ಮಧೂರು: ಆರಾಧನಾಲಯಗಳು ಜನ ಮನಸ್ಸುಗಳ ಭಕ್ತಿ-ಶ್ರದ್ಧೆಗಳ ಕೇಂದ್ರಸ್ಥಾನಗಳು. ಸಾಮರಸ್ಯ-ಸೌಹಾರ್ದತೆಗಳು ಮಧೂರು ಸನ್ನಿಧಿಯ ವಿಶೇಷತೆಯಾಗಿದ್ದು, ಸಂರಕ್ಷಿಸುವ ಹೊಣೆ ಭಕ್ತರೆಲ್ಲರ ಕರ್ತವ್ಯವಾಗಿದ್ದು, ಒಗ್ಗಟ್ಟಿನ ಸಹಕಾರ ಅಗತ್ಯ ಎಂದು ಶ್ರೀಮದೆಡನೀರು ಮಠಾಧೀಶ ಶ್ರೀ ಸಚ್ಛಿದಾನಂದ ಭಾರತೀ ಶ್ರೀಗಳು ತಿಳಿಸಿದರು.
ಮಧೂರು ಶ್ರೀಮದನಂತೇಶ್ವರ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಗುರುವಾರ ಆರಂಭಗೊಂಡ ಅಷ್ಟಬಂಧ ಬ್ರಹ್ಮಕಲಶ ಹಾಗೂ ಮೂಡಪ್ಪ ಸೇವೆಯ ಮೊದಲ ದಿನ ನಡೆದ ಧಾರ್ಮಿಕ ಸಭೆಯನ್ನು ದೀಪ ಪ್ರಜ್ವಲನೆಗೈದು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಸ್ವ ಪ್ರತಿಷ್ಠೆ ಇಂದಿನ ಜನರ ಲಕ್ಷ್ಯಗಳಾಗಿದ್ದು, ಭಗವಂತನ ಅನುಗ್ರಹಕ್ಕೆ ಇದು ಮುಳುವಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ದುಃಖ ದುಮ್ಮಾನಗಳ ನಿವಾರಣೆಗೆ ನಮ್ಮ ಅಂತರಂಗದಲ್ಲಿ ದೇವ ಪ್ರತಿಷ್ಠೆ ಆಗಬೇಕೇ ಹೊರತು ಸ್ವಪ್ರತಿಷ್ಠೆಗಳಲ್ಲ ಎಂದವರು ಆಶೀರ್ವಚನದಲ್ಲಿ ತಿಳಿಸಿದರು.
ವೇದಿಕೆಯಲ್ಲಿ ದಿವ್ಯ ಉಪಸ್ಥಿತರಿದ್ದ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ಭಗವದ್ ಭಕ್ತರ ಸಕಲ ದುರಿತಗಳನ್ನೂ ನಿವಾರಿಸುವ ವಿಘ್ನ ನಿವಾರಕನ ಅನುಗ್ರಹ ಎಲ್ಲರ ಮೇಲಿರಲಿ ಎಂದು ಹಾರೈಸಿದರು.
ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನಗೈದು, ವರ್ಷಗಳ ಕಾಯುವಿಕೆಯ ಬಳಿಕ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಮಧೂರು ಮಹಾಗಣಪತಿ ಸನ್ನಿಧಿ ಲೋಕಹಿತದ ಅನುಗ್ರಹ ಶಕ್ತಿ ಮತ್ತೆ ಬಲಪಡೆದಿರುವುದು ನಮ್ಮೆಲ್ಲರ ಪುಣ್ಯ. ಆಧ್ಯಾತ್ಮಿಕ, ಆದಿ ದೈವಿಕ ಶಕ್ತಿಗಳು ಸಮಾಜ. ದೇಶದ ಆರೋಗ್ಯಕರ ಸುಗಮ ನಿರ್ವಹಣೆಗೆ ಕಾರಣವಾಗುತ್ತದೆ. ಮೇಲು-ಕೀಳುಗಳ ಭೇದಗಳಿಲ್ಲದೆ ಮದರುವಿನಿಂದ ಮಹಾಗಣಪತಿ ವರೆಗಿನ ವ್ಯವಸ್ಥೆ ಸಮೃದ್ಧ ಸಮಾಜ ಹೇಗಿರಬೇಕೆಂಬ ಸಂಕೇತವಾದರೂ ವರ್ತಮಾನದ ಸಾಮಾಜಿಕ ವ್ಯವಸ್ಥೆಯ ದಾರಿದೀಪಕ ಎಂದವರು ತಿಳಿಸಿದರು.
ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವಾ ಚಟುವಟಿಕೆಗಳ ಮೊದಲ ದಿನವಾದ ಗುರುವಾರ ಬೆಳಿಗ್ಗೆ ತಂತ್ರಿವರ್ಯ ಬ್ರಹ್ಮಶ್ರೀ ಡಾ. ಶಿವಪ್ರಸಾದ್ ಅವರಿಂದ ತಂತ್ರಿ ದೇರೆಬೈಲು ಅವರಿಗೆ ನೀಡಿದ ಪೂರ್ಣಕುಂಭ ಸ್ವಾಗತ ನೀಡಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಬಿ.ಎಸ್. ರಾವ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಗೌರವಾಧ್ಯಕ್ಷ ಮಹಾಬಲೇಶ್ವರ ಭಟ್. ಎಡಕ್ಕಾನ ಹಾಗೂ ಮುಂಡಪ್ಪಳ್ಳ ಶ್ರೀರಾಜರಾಜೇಶ್ವರಿ ಕ್ಷೇತ್ರದ ಮೊಕ್ತೇಸರ ಕೆ.ಕೆ. ಶೆಟ್ಟಿ ಮುಂಡಪ್ಪಳ್ಳ ಗೌರವ ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು.
ಬೆಂಗಳೂರು ಉಚ್ಛ ನ್ಯಾಯಾಲಯದ ವಕೀಲ ಬಾರಿ ಭಂಡಾರಿ, ವಾಸ್ತುವಿದ್ಯಾ ಕುಲಪತಿ ಕಾಣಿಪಯ್ಯೂರು ಬ್ರಹ್ಮಶ್ರೀ ಕೃಷ್ಣನ್ ನಂಬೂದಿರಿ, ವಾವಸ್ತುಶಿಲ್ಪಿ ಕೃಷ್ಣಪ್ರಸಾದ ಮುನಿಯಂಗಳ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಕಾಮತ್, ಉಪಾಧ್ಯಕ್ಷ ಎಂ. ಶಂಕರನಾರಾಯಣ ಭಟ್ ಅಳಕೆ, ಉದ್ಯಮಿ ಈಶ್ವರ ಭಟ್ ವಿಟ್ಲ, ಎ.ಡಿ. ಶೆಟ್ಟಿ ಉಪಸ್ಥಿತರಿದ್ದು ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಸ್ವಾಗತಿಸಿ, ಉಪಾಧ್ಯಕ್ಷ ಡಿ. ದಾಮೋದರ ವಂದಿಸಿದರು. ಅಪ್ಪಯ್ಯ ನಾಯ್ಕ ಮಧೂರು ಹಾಗೂ ಜಗದೀಶ ಕೂಡ್ಲು ನಿರೂಪಿಸಿದರು.
ಗುರುವಾರ ಬೆಳಿಗ್ಗೆ ಶ್ರೀ ಸನ್ನಿಧಿಯ ರಾಜಗೋಪುರದ ಮುಂದೆ ಭಕ್ತರ ಗುಂಪು ನೆರೆದಿತ್ತು.
ವೈದಿಕ ಕಾಯಕ್ರಮಗಳ ಅಂಗವಾಗಿ ಬೆಳಿಗ್ಗೆ 8ಕ್ಕೆ ತಂತ್ರಿವರ್ಯ ಬ್ರಹ್ಮಶ್ರೀ ಡಾ.ಶಿವಪ್ರಸಾದ ತಂತ್ರಿ ದೇರೇಬೈಲು ಮತ್ತು ಋತ್ವಿಜರನ್ನು ಪೂರ್ಣಕುಂಭ ಗಳೊಂದಿಗೆ ಸ್ವಾಗತಿಸಲಾಯಿತು. ವಾಸ್ತುಶಿಲ್ಪಿ ಕೃಷ್ಣಪ್ರಸಾದ ಮುನಿಯಂಗಳ ಅವರಿಗೆ ಶಿಲ್ಪಿ ಮರ್ಯಾದೆ, ಪ್ರಾಸಾದ ಪರಿಗ್ರಹ, ಸಾಮೂಹಿಕ ಪ್ರಾರ್ಥನೆ, ದೇವರ ಉಗ್ರಾಣ ಮುಹೂರ್ತ, ಆಚಾರ್ಯಾದಿ ಋತ್ವಿಗ್ವರಣ, ಬ್ರಹ್ಮಕೂರ್ಚಾ ಹೋಮ, ಕಂಕಣಬಂಧ, ಅಥರ್ವಶೀರ್ಷಾ ಮಹಾಗಣಪತಿ ಯಾಗ, ಸಂಜೆ 5 ರಿಂದ ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜೆ, ವಾಸ್ತುಬಲಿ, ಪ್ರಾಕಾರಬಲಿ, ಮೃತ್ತಿಕಾ ಹರಣ, ಅಂಕುರಾರೋಪಣ ವಿಧಿಗಳು ನಡೆದವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ