- ಆರ್ಥಿಕ ಸ್ಥಿರತೆಯೊಂದಿಗೆ ಅಭಿವೃದ್ದಿಗೆ ಸಂಸ್ಪರ್ಷ
- ಆದಾಯ ತೆರಿಗೆದಾರರಿಗೆ ಬಂಪರ್ ಕೊಡುಗೆ
- ಬಳಕೆದಾರಸ್ನೇಹಿ ಬಜೆಟ್
-ಡಾ.ಎ. ಜಯ ಕುಮಾರ ಶೆಟ್ಟಿ
ಸಹಜವಾದ ನಿರೀಕ್ಷೆಗಳು ಮತ್ತು ಸವಾಲುಗಳ ಮಧ್ಯೆ ಪ್ರಗತಿ ಹಾಗೂ ಸದೃಢತೆಗೆ ಪೂರಕವಾದ ಬಜೆಟ್ ಮಂಡನೆಯ ಜಾಣ್ಮೆಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತೋರಿದ್ದಾರೆ. ಮುಂದಿನ ಐದು ವರ್ಷಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೃಷಿ, ಕೈಗಾರಿಕೆ, ಗಣಿಗಾರಿಕೆ, ಆರ್ಥಿಕತೆ, ಇಂಧನ ಕ್ಷೇತ್ರಗಳಿಗೆ ಒತ್ತು ನೀಡಲಾಗಿದೆ.
ಪ್ರತಿ ಬಾರಿ ಬಜೆಟ್ ಮಂಡನೆಯಾಗುವಾಗ ಪ್ರತಿಯೊಬ್ಬರೂ ಕಾತರತೆಯಿಂದ ತಮಗೆ ಅನುಕೂಲಕರ ಬದಲಾವಣೆಯನ್ನು ತರುತ್ತದೆ ಎಂದೇ ಕಾಯುತ್ತಾರೆ. ನಿಧಾನಗತಿಯ ಆರ್ಥಿಕ ಬೆಳವಣಿಗೆ ಮತ್ತು ಏರುತ್ತಿರುವ ಹಣದುಬ್ಬರದ ಸವಾಲಿನ ನಡುವೆ ಸಕಾರಾತ್ಮಕ ದಿಕ್ಕಿನಲ್ಲಿ ಮನ್ನಡೆಸಲು ದಿಟ್ಟ ಕ್ರಮಗಳ ನಿರೀಕ್ಷೆಯನ್ನು ಸಾಕಾರಗೊಳಿಸಿದ್ದಾರೆ. ಪ್ರಗತಿಗೆ ಪ್ರಚೋದನೆ ನೀಡುವುದರೊಂದಿಗೆ ಹಣದುಬ್ಬರಕ್ಕೆ ಲಗಾಮು ಹಾಕುವ ಪ್ರಯತ್ನ ಪ್ರಶಂಸನೀಯ.
ಆದಾಯ ತೆರಿಗೆದಾರರಿಗೆ ಬಂಪರ್ ಗಿಫ್ಟ್
ವಿತ್ತ ಸಚಿವೆ ಬಳಕೆಯನ್ನು ಉತ್ತೇಜಿಸುವ, ಜಿಡಿಪಿ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಜನಸಾಮಾನ್ಯರಿಗೆ ಹಾಗೂ ವೇತನದಾರರಿಗೆ ತೆರಿಗೆ ವಿನಾಯಿತಿ ನೀಡುವ ಬಜೆಟನ್ನು ಮಂಡಿಸಿದ್ದಾರೆ. ಸ್ಟಾಂಡರ್ಡ್ ಡಿಡಕ್ಷನ್ ರೂ.75 ಸಾವಿರ ಸೇರಿ ಒಟ್ಟು 12.75 ಲಕ್ಷ ರೂ.ವರೆಗೂ ಆದಾಯ ತೆರಿಗೆ ವಿನಾಯಿತಿ ನೀಡಿದೆ.
ಪ್ರತಿ ವರ್ಷ, ಮಧ್ಯಮ ವರ್ಗದ ಜನರು ತಮ್ಮ ಹೊರೆಯನ್ನು ತಗ್ಗಿಸಲು ತೆರಿಗೆ ಕಡಿತಕ್ಕಾಗಿ ಹಣಕಾಸು ಸಚಿವರ ಕಡೆಗೆ ನೋಡುತ್ತಾರೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರು ಆದಾಯ ತೆರಿಗೆ ಮಿತಿ ಹೆಚ್ಚಳದ ನಿರೀಕ್ಷೆಯಲ್ಲಿದ್ದರು. ಮಧ್ಯಮ ವರ್ಗದ ಜನರಿಗೆ ಬಜೆಟ್ ಬಂಪರ್ ಘೋಷಣೆ ಮಾಡಿದೆ. ಹೊಸ ತೆರಿಗೆ ಪದ್ಧತಿಯಡಿ ರೂ.12 ಲಕ್ಷದವರೆಗೂ ಆದಾಯ ತೆರಿಗೆ ಕಟ್ಟಬೇಕಾಗಿಲ್ಲ. ಇದರಿಂದ ತಿಂಗಳಿಗೆ ಒಂದು ಲಕ್ಷ ರೂಪಾಯಿ ದುಡಿಯುವವರಿಗೂ ತೆರಿಗೆ ಪಾವತಿ ಮಾಡಬೇಕಾಗಿಲ್ಲ.
ಹೆಚ್ಚಿನ ಗ್ರಾಹಕ ಖರ್ಚು ಮತ್ತು ಹೂಡಿಕೆಯನ್ನು ಪ್ರೋತ್ಸಾಹಿಸುವಾಗ ವ್ಯಕ್ತಿಗಳ ಮೇಲೆ ವಿಶೇಷವಾಗಿ ಮಧ್ಯಮ ವರ್ಗದವರ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಬಜೆಟ್ ಪರಿಷ್ಕೃತ ತೆರಿಗೆ ಸ್ಲ್ಯಾಬ್‌ಗಳನ್ನು ಪರಿಚಯಿಸಿದೆ. ವೈಯುಕ್ತಿಕ ತೆರಿಗೆ ಸುಧಾರಣೆಗಳು ಮಧ್ಯಮ ವರ್ಗದವರ ಹೊರೆಯನ್ನು ಕಡಿಮೆ ಮಾಡುವತ್ತ ವಿಶೇಷ ಗಮನಹರಿಸಲಿದೆ. ಹೊಸ ತೆರಿಗೆ ಮಸೂದೆಯು ಕಾನೂನುಗಳನು ಸರಳಗೊಳಿಸಿ ತೆರಿಗದಾರರಿಗೆ ಸಂಕೀರ್ಣತೆಯನ್ನು ಕಡಿಮೆ ಮಾಡಲಿದೆ.
ಆದಾಯ ತೆರಿಗೆಯಲ್ಲಿ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ಮೂಲಕ ಹಣದುಬ್ಬರದ ಪರಿಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಪರಿಹಾರ ನೀಡಿದಂತಾಗಿದೆ. ಇದರಿಂದ ವೈಯಕ್ತಿಕ ಆದಾಯ ಹೆಚ್ಚಳವಾಗುವುದರಿಂದ ಮಾರುಕಟ್ಟೆಯಲ್ಲಿ ವಿನಿಯೋಗವೂ ಹೆಚ್ಚಲಿದೆ ಎಂದು ತೆರಿಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಾರುಕಟ್ಟೆ ಬೇಡಿಕೆ ಹಾಗೂ ಹೂಡಿಕೆಯ ಮಟ್ಟ ಹೆಚ್ಚಲಿದೆ. ಬಳಕೆ ಹೆಚ್ಚುವ ಮೂಲಕ ಮಾರುಕಟ್ಟೆ
ಸುಮಾರು ಒಂದು ಲಕ್ಷ ಕೋಟಿ ಆದಾಯ ನಷ್ಟ ಆಗಲಿದೆ. ಅಂದರೆ ಅಷ್ಟು ಪ್ರಮಾಣದ ಹಣ ಜನಸಾಮಾನ್ಯರ ಜೋಬಿನಲ್ಲಿ ಉಳಿದು ಬಳಕೆ ಮತ್ತು ಹೂಡಿಕೆ ಹೆಚ್ಚುವ ಮೂಲಕ ಮಾರುಕಟ್ಟೆಯ ಮೇಲೆ ಧನಾತ್ಮಕ ಪರಿಣಾಮ ಬೀರಿ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ.
ಉದ್ಯಮಸ್ನೇಹಿ ಪರಿಸರ
ಉದ್ದಿಮೆಗಳಿಗೆ ಭಾರತದ ಪ್ರೋತ್ಸಾಹ ಕ್ರಮಗಳು ಸಾಗರೋತ್ತರ ಹೂಡಿಕೆದಾರರು ಭಾರತದ ಬಗ್ಗೆ ಹೊಂದಿದ್ದ ಸಂದೇಹ ಭಾವನೆಯನ್ನು ದೂರವಾಗಿಸುವಲ್ಲಿ ನೆರವಾಗಿದೆ. ಕಳೆದ ಒಂದು ದಶಕದಲ್ಲಿ ಬಾರತವು ವಿಶ್ವದಲ್ಲಿ ಉತ್ತಮ ಸ್ಥಾನ ಗಳಿಸಿದೆ ಮತ್ತು ಜಾಗತಿಕ ಬೆಳವಣಿಗೆಯಲ್ಲಿ ಇಂದು ಮುಂಚೂಣಿ ಸ್ಥಾನ ಗಳಿಸಿದೆ
ಭಾರತವು ಹೂಡಿಕೆಗೆ ಮಾತ್ರವಲ್ಲದೆ ವ್ಯಾಪಾರ ಮಾಡಲು ಸಹ ಅತ್ಯಂತ ಆಕರ್ಷಕ ತಾಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ನಮ್ಮ ಪ್ರಯತ್ನಗಳು ಕೇವಲ ಉದ್ಯಮಸ್ನೇಹಿ ವಾತಾವರಣವನ್ನು ನಿರ್ಮಿಸಲು ಅಗತ್ಯವಾದ ಬದ್ಧತೆಯ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗದೆ ಉದ್ಯಮಗಳ ಬೆಳವಣಿಗೆ ನಮ್ಮ ಆರ್ಥಿಕತೆಯ ಸದೃಡ ಬೆಳವಣಿಗೆಗೆ ಪೂರಕವಾಗುವಂತಹ ಯೋಚನೆ ಹಾಗೂ ಯೋಜನೆಗಳು ಈ ಬಜೆಟಿನಲ್ಲಿದೆ.
ಆತ್ಮನಿರ್ಭರ ಭಾರತ
“ಆತ್ಮನಿರ್ಭರ” ಅಂದರೆ ಸಶಕ್ತ, ಸ್ವಾವಲಂಬಿ ಭಾರತದ ಪರಿಕಲ್ಪನೆ ಸಂಚಲನವನ್ನುಂಟು ಮಾಡಿದೆ. ಇದರೊಂದಿಗೆ ಸ್ಥಳೀಯ ವಸ್ತುಗಳ ಹುಡುಕಾಟ ಹೆಚ್ಚಿದೆ ಮತ್ತು ಉತ್ಪಾದನೆಗೂ ಉತ್ತೇಜನ ದೊರೆಯುತ್ತಿದೆ. ಹಿಂದೆ ಆಮದು ಕಡಿತದ ಮೂಲಕ ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ದೊರೆಯುತ್ತಿದ್ದರೆ, ಇದೀಗ ದೇಶದ ನೂತನ ಚಿಂತನೆ ಘೋಷಣೆ ಹಾಗೂ ಉತ್ತೇಜಕಗಳು ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಿವೆ. ಆತ್ಮನಿರ್ಭರ ಭಾರತ ಮೂಲಕ ಸ್ಟಾರ್ಟ್ ಅಪ್ ಗಳಿಗೆ ರೂ.10 ಕೋಟಿಯಿಂದ 20ಕೋಟಿವರೆಗೂ ಕಡಿಮೆ ಬಡ್ಡಿ ಸಾಲ ಶ್ಲಾಘನೀಯ.
ಭಾರತೀಯ ಕೈಗಾರಿಕೆಗಳ ಒಕ್ಕೂಟ ಆರ್ಥಿಕತೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಬಜೆಟ್‌ನಲ್ಲಿ ಉಪಕ್ರಮಗಳನ್ನು ಸೇರಿಸಲು ಸಲಹೆ ನೀಡಿದೆ. ಉದ್ಯಮ ಕ್ಷೇತ್ರದಲ್ಲಿ ಸುಮಾರು 22 ಲಕ್ಷ ಮಹಿಳೆಯರಿಗೆ ಅನುಕೂಲವಾಗಲಿರುವ ರೂ.2 ಕೋಟಿವರೆಗೆ ಸಾಲ ಯೋಜನೆ ಸಂಚಲನವನ್ನು ಮೂಡಸಲಿದೆ.
ಹಣಕಾಸಿನ ವಿವೇಕತೆ
ಅಗತ್ಯ ಕ್ಷೇತ್ರಗಳಗೆ ದೊಡ್ಡ ಉತ್ತೇಜನವನ್ನು ನೀಡಿರುವ ಬಜೆಟ್ ಸಹಜವಾಗಿ ಹಣಕಾಸಿನ ವಿವೇಕಕ್ಕೆ ಬದ್ದತೆ ನೀಡಿರುವುದು ಸ್ಪಷ್ಟವಾಗಿದೆ. ಇದರೊಂದಿಗೆ ವೆಚ್ಚದ ಗುಣಮಟ್ಟ ಮತ್ತು ಪಾರದರ್ಶಕತೆಗೆ ಒತ್ತು ನೀಡಿರುವುದು ಗಮನಾರ್ಹವಾಗಿದೆ. ಆರ್ಥಿಕ ಸ್ಥಿರತೆ ಮತ್ತು ಹಣಕಾಸಿನ ಶಿಸ್ತಿನ ಬಗ್ಗೆ ಸರಕಾರದ ನಿಸ್ಸಂದಿಗ್ಧ ಬದ್ಧತೆಯನ್ನು ಬಜೆಟ್ ಒತ್ತಿ ಹೇಳುತ್ತದೆ. ವಿತ್ತೀಯ ಕೊರತೆಯು ಜಿಡಿಪಿಯ ಶೇ.4.8 ಆಗಿರಲಿದೆ. ಹೂಡಿಕೆ, ಉದ್ಯಮ ಮತ್ತು ಮೂಲ ಸೌಕರ್ಯಗಳಲ್ಲಿ ಬಜೆಟ್ ಹಲವು ಧನಾತ್ಮಕ ದೀರ್ಘಕಾಲೀನ ಬದಲಾವಣೆಗಳನ್ನು ತರಲಿದೆ. ಜನಸಾಮಾನ್ಯರಿಗೆ ತೆರಿಗೆ ಹೊರೆಯಾಗದಂತೆ ಎಚ್ಚರ ವಹಿಸಲಾಗಿದೆ.
ಬೆಳವಣಿಗೆ ಮತ್ತು ಆರ್ಥಿಕ ಶಿಸ್ತು
ಬೆಳವಣಿಗೆಯನ್ನು ವೇಗಗೊಳಿಸುವುದು, ಸಮಗ್ರ ಅಭಿವೃದ್ಧಿ, ಖಾಸಗೀ ವಲಯದ ಹೂಡಿಕೆಯನ್ನು ಉತ್ತೇಜಿಸುವುದು ಹಾಗೂ ಭಾರತದ ಮಧ್ಯಮ ವರ್ಗದವರಲ್ಲಿ ಹೆಚ್ಚಾಗುತ್ತಿರುವ ಖರ್ಚುವೆಚ್ಚಗಳನ್ನು ನಿಭಾಯಿಸುವ ಶಕ್ತಿಯನ್ನು ಹೆಚ್ಚಿಸುವುದು ಮುಂತಾದ ಕೇಂದ್ರ ಬಜೆಟಿನ ಮುಖ್ಯ ಗುರಿಗಳು ಸಬ್ಕಾ ವಿಕಾಸ್ ಸಾಕಾರಗೊಳಿಸುವತ್ತ ಪೂರಕವಾಗಿದೆ.
ಬೆಳವಣಿಗೆ ಮತ್ತು ಹಣಕಾಸಿನ ಶಿಸ್ತಿನ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಕಠಿಣ ಜವಾಬ್ದಾರಿ ಈ ಬಜೆಟಿಗಿದೆ. ಜಿಡಿಪಿ ಬೆಳವಣಿಗೆಯು ಹಲವಾರು ತ್ರೈಮಾಸಿಕಗಳಲ್ಲಿ ಅತ್ಯಂತ ಕಡಿಮೆ ಹಂತಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಸರ್ಕಾರ ಆರ್ಥಿಕ ಚೇತರಿಕೆಗೆ ಒತ್ತು ನೀಡುವ ಯೋಜನೆಗಳಿವೆ.
ತೆರಿಗೆ ಸುಧಾರಣೆಗಳು ಮತ್ತು ಬೆಳವಣಿಗೆಯ ತಂತ್ರಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಹಣದುಬ್ಬರವನ್ನು ಹದ್ದುಬಸ್ತಿನಲ್ಲಿಡುವುದರೊಂದಿಗೆ ಮೂಲಸೌಕರ್ಯ ಅಭಿವೃದ್ಧಿ, ಖಾಸಗಿ ಬಳಕೆ, ಹೂಡಿಕೆ ಮತ್ತು ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸಿರುವುದು ಗಮನಾರ್ಹ
ಹೊಣೆಯರಿತ ಜಾಣ್ಮೆಯ ಹೆಜ್ಜೆ
2047 ರ ಹೊತ್ತಿಗೆ 'ವಿಕಸಿತ್ ಭಾರತ್' ದೃಷ್ಟಿಗೆ ಅನುಗುಣವಾಗಿ ಈ ಬಜೆಟ್ ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಬೆಳವಣಿಗೆ ಮತ್ತು ಹಣಕಾಸಿನ ಶಿಸ್ತಿನ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಹೊಣೆಯರಿತ ಜಾಣ್ಮೆಯ ನಡೆಯನ್ನು ಪ್ರದರ್ಶಿಸಿದ್ದಾರೆ ವಿತ್ತ ಸಚಿವೆ.
-ಡಾ.ಎ. ಜಯ ಕುಮಾರ ಶೆಟ್ಟಿ
ನಿವೃತ್ತ ಪ್ರಾಂಶುಪಾಲರು
ಶ್ರೀ.ಧ.ಮಂ.ಕಾಲೇಜು, ಉಜಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ