ಬೆಂಗಳೂರು: ಇಂದು ದೇಶದಾದ್ಯಂತ ವೈದ್ಯರಿಗಾಗಿ, ವಕೀಲರಿಗಾಗಿ, ಶಿಕ್ಷಕರಿಗಾಗಿ ಇನ್ನೂ ಅನೇಕ ವೃತ್ತಿಯವರಿಗಾಗಿ ಅನೇಕ ಸಂಘಟನೆಗಳಿವೆ. ಆದರೆ ದೇವಸ್ಥಾನದ ರಕ್ಷಣೆಗಾಗಿ, ದೇವಸ್ಥಾನಗಳ ಸಂವರ್ಧನೆಗಾಗಿ ರಾಷ್ಟ್ರದಾದ್ಯಂತ ಒಂದೇ ಒಂದು ಸಂಘಟನೆಗಳಿಲ್ಲ. ಇಂದು ರಾಷ್ಟ್ರದಾದ್ಯಂತ ದೇವಸ್ಥಾನದ ರಕ್ಷಣೆಗಾಗಿ, ಸಂಘಟನೆಗಾಗಿ, ದೇವಸ್ಥಾನಗಳನ್ನು ಧಾರ್ಮಿಕ ಕೇಂದ್ರಗಳನ್ನಾಗಿ ಮಾಡುವುದು, ದೇವಸ್ಥಾನಗಳ ಮಧ್ಯೆ ಸಮನ್ವಯ ನಿರ್ಮಾಣ ಮಾಡುವುದು ಹಾಗೂ ವಿಶ್ವಸ್ತರ ಮಧ್ಯೆ ಆತ್ಮೀಯತೆ ನಿರ್ಮಾಣ ಮಾಡುವ ಉದ್ದೇಶದಿಂದ ಮಂದಿರ ಮಹಾಸಂಘವನ್ನು ಸ್ಥಾಪನೆ ಮಾಡಲಾಗಿದೆ.
ರಾಮ ಮಂದಿರವನ್ನು ಸ್ಥಾಪನೆ ಮಾಡಲು 500 ವರ್ಷ ಸಂಘರ್ಷ ಮಾಡಿ ನಿರ್ಮಾಣ ಮಾಡಲಾಯಿತು, ಆದರೆ ಕಾಶಿ ವಿಶ್ವನಾಥ, ಮಥುರಾ ಕೃಷ್ಣ ದೇವಸ್ಥಾನ ಸೇರಿದಂತೆ ಸಾವಿರಾರು ದೇವಸ್ಥಾನಗಳು ಮುಕ್ತಿಗಾಗಿ ಕಾಯುತ್ತಿವೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಚಂದ್ರ ಮೊಗವೀರ ಹೇಳಿದರು.
ಅವರು ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಆಯೋಜನೆಯಲ್ಲಿ ಬಕುಳಾದೇವಿ ದಾಸೋಹ ಭವನ, ಪ್ರಸನ್ನ ವೆಂಕಟೇಶ್ವರ ದೇವಸ್ಥಾನದಲ್ಲಿ ಆನೇಕಲ್ ತಾಲೂಕು ಮಟ್ಟದ ಮಂದಿರ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಆನೇಕಲ್ ಅರ್ಚಕ ಸಂಘದ ಅಧ್ಯಕ್ಷರಾದ ಸೂರ್ಯ ನಾರಾಯಣ ದೀಕ್ಷಿತ್, ಪ್ರಸನ್ನ ವೆಂಕಟೇಶ್ವರ ದೇವಸ್ಥಾನದ ಅಧ್ಯಕ್ಷರಾದ ನರಸಿಂಹಯ್ಯ, ಬಾಲ್ಡ್ ವಿನ್ ಇಂಟರ್ ನ್ಯಾಷನಲ್ ಸ್ಕೂಲ್ ನ ವ್ಯವಸ್ಥಾಪನ ಮುಖ್ಯಸ್ಥರಾದ ಡಾ. ವೇಣುಗೋಪಾಲ್, ಅಸಂಘಟಿತ ಪುರೋಹಿತ ಕಾರ್ಮಿಕ ಪರಿಷತ್ ನ ಕಾರ್ಯದರ್ಶಿಗಳಾದ ಡಾ. ಮಹೇಶ್ ಕುಮಾರ್ ಬಿ.ಎನ್, ಡಾ. ಮನೋಹರ್, ಶರತ್ ಕುಮಾರ್, ಸೌ. ಭವ್ಯ ಗೌಡ ಸೇರಿದಂತೆ 150 ಕ್ಕೂ ಅಧಿಕ ಆನೇಕಲ್ ತಾಲೂಕಿನಾದ್ಯಂತ ದೇವಸ್ಥಾನ ವಿಶ್ವಸ್ಥರು, ಪ್ರತಿನಿಧಿಗಳು, ಪುರೋಹಿತರು ಉಪಸ್ಥಿತರಿದ್ದರು.
ಚಂದ್ರ ಮೊಗವೀರ ಇವರು ಮಾತನ್ನು ಮುಂದುವರಿಸುತ್ತ ಹಿಂದೆ ಸನಾತನ ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಣೆಯನ್ನು ದೇವಸ್ಥಾನದ ಮುಖೇನ ಮಾಡುತ್ತಿದ್ದರು. ಗುರುಕುಲ ಶಿಕ್ಷಣ ಪದ್ಧತಿಯಿಂದ ನಮ್ಮ ಸಂಸ್ಕೃತಿಯ ಜ್ಞಾನವನ್ನು ಪಸರಿಸುತ್ತಿದ್ದರು. ಇಂದು ಸರಕಾರಿಕರಣಗೊಂಡ ದೇವಸ್ಥಾನದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ.
ಕರ್ನಾಟಕದಲ್ಲಿ 34,500 ದೇವಸ್ಥಾನಗಳು ಸರಕಾರಿಕರಣಗೊಂಡಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ 21ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ, 100ಕೋಟಿ ಆದಾಯವಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಸೂಕ್ತ ವ್ಯವಸ್ಥೆ ಇಲ್ಲ, ಮಲೆ ಮಹದೇಶ್ವರ ದೇವಸ್ಥಾನದಲ್ಲಿ ವಯಸ್ಸಾದ ಗೋವುಗಳನ್ನು ಮಾರಿ ಅದರಿಂದ ಹಣ ಗಳಿಸುತ್ತಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರು ಹಿಂದೂಗಳ ದೇವಸ್ಥಾನಕ್ಕೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದರು.
ಬಾಲ್ಡ್ ವಿನ್ ಇಂಟರ್ ನ್ಯಾಷನಲ್ ಸ್ಕೂಲ್ ನ ವ್ಯವಸ್ಥಾಪನ ಮುಖ್ಯಸ್ಥರಾದ ಡಾ. ವೇಣುಗೋಪಾಲ್ ಇವರು ಮಾತನಾಡಿ, ಇಂದು ದೇವಸ್ಥಾನಗಳ ಸಂಘಟನೆ ಮಾಡುವುದು ಇಂದಿನ ಅನಿವಾರ್ಯವಾಗಿದೆ ಮತ್ತು ದೇವಸ್ಥಾನಗಳ ಜೀರ್ಣೋದ್ದಾರ ಮಾಡುವ ಕೆಲಸವಾಗಬೇಕಾಗಿದೆ. ಭಗವಂತನ ಮೇಲೆ ನಂಬಿಕೆ ಇಟ್ಟು ಮಾಡಿದ ಕಾರ್ಯ ಎಂದೂ ವ್ಯರ್ಥವಾಗುವುದಿಲ್ಲ ಎಂದರು.
ಆನೇಕಲ್ ಅರ್ಚಕ ಸಂಘದ ಅಧ್ಯಕ್ಷರಾದ ಸೂರ್ಯ ನಾರಾಯಣ ದೀಕ್ಷಿತ್ ಅವರು, ದೇವಸ್ಥಾನಗಳ ಮುಖೇನ ಹಿಂದೂಗಳ ಸಂಘಟನೆಯಾಗುತ್ತದೆ. ದೇವಸ್ಥಾನದ ಅರ್ಚಕನು ದೇವಸ್ಥಾನಕ್ಕೆ ಬರುವ ಭಕ್ತನ ಸಂಕಲ್ಪವನ್ನು ಭಗವಂತನಿಗೆ ಮುಟ್ಟಿಸುವ ಕಾರ್ಯವನ್ನು ಮಾಡುತ್ತಾನೆ. ದೇವಸ್ಥಾನದಲ್ಲಿ ಯಾವುದೇ ಕಾರಣಕ್ಕೂ ಜಾತಿ ಭೇದವನ್ನು ಮಾಡಬಾರದು ಹಾಗೂ ದೇವಸ್ಥಾನಗಳು ಭಕ್ತಿ ಕೇಂದ್ರದ ಜೊತೆಗೆ ಜ್ಞಾನವನ್ನು ನೀಡುವ ಸ್ಥಳವಾಗಬೇಕು ಎಂದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ