ಅವರೊಬ್ಬರು ಕೋಟ್ಯಾಧಿಪತಿ. ಅವರ ತಂದೆಗೆ ಅಸೌಖ್ಯ ಕಾಡಿತು. ಪರೀಕ್ಷಿಸಲಾಗಿ ಕ್ಯಾನ್ಸರ್ ಕಣಗಳು ಪತ್ತೆಯಾದವು. ಶೇಷಾಯುಷ್ಯವನ್ನು ಆಸ್ಪತ್ರೆಯಲ್ಲಿ ಅತಿಯಾಗಿ ಖರ್ಚು ಮಾಡಿ ಕೆಲವು ವರ್ಷ ಬದುಕುವುದಕ್ಕಿಂತ ಮನೆಯಲ್ಲಿ ಇದ್ದುಕೊಂಡು ಸಾವು ಲೇಸು ಅಂತ ಮಗನ ಒತ್ತಾಯವಿದ್ದರೂ ತಂದೆ ಹಠಕ್ಕೆ ಬಿದ್ದರಂತೆ.
ಗವ್ಯ ಚಿಕಿತ್ಸೆ ಯಾದರೆ ತೊಂದರೆ ಇಲ್ಲ ಅಂತ ಅದನ್ನು ಮನೆಯಲ್ಲಿ ಇದ್ದುಕೊಂಡೇ ಆರಂಭಿಸಿದರು. ಕ್ಯಾನ್ಸರ್ ಕಣಗಳು ಸಂಪೂರ್ಣ ಸತ್ತು ಮತ್ತೆ 14 ವರ್ಷ ತುಂಬು ಜೀವನವನ್ನು ನಡೆಸಿ ಇದೀಗ ವಿಷ್ಣುಸಾಯುಜ್ಯ ಪಡೆದ ಮಹನೀಯರೊಬ್ಬರ ಕತೆಯನ್ನು ಕೇಳುತ್ತಿದ್ದ ನನಗೆ ಡಾಕ್ಟರ್ ಎನ್. ಬಿ ಶ್ರೀಧರ್ ಅವರು ಬರೆದ ಲೇಖನ ಕೇಳಿ ಕಣ್ಣೀರ ಕಥೆಯನ್ನು ಹೇಳುವಂತಾಯಿತು.
ನಾನೋರ್ವಳು ಮಲೆನಾಡು ಗಿಡ್ಡ ತಳಿಗೆ ಸೇರಿದ ಗೋ ಸಂತತಿಯಲ್ಲಿ ಬೆಳೆದು ಬಂದವಳು. (ದೇಸಿ ತಳಿ, ಬಾಸ್ ಇಂಡಿಕಸ್) ನನ್ನ ಅಜ್ಜಿ, ಅಮ್ಮನಿಂದ ಕೇಳಿದ ಕಥೆಯನ್ನು ನಾನಿಂದು ಉರುಹುತ್ತಿರುವೆ. ಮಲೆನಾಡು, ಕರಾವಳಿ ಕರ್ನಾಟಕದ ಅತಿ ಮಳೆಯ ಮತ್ತು ಎತ್ತರ ತಗ್ಗಿನ ಭೂ ಪ್ರದೇಶಕ್ಕೆ ಹೊಂದಿಕೊಂಡು ಪ್ರಕೃತಿಯಲ್ಲಿ ನಮ್ಮ ಸೃಷ್ಟಿಯಾಯಿತುಂತೆ. ಅದೇ ರೀತಿ ಬೇರೆ ಬೇರೆ ಪ್ರದೇಶಕ್ಕೆ ಅಲ್ಲಿನ ಭೂ ಪರಿಸ್ಥಿತಿಯನ್ನು ಹೊಂದಿಕೊಂಡು ನನ್ನಂತೆ ಇತರ ಅನೇಕ ಭಾರತೀಯ ತಳಿಗಳು ಸೃಷ್ಟಿಯಾಗಿದ್ದವು.
ನಮ್ಮ ಸೃಷ್ಟಿಯಾಗಿ ಎಷ್ಟು ಸಹಸ್ರಮಾನ ಕಳಯಿತೋ ನನಗೂ ಗೊತ್ತಿಲ್ಲ. ಬೆಳಗ್ಗೆದ್ದು ಗುಡ್ಡೆಗೆ ಹೋಗಿ ಏರು ತಗ್ಗುಗಳನ್ನು ದಾಟಿ ಕಾಡ ಸೊಪ್ಪು, ಹಳ್ಳದ ನೀರು ಕುಡಿದು ಬಂದು ಕರುವಿಗೂ ಮನುಷ್ಯರಿಗೂ ಹಾಲುಣಿಸುವುದು ನನ್ನ ದೈನಂದಿನ ದಿನಚರಿ. ಎಷ್ಟೊಂದು ಅಶಕ್ತವಂತರಿಗೂ ಶಕ್ತಿ ನೀಡುವುದಕ್ಕೆ ನನ್ನ ಹಾಲು ಬಳಕೆಯಾಗುತ್ತಿತ್ತು.
ಆ ಮೂಲಕ ಅದು ಅತ್ಯುತ್ತಮ ಬಲವರ್ಧಕ ಆಗಿತ್ತು. ನಾನು ವಿಸರ್ಜಿಸಿದ ಸಗಣಿ ಮತ್ತು ಮೂತ್ರವನ್ನು ಗೊಬ್ಬರವಾಗಿ ಬಳಸಿ ಕೃಷಿ ಮಾಡಿ ಬದುಕು ನಡೆಸುವುದು ಮನುಷ್ಯರಾದವರ ಕರ್ತವ್ಯ ಆಗಿತ್ತು. ಅದು ಯಾವುದೋ ಋಷಿಮುನಿಗಳೋ, ಹಳ್ಳಿಯ ಪಂಡಿತರೋ ನನ್ನ ಮೂತ್ರದಲ್ಲಿ ಔಷಧೀಯ ಗುಣವನ್ನು ಕಂಡುಕೊಂಡರು. ಬೇರೆ ಬೇರೆ ರೋಗಗಳಲ್ಲಿ ಪ್ರಯೋಗ ಮಾಡಿ ಔಷಧಿಯಾಗಿ ಬಳಸಿ ಅದೆಷ್ಟೋ ಮಂದಿಗೆ ಜೀವನ ನೀಡಿದ ಉದಾಹರಣೆ ಪುರಾತನ ಗ್ರಂಥಗಳಲ್ಲಿ ಇವೆಯಂತೆ. ತುಂಬಿದ ಹಟ್ಟಿ ಮನುಷ್ಯನ ಶ್ರೀಮಂತಿಕೆಯ ಸಂಕೇತವೆಂದು ಭಾವಿಸಲಾಗಿತ್ತಂತೆ.
ಹೀಗೆ ಸಹಸ್ರ ಮಾನಗಳಿಂದ ಬದುಕು ನಡೆಸುತ್ತಿದ್ದ ನಮ್ಮ ಹಟ್ಟಿಯಲ್ಲಿ ಹೊಸತೊಂದು ಗೋತಳಿಯನ್ನು ಒಂದು ದಿನ ಕಾಣುವಂತಾಯಿತು. ಕಪ್ಪು ಬಿಳುಪಿನ ಮೈಬಣ್ಣ, ಕೀರಲು ಸ್ವರದ ಕೂಗು, ಡುಬ್ಬವಿಲ್ಲದ ಬೆನ್ನು ನೋಡುವಾಗ ನನ್ನ ಸವತಿ ಎಂದೇ ಪರಿಭಾವಿಸಬೇಕಾಯಿತು. ಇಳಿಸಿದ ಕೆಚ್ಚೆಲಿನಲ್ಲಿ ತುಂಬಿದ ಹಾಲು ನೋಡಿದ ನನ್ನ ಯಜಮಾನರಿಗೆ ನನ್ನ ಮತ್ತು ನಮ್ಮಂತವರ ಮೇಲೆ ಜುಗುಪ್ಸೆ ಹುಟ್ಟಲಾರಂಬಿಸಿತು.
ಸ್ವಚ್ಛಂದವಾಗಿ ಗುಡ್ಡದ ಮೇಲೆ ತಿರುಗಾಡುತ್ತಾ ನನ್ನದೇ ಜಾತಿಯ ಹೋರಿಯೊಂದಿಗೆ ಒಂದಾಗಿ ಗಬ್ಬಕಟ್ಟುತ್ತಿದ್ದ ನನ್ನ ಯೋನಿಯಲ್ಲಿ ಬೆದೆಗೆ ಬಂದಾಗ ಅದು ಯಾವುದೋ ಮನುಷ್ಯ ಬಂದು ಕಡ್ಡಿ ಒಂದನ್ನು ತುರುಕಿದರು. ತಿಂಗಳು 9 ಆಗುತ್ತಿದ್ದಂತೆ ನಾ ಹೆತ್ತಾಗ ನನ್ನದಲ್ಲದ ಜಾತಿಯ ಕರುವನ್ನ ನೋಡಿ ಮನದಲ್ಲಿ ದುಃಖಿಸುತ್ತಿದ್ದೆ. ಅದಲ್ಲಿಗೇ ನಿಲ್ಲದೆ ನನ್ನ ಪೀಳಿಗೆ ನಿಧಾನವಾಗಿ ಕರಗುತ್ತಾ ಕರಗುತ್ತಾ ನಿರ್ವಂಶದತ್ತ ಸಾಗುತ್ತಿತ್ತು.
ಇನ್ನೇನು ನಶಿಸಿಯೇ ಹೋಗುತ್ತದೆ ಎಂಬಷ್ಟು ಉಪೇಕ್ಷೆಗೆ ಒಳಪಟ್ಟಾಗ ಅದು ಯಾವುದೋ ಸ್ವಾಮೀಜಿಗಳಿಗೆ ನನ್ನ ಮಹತ್ವದ ಅರಿವಾಯಿತು. ಆಧುನಿಕ ವೈದ್ಯಕೀಯ ಪದ್ಧತಿಯ ಪರಿಣಾಮವಾಗಿ ಮರೆತು ಹೋಗುತ್ತಿದ್ದ ಗೌವ್ಯ ಉತ್ಪನ್ನಗಳ ಔಷಧೀಯ ಗುಣಗಳನ್ನು ಮತ್ತೆ ನೆನಪಿಸ ಹೊರಟರು. ಒಂದಷ್ಟು ಪ್ರಚಾರವು ಸಿಕ್ಕಿತು. ಹಲವಾರು ಆಯುರ್ವೇದ ವೈದ್ಯರುಗಳು ಹುಡುಕಿ ಹುಡುಕಿ ನಮ್ಮ ಸಂತತಿಯ ಗವ್ಯ ಉತ್ಪನ್ನಗಳ ಆಧಾರದಿಂದ ಚಿಕಿತ್ಸೆ ಆರಂಭಿಸಿದರು. ಸಾಕಷ್ಟು ಯಶಸ್ಸನ್ನು ಕಂಡರು. ಅದರ ಪರಿಣಾಮ ಅಲ್ಲಲ್ಲಿ ಅಲ್ಲಲ್ಲಿ ಮತ್ತೆ ನನ್ನ ಸಂತತಿ ನೆಲೆಗೊಳ್ಳಲು ಸಾಧ್ಯವಾಯಿತು.
ಐಐಟಿಯ ಪ್ರೊಫೆಸರ್ ಒಬ್ಬರು ಇದನ್ನು ಮೆಚ್ಚಿಕೊಂಡಾಗ ಅದು ಯಾಕೋ ಕೆಲವರಿಗೆ ಉರಿ ಹತ್ತಿತು. ಪ್ರಸ್ತುತ ಕಾಲಕ್ಕೆ ಅದ್ಭುತವಾದ ಬೇರೆ ಔಷಧಿಗಳಿರುವಾಗ ಗವ್ಯೋತ್ಪನ್ನಗಳು ಔಷಧಿಯೇ ಅಲ್ಲ ಅದರಿಂದ ಉಪಕಾರಕ್ಕಿಂತ ಹೆಚ್ಚು ಉಪದ್ರ ಜಾಸ್ತಿ ಎಂಬ ಲೇಖನವನ್ನು ಬರೆದಾಗ ನನಗಂತೂ ಬಹಳ ದುಃಖವಾಯಿತು.
ನನ್ನ ಸವತಿಯವರೊಡನೆ ಹೋಲಿಸಿಕೊಂಡಾಗ ನನ್ನ ಮತ್ತು ಅವುಗಳ ವ್ಯತ್ಯಾಸವನ್ನು ಗಮನಿಸಿದಾಗ ಪಶು ವೈದ್ಯರು ಯಾಕೆ ಇಷ್ಟು ಕೀಳಂದಾಜಿಸಿದ್ದಾರೆ ಎಂದು ಅರ್ಥವೇ ಆಗಿಲ್ಲ. ನನ್ನ ಸವತಿಯರಿಗೆ ಆಗಾಗ ದುರ್ಬಲಗೊಂಡಾಗ ಅದೆಂತದೋ ಗುಳಿಗೆಗಳನ್ನು, ಚುಚ್ಚುಮದ್ದನ್ನು ನೀಡುತ್ತಲೇ ಇರುತ್ತಾರೆ. ಆದರೆ ಅದೆಷ್ಟೋ ವರ್ಷಗಳಿಂದ ಬದುಕಿರುವ ನನಗೆ ಒಂದು ದಿನವೂ ಅದು ಬೇಕಾಗಿಲ್ಲ. ಮೂರು ಕರುವಾಗುವಾಗ ಮುದಿತನವನ್ನು ಕಾಣುವ ಸವತಿಯರಿಗೆ ಹತ್ತು ಕರುವಾದರೂ ಇನ್ನೂ ಲವಲವಿಕೆಯಿಂದ ಇರುವ ನನ್ನನ್ನು ಕಾಣುವ ಯೋಗವೇ ಇರುವುದಿಲ್ಲ.
ಅಷ್ಟೊಂದು ಔಷಧಿಗಳು, ಮಾತ್ರೆಗಳು, ಕೃತಕ ಆಹಾರಗಳನ್ನು ಸೇವಿಸಿದ ಸವತಿಯರ ಗವ್ಯವಿಸರ್ಜನೆಯಲ್ಲಿ ಕಾಣದ ದೋಷಗಳು ಏನೇನನ್ನೂ ಸೇವಿಸದ ಸಹಜ ಆಹಾರವನ್ನಷ್ಟೇ ಸೇವಿಸುವ ನನ್ನ ಉತ್ಪನ್ನಗಳಲ್ಲಿ ದೋಷ ಕಂಡದ್ದು ದುರಂತವೇ ಸರಿ. ಗವ್ಯೋತ್ಪನ್ನಗಳು ಪ್ರಯೋಗ ಶಾಲೆಯಲ್ಲಿ ಔಷಧಿ ಎಂದು ಸಿದ್ಧವಾಗಿಲ್ಲವಂತೆ ಅದು ಇಲಿಗಳಿಂದ ಆರಂಭವಾಗಬೇಕಂತೆ ಹಾಗೆ ಪ್ರಯೋಗ ಮಾಡಿ ಸಿದ್ಧವಾದರೆ ಮಾತ್ರ ಅದನ್ನು ಪ್ರಯೋಗ ಸಿದ್ದ ಅಂತ ಒಪ್ಪಬೇಕಂತೆ.
ಇಂತಹ ಆಶ್ಚರ್ಯಕರ ಸಂಗತಿಗಳನ್ನು ನೋಡುವಾಗ ಅದು ಯಾರೋ ಬೆನ್ನಿನ ಹುಣ್ಣಿಗೆ ಔಷಧಿ ಹಚ್ಚಲು ಕನ್ನಡಿಯನ್ನು ಬಳಸುತ್ತಿದ್ದನಂತೆ. ಅದನ್ನು ನೋಡಿದ ಇನ್ನೊಬ್ಬಾತ ಔಷಧಿ ಹಚ್ಚಬೇಕಾದರೆ ಕನ್ನಡಿಯಲ್ಲಿ ನೋಡುವುದು ಪ್ರಯೋಗ ಸಿದ್ಧಅಂತ ಅಂಗೈಯಲ್ಲಿರುವ ಹುಣ್ಣಿಗೂ ಕನ್ನಡಿ ಬಳಸಿ ಔಷಧಿ ಹಚ್ಚಲು ಆರಂಭಿಸಿದನಂತೆ!! ಈ ಮಾತುಗಳು ಸುಳ್ಳು ಅಲ್ಲ ಅಂತ ಅನಿಸಿತು.
ಅದೆಷ್ಟೋ ಔಷಧಿಗಳು ಪ್ರಯೋಗ ಸಿದ್ಧವಾಗಿ ಹೊರಬಂದು ನಿರಂತರ ಪ್ರಯೋಗಿಸುವಾಗ ಅಪಾಯಕಾರಿ ಅನಿಸಿ ಮತ್ತೆ ಮಾರುಕಟ್ಟೆಯಿಂದ ಹಿಂಪಡೆದದ್ದು ನೋಡುವಾಗ ಸಹಸ್ರಮಾನಗಳಿಂದ ಪ್ರಯೋಗ ಸಿದ್ಧವಾದ ಗೋಮೂತ್ರದ ಔಷಧಿಗೆ ವಿರೋಧ ಯಾಕೆ ಅಂತ ಅರ್ಥವೇ ಆಗದು. ಕೆಲವೊಂದು ಸಂದರ್ಭದಲ್ಲಿ ಉಪಕಾರ ಆಗದಿದ್ದರೂ, ಆಧುನಿಕ ಔಷಧಿಯಷ್ಟು ಅಪಾಯಕಾರಿ ಖಂಡಿತ ಆಗಿರಲಾರದು.
ಹೆಚ್ಚಿನ ಎಲ್ಲಾ ಸಂದರ್ಭಗಳಲ್ಲಿ ಗವ್ಯೋತ್ಪನ್ನಗಳ ಔಷಧಿಗೆ ಬರುವುದು ಆಧುನಿಕ ಆಸ್ಪತ್ರೆಗಳಲ್ಲಿ ಕೈ ಸೋತು ಆರ್ಥಿಕವಾಗಿ ಬಲು ದೊಡ್ಡ ಗುಂಡಿಯನ್ನು ತೋಡಿಕೊಂಡು ಕೊನೆಯ ಕುಟುಕು ಆಸೆಯಿಂದ ಗೋ ಆಧಾರಿತ ಚಿಕಿತ್ಸೆಗೆ ಬರುವುದನ್ನು ಕಾಣಬಹುದು. ಇದು ಪ್ರಯೋಜನ ಇಲ್ಲ ಎಂದು ಷರಾ ಬರೆಯಲು ಮಾತ್ರ ಉಪಯೋಗವಾಗಬಹುದು.
ಐ ಐ ಟಿ ಯವರು ಅವರ ಕ್ಷೇತ್ರದಲ್ಲಿ ಬುದ್ದಿವಂತರಾದರೂ ಬೇರೆ ಕ್ಷೇತ್ರದಲ್ಲಿ ಬುದ್ದಿವಂತ ಆಗಿರಲಾರದು ಎಂಬ ಮಾತು ಸತ್ಯವೇ ಆಗಿದ್ದರೆ, ಪಶು ವೈದ್ಯಕೀಯ ಪದವೀಧರರು ಮನುಷ್ಯ ಚಿಕಿತ್ಸೆಯಲ್ಲಿ ಆಯುರ್ವೇದ ವೈದ್ಯರುಗಳಷ್ಟು ಬುದ್ಧಿವಂತರು ಆಗಿರಲಾರದು ಎಂಬ ಮಾತು ಕೂಡ ಅಷ್ಟೇ ಸತ್ಯ ಆಗಿರಲಾರದೆ?
ಒಂದನ್ನು ಶ್ರೇಷ್ಠ ಎಂದು ಹೇಳುವಾಗ ಇನ್ನೊಂದನ್ನು ಕಡೆಗಣಿಸುವ ಅಗತ್ಯ ಇದೆಯೇ? ಗುರುವೊಬ್ಬ ಉದ್ದದ ಎರಡು ಕಡ್ಡಿಗಳನ್ನು ತರಲು ಶಿಷ್ಯರಿಬ್ಬರಿಗೆ ಹೇಳಿದರಂತೆ. ಇಬ್ಬರು ತಂದ ಕಡ್ಡಿಗಳು ಒಂದು ಉದ್ದ ಇನ್ನೊಂದು ಗಿಡ್ಡ ಇತ್ತಂತೆ. ಗಿಡ್ಡದ ಕಡ್ಡಿಯವ ತನ್ನ ಕಡ್ಡಿ ಉದ್ದ ಆಗಬೇಕೆಂದು ಉದ್ದದ ಕಡ್ಡಿಯನ್ನು ತುಂಡರಿಸಿ ನಾನು ಮೇಲೆ ಅಂತ ತೋರಿಸ ಹೊರಟನಂತೆ. ಹಾಗಾಗದಿರಲಿ ಎಂದು ಭಿನ್ನವಿಸುವುದೇ ನನ್ನ ಈ ಸ್ವಗತದ ಉದ್ದೇಶ.
ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ಎಂಬ ನ್ಯಾಯೇನ ಹೊಸತು ಇರಲಿ ಆದರೆ ಹಳತ್ತನ್ನು ಮರೆಯುವುದಾಗಲಿ ಉಪೇಕ್ಷಿಸುವುದಾಗಿ ಸಲ್ಲ ಎಂಬ ವಿನಂತಿ ಮಾತ್ರ.
ಗೋವಿನ ಸ್ವಗತವನ್ನು ಕೇಳಿಸಿಕೊಂಡಾತ.
- ಎ.ಪಿ. ಸದಾಶಿವ ಮರಿಕೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ