ಜೀವನ ಶಿಕ್ಷಣ ನೀಡುತ್ತಿರುವ ಶಾಲೆ ರಾಜ್ಯಕ್ಕೆ ಮಾದರಿ: ಕೆ‌.ವಿ. ಪ್ರಭಾಕರ್

Upayuktha
0


ಕುತ್ಲೂರು: ಕುತ್ಲೂರಿನಲ್ಲಿ ಶಾಲಾ ಪಠ್ಯದ ಜೊತೆ  ಪರಿಸರದ ಜೊತೆ ಬದುಕುವ ಜೀವನ ಶಿಕ್ಷಣ ನೀಡುತ್ತಿರುವ ಶಾಲೆ ರಾಜ್ಯಕ್ಕೆ ಮಾದರಿ ಎಂದು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದ್ದಾರೆ. ಅವರು ಮಂಗಳವಾರ ಕುತ್ಲೂರು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ಶಾಲಾ  ತರಕಾರಿ ತೋಟ, ಅಡಿಕೆ ತೋಟವನ್ನು ವೀಕ್ಷಿಸಿದ ಬಳಿಕ ಮಕ್ಕಳು ಮತ್ತು ಶಿಕ್ಷಕರು ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳ ಜೊತೆ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.


ಕುತ್ಲೂರಿನಲ್ಲಿ ಶಾಲೆ ವಿಶ್ವ ವಿದ್ಯಾನಿಲಯದ ರೀತಿ ಕಾರ್ಯ ನಿರ್ವಹಿಸುತ್ತಿದೆ. ನಾವು ಪಡೆಯುವ ಪ್ರತಿ ಜ್ಞಾನವೇ ಶಿಕ್ಷಣ. ಶಾಲೆಯಲ್ಲಿ ನಿರ್ಮಿಸಲಾದ ಕೈ ತೋಟ  ಜೀವನದ ಅನುಭವ ನೀಡುತ್ತದೆ. ಸಮಾಜದಿಂದ ಏನು ಪಡೆದಿದ್ದೇನೆ ಎನ್ನುವ ಬದಲು ಸಮಾಜಕ್ಕೆ ಏನು ಮಾಡಬೇಕು ಎನ್ನುವುದು ಮುಖ್ಯ ಎಂದರು.


ತಾನು ಸರಕಾರಿ ಶಾಲೆಯಲ್ಲಿ ಓದಿ ಇಂದು ಸಮಾಜದಲ್ಲಿ ಸ್ಥಾನಮಾನ ಪಡೆದಿದ್ದೇನೆ. ಆ ಕಾರಣದಿಂದ  ರಾಜ್ಯದ ಸರಕಾರಿ ಶಾಲೆಗಳ ಬಗ್ಗೆ ನಾನು ಕಲಿತ ಶಾಲೆಯ ಬಗ್ಗೆ ನನಗೆ ಅಭಿಮಾನವಿದೆ. ಅದೇ ರೀತಿ ಕುತ್ಲೂರು ಶಾಲೆಯ ಅಭಿವೃದ್ಧಿಗೆ ಶಾಲೆಯವರು ಸಲ್ಲಿಸಿದ ಮನವಿಯ ಪ್ರಕಾರ ನನ್ನಿಂದಾಗುವ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ.


ಕುತ್ಲೂರು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಮಚಂದ್ರ ಭಟ್ ಮಾತನಾಡುತ್ತಾ, ಆರಂಭದಲ್ಲಿ ಮಕ್ಕಳ ಸಂಖ್ಯೆ 38 ಇಳಿಮುಖವಾಗಿದ್ದ ಸಂಖ್ಯೆ 83ಕ್ಕೆ ಏರಿಕೆಯಾಗಿದೆ. ಪತ್ರಕರ್ತರ ಗ್ರಾಮ ವಾಸ್ತವ್ಯ ಶಾಲಾ ಕೈ ತೋಟದ ಜೊತೆ 400 ಅಡಿಕೆ ಗಿಡ 50 ತೆಂಗಿನ ಸಸಿ ನೆಟ್ಟು ಬೆಳೆಸಿದ್ದೇವೆ. ಪತ್ರಕರ್ತರ ಗ್ರಾಮವಾಸ್ತವ್ಯ ಈ ನಿಟ್ಟಿನಲ್ಲಿ ಪ್ರೇರಣೆಯಾಗಿದೆ. ಖಾಸಗಿ ಶಾಲೆಯಲ್ಲಿ ವಾಹನ ವ್ಯವಸ್ಥೆ ಇರುವಂತೆ ಕುತ್ಲೂರು ಶಾಲಾ ಮಕ್ಕಳಿಗೆ ಎರಡು ವಾಹನ ವ್ಯವಸ್ಥೆ ಮಾಡಲಾಗಿದೆ. ಆದರೆ ಸರಕಾರಿ ಶಾಲೆಗೆ ಸರಕಾರದಿಂದ ಅಥವಾ ಸಂಸ್ಥೆಗಳಿಂದ ಇನ್ನಷ್ಟು ಸಹಕಾರ ದೊರೆತರೆ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ರಾಮಚಂದ್ರ ಭಟ್ ತಿಳಿಸಿದ್ದಾರೆ.


ಸಮಾರಂಭದ ವೇದಿಕೆಯಲ್ಲಿ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ, ಮುಖ್ಯಮಂತ್ರಿಗಳ ಮಾಜಿ ಸಲಹೆಗಾರ ಶಶಿಕಾಂತ ಅರಿಗ, ಕುತ್ಲೂರು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಶ್ವೇತಾ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಜ್ಯೋತಿ ಸ್ವಾಗತಿಸಿದರು. ಶಿಕ್ಷಕಿ ಸುಶ್ಮಾ ವಂದಿಸಿದರು. ಶಿಕ್ಷಕ ರಾಜಾ ಕಳಸಪ್ಪನವರ್ ಕಾರ್ಯಕ್ರಮ ನಿರೂಪಿಸಿದರು.



ಈ ಸರಕಾರಿ ಶಾಲೆಯಲ್ಲಿ ಸಾವಯವ ತರಕಾರಿ  ತೋಟ, ಅಡಿಕೆ ತೋಟ  ನೋಡಿ ತುಂಬಾ ಖುಷಿಯಾಗಿದೆ. ಈ ಶಾಲೆ ರಾಜ್ಯಕ್ಕೆ ಮಾದರಿಯಾಗಿದೆ. ವಿದ್ಯಾರ್ಥಿಗಳ ಚಟುವಟಿಕಗಳನ್ನು ಕಂಡು ಖುಷಿಯಾಗಿದೆ. ವಿದ್ಯಾರ್ಥಿಗಳ ಅಧ್ಯಯನ ಕ್ಕೆ ಅನುಕೂಲವಾಗುವ ದ್ರಷ್ಟಿಯಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವಾಗ ಈ ಶಾಲೆಗೆ 2 ಕಂಪ್ಯೂಟರ್, ಸ್ಮಾರ್ಟ್ ಕ್ಲಾಸ್ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಟಿ ಶರ್ಟ್, ಪ್ಯಾಂಟ್ ತನ್ನ ವೈಯುಕ್ತಿಕ ಕೊಡುಗೆಯಾಗಿ ನೀಡಲಾಗುವುದು. ರಾಜ್ಯ ಸರಕಾರದಿಂದಲೂ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.


ಮಾಧ್ಯಮ ಸಲಹೆಗಾರರಿಗೆ ತರಕಾರಿ ಸಮರ್ಪಣೆ 

ಈ ಶಾಲೆಯ ಸಾವಯವ ತರಕಾರಿ ತೋಟದಲ್ಲಿ ಬೆಳೆದ 10 ಕೆಜಿ ಸೌತೆ ಹಾಗೂ 3 ಕೆಜಿ ಬೆಂಡೆ ಕಾಯಿಯನ್ನು ವಿದ್ಯಾರ್ಥಿಗಳು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಅವರಿಗೆ ಹಸ್ತಾಂತರಿಸಿದರು.


ಮುಂದಿನ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಶಾಲೆಯ ಸಾವಯವ ತೋಟದಲ್ಲಿ ಬೆಳೆದ ತರಕಾರಿಯನ್ನು ಬೆಂಗಳೂರಿನಲ್ಲಿರುವ  ಮುಖ್ಯಮಂತ್ರಿ ಅವರ ಅಧಿಕೃತ ನಿವಾಸ ಕೃಷ್ಣಗೆ ತೆರಳಿ ವಿದ್ಯಾರ್ಥಿಗಳು ಹಸ್ತಾಂತರ ಮಾಡಲಿದ್ದಾರೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ ತಿಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top