಯ ವಿಚಿತ್ರ ಘೋಷಣೆ. 3 ದಶಕಗಳ ಹಿಂದೆ ಪ್ರಾರಂಭವಾದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಇನ್ನೂ ತನ್ನದೇ ಆದ ಕ್ಯಾಂಪಸ್ ಇಲ್ಲ. ಹಾಗಿರುವಾಗ ಈ ಹೊಸ ವಿಶ್ವ ವಿದ್ಯಾಲಯದ ಘೋಷಣೆ ಹಾಸ್ಯಾಸ್ಪದ ಎಂದು ಕ್ಯಾ. ಕಾರ್ಣಿಕ್ ಟೀಕಿಸಿದ್ದಾರೆ.
ಕೃಷಿ ವಿಶ್ವವಿದ್ಯಾಲಯ, ಕೃಷಿ ಕಾಲೇಜಿನ ಸ್ಥಾಪನೆಯ ಘೋಷಣೆ ಸ್ವಾಗತಾರ್ಹ. ಕರಾವಳಿ ತೀರದ ಸಮುದ್ರ ಕೊರೆತಕ್ಕೆ ಶಾಶ್ವತ ಪರಿಹಾರದ ಕುರಿತು ಚಿಂತನೆ ಸ್ವಾಗತಾರ್ಹ.
ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳನ್ನು ಕಡೆಗಣಿಸಿ ಅಲ್ಪಸಂಖ್ಯಾತರನ್ನು ಓಲೈಸುವ ಸಿದ್ದರಾಮಯ್ಯರವರ ಈ ಬಜೆಟ್ ಕೇವಲ ವೋಟ್ ಬ್ಯಾಂಕ್ ರಾಜಕಾರಣವನ್ನು ಪ್ರತಿಬಿಂಬಿಸುವ ಬಜೆಟ್ ಆಗಿರುವುದು ಈ ರಾಜ್ಯದ ಬಹು ಸಂಖ್ಯಾತರಿಗೆ ಅನ್ಯಾಯ ಮಾಡಿದ ಬಜೆಟ್ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಬೇಸರ ವ್ಯಕ್ತಪಡಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ