ತಾನೊಬ್ಬ ಕವಿಯಾಗಬೇಕೆಂದು ಲೇಖನದ ಉಪಯೋಗವನ್ನು ಸದುಪಯೋಗ ಮಾಡಿಕೊಂಡು ಸಾಹಿತ್ಯ ಕ್ಷೇತ್ರಕ್ಕೆ ತನ್ನಿಂದಾಗುವ ಕೊಡುಗೆಯನ್ನು ನೀಡಬೇಕೆಂದು ಕನಸು ಕಂಡು ನನಸಾಗಿಸಲು ಸಣ್ಣ ವಯಸ್ಸಿನಿಂದಲೇ ಛಲ ಬಿಡದೆ ಬರವಣಿಗೆಯನ್ನು ಪ್ರಾರಂಭಿಸಿ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡವರೇ ಪ್ರಶಾಂತ್ ಎಂ.ಟಿ. ವಿಟ್ಲ. ಇವರು ಕೇರಳದ ಕಾಸರಗೋಡಿನ ಮಾರ್ಪನಡ್ಕ ಎಂಬ ಗ್ರಾಮದಲ್ಲಿ ಜನವರಿ 1ರಂದು ಕಲ್ಯಾಣಿ ಹಾಗೂ ತಿಮ್ಮ ದಂಪತಿಗಳ ಎರಡನೇ ಪುತ್ರನಾಗಿ ಜನಿಸಿದರು. ಒಬ್ಬ ಸಹೋದರ ಹಾಗೂ ಮೂವರು ಸಹೋದರಿಯರ ಮುದ್ದಿನ ಸಹೋದರ ಇವರಾಗಿದ್ದಾರೆ.
ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಬರವಣಿಗೆಯಲ್ಲಿ ಎಲ್ಲಿಲ್ಲದ ಒಲವನ್ನು ಹೊಂದಿದ್ದು ಸುಮಾರು 5,000ಕ್ಕೂ ಹೆಚ್ಚಿನ ಹನಿಗವನ, ಲೇಖನ, ಕವನಗಳನ್ನು ರಚಿಸಿದ್ದಾರೆ. ಬರವಣಿಗೆಯಲ್ಲಿ ಮಾತ್ರವಲ್ಲದೆ ಹಾಡುಗಾರಿಕೆ ಮತ್ತು ನೃತ್ಯದಲ್ಲೂ ತಮ್ಮ ಆಸಕ್ತಿ ಹೆಚ್ಚಾಗಿದ್ದು ಶಾಲಾ-ಕಾಲೇಜು ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಸಂಸ್ಥೆಯ ಹಾಗೂ ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇವರು ರಚಿಸಿದ ಹಲವಾರು ಕವನ, ಲೇಖನಗಳು ಕೇರಳ ಹಾಗೂ ಕರ್ನಾಟಕದ ಪ್ರಸಿದ್ಧ ಪತ್ರಿಕೆಗಳಲ್ಲಿ ಬಿಡುಗಡೆಗೊಂಡು ಓದುಗರ ಅಂತರಾಳದಲ್ಲಿ ಮನೆಮಾಡಿದ್ದಾರೆ. ಬರವಣಿಗೆಯೊಂದಿಗೆ ಅಪಾರ ಬಾಂಧವ್ಯದ ಹವ್ಯಾಸವನ್ನು ಬೆಳೆಸಿಕೊಂಡಿರುವ ಇವರು ಸಣ್ಣ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಕಾರಣ 'ಮರೆಯಾದ ಜೀವಾ' ಎನ್ನುವ ಸಾಹಿತ್ಯ ರಚನೆಯೊಂದಿಗೆ ಸಾಹಿತ್ಯ ಲೋಕಕ್ಕೆ ಕಾಲಿಟ್ಟರು. ಸರಿಸುಮಾರು ನೂರಕ್ಕೂ ಹೆಚ್ಚಿನ ಸಾಹಿತ್ಯವನ್ನು ರಚಿಸಿ ಬಿಡುಗಡೆಗೊಳಿಸಿದ್ದಾರೆ. ಇವರು ರಚಿಸಿದ ಸಾಹಿತ್ಯಕ್ಕೆ ಕರಾವಳಿಯಲ್ಲಿ ತಮ್ಮ ಕಂಠದ ಮೂಲಕ ಗಾಯಕ-ಗಾಯಕಿಯರು ಧ್ವನಿಯಾಗಿದ್ದಾರೆ.
ಕಾಲೇಜು ಜೀವನದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ನಾಯಕನಾಗಿ ನಿರೂಪಣೆಯ ಪಯಣವನ್ನು ಪ್ರಾರಂಭಿಸಿ ಅನೇಕ ಕಾರ್ಯಕ್ರಮಗಳ ನಿರೂಪಕರಾಗಿ ಹೆಸರಾಗಿದ್ದಾರೆ. ಇದರೊಂದಿಗೆ ಕ್ರೀಡಾಕ್ಷೇತ್ರದಲ್ಲಿಯೂ ಕಬಡ್ಡಿ, ಕ್ರಿಕೆಟ್, ಹಾಗೂ ವಾಲಿಬಾಲ್ ಕ್ರೀಡಾಪಟುವಾಗಿದ್ದಾರೆ. ಬೆಂಗಳೂರಿನ ಪ್ರಸಿದ್ಧ ಚಾನೆಲ್ ಎಂದೇ ಗುರುತಿಸಿಕೊಂಡಿರುವ 'ಆನಂದ್ ಆಡಿಯೋ'ದಲ್ಲಿ ಇವರ ಸಾಹಿತ್ಯದಲ್ಲಿ ರಚನೆಯಾದ "ವಂದೇ ಮಾತರಂ" ಎನ್ನುವ ದೇಶಭಕ್ತಿಗೀತೆಗೆ ಕನ್ನಡ ಸಂಗೀತದ ಹೆಸರಾಂತ ಗಾಯಕರಾದ "ವಿಜಯ್ ಪ್ರಕಾಶ್"ರವರು ಧ್ವನಿಯಾಗಿದ್ದಾರೆ. ಕೊರೋನ ವೇಳೆಯಲ್ಲಿ ಬಿಡುಗಡೆಯಾದ ಇವರ ಸಾಹಿತ್ಯದ 'ಮರಣದಾರಿ' ಎನ್ನುವ ಗೀತೆಯ ಮೂಲಕ ಇನ್ನಷ್ಟು ಪ್ರೀತಿ-ಪ್ರಶಂಸೆಗೆ ಕಾರಣರಾಗಿದ್ದಾರೆ.
ಈ ಸಂಗೀತದ ಮೂಲ ಹಾಡಿನ ನಿರ್ದೇಶಕರಾದ ಕನ್ನಡ ಶೈಲೂ ಚಿತ್ರದ ಗಾಯಕರಾದ ಈಶನ್ ದೇವ್ ಸಂಗೀತವನ್ನು ಆಲಿಸಿ ಮೆಚ್ಚುಗೆಯ ಮಾತುಗಳನ್ನಾಡಿ ಆಶೀರ್ವಾದವನ್ನು ತಿಳಿಸಿದ್ದಾರೆ. ತುಳು ಸಿನಿಮಾ ಹಾಗೂ ಆಲ್ಬಂ ಕಿರು ಚಿತ್ರಗಳಲ್ಲಿ ಸಿಕ್ಕಪುಟ್ಟ ಪಾತ್ರದಲ್ಲಿ ನಟಿಸಿದ್ದಲ್ಲದೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಐಲೇಸ ರಿ. ವಾಯ್ಸ್ ಆಫ್ ಒಷಿಯಲ್ ಹಾಗೆ ತುಳು ರಿ. ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಪು.ವೆಂ.ಪು ನುತೊಂಜಿ ನೆಂಪು ತುಳು ಕವನ ಪುಸ್ತಕದಲ್ಲಿ ಕರಾವಳಿಯ ಅದೆಷ್ಟೋ ಕವಿಗಳ ಜೊತೆಗೆ ಇವರ ಕವನ ಸಂಕಲನ "ಬದ್ಕ್ದ ತಾದಿಗ್ ಮುನ್ನುಡಿ ಏರಾ.." ಎನ್ನುವುದು ಪ್ರಕಟವಾಗಿದೆ. ಕೇರಳ ಕರ್ನಾಟಕಗಳಲ್ಲಿ ಕನ್ನಡ ತುಳು ಮಲಯಾಳಂ ಭಾಷೆಗಳಲ್ಲಿ ಹಾಡುವ ಇವರು 5000ಕ್ಕೂ ಹೆಚ್ಚಿನ ಆರ್ಕೆಸ್ಟ್ರಾಗಳಲ್ಲಿ ಭಾಗವಹಿಸಿದ್ದಾರೆ. ಇವರ ಈ ಸಾಧನೆಗೆ ಹಲವಾರು ಪ್ರಶಸ್ತಿ ಪ್ರಶಂಸೆಗಳು ದೊರಕಿದೆ.
ತನ್ನ ಮಗ ಸಣ್ಣ ವಯಸ್ಸಿನಿಂದಲೇ ಅನೇಕ ಆಸೆಗಳನ್ನು ಹೊತ್ತುಕೊಂಡಿದ್ದಾನೆ. ಅವನು ಇನ್ನಷ್ಟು ಸಾಧನೆಯನ್ನು ಮಾಡಲಿ ನನ್ನ ಆಶೀರ್ವಾದ ಸದಾ ಅವನ ಮೇಲಿದೆ ಎಂದು ಪ್ರಶಾಂತರವರ ಚಿಕ್ಕಮ್ಮ ಸುಶೀಲರವರು ತಿಳಿಸಿದರೆ ಸಹೋದರಿ ಜ್ಯೋತಿ ಅವರು ಅವನಿಗೆ ಚಿತ್ರರಂಗದಲ್ಲಿ ತನ್ನನ್ನು ಗುರುತಿಸಿಕೊಳ್ಳುವ ಆಸೆಯಿದೆ. ಅದಕ್ಕಾಗಿ ಅವನು ಬಹಳ ಪ್ರಯತ್ನಿಸುತ್ತಿದ್ದಾನೆ. ನನ್ನ ಪ್ರೋತ್ಸಾಹ ಸದಾ ಅವನಿಗಿರುತ್ತದೆ ಎಂದು ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸುತ್ತಾರೆ.
ಪ್ರಶಾಂತ ಶಾಲಾ ದಿನಗಳಲ್ಲಿ ಎಲ್ಲಾ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದನು. ಸಾಧನೆಗೆ ದಾರಿಗೆ ಮುನ್ನುಡಿಯಾಗಿ ಅನೇಕ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾನೆ. ಇವನಿಗೆ ಒಳ್ಳೆಯದಾಗಲಿ ದೇವರು ಒಳಿತನ್ನು ಮಾಡಲಿ ಎಂದು ಇವರ ಪ್ರೌಢಶಾಲಾ ಗುರುಗಳಾಗಿದ್ದ ಕಿರಣ್ ಕುಮಾರ್ ಬ್ರಹ್ಮಾವರ ಅವರು ಶುಭ ಹಾರೈಸಿದ್ದಾರೆ.
ಊರಿನಲ್ಲಿ ಎಲ್ಲರ ಮನೆಮಾತಾದ ಪ್ರಶಾಂತ್ ಎಂಟಿ ಅವರು ಬೆಳೆಯುವ ಪ್ರತಿಯೊಂದು ವೇದಿಕೆಯನ್ನು ಕಲ್ಪಿಸುವ ಒಳ್ಳೆಯ ಗುಣವನ್ನು ಹೊಂದಿದ್ದಾರೆ. ಇವರಿಗೆ ತಮ್ಮ ಮನೆಯವರು ಕುಟುಂಬದವರು ಪ್ರೋತ್ಸಾಹಕರಾಗಿದ್ದಾರೆ. ಇವರ ಈ ಎಲ್ಲಾ ಸಾಧನೆಯ ಹಾದಿಯಲ್ಲಿ ಹಲವಾರು ಏರಿಳಿತ ಸುಖ-ದುಃಖ ಕಷ್ಟಗಳನ್ನು ಎದುರಿಸಿ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ನಿಮಗೆ ಇನ್ನೂ ಅವಕಾಶಗಳು ದೊರೆಯಲಿ ಸಾಧನೆಯ ಕೀರ್ತಿ ಪತಾಕೆಯೂ ಅತಿ ಎತ್ತರದಲ್ಲಿ ಹಾರುವಂತಾಗಲಿ.
- ಚೈತನ್ಯ ಚಂದಪ್ಪ
ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ