ಪ್ರೀತಿಸು ಭಾವಗಳ
ದ್ವೇಷಿಸು ಅವಗುಣಗಳ
ಪ್ರೀತಿ ಪ್ರೇಮ ಕಾಮ
ಹಿತವಪ್ಪುದು ಎಳೆದುಕೊ ಲಕ್ಷ್ಮಣರೇಖೆ
'ಪ್ರೀತಿ' ಎಂದೊಡನೆ ನೋಡುವ ದೃಷ್ಟಿಕೋನ ಚೆನ್ನಾಗಿರಬೇಕು. ಪ್ರೀತಿ ಮಾರಾಟಕ್ಕೆ ಆಗಲಿ, ಸಂತೆಯಲ್ಲಾಗಲಿ ಸಿಗದು. ಪ್ರೀತಿ ಒಂದು ರೀತಿಯ ತಪಸ್ಸು. ಅದನ್ನು ಕಾಪಿಡಲು ಕಷ್ಟವಿದೆ. ಭಗವಂತನ ಆರಾಧನೆಯಲ್ಲಿರುವ ನಿಷ್ಠೆ ಪ್ರೀತಿಯಲ್ಲಿರಬೇಕು. ಜೀವನವನ್ನು, ನಮ್ಮನ್ನು ನಾವು, ಕೈಗೊಳ್ಳುವ ಕೆಲಸ ಕಾರ್ಯಗಳನ್ನು ಮೊದಲು ಪ್ರೀತಿಸಬೇಕು. ಪುಟ್ಟ ಮಕ್ಕಳನ್ನು ಪ್ರೀತಿಸುತ್ತೇವೆ, ಕಾಳಜಿವಹಿಸುತ್ತೇವೆ. ಅದೇ ಕಾಳಜಿ ಪ್ರೀತಿಯ ಮೇಲಿರಬೇಕು. ಒಮ್ಮೆ ಒಂದು ಸಣ್ಣ ಹೆಣ್ಣು ಮಗುವಿನ ಹತ್ತಿರ ಹೀಗೆ ಮಾತನಾಡುವಾಗ ಕೇಳಿದೆ "ತುಂಬಾ ಪ್ರೀತಿ ಯಾರ ಹತ್ತಿರ ಕಂದ"? ಎಂಬುದಾಗಿ. ಆಗ ಮಗು ಥಟ್ಟನೆ ಉತ್ತರಿಸಿದ್ದು "ಚಾಮಿ ಹತ್ತಿರ" ಎಂದು. "ಯಾಕೆ ಮಗಳೋ"? ಎಂದೆ. ಅಮ್ಮ ಹೇಳಿದ್ದಾರೆ "ಚಾಮಿ(ಭಗವಂತ)ಯನ್ನು ಪ್ರೀತಿಸಬೇಕು, ಅವನು ಎಲ್ಲ ಕೊಡ್ತಾನಂತೆ. ನೋವಾದಾಗ ಕಾಪಾಡ್ತಾನಂತೆ, ಊಟ ಸಂತೋಷ, ಕಣ್ತುಂಬ ನಿದ್ದೆ, ಆರೋಗ್ಯ, ವಿದ್ಯೆ ಕೊಡ್ತಾನಂತೆ". ಮಗುವಿಗೆ ಸಂಸ್ಕಾರ, ಮೌಲ್ಯಗಳ ಬೀಜ ಬಿತ್ತಿದ ಆ ತಾಯಿಗೆ ಪ್ರಣಾಮ ಸಲ್ಲಿಸಿದೆ. ಕಣ್ಣಿಗೆ ಕಾಣಿಸುವ ಈ ಜಗವೇ ದೇವಾಲಯ, ಜನರ ಒಳ್ಳೆಯ ಹೃದಯವೇ ದೇವರು ಅಲ್ಲವೇ? ಪರಸ್ಪರ ಪ್ರೀತಿ ಕೊಟ್ಟು ತೆಗೆದುಕೊಳ್ಳಬೇಕು. ಏಕಮುಖ ಆಗಬಾರದು. ಒಬ್ಬರಿಗೊಬ್ಬರು ಗೌರವಿಸೋಣ, ಪ್ರೀತಿ ಹಂಚೋಣ.
ಪ್ರೀತಿ ಎಂದೊಡನೆ ನಾನಾರ್ಥ ಬರುವುದಿದೆ. ನಾವು ಧನಾತ್ಮಕವಾಗಿ ಮಾತ್ರ ಯೋಚಿಸೋಣ. ಪ್ರೀತಿ ಹೆಚ್ಚಾಗಿ ಪುಟ್ಟ ಮಕ್ಕಳಿಗೆ ಸಂಸ್ಕಾರ ಕಲಿಸುವುದರಲ್ಲಿ ಎಡವದಿರೋಣ. ಎಡವಿದರೆ ಮುಂದೊಂದು ದಿನ ನೋವಿಗೆ, ಹತಾಶೆಗೆ ಕಾರಣವಾಗಬಹುದು. ಗುಡಿಗೆ ಹೋಗಿ ಮೌನವಾಗಿ ಕುಳಿತು ಧ್ಯಾನಿಸುವುದ ರೊಂದಿಗೆ, ಜೊತೆಯಲ್ಲಿದ್ದ ಮಕ್ಕಳನ್ನು, ಹೆತ್ತವರನ್ನು, ಹಿರಿಯರನ್ನು, ನೆರೆಹೊರೆಯವರನ್ನು ಪ್ರೀತಿಸೋಣ, ಗೌರವಿಸೋಣ. ತಂದೆ ತಾಯಿ ಪ್ರೀತಿ ಎಂದೂ ಕುರುಡಲ್ಲ, ಮಕ್ಕಳಿಗಾಗಿ ನಾವು ಕುರುಡರಾಗದಿರೋಣ. ಪ್ರೀತಿಯಲ್ಲಿ ಜಿಪುಣತನ ಬೇಡ. ಧಾರಾಳವಾಗಿ ಹಂಚೋಣ. ಕೊಂಡು ಕೊಳ್ಳುವಿಕೆಯಲ್ಲಿ ಸಂತೋಷವಿದೆ, ತೃಪ್ತಿಯಿದೆ.
- ರತ್ನಾ ಕೆ ಭಟ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ