ತ್ರಿದಳಂ ತ್ರಿಗುಣಾಕಾರಂ.. ಏಕಂ ಬಿಲ್ವಂ ಶಿವಾರ್ಪಣಂ..

Upayuktha
0

|| ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ ತ್ರಿಜನ್ಮ ಪಾಪಸಂಹಾರಂ 

ಏಕಬಿಲ್ವಂ ಶಿವಾರ್ಪಣಂ ||



ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಮಹಾಶಿವರಾತ್ರಿಯು ಒಂದು. ಈ ಹಬ್ಬವನ್ನು ರಾತ್ರಿ ಸಮಯದಲ್ಲಿ ಆಚರಿಸುತ್ತಾರೆ. ಮಹಾಶಿವರಾತ್ರಿಯು ಮಾಘ ಮಾಸದ ಕೃಷ್ಣ ಪಕ್ಷದಲ್ಲಿ ಬರುತ್ತದೆ. ಈ ಸಮಯದಲ್ಲಿ ಶಿವನ ಭಕ್ತರು ಉಪವಾಸ ವತ್ರಗಳನ್ನು ಕೈಗೊಂಡು ರಾತ್ರಿಯಿಡೀ ಜಾಗರಣೆ ಕುಳಿತು  ಮಹಾಶಿವರಾತ್ರಿಯನ್ನು ಆಚರಿಸುತ್ತಾರೆ. 



ಮಹಾಶಿವರಾತ್ರಿ ಹಿನ್ನೆಲೆ              

ಪುರಾಣಗಳಲ್ಲಿ ಮಹಾಶಿವರಾತ್ರಿಗೆ ಅತ್ಯಂತ ವಿಶಿಷ್ಟವಾದ ಮಹತ್ವವಿದೆ. ಪರ್ವತರಾಜನ ಮಗಳಾದ ಪಾರ್ವತಿದೇವಿಯು ಶಿವನನ್ನು ತನ್ನ ಅಪಾರವಾದ ಭಕ್ತಿಯಿಂದ ಒಲಿಸಿ, ವರಿಸಿದ ದಿನವು ಇದಾಗಿದೆ. ದೇವತೆಗಳ ಮತ್ತು ಅಸುರರ ಸಮುದ್ರ ಮಂಥನದ ಸಮಯದಲ್ಲಿ ಕಾರ್ಕೋಟಕ ವಿಷವು ಉಧ್ಬವಿಸುತ್ತದೆ. ಆ ವಿಷವನ್ನು ಶಿವನು ಕುಡಿಯುತ್ತಾನೆ. ಆಗ ಪಾರ್ವತಿಯು ಆ ವಿಷವು ಶಿವನ ಗಂಟಲಿನಲ್ಲೇ ಉಳಿಯುವಂತೆ ಮಾಡುತ್ತಾಳೆ. ಈ ಸಂದರ್ಭದಲ್ಲಿ ಶಿವನ ಗಂಟಲು ನೀಲಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದಾಗಿ ಶಿವನು "ನೀಲಕಂಠ" ಎಂಬ ಹೆಸರನ್ನು ಪಡೆದುಕೊಳ್ಳುತ್ತಾನೆ. 


ಇಕ್ಷ್ವಾಕು ವಂಶದ ರಾಜಕುಮಾರನಾಗಿದ್ದ ಭಗೀರಥನು ತನ್ನ ಪೂರ್ವಜರ ಆತ್ಮಕ್ಕೆ ಮೋಕ್ಷ ದೊರಕಲಿಲ್ಲವೆಂದು ಹೇಳಿ ಗಂಗಾಮಾತೆಗೆ ತನ್ನ ಪೂರ್ವಜರಿಗೆ ಮೋಕ್ಷವನ್ನು ದಯ ಪಾಲಿಸುವಂತೆ ಭಕ್ತಿಯಿಂದ ತಪಸ್ಸನ್ನಾಚರಿಸುತ್ತಾನೆ. ಆಗ ಪ್ರತ್ಯಕ್ಷಳಾದ ಗಂಗಾಮಾತೆ "ತಾನು ಭೂಮಿಗೆ ಇಳಿದರೆ ತನ್ನ ತಡೆಯಿಲ್ಲದೆ ಹರಿವಿನಿಂದಾಗಿ ಭೂಮಿಯು ಸಂಪೂರ್ಣವಾಗಿ ನಾಶವಾದಿತು. ನನ್ನನ್ನು ತಡೆಯಲು ಇರುವ ಒಂದೇ ಶಕ್ತಿಯೆಂದರೆ ಅದು ಮಹಾದೇವ ಮಾತ್ರ. ನೀನು ಮಹಾದೇವನನ್ನು ಕುರಿತು ತಪಸ್ಸನ್ನಾಚರಿಸು" ಎಂದು ಗಂಗಾಮಾತೆ ಭಗೀರಥನಿಗೆ ಸಲಹೆಯಿತ್ತಳು. 


ಗಂಗಾಮಾತೆಯ ಸಲಹೆಯಂತೆ ಭಗೀರಥನು ಮಹಾದೇವನ ಕುರಿತು ಕಠಿಣ ತಪಸ್ಸನ್ನಾಚರಿಸುತ್ತಾನೆ. ಆಗ ಮಹಾದೇವನು ಗಂಗೆಮಾತೆಗೆ ತನ್ನ ತಲೆ ಜಡೆಯ ಮೇಲೆ ಸ್ಥಾನ ನೀಡಿ, ಭಗೀರಥನ ಇಚ್ಛೆಯಂತೆ ಗಂಗಾಮಾತೆಯನ್ನು ಧರೆಗೆ ಇಳಿಸುತ್ತಾನೆ. ಇದರಿಂದಾಗಿ ಶಿವನನ್ನು "ಗಂಗಾಧರ" ನೆಂದು ಕರೆಯುತ್ತಾರೆ. ಈ ಪುರಾಣದ ಕಥೆಗಳ ಉಲ್ಲೇಖದಿಂದಾಗಿ ಇಂದಿಗೂ ಮಹಾಶಿವರಾತ್ರಿಯನ್ನು ಶಿವನ ಭಕ್ತರು ಭಕ್ತಿಯಿಂದ ಆಚರಿಸುತ್ತಾರೆ. 


ಶಿವನ ಲಿಂಗ ರೂಪದ ಮಹತ್ವ

ಪುರಾಣದಲ್ಲಿ ಶಿವನ ಲಿಂಗ ರೂಪಕ್ಕೂ ಮಹತ್ತರವಾದ ಮಹತ್ವವಿದೆ. ಒಮ್ಮೆ ಬ್ರಹ್ಮ ಮತ್ತು ವಿಷ್ಣು ಶಿವನ ಲಿಂಗ ರೂಪದ ಆದಿ ಮತ್ತು ಅಂತ್ಯ ಹುಡುಕಲು ಹೊರಟರು. ಆಗ ಶಿವನು ಅವರಿಬ್ಬರಿಗೂ ಜ್ಯೋತಿರ್ಲಿಂಗ ರೂಪದಲ್ಲಿ ಕಾಣಿಸುತ್ತಾನೆ. ಶಿವನ ಈ ಜ್ಯೋತಿರ್ಲಿಂಗದ ರೂಪವನ್ನು "ಪೂರ್ಣ ಸ್ವರೂಪಿ ರೂಪ" ಎಂದು ಕರೆಯುತ್ತಾರೆ ಮಾತ್ರವಲ್ಲದೆ, ಶಿವಲಿಂಗವನ್ನು "ತ್ರಿಮೂರ್ತಿ ರೂಪ"ವೆಂದು ಕರೆಯುತ್ತಾರೆ. 


ಶಿವ ಲಿಂಗದ ಕೆಳಭಾಗ "ಬ್ರಹ್ಮ ಸ್ಥಾನ", ಶಿವ ಲಿಂಗದ ಮಧ್ಯ‌ಭಾಗ "ವಿಷ್ಣು ಸ್ಥಾನ", ಶಿವಲಿಂಗದ ಶಿರಭಾಗ "ಮಹೇಶ್ವರನ ಸ್ಥಾನ" ಎಂದರೆ ಶಿವನ ರೂಪವೆಂದು ಕರೆಯುತ್ತಾರೆ. ಶಿವನ ಲಿಂಗ ರೂಪದಲ್ಲಿದೇ ಅನೇಕ ರಹಸ್ಯವಾದ ಶಕ್ತಿಗಳು. ಶಿವನ ಲಿಂಗ ರೂಪವು ಸಕಾರಾತ್ಮಕ ಶಕ್ತಿಯನ್ನು ಹೊರ ಸೂಸುತ್ತಿರುತ್ತದೆ. ಮಹಾಕಾಲನಾದ ಶಿವನು ಧ್ಯಾನಕ್ಕೆ ಅತೀ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ಶಿವನ ಗುಡಿ ಅಥವಾ ಸಾನಿಧ್ಯದ ಒಳಭಾಗ ಮತ್ತು ಹೊರಭಾಗದಲ್ಲಿ ಆಧ್ಯಾತ್ಮಿಕ ವಾತಾವರಣವು ಸೃಷ್ಟಿಯಾಗುತ್ತದೆ. ಇದರಿಂದಾಗಿ ನಾವು ನಮ್ಮ ಮನಸ್ಸನ್ನು ಒಂದೇ ವಿಷಯದ ಮೇಲೆ ಕೇಂದ್ರೀಕರಿಸುವಂತೆ ಮಾಡುತ್ತದೆ. ಇದು ಶಿವನ ದೇವಾಲಯದ ಸುತ್ತಲೂ ಪ್ರಶಾಂತತೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಪಸರುವಂತೆ ಮಾಡುತ್ತದೆ.  


ಬಿಲ್ವಪತ್ರೆಯ ಮಹತ್ವ 

ಮಹಾಶಿವರಾತ್ರಿಯಂದು ಶಿವನ ಅನುಗ್ರಹಕ್ಕಾಗಿ ಜನರು ಉಪವಾಸ, ವ್ರತ, ಆಚರಣೆ ಈ ರೀತಿಯ ಅನೇಕ ಬಗೆಯ ಸೇವೆಗಳಿಂದ ಶಿವನನ್ನು ಆರಾಧಿಸುತ್ತಾರೆ ಆದರೆ ಶಿವನಿಗೆ ಅತ್ಯಂತ ಪ್ರಿಯವಾದ ಸೇವೆ ಎಂದರೆ ಬಿಲ್ವಾರ್ಚನೆ. ಬಿಲ್ವಪತ್ರೆ ಎಲೆಗಳಿಂದ ಶಿವನನ್ನು ಪೂಜಿಸಿದರೆ ನಾವು  ಅರಿವಿದ್ದೋ, ಅರಿವಿಲ್ಲದೆಯೋ ಮಾಡಿದ ಪಾಪಕರ್ಮಗಳು ಕಳೆಯುತ್ತದೆ ಹಾಗೂ ಶಿವನ ಅನುಗ್ರಹ ದೊರೆಯುತ್ತದೆ ಎಂಬ ನಂಬಿಕೆ ಇದೆ.


ಒಮ್ಮೆ ಒಬ್ಬ ಬೇಟೆಗಾರನು ಬೇಟೆಗಾಗಿ ಹುಡುಕುತ್ತಾ ಬರುವಾಗ ಎದುರಾಗುವ ಹುಲಿಯ ದಾಳಿಯನ್ನು ತಪ್ಪಿಸಲು ಹತ್ತಿರವಿದ್ದ ಬಿಲ್ವಪತ್ರೆ ಮರವನ್ನು ಏರುತ್ತಾನೆ ಹುಲಿಗೆ ತಾನು ಮರದ ಮೇಲೆ ಇರುವುದು ತಿಳಿಯಬಾರದೆಂದು ಬಿಲ್ವಪತ್ರೆ ಮರದ ಒಂದೊಂದು ಎಲೆಯನ್ನು ಕಿತ್ತು ಕೆಳಗೆ ಹಾಕುತ್ತಾನೆ. ಆಗ ಆ ಎಲೆಯು ನೇರವಾಗಿ ಶಿವಲಿಂಗದ ಮೇಲೆ ಬೀಳುತ್ತದೆ. 


ಹುಲಿಯು ಮರಕ್ಕೆ ಮೂರು ಸುತ್ತು ಹಾಕಿ ನಂತರ ಹೊರಟು ಹೋಗುತ್ತದೆ. ಬೇಟೆಗಾರ ಕೆಳಗಿಳಿದು ನೋಡುತ್ತಾನೆ. ನಂತರ ಆತನಿಗೆ ತಿಳಿಯುತ್ತದೆ ಗೊತ್ತಿಲ್ಲದೆ ಆತ ಕೆಳಗೆ ಹಾಕಿದ ಎಲೆ ನೇರವಾಗಿ ಶಿವಲಿಂಗದ ಮೇಲೆ ಬಿದ್ದು ಶಿವನೇ ತನ್ನನ್ನು ಕಾಪಾಡಿದನೆಂದು. ಬಿಲ್ವಪತ್ರೆಯೂ ಬರೀ ಪೂಜೆಗೆ, ಆರಾಧಿಸಲು ಮಾತ್ರವಲ್ಲ, ಬಿಲ್ವಪತ್ರೆಯು ಔಷಧೀಯ ಗುಣವುಳ್ಳ ಸತ್ವವನ್ನು ಹೊಂದಿದೆ. ಅಮೃತದ ರೀತಿಯಲ್ಲಿ ಮನುಷ್ಯನ ಆರೋಗ್ಯಕ್ಕೆ ನೆರವಾಗುತ್ತದೆ. 


ಶಿವನು ಸರಳ ವಸ್ತುಗಳ ಪ್ರಿಯನಾಗಿರುವವನು. ಶಿವನ ಆರಾಧನೆಯಲ್ಲಿ ಅತೀ ಹೆಚ್ಚಾಗಿ ಉಪಯೋಗಿಸಲ್ಪಡುವ ವಸ್ತುಗಳು, ಹೂವುಗಳು ಎಲ್ಲವೂ ಕೂಡ ನಮ್ಮ ಕಣ್ಣಿಗೆ ಕಾಣುವಂತಹದ್ದು. ವಿಭೂತಿ, ನೇರಳೆ ಬಣ್ಣದ ಎಕ್ಕಮಲೆ ಹೂವು, ತುಂಬೆ ಹೂವು, ದಾಸವಾಳ ಹೂವು, ಮಾವು, ಬಾಳೆ, ಹಾಲು, ಪಾನಕ, ಎಳನೀರು, ಪಂಚಾಮೃತ ಇವೆಲ್ಲವೂ ಕೂಡ ವಿಶ್ವಾಂಬರನಾದ ಶಿವನಿಗೆ ಪ್ರಿಯವಾದುದಾಗಿದೆ. 


ಶಿವನನ್ನು ಧ್ಯಾನ ಮತ್ತು ಶುದ್ಧಭಕ್ತಿಯಿಂದ ಶಿವನಾಮ ಸ್ಮರಣೆ ಮಾಡುತ್ತಾ ಜಾಗರಣೆ ಮಾಡಬೇಕು. ಶಿವನಿಗೆ ಹಾಲಿನ ಅಭಿಷೇಕ, ಹಣ್ಣುಗಳ ನೈವೇದ್ಯ, ಪ್ರಿಯವಾದ ಹೂಗಳು ಮತ್ತು ಎಲೆಗಳನ್ನು ಸಮರ್ಪಣೆ ಮಾಡಬೇಕು. ಉಪವಾಸ ವಿಧಿಯನ್ನು ಕೈಗೊಳ್ಳುವಾಗ ಸಾತ್ವಿಕ ಆಹಾರ ಸೇವನೆ ಮಾಡಬೇಕು. ಉಪವಾಸ ವ್ರತ ಕೊನೆಗೊಳಿಸುವುದಕ್ಕೂ ಕ್ರಮಗಳಿವೆ. ಅದನ್ನು ಪಾಲಿಸಬೇಕು.


ಮಹಾಶಿವರಾತ್ರಿಯನ್ನು ಆಚರಿಸಲು ಅದರದೇ ಆದ ಪವಿತ್ರ ವಿಧಿ ವಿಧಾನಗಳಿವೆ. ಮಹಾಶಿವರಾತ್ರಿಯಂದು ಪವಿತ್ರ ವಿಧಿ ವಿಧಾನಗಳನ್ನು ಅನುಸರಿಸಿ ಶಿವನ ಆರಾಧನೆ ಮಾಡಿದರೆ ಶಿವನ ಅನುಗ್ರಹ ದೊರೆತು ಪುಣ್ಯಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇಂದಿಗೂ ಜೀವಂತವಾಗಿದೆ. ಮಹಾಶಿವರಾತ್ರಿಯನ್ನು ಪ್ರತಿಯೊಬ್ಬರೂ ಸಂಭ್ರಮದಿಂದಾಗಿ ತಮ್ಮ ಮನೆಯವರೊಂದಿಗೆ ಆಚರಿಸುವಂತಾಗಲಿ. ಪ್ರತಿಯೊಬ್ಬರು ಕಷ್ಟ ಕಾರ್ಪಣ್ಯಗಳಿಂದ ಮುಕ್ತರಾಗಿ ಆ ಮೃತ್ಯುಂಜಯನಾದ ಶಿವನ ಅನುಗ್ರಹ ಎಲ್ಲರಿಗೂ ದೊರೆಯಲಿ ಎಂಬುದು ನನ್ನ ಆಶಯ.


- ವಿದ್ಯಾಪ್ರಸಾದ್, ಪುತ್ತೂರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top