ಕೂಟ ಮಹಾಜಗತ್ತು ಮಂಗಳೂರು ಅಂಗಸ್ಥೆಯಿಂದ 'ನಮ್ಮವರು ನಮ್ಮ ಹೆಮ್ಮೆ' ಕಾರ್ಯಕ್ರಮ
ಮಂಗಳೂರು: ಸಾಧನೆ ಮಾಡಿದ ನಮ್ಮ ಸಮಾಜದ ಪ್ರತಿನಿಧಿಗಳನ್ನು ನಾವು ಗುರುತಿಸಬೇಕಿದೆ. ಆ ಮೂಲಕ ಸಾಧಕರಿಗೆ ಪ್ರೀತಿಸಿ ತೋರಿಸಿ, ಅವರನ್ನು ಗುರುತಿಸಿ, ಬೆನ್ನು ತಟ್ಟುವ ಕೆಲಸ ಮಾಡಬೇಕಿದೆ ಎಂದು ಶ್ರೀ ಗುರು ನರಸಿಂಹ ದೇವಳದ ಧರ್ಮದರ್ಶಿ ಡಾ. ಕೆ.ಎಸ್. ಕಾರಂತ್ ಹೇಳಿದರು.
ಕೂಟ ಮಹಾಜಗತ್ತಿನ ಮಂಗಳೂರು ಅಂಗಸಂಸ್ಥೆಯ ವತಿಯಿಂದ ಭಾನುವಾರ ಪಾಂಡೇಶ್ವರದ ಗುರುನರಸಿಂಹ ಸಭಾಭವನದಲ್ಲಿ ನಡೆದ ನಮ್ಮವರು ನಮ್ಮ ಹೆಮ್ಮೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡುತ್ತಿದ್ದರು.
ಸಂಘಟನೆ ಸಮಾಜಮುಖಿಯಾಗಬೇಕು. ಸ್ಪರ್ಧಾತ್ಮಕ ಪ್ರಪಂಚದಲ್ಲಿ ಎಲ್ಲರೂ ಸ್ವಾರ್ಥದ ಬಲೆಗೆ ಸಿಲುಕಿ ಒದ್ದಾಡುತ್ತಿದ್ದೇವೆ. ಅದರಿಂದ ಹೊರಕ್ಕೆ ಬರಬೇಕಾದರೆ ಸಂಘಟನೆಯಲ್ಲಿ ತೊಡಗಿಸಿಕೊಂಡು ಪರಸ್ಪರ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ ಎಂದರು. ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮವಾಗಿದ್ದು ಮಾದರಿಯಾಗಿ ಮೂಡಿಬಂದಿದೆ ಎಂದರು.
ಕೂಟ ಮಹಾಜಗತ್ತು ಸಂಘಟನೆಯು ವಿಸ್ತರಿಸಿಕೊಂಡಿದ್ದು, ಪ್ರಸ್ತುತ ರಾಜ್ಯಾದ್ಯಂತ 37 ಅಂಗ ಸಂಸ್ಥೆ ಹೊಂದಿದ್ದು ಮುಂದಿನ ದಿನಗಳಲ್ಲಿ ಹೊರ ರಾಜ್ಯಗಳಲ್ಲೂ ಸಂಘಟನೆಯನ್ನು ವಿಸ್ತಾರ ಮಾಡಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ. ಈಗಾಗಲೇ ಅಮೇರಿಕಾದಲ್ಲಿ ಅಂಗ ಸಂಸ್ಥೆ ಸ್ಥಾಪಿಸುವ ನಿಟ್ಟಿನಲ್ಲಿ ಅಲ್ಲಿರುವ ಕೂಟ ಸಮಾಜದ ಪ್ರತಿನಿಧಿಗಳೊಂದಿಗೆ ಮಾತುಕತೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಅಮೇರಿಕಾ ಅಂಗ ಸಂಸ್ಥೆ ಕಾರ್ಯಾರಂಭಿಸಲಿದೆ ಎಂದು ಕೂಟ ಮಹಾಜಗತ್ತು ಕೇಂದ್ರೀಯ ಅಧ್ಯಕ್ಷರಾದ ಎಚ್. ಸತೀಶ್ ಹಂದೆ ಹೇಳಿದರು.
ನಮ್ಮವರು ನಮ್ಮ ಹೆಮ್ಮೆ ಕಾರ್ಯಕ್ರಮದಡಿ ಸಾಹಿತ್ಯ ಕ್ಷೇತ್ರದ ನಿತ್ಯಾನಂದ ಕಾರಂತ್ ಪೊಳಲಿ, ಕಾನೂನು ಕ್ಷೇತ್ರದ ಜಗದೀಶ ರಾವ್ ಟಿ., ಲೆಕ್ಕ ಪರಿಶೋಧಕ ಕ್ಷೇತ್ರದ ಕೆ.ಪ್ರಕಾಶ್ ಬಾಸ್ರಿ, ಉದ್ದಿಮೆ ಕ್ಷೇತ್ರದ ಏರುಂಬು ನಾರಾಯಣ ಕಾರಂತ್ ಹೋಟೆಲ್ ಉದ್ದಿಮೆಯ ಪತ್ತುಮುಡಿ ಸೂರ್ಯನಾರಾಯಣ ರಾವ್ ಅವರಿಗೆ ಕೂಟ ಸಮಾಜದ ಕಣ್ಮಣಿ ಬಿರುದು ನೀಡಿ ಗೌರವಿಸಲಾಯಿತು.
ಕೇಂದ್ರೀಯ ಕಾರ್ಯದರ್ಶಿ ಸಿ. ಸುರೇಶ್ ತುಂಗಾ, ಉದ್ಯಮಿ ರಘುನಾಥ್ ಸೋಮಯಾಜಿ, ಕೇಂದ್ರೀಯ ಉಪಾಧ್ಯಕ್ಷ ನ್ಯಾಯವಾದಿ ಸದಾಶಿವ ಐತಾಳ್ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಅಂಗ ಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ ಮಾತನಾಡಿ, ಮಂಗಳೂರು ಅಂಗ ಸಂಸ್ಥೆಯು ಕಾರ್ಯಸೂಚಿಯನ್ನು ಹಾಕಿಕೊಂಡು ಅನುಷ್ಠಾನಗೊಳಿಸುತ್ತಿದೆ. ಕೇಂದ್ರ ಸಮಿತಿಯು ಅವಕಾಶ ನೀಡಿದರೆ 2026ನೇ ಕೂಟ ಸಮ್ಮೇಳನವನ್ನು ಮಂಗಳೂರಿನ ಅಂಗ ಸಂಸ್ಥೆಯು ಆತಿಥ್ಯ ವಹಿಸಲು ಸಿದ್ಧವಾಗಿದೆ ಎಂದರು.
ಸAಸ್ಥೆಯ ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ ವಂದಿಸಿದರು. ಕೂಟವಾಣಿ ಪತ್ರಿಕೆಯ ಸಂಪಾದಕರಾದ ಅಡ್ಡೂರು ಕೃಷ್ಣರಾವ್ ಅವರು ಸನ್ಮಾನಿತರ ಬಗ್ಗೆ ಅಭಿನಂದನಾ ಭಾಷಣ ಮಾಡಿದರು. ಸಿ. ಎ ಚಂದ್ರಮೋಹನ್ ಕೆ. ಕಾರ್ಯಕ್ರಮ ನಿರೂಪಿಸಿದರು.
ಸಂಘಟನಾ ಕಾರ್ಯದರ್ಶಿ ಕೃಷ್ಣ ಮಯ್ಯ, ಗಣೇಶ್ ಪ್ರಸಾದ್, ರಂಗನಾಥ ಐತಾಳ್, ಪ್ರವೀಣ್ ಮಯ್ಯ ಅವರು ಸನ್ಮಾನ ಪತ್ರವನ್ನು ವಾಚಿಸಿದರು. ಉಪಾಧ್ಯಕ್ಷ ಪ್ರಭಾಕರ ಐತಾಳ್, ಮೆನೇಜರ್ ಶಿವರಾಮ ರಾವ್, ಶ್ರೀನಿವಾಸ ಐಗಲ್, ಬಾಲಕೃಷ್ಣ ಐತಾಳ್, ಮಹಿಳಾ ಸಂಘಟನೆಯ ಅಧ್ಯಕ್ಷೆ ಪ್ರಭಾ ರಾವ್, ಉಪಾಧ್ಯಕ್ಷೆ ಲಲಿತಾ ಉಪಾಧ್ಯಾಯ, ಕಾರ್ಯದರ್ಶಿ ಪಂಕಜ ಐತಾಳ್, ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಮಯ್ಯ, ಬಾಲಕೃಷ್ಣ ಮಯ್ಯ ಮೊದಲಾದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಭರತಾಂಜಲಿ ಕೊಟ್ಟಾರ ಬಳಗದವರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ನೃತ್ಯ ವಿದುಷಿ ದೂರದರ್ಶನ ಕಲಾವಿದೆ ಶ್ರೀಮತಿ ಪ್ರತಿಮಾ ಶ್ರೀಧರ್ ನಿರ್ದೇಶನದಲ್ಲಿ ಭರತನಾಟ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು. ಕೊನೆಯಲ್ಲಿ ಕಲಾಗುರುಗಳಾದ ಶ್ರೀಧರ ಹೊಳ್ಳ ಪ್ರತಿಮಾ ಶ್ರೀಧರ್ ರವರನ್ನು ಗಣ್ಯರು ಗೌರವಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ